ಹೊನ್ನಾಳಿ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗೆ ಕುಡಿವ ನೀರಿನ ಸೌಕರ್ಯ ಸೇರಿದಂತೆ ಹೊನ್ನಾಳಿ – ನ್ಯಾಮತಿ ಸರ್ವಾಂಗೀಣ ಅಭಿವೃದ್ಧಿಗೆ ಸಂಸದ ಜಿ.ಎಂ.ಸಿದ್ದೇಶಣ್ಣ ಶ್ರಮಿಸಿದ್ದಾರೆ. ಸಿದ್ದೇಶಣ್ಣ ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಸತತ 4 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಅವರ ಪತ್ನಿಗೆ ಟಿಕೆಟ್ ನೀಡಿದ್ದು, ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಲು ನಾವು ಸಂಕಲ್ಪ ಮಾಡೋಣ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಹೊನ್ನಾಳಿ ಪಟ್ಟಣದಲ್ಲಿ ಲೋಕಸಭಾ ಚುನಾವಣಾ ಬಿಜೆಪಿ ಕಾರ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಿಂದ ಬಿಜೆಪಿ ಅತಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ದಾವಣಗೆರೆಯಿಂದ ಗಾಯಿತ್ರಿ ಸಿದ್ಧೇಶ್ವರ್ ಅವರು ಗೆದ್ದು ದಹಲಿಗೆ ಹೋಗಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಇಂದು ಹೊನ್ನಾಳಿಯಲ್ಲಿ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆಯಾಗಿದೆ. ಪ್ರತಿಯೊಬ್ಬ ಕಾರ್ಯಕರ್ತನು ತಾನೇ ಅಭ್ಯರ್ಥಿ ಎಂದುಕೊಂಡು ಮತಯಾಚನೆ ಮಾಡಬೇಕು. ಗಾಯಿತ್ರಿ ಸಿದ್ಧೇಶ್ವರ್ ಅವರು ಹೊನ್ನಾಳಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ಮತಯಾಚನೆ ಮಾಡಲಿದ್ದಾರೆ. ಹೊನ್ನಾಳಿ-ನ್ಯಾಮತಿ ಪಟ್ಟಣದಲ್ಲಿ ಬೃಹತ್ ರ್ಯಾಲಿ ನಡೆಸಲು ಸಿದ್ಧತೆ ನಡೆಯುತ್ತಿದೆ. 45 ಪಂಚಾಯಿತಿ ವ್ಯಾಪ್ತಿಯಲ್ಲೂ ಮತಬೇಟೆ ನಡೆಸಲು ಚಿಂತನೆ ಮಾಡಲಾಗಿದೆ ಎಂದರು.
ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮಾತನಾಡಿ, ಮೇ 7 ರಂದು ನಡೆಯಲಿರುವ ಮತದಾನದ ದಿನ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಗಾಯಿತ್ರಿ ಸಿದ್ದೇಶ್ವರ್ ಪರ ಹೆಚ್ಚಿನ ಮತ ಹಾಕಿಸಿಬೇಕು. ಅತ್ಯಂತ ಹೆಚ್ಚಿನ ಅಂತರದಿಂದ ಅವರನ್ನು ಗೆಲ್ಲಿಸಿ, ದೆಹಲಿಗೆ ಕಳುಹಿಸಬೇಕು ಎಂದು ಕರೆ ನೀಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಮಾತನಾಡಿ, ನಮ್ಮ ಸಂಸ್ಕೃತಿ, ಸನಾತನ ಧರ್ಮ ಉಳಿಯಬೇಕು ಎಂದರೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ದೇಶದ ರಕ್ಷಣೆ, ಅಭಿವೃದ್ಧಿಗಾಗಿ ನಾವು ವಾನರ ಸೇನೆಯಂತೆ ಕೆಲಸ ಮಾಡಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಬೇಕು. ಪ್ರತಿಯೊಬ್ಬ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಮತ ಹಾಕಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.
ಸಂಸದ ಜಿ.ಎಂ.ಸಿದ್ಧೇಶ್ವರ್ ಮಾತನಾಡಿ, ಹೊನ್ನಾಳಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ರಾಜ್ಯ ನಾಯಕರು ಈ ಬಾರಿ ನನ್ನ ಪತ್ನಿ ಶ್ರೀಮತಿ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ನೀಡಿದ್ದಾರೆ. ನನ್ನ ಪತ್ನಿಗೆ ನೀವು ಹೆಚ್ಚಿನ ಮತ ನೀಡಿ ಗೆಲ್ಲಿಸಿ ಕಳುಹಿಸಿ ಇನ್ನಷ್ಟು ಅಭಿವೃದ್ಧಿ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ತಾಲೂಕು ಅಧ್ಯಕ್ಷ ಸುರೇಶ್, ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಕಡ್ಲೆಬಾಳು ಧನಂಜಯ್, ರಾಜನಹಳ್ಳಿ ಶಿವಕುಮಾರ್, ನೆಲಹೊನ್ನೆ ಮಂಜುನಾಥ್, ಸುರೇಂದ್ರ ನಾಯ್ಕ್, ಅರಕೆರೆ ನಾಗರಾಜ್, ಕುಳಗಟ್ಟೆ ರಂಗನಾಥ್, ಶಿವು ಹಡೆದ್, ಜುಂಜಾನಾಯ್ಕ್, ರಮೇಶ್ ನಾಯ್ಕ್, ಮಾರುತಿ ನಾಯ್ಕ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಇದ್ದರು.
ಹೊನ್ನಾಳಿಯಲ್ಲಿ ಲೋಕಸಭಾ ಚುನಾವಣಾ ಕಾರ್ಯಾಲಯ ಉದ್ಘಾಟನೆಗೆ ಆಗಮಿಸಿದ್ದ ಗಾಯಿತ್ರಿ ಸಿದ್ದೇಶ್ವರ್ ಅವರು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸಕ್ಕೆ ಭೇಟಿ ನಿಡಿ ಗೌರವಾದರಗಳನ್ನು ಸ್ವೀಕರಿಸಿದರು. ಎಂ.ಪಿ.ರೇಣುಕಾಚಾರ್ಯ ಅವರ ಯೋಗಕ್ಷೇಮ ವಿಚಾರಿಸಿದ ಗಾಯಿತ್ರಿ ಸಿದ್ದೇಶ್ವರ್ ಅವರು ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚಚಿಸಿದರು. ಬಳಿಕ ಎಂ.ಪಿ.ರೇಣುಕಾಚಾರ್ಯ ಅವರ ಪತ್ನಿ ಸುಮಾ ಗಾಯಿತ್ರಿ ಸಿದ್ದೇಶ್ವರ್ ಅವರಿಗೆ ಮಡಿಲಕ್ಕಿ ತುಂಬಿದರು. ನಂತರ ಸೂರಗೊಂಡನಕೊಪ್ಪಕ್ಕೆ ತೆರಳಿ ಶ್ರೀ ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ನಡೆಸಿ, ದೇವರ ದರ್ಶನ ಪಡೆದರು.