ಹೊನ್ನಾಳಿ: ಬದುಕುವ ಪ್ರೇರಣೆ ಹಲವರಿಗೆ ಹಲವು ಮಾರ್ಗಗಳನ್ನು ನೀಡುತ್ತದೆ. ಎಲ್ಲರೂ ತಮ್ಮ ಜೀವನೋಪಾಯಕ್ಕಾಗಿ ಹೊಸ ಹೊಸ ಉದ್ಯೋಗಗಳನ್ನು ಹುಡುಕಿಕೊಳ್ಳುತ್ತಿರುವ ಈ ದಿನಗಳಲ್ಲಿ, ಯುವಕ ವೀರಭದ್ರ ಹೋಟೆಲ್ ಉದ್ಯಮ ಆಯ್ಕೆ ಮಾಡಿಕೊಂಡು ಸ್ವಾವಲಂಬಿ ಬದುಕು ರೂಪಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ವೈದ್ಯ ಡಾ. ಎಚ್. ಪಿ. ರಾಜಕುಮಾರ್ ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡಿರುವ ‘ಶ್ರೀ ರುದ್ರ ಸವಿರುಚಿ’ ಹೋಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪಟ್ಟಣ ಪ್ರದೇಶಗಳಲ್ಲಿ ಜಂಕ್ ಫುಡ್ ಹೋಟೆಲ್ಗಳ ಸಂಖ್ಯೆ ಹೆಚ್ಚುತ್ತಿದ್ದು, ಆರೋಗ್ಯಕರ ಮನೆ ಊಟ ಮಾಡುವ ಪದ್ಧತಿಗಳು ಕಡಿಮೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಸಾಂಪ್ರದಾಯಿಕ ಆಹಾರ ಪದ್ಧತಿಯಾದ ತಟ್ಟೆ ಇಡ್ಲಿ, ಇಡ್ಲಿ, ವಡೆ ಮುಂತಾದ ಪೌಷ್ಟಿಕ ಹಾಗೂ ರುಚಿಕರ ತಂಡಿಗಳನ್ನು ನೀಡುವ ಹೋಟೆಲ್ಗಳ ಅವಶ್ಯಕತೆ ಹೆಚ್ಚಾಗಿದೆ. ಗ್ರಾಹಕರಿಗೆ ಆಹಾರ ಉಣಬಡಿಸುವಾಗ ಸ್ವಚ್ಛತೆ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಯುವ ಉದ್ಯಮಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಅಧ್ಯಕ್ಷ ಎಚ್. ಬಿ. ಮಂಜಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ. ಆರ್. ಮಹೇಶ್, ಸಾಯಿ ಅಂಗಡಿ ಮಾಲೀಕ ಹಾಲೇಶ್, ವೀರಣ್ಣ ಬೆನಕನಹಳ್ಳಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

