ಹೊನ್ನಾಳಿ: ತಾಲೂಕಿನಲ್ಲಿ ಎದುರಾಗಿರುವ ಮಳೆ ಅಭಾವ ಹಾಗೂ ಬರಗಾಲದ ಪರಿಸ್ಥಿತಿಗೆ ಸ್ಪಂದಿಸಿ, ದುರ್ಗಿಗುಡಿ ಪಟ್ಟಣದ ‘ಶ್ರೀ ದುರ್ಗಮ್ಮ ದೇವಿ ಮತ್ತು ಓಂ ಗಣೇಶ ಸೇವಾ ಸಮಿತಿ’ ಆಡಳಿತ ಮಂಡಳಿಯು ಈ ಬಾರಿಯ ಗಣೇಶೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದೆ.
ಕಳೆದ 40 ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿರುವ ಸಮಿತಿಯು, ಸಾರ್ವಜನಿಕರ ಸಂಕಷ್ಟದ ಸಮಯದಲ್ಲಿ ಅದ್ದೂರಿತನಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಆಯೋಜಿಸಲಾಗುತ್ತಿದ್ದ ವೈಭವೋಪೇತ ಧ್ವನಿವರ್ಧಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮೆರವಣಿಗೆಗಳನ್ನು ಈ ಬಾರಿ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
“₹3.5 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಕಾಣಿಕೆ”
ಅನಗತ್ಯ ಖರ್ಚು-ವೆಚ್ಚಗಳನ್ನು ಕಡಿತಗೊಳಿಸಿ ಉಳಿಸಿದ ಹಣ ಹಾಗೂ ಸಮಿತಿಯ ಸದಸ್ಯರ ವಂತಿಕೆಯನ್ನು ಕ್ರೋಢೀಕರಿಸಿ, ಶ್ರೀ ಗಣಪತಿಗೆ ಸುಮಾರು ₹3.5 ಲಕ್ಷಕ್ಕೂ ಹೆಚ್ಚು ಮೌಲ್ಯದ 1.5 ಕೆ.ಜಿ. ತೂಕದ ಆಕರ್ಷಕ ಬೆಳ್ಳಿ ಕಿರೀಟ, ಹಸ್ತ ಹಾಗೂ ಆಯುಧಗಳನ್ನು ಸಮರ್ಪಿಸಲಾಗಿದೆ. ಈ ಬೆಳ್ಳಿಯ ಆಭರಣಗಳನ್ನು ಸೇವಾ ಸಮಿತಿಯವರು ಪ್ರಸಿದ್ಧ ಹೊನ್ನಾಳಿ ಹಿರೇಕಲ್ಮಠದಲ್ಲಿ ವಿಶೇಷ ಪೂಜೆ ನೆರವೇರಿಸಿ, ಶ್ರದ್ಧಾಭಕ್ತಿಯಿಂದ ತಂದಿದ್ದಾರೆ.
ಸಾರ್ವಜನಿಕರಿಂದ ಶ್ಲಾಘನೆ
ಕ್ಷಣಿಕ ಆಡಂಬರದ ಕಾರ್ಯಕ್ರಮಗಳಿಗಿಂತ ದೇವರಿಗೆ ಶಾಶ್ವತ ಆಸ್ತಿಯಾಗುವ ಹಾಗೂ ಭಕ್ತಿಯ ಸಂಕೇತವಾಗುವ ಕೊಡುಗೆ ನೀಡಿದ ದುರ್ಗಿಗುಡಿ ಯುವಕರ ಈ ಜನಪರ ನಿರ್ಧಾರಕ್ಕೆ ಪಟ್ಟಣದ ಹಿರಿಯರು, ವರ್ತಕರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
“ಮೂರನೇ ದಿನ ಗಣೇಶಮೂರ್ತಿ ವಿಸರ್ಜನೆ”
ಮೂರು ದಿನಗಳ ಕಾಲ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳು, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿಗಳು ನೆರವೇರಲಿದ್ದು, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ. ಸರಳವಾಗಿ ವಿಜೃಂಭಣೆ ಇಲ್ಲದೆ ವಿಸರ್ಜನೆ ಮಾಡಲಾಗುವುದು ಎಂದು ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

