ದಾವಣಗೆರೆ : ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಾಂದೋಲನ ಸಭೆ ನಡೆದ ಹೈಸ್ಕೂಲ್ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ್ ಶ್ರಮದಾನ ಮಾಡಿದರು.
ಬಿಜೆಪಿ ಮುಂಡರು, ಮಹಾನಗರ ಪಾಲಿಕೆ ಸದಸ್ಯರು, ಕಾರ್ಯಕರ್ತರ ಜೊತೆಯಲ್ಲಿ ಕಸ ಗೂಡಿಸಿ, ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಬಳಿಕ ಮಾತನಾಡಿದ ಅವರು ಇಲ್ಲಿ ನಮ್ಮ ಕಾರ್ಯಕ್ರಮ ಆಗಿದ್ದು, ಇದನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನರೇಂದ್ರ ಮೋದಿ ಜೀ ಅವರು ನಮಗೆಲ್ಲ ಪಾಠ ಮಾಡಿರುವುದು ಸ್ವಚ್ಛ ಭಾರತ್ ಬಗ್ಗೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಜೀ ಅವರ ಕಾರ್ಯಕ್ರಮ ನನಗೆ ಮತ್ತು ನಮ್ಮ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಸಿಕ್ಕಿದಂತಾಗಿದೆ. ನನ್ನ ಪರವಾಗಿ ಮತಯಾಚಿಸಲು ಮೋದಿ ಜೀ ಆಗಮಿಸಿದ್ದು, ನನ್ನ ಗೆಲುವಿಗೆ ಶ್ರೀರಕ್ಷೆ. ಇಂದು ಇಡೀ ವಿಶ್ವವೇ ಕೊಂಡಾಡುತ್ತಿರುವ ನರೇಂದ್ರ ಮೋದಿ ಜೀ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಆಶೀರ್ವಾದ ಕೇಳಲು ಬಂದಿದ್ದಾರೆ. ನಾವು-ನೀವೆಲ್ಲರೂ ಸೇರಿ ಮೋದಿ ಜೀ ಅವರ ಕೈಬಲಪಡಿಸಲು ಇನ್ನೂ 6 ದಿನ ಮಾತ್ರ ಬಾಕಿ ಇದೆ. ಇನ್ನು 6 ದಿನ ನಾವೆಲ್ಲ ವಾನರ ಸೇನೆಯಂತೆ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಮೋದಿ ಜೀ ಅವರ ಕಾರ್ಯಕ್ರಮಕ್ಕೆ ಲಕ್ಷೋಪ ಲಕ್ಷ ಜನ ಸಾಗರದಂತೆ ಹರಿದು ಬಂದಿದ್ದರು. ಇಡೀ ಹೈಸ್ಕೂಲ್ ಮೈದಾನ ತುಂಬಿ ಜನ ಹೊರಗೆ ನಿಂತು ಕಾರ್ಯಕ್ರಮ ವೀಕ್ಷಿಸಿದರು. ನಿನ್ನೆ ಬಂದಂತಹ ಜನಸ್ತೋಮ ನೋಡಿದ್ರೆ ನಮ್ಮ ಗೆಲುವು ನಿಶ್ಚಿತವಾಗಿದೆ. ಮೋದಿ ಜೀ ಅವರು ಪ್ರಧಾನಿ ಆಗುವುದು ಖಚಿತವಾಗಿದೆ ಎಂದರು.
ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಜಿ.ಎಸ್.ಅಶ್ವಿನಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ್, ಪಾಲಿಕೆಯ ವಿರೋಧ ಪಕ್ಷದ ನಾಯಕ ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆಯ ಸದಸ್ಯರಾದ ವಿನಾಯಕ್ ಪೈಲ್ವಾನ್, ವೀಣಾ ನಂಜಪ್ಪ, ಗಾಯತ್ರಿ ಬಾಯಿ ಕಂಡೋಜಿ ರಾವ್, ಗಂಗಾಧರ್, ಶಿವನಗೌಡ ಪಾಟೀಲ್, ಗುರುರಾಜ್, ಪದ್ಮನಾಭ, ಲಿಂಗರಾಜ್, ಸಂತೋಷ ಕೋಟಿ, ಕಿಶೋರ್, ಸೇರಿದಂತೆ 24ನೇ ವಾರ್ಡಿನ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜೊತೆಯಲ್ಲಿದ್ದರು.