ಹೊನ್ನಾಳಿ: “ಅಳಿವಿನಂಚಿಗೆ ತಲುಪುತ್ತಿರುವ ಅನುದಾನಿತ ಶಾಲೆಗಳನ್ನು ಉಳಿಸುವ ಕಾರ್ಯವು ಸರ್ಕಾರದ ಹಂತದಿಂದ ಆಗಬೇಕಿದೆ. ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿರುವ ಈ ಶಾಲೆಗಳಿಗೂ ದ್ವಿಭಾಷಾ ಸೂತ್ರವನ್ನು ವಿಸ್ತರಿಸುವ ಮೂಲಕ ಅನುದಾನಿತ ಶಾಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಉದಾರ ಮನಸ್ಸು ಮಾಡಬೇಕು” ಎಂದು ಚನ್ನಗಿರಿ ತಾಲೂಕು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸಿ ಹೇಳಿದರು.
ತಾಲ್ಲೂಕಿನ ಯಕ್ಕನಹಳ್ಳಿಯ ಶ್ರೀ ಬೀರಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅನುದಾನಿತ ಶಾಲೆಗಳಿಗೂ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತವನ್ನು 30:1 ಕ್ಕೆ ನಿಗದಿಪಡಿಸಬೇಕು ಹಾಗೂ ಶಿಕ್ಷಕರಿಗೆ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮಗಳಲ್ಲಿ ಪಠ್ಯ ಬೋಧಿಸಲು ಅನುಕೂಲವಾಗುವಂತೆ ಸರ್ಕಾರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನ್ಯಾಮತಿ ತಾಲೂಕು ಅಧ್ಯಕ್ಷ ಎಚ್.ಡಿ. ಧನಂಜಯ್ ಮಾತನಾಡಿ, “ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು ಹಾಗೂ ಶಿಕ್ಷಕರಿಗೆ ಇಲಾಖೆಯಿಂದ ಅಗತ್ಯ ತರಬೇತಿಗಳನ್ನು ನೀಡಬೇಕು” ಎಂದರು.
ಹೊನ್ನಾಳಿ ತಾಲೂಕು ಅಧ್ಯಕ್ಷ ಮಾರುತಿ ಜೆ. ಮಾತನಾಡಿ, “2006ರ ನಂತರ ಅನುದಾನಕ್ಕೊಳಪಟ್ಟ ಶಾಲಾ ಶಿಕ್ಷಕರಿಗೆ ಎನ್‌ಪಿಎಸ್ ಅಥವಾ ಒಪಿಎಸ್ ಯಾವುದೇ ಪಿಂಚಣಿ ಸೌಲಭ್ಯವಿಲ್ಲದೆ ತೊಂದರೆಯಾಗಿದೆ. ಈ ಶಿಕ್ಷಕರಿಗೆ ಒಪಿಎಸ್ ಪಿಂಚಣಿ ಸೌಲಭ್ಯ ಕಲ್ಪಿಸುವ ಮೂಲಕ ಅವರ ಜೀವನವನ್ನು ಸುಸ್ಥಿರಗೊಳಿಸಬೇಕು” ಎಂದು ಒತ್ತಾಯಿಸಿದರು.
ಹೊನ್ನಾಳಿ ತಾಲೂಕು ಪ್ರಧಾನ ಕಾರ್ಯದರ್ಶಿ ಗಿರೀಶ್ ನಾಡಿಗ್ ಮಾತನಾಡಿ, “ಶಿಕ್ಷಕರಿಗೆ ಹಬ್ಬದ ಮುಂಗಡ ಹಣ ಸಮಯಕ್ಕೆ ಸರಿಯಾಗಿ ಸಿಗುವಂತಾಗಬೇಕು ಹಾಗೂ ವಿದ್ಯಾರ್ಥಿಗಳ ಅನುಪಾತವನ್ನು 30:1 ಕ್ಕೆ ಇಳಿಸಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ನೀಡುವ ಸೌಲಭ್ಯಗಳನ್ನು ಅನುದಾನಿತ ಶಾಲಾ ಮಕ್ಕಳಿಗೂ ನೀಡಬೇಕು” ಎಂದು ಸಭೆಯ ಗಮನಕ್ಕೆ ತಂದರು.
ಸಂಘದ ರಾಜ್ಯ ಪ್ರತಿನಿಧಿಯಾಗಿ ರಾಘವೇಂದ್ರ ಎಂ.ಆರ್. ಅವರನ್ನು ಆಯ್ಕೆ ಮಾಡಲಾಯಿತು. ನಿವೃತ್ತ ಶಿಕ್ಷಕರಾದ ಶಿವಮೂರ್ತಿ ಹಾಗೂ ರವಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರತಿಭಾವಂತ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಆರ್ಥಿಕ ಸಹಾಯಧನ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿ.ಸಿ. ಕರೆಗೌಡ್ರು, ರಘುನಾಥ್ ಡಿ.ಜಿ., ಸುರೇಶ್, ಶ್ರೀವತ್ಸ ನಾಡಿಗ್, ಹರೀಶ್ ಕೆ.ಟಿ., ಮಾಲತೇಶ್ ಕೆ.ಟಿ., ಮುರಳಿಧರ, ಸೀನಾ ನಾಯ್ಕ್, ಮಂಜುನಾಥ್ ತಾಲೂಕಿನ ಅನುದಾನಿತ ಶಾಲಾ ಶಿಕ್ಷಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *