ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಜಯ ಗಳಿಸಿದ್ದು, ಮತ್ತೊಮ್ಮೆ ಈ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ ಎಂಬುದು ಸಾಬೀತಾಗಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಡಾ. ಶಾಮನೂರು ಶಿವಶಂಕರಪ್ಪರು ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿದೆ. 27 ವರ್ಷ ವಯಸ್ಸಿನ ಸಮರ್ಥ್ ಶಾಮನೂರು ಅವರ ಗೆಲುವು ಸಂಘಟಿತ ಪ್ರಯತ್ನಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ.
ಕೆಲ ಅಲ್ಪಸಂಖ್ಯಾತ ನಾಯಕರ ವಿರೋಧದ ನಡುವೆಯೂ ಮುಸ್ಲಿಂ ಸಮುದಾಯದವರು ಪಕ್ಷದಿಂದ ದೂರ ಸರಿದಿಲ್ಲ, ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಆದರೂ ಅಲ್ಪಸಂಖ್ಯಾತ ಸಮುದಾಯದ ಜನರು ಕಾಂಗ್ರೆಸ್ ಗೆ ಮತ ನೀಡಿ ಗೆಲ್ಲಿಸಿದ್ದಾರೆ. ಈ ಮೂಲಕ ಕೋಮುವಾದಿ ಬಿಜೆಪಿ ಸೋಲಿಸಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಹಿರಿಯ ಮುಖಂಡರಾದ ಸಲೀಂ ಅಹ್ಮದ್, ರಾಜ್ಯ ಸಭೆ ಸದಸ್ಯ ಡಾ. ನಾಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಅಲ್ಪಸಂಖ್ಯಾತ ನಾಯಕರೂ ಸೇರಿದಂತೆ ಸಚಿವರು, ವಿವಿಧ ಸಮುದಾಯದ ನಾಯಕರು, ಮುಖಂಡರು ಸೇರಿದಂತೆ ಪ್ರತಿಯೊಬ್ಬರೂ ಗೆಲುವಿಗೆ ತಂತ್ರಗಾರಿಕೆ ರೂಪಿಸಿದ್ದು ಸಹಾಯ ಮಾಡಿದೆ. ಮುಂಬರುವ ದಿನಗಳಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿದೆ. ರಾಜ್ಯ ಸರ್ಕಾರವು 100 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಈ ಕೆಲಸವನ್ನು ಸಮರ್ಥ್ ಶಾಮನೂರು ಅವರು ನಿರ್ವಹಿಸಲಿದ್ದಾರೆಂಬ ವಿಶ್ವಾಸವಿದೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ತಿಳಿಸಿದ್ದಾರೆ.

