ಹೊನ್ನಾಳಿ:
ಇಲ್ಲಿನ ಹೊನ್ನಾಳಿ ವಾಗೀಶ ಪಂಡಿತಾರಾಧ್ಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮಮತಾ ಎಂ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಡಾ. ಮಮತಾ ಎಂ, “ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮತ್ತು ಬಳಸುವ ಮನೋಭಾವ ಬೆಳೆಸಿಕೊಂಡು ಅತ್ಯುತ್ತಮ ಜ್ಞಾನ ಸಂಪಾದಿಸಬೇಕು” ಎಂದು ಕರೆ ನೀಡಿದರು.
ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ರವರ ಜನ್ಮ ದಿನದ ನಿಮಿತ್ತ ಆಗಸ್ಟ್ 12 ರಂದು ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಗ್ರಂಥಾಲಯಕ್ಕೆ ಹಾಗೂ ಗ್ರಂಥಪಾಲಕರ ಸೇವೆಗೆ ನೀಡುವಂತಹ ಮಹತ್ವದ ಕೊಡುಗೆಯಾಗಿದೆ ಎಂದು ತಿಳಿಸಲಾಯಿತು.
ಕಾಲೇಜಿನ ಗ್ರಂಥಪಾಲಕರಾದ ಬಿ .ಎಂ. ಸತೀಶ್ ಅವರು ಮಾತನಾಡಿ, “ವಿದ್ಯಾರ್ಥಿಗಳು ಇಂದು ಮಾಹಿತಿ ಮತ್ತು ತಂತ್ರಜ್ಞಾನದ ಜೊತೆಗೆ ಪುಸ್ತಕ ಬಳಸುವ ಮನೋಭಾವ ಬೆಳೆಸಿಕೊಂಡು ಉತ್ತಮ ಜ್ಞಾನ ಸಂಪಾದಿಸಬೇಕು” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ರವೀಂದ್ರನಾಥ್ ಕೆ.ವಿ. ಅವರು ಮಾತನಾಡಿ, ಯುವ ರೆಡ್‌ಕ್ರಾಸ್ ಬಗ್ಗೆ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ನೀಡಿದರು. “ಅಲ್ಲದೆ ಗ್ರಂಥಾಲಯಗಳಲ್ಲಿ ಗಣಕೀಕರಣ ಮಾಡಿದರೆ ಗ್ರಂಥಾಲಯವನ್ನು ಮುನ್ನಡೆಸಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಸಂಪಾದನೆ ಅತಿ ಮುಖ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಸನ್ನ ಎಸ್.ಎಂ., ಲೋಕೇಶ್‌ಗೌಡ ಜಿ.ಜೆ., ದಾದಾಪೀರ್ ಎಚ್ ಎಸ್. ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *