ಹೊನ್ನಾಳಿ: ‘ಶ್ರೇಷ್ಠ ಶಿಷ್ಯನೊಬ್ಬ ಉತ್ತಮ ಗುರುವನ್ನು ಹುಡುಕುವಂತೆ, ಶ್ರೇಷ್ಠ ಗುರುವು ಕೂಡ ಅತ್ಯುತ್ತಮ ಶಿಷ್ಯನಿಗಾಗಿ ಸದಾ ಹುಡುಕುತ್ತಿರುತ್ತಾನೆ. ತನ್ನೆಲ್ಲ ಸಂಪತ್ತನ್ನು ದಾನ ಮಾಡಿ, ಗುರು ವ್ಯಾಸರಾಯರ ಪರೀಕ್ಷೆಯಲ್ಲಿ ಗೆದ್ದು ದಾಸಶ್ರೇಷ್ಠರಾದ ಕನಕದಾಸರ ಬದುಕು ಅತ್ಯದ್ಭುತವಾದುದು’ ಎಂದು ತಹಶೀಲ್ದಾರ್ ಕವಿರಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ 539ನೇ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಜಯನಗರ ಸಾಮ್ರಾಜ್ಯದ ಗುರುಗಳಾದ ವ್ಯಾಸರಾಯರು ಉತ್ತಮ ಶಿಷ್ಯನ ಹುಡುಕಾಟದಲ್ಲಿದ್ದಾಗ ಪಾಳೆಗಾರ ತಿಮ್ಮಪ್ಪ ಅವರ ಬಳಿ ಬರುತ್ತಾರೆ. ಶಿಷ್ಯನ ಅರ್ಹತೆ ಪರೀಕ್ಷಿಸಲು ವ್ಯಾಸರಾಯರು ಕೋಣನನ್ನು ಧ್ಯಾನಿಸುವಂತೆ ಸೂಚಿಸುತ್ತಾರೆ. ಕಠಿಣ ಧ್ಯಾನದ ಮೂಲಕ ಯಮನ ವಾಹನವಾದ ಕೋಣನನ್ನೇ ಪ್ರತ್ಯಕ್ಷಗೊಳಿಸಿದ ತಿಮ್ಮಪ್ಪನ ಅಸಾಮಾನ್ಯ ಭಕ್ತಿಗೆ ಮೆಚ್ಚಿದ ವ್ಯಾಸರಾಯರು ತಕ್ಷಣವೇ ದೀಕ್ಷೆ ನೀಡಿ ಶಿಷ್ಯನನ್ನಾಗಿ ಸ್ವೀಕರಿಸಿದರು’ ಎಂದು ಸ್ಮರಿಸಿದರು.
‘ಆಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರು ಸದಾ ಮುನ್ನಡೆಯುತ್ತಾರೆ. ಸಂಗೀತಗಾರನಾಗಿ, ಸಾಹಿತಿಯಾಗಿ ಸಮಾಜ ತಿದ್ದುವಲ್ಲಿ ಕನಕದಾಸರ ಪಾತ್ರ ದೊಡ್ಡದು. ಸಮಾನತೆಯ ಸಂದೇಶ ಸಾರಿದ ಇಂತಹ ಮಹಾನ್ ಸಂತ ಕನ್ನಡಿಗರು ಎನ್ನುವುದು ನಮಗೆ ಹೆಮ್ಮೆಯ ವಿಷಯ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ಜಯಂತಿ ಆಚರಣೆಗಳ ಸಂದರ್ಭದಲ್ಲಿ ಆಯಾ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಮಹನೀಯರ ಆದರ್ಶ ಹಾಗೂ ಉತ್ತಮ ಜೀವನಶೈಲಿಯನ್ನು ಪರಿಚಯಿಸುವ ಕೆಲಸವಾಗಬೇಕು’ ಎಂದು ಸಲಹೆ ನೀಡಿದರು.
ಗಡಿನಾಡು ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜಪ್ಪ ಮಾತನಾಡಿ, ‘ಸಮಾನತೆಯನ್ನು ಸಾರಿದ ದಾರ್ಶನಿಕರು ಕನಕದಾಸರು. ಹಾಲು ಕೆಟ್ಟರೂ ಹಾಲುಮತ ಸಮಾಜದವರು ಎಂದಿಗೂ ಕೆಡುವುದಿಲ್ಲ’ ಎಂದು ಭರವಸೆಯ ನುಡಿಗಳನ್ನಾಡಿದರು.
ಕೃತಿ ಲೋಕಾರ್ಪಣೆ: ಇದೇ ವೇಳೆ ಕುರುಬರ ಲಿಂಗಯ್ಯನವರು ಬರೆದ ‘ಕನಕದಾಸ ಚರಿತೆ’ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು. ಕೃತಿ ಕುರಿತು ಮಾತನಾಡಿದ ಸ್ನೇಹ ಅವರು, ‘ಈ ಹಿಂದಿನ ಹಸ್ತಪ್ರತಿಯನ್ನು ತಿಪ್ಪೇಸ್ವಾಮಿ ಅವರು ಪ್ರಕಟಿಸಿ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಕನಕದಾಸರ ಬದುಕಿನ ಅನೇಕ ಮಹತ್ವದ ವಿಚಾರಗಳು ಇದರಲ್ಲಿ ಅಡಗಿದ್ದು, ಕನಕರ ಜಯಂತಿಯಂದೇ ಹೊನ್ನಾಳಿಯಲ್ಲಿ ಬಿಡುಗಡೆಯಾಗುತ್ತಿರುವುದು ಸಂತಸ ತಂದಿದೆ’ ಎಂದರು.


ದಾವಣಗೆರೆ ಉಪವಿಭಾಗದ ಉಪ ವಿಭಾಗಾಧಿಕಾರಿ ಎಚ್.ಬಿ. ಚೆನ್ನಪ್ಪ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ, ಅಕ್ಷರ ದಾಸೋಹ ನಿರ್ದೇಶಕ ನಾಗೇಂದ್ರಪ್ಪ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ವಿಶ್ವನಾಥ್, ಸಿಡಿಪಿಓ ನವೀನ್, ಕಂದಾಯ ನಿರೀಕ್ಷಕ (ಆರ್.ಐ) ದಿನೇಶ್ ಬಾಬು, ಅರುಣ್ ಕುಮಾರ್, ಸೈನಿಕ ವಾಸಪ್ಪ ಮೋಹನ್, ಪಂಕಜಾ, ಸೌಮ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *