ಸಾಸ್ವೆಹಳ್ಳಿ: ಸಮೀಪದ ಲಿಂಗಾಪುರ ಗ್ರಾಮದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಗೆ ಅತ್ಯಗತ್ಯವಾಗಿರುವ ಎಎನ್ಎಂ (ಆರೋಗ್ಯ ಕಾರ್ಯಕರ್ತರ) ವಸತಿ ಗೃಹ ಮರು ನಿರ್ಮಾಣ ಕಾಮಗಾರಿಗೆ ಕೆಲವು ಪ್ರಭಾವಿ ವ್ಯಕ್ತಿಗಳು ಅಡೆತಡೆ ಉಂಟುಮಾಡುತ್ತಿದ್ದು, ಸರ್ಕಾರದಿಂದ ಮಂಜೂರಾದ ಜಾಗದಲ್ಲೇ ನೂತನ ಕಟ್ಟಡವನ್ನು ನಿರ್ಮಿಸಬೇಕು ಎಂದು ಗ್ರಾಮಸ್ಥರು ತೀವ್ರವಾಗಿ ಆಗ್ರಹಿಸಿದ್ದಾರೆ.
ಲಿಂಗಾಪುರ ಗ್ರಾಮಠಾಣಾ ಸರ್ವೆ ನಂಬರ್ 18ರಲ್ಲಿ, ಪಂಚಾಯಿತಿ ದಾಖಲೆ ಫಾರಂ ನಂಬರ್ 15 ಹಾಗೂ ಖಾತೆ ನಂಬರ್ 304 ರ ವ್ಯಾಪ್ತಿಯಲ್ಲಿರುವ 45×75 ಅಳತೆಯ ಅಧಿಕೃತ ಜಾಗದಲ್ಲಿ ದಶಕಗಳಿಂದ ಹಳೆಯ ಎಎನ್ಎಂ ಕ್ವಾರ್ಟರ್ಸ್ ಕಟ್ಟಡವಿತ್ತು. ಪ್ರಸ್ತುತ ಅತ್ಯಂತ ಶಿಥಿಲಗೊಂಡಿದ್ದ ಈ ಹಳೆಯ ಕಟ್ಟಡವನ್ನು ಕೆಡವಿ, ಅದೇ ಜಾಗದಲ್ಲಿ ಸುಸಜ್ಜಿತವಾದ ನೂತನ ಕಟ್ಟಡವನ್ನು ನಿರ್ಮಿಸಲು ಆರೋಗ್ಯ ಇಲಾಖೆಯಿಂದ ಎಲ್ಲಾ ಅಧಿಕೃತ ಅನುಮೋದನೆ ಮತ್ತು ಅನುದಾನವೂ ಬಿಡುಗಡೆಯಾಗಿದೆ.
ಆದರೆ, ಸ್ಥಳೀಯವಾಗಿ ಕೋಟ್ಯಂತರ ರೂಪಾಯಿ ಮೌಲ್ಯ ಬಾಳುವ ಈ ಅಧಿಕೃತ ಜಾಗವನ್ನು ಕಬಳಿಸುವ ದುರುದ್ದೇಶದಿಂದ ಕೆಲವು ಪ್ರಭಾವಿ ವ್ಯಕ್ತಿಗಳು ಕಟ್ಟಡವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಡ ಹೇರುತ್ತಿದ್ದು, ಕಾಮಗಾರಿಯನ್ನು ತಡೆಹಿಡಿದಿದ್ದಾರೆ. ಪ್ರಭಾವಿಗಳ ಬೆದರಿಕೆಯಿಂದಾಗಿ ಸಾಮಾನ್ಯ ಗ್ರಾಮಸ್ಥರು ಅಧಿಕಾರಿಗಳ ಮುಂದೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹೇಳಲಾಗದ ಭಯದ ವಾತಾವರಣ ಸೃಷ್ಟಿಯಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಆರೋಗ್ಯ ಕಾರ್ಯಕರ್ತೆಯರಿಗೆ ಸರಿಯಾದ ವಸತಿ ಸೌಕರ್ಯವಿಲ್ಲದೆ ಸಾರ್ವಜನಿಕ ವೈದ್ಯಕೀಯ ಸೇವೆಗೂ ತೀವ್ರ ಅಡಚಣೆಯಾಗುತ್ತಿದೆ.
ಈ ಕುರಿತು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಹಾಲಿ ಇರುವ ಖಾತೆ ಸಂಖ್ಯೆ 304 ರ ಜಾಗವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ತಾಂತ್ರಿಕ ವರದಿಯನ್ನು ಪರಿಶೀಲಿಸಿ ಜಾಗದ ಕುರಿತಾದ ಗೊಂದಲಗಳನ್ನು ಬಗೆಹರಿಸಬೇಕು ಎಂದು ಕೋರಿದ್ದಾರೆ.

ಒಂದು ವೇಳೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಈ ಗೊಂದಲಗಳಿಂದಾಗಿ ಸರ್ಕಾರದಿಂದ ಮಂಜೂರಾದ ಅನುದಾನ ರದ್ದಾದರೆ ಅಥವಾ ವಾಪಸ್ ಹೋದರೆ, ಅದಕ್ಕೆ ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು. ಅಷ್ಟೇ ಅಲ್ಲದೆ, ಈ ವಿಷಯದ ಕುರಿತು ಲೋಕಾಯುಕ್ತ ಇಲಾಖೆಗೆ ದೂರು ನೀಡಲಾಗುವುದು ಮತ್ತು ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸದರಿ ಮನವಿ ಪತ್ರದ ಪ್ರತಿಗಳನ್ನು ಹೊನ್ನಾಳಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು, ದಾವಣಗೆರೆ ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ದಾವಣಗೆರೆ ಲೋಕಾಯುಕ್ತ ಕಚೇರಿಗೆ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *