ದಾವಣಗೆರೆ ಮೇ.08
ಸರ್ಕಾರದ ಕ್ರಮಗಳು ಮತ್ತು ಜನರ ಸಹಕಾರದಿಂದ
ಮಾತ್ರ ಕೊರೊನಾ ನಿಗ್ರಹ ಸಾಧ್ಯ. ಜನರ ಜೀವ ಮತ್ತು
ಜೀವನವನ್ನು ಸುಸ್ಥಿತಿಗೆ ತರಲು ಸರ್ಕಾರ ಹಗಲಿರುಳು
ಶ್ರಮಿಸುತ್ತಿದ್ದು ಜನರು ಸಹಕರಿಸಬೇಕೆಂದು ವೈದ್ಯಕೀಯ
ಶಿಕ್ಷಣ ಸಚಿವರಾದ ಡಾ. ಕೆ.ಸುಧಾಕರ್ ಮನವಿ ಮಾಡಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಪಾಲ್ಗೊಂಡು ಮಾತನಾಡಿದ ಅವರು, ಇಡೀ ಜಗತ್ತನ್ನು ಕಣ್ಣಿಗೆ
ಕಾಣದೊಂದು ವೈರಾಣು ನಡುಗಿಸುತ್ತಿದೆ. ವಿಶ್ವದಲ್ಲಿ ಬೇರೆ
ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶ ಕೊರೊನಾ
ನಿಯಂತ್ರಣ ಮಾಡುತ್ತಾ ಇದೆ. ದೇಶದಲ್ಲಿ ಸುಮಾರು 60 ಸಾವಿರ
ಪಾಸಿಟಿವ್ ಪ್ರಕರಣಗಳಿದ್ದು, ನಮ್ಮ ರಾಜ್ಯ 13 ನೇ ಸ್ಥಾನದಲ್ಲಿ ಇದೆ.
ಮಾನ್ಯ ಮುಖ್ಯಮಂತ್ರಿಗಳು ಆರಂಭದಲ್ಲಿ ತೆಗೆದುಕೊಂಡ
ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕೊರೊನಾ
ನಿಯಂತ್ರಣ ಸಾಧ್ಯವಾಗುತ್ತಿದೆ. ಜೀವ ಉಳಿಸುವ ಜೊತೆಗೆ
ಜನಜೀವನ ಸುಧಾರಣೆ ಎರಡೂ ಕೆಲಸಗಳನ್ನು
ಸಮತೋಲನದಿಂದ ಸರಿದೂಗಿಸಬೇಕಿದೆ. ಕೊರೊನಾ ಕೂಡ
ಇರುತ್ತದೆ. ಆದರೆ ನಾವು ಅದರಿಂದ ದೂರ ಇರಬೇಕು. ನಾಲ್ಕು ಟಿ :
ಟ್ರ್ಯಾಕಿಂಗ್, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‍ಮೆಂಟ್
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ
ಕೊರೊನಾ ನಿಗ್ರಹಿಸಲಾಗುತ್ತಿದೆ. ಕೊರೊನಾ ನಿಯಂತ್ರಣ
ಕೇವಲ ಸರ್ಕಾರದ ಕೈಯಲ್ಲಿಲ್ಲ ಬದಲಾಗಿ ಎಲ್ಲ ಜನತೆ ಸಹಕಾರ
ಅತ್ಯಗತ್ಯವಾಗಿದೆ ಎಂದರು.
ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಅನಗತ್ಯ ಆತಂಕ ಬೇಡ:
ಕೊರೊನಾ ರೋಗಕ್ಕೆ ನಿಖರವಾದ ಚಿಕಿತ್ಸೆ ಇಲ್ಲ. ಎಷ್ಟೋ ಅಂತೆ-
ಕಂತೆಗಳು ಆಗಿ ಹೋಗಿವೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರತಿದಿನ ಹೊಸ

ಮಾರ್ಗಸೂಚಿಗಳನ್ನು ನೀಡುವ ಮೂಲಕ ಕೊರೊನಾ
ನಿಯಂತ್ರಣದಲ್ಲಿ ಶ್ರಮ ವಹಿಸುತ್ತಿದೆ.
ಕೊರೊನಾ ಸಾಮಾಜಿಕ ಕಳಂಕ ಅಲ್ಲ. ಯಾರಿಗೆ ಬೇಕಾದರೂ
ಬರಬಹುದು. ಸೋಂಕಿನ ಬಗ್ಗೆ ಭಯ ಬೇಡ. ಯಾವ ವೈರಾಣುವೂ
ಜನರನ್ನು ಸೋಲಿಸಿಲ್ಲ. ಬದಲಾಗಿ ಜನರು ವೈರಾಣುವನ್ನು
ಸೋಲಿಸಿದ್ದಾರೆ. ಕೊರೊನಾವನ್ನೂ ಸೋಲಿಸಲು ಸ್ವಲ್ಪ ಸಮಯ
ಬೇಕು. ಆದ ಕಾರಣ ಜನರು ಅಂತರ ಕಾಯ್ದುಕೊಳ್ಳುವ
ಮೂಲಕ, ಸ್ವಚ್ಚತೆ, ಮಾಸ್ಕ್ ಧರಿಸುವ ಮೂಲಕ ಹಾಗೂ
ಸರ್ಕಾರದ ನಿಯಮ, ಸೂಚನೆಗಳನ್ನು ಪಾಲಿಸುವ ಮೂಲಕ
ಕೊರೊನಾ ನಿಗ್ರಹಿಸಲು ಸಹಕರಿಸಬೇಕು.
ಜನರಿಗೆ ಸಮರ್ಪಕ ಮಾಹಿತಿ ಮತ್ತು ಧೈರ್ಯ ತುಂಬಬೇಕು :
ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಬಂದ ಪ್ರಕರಣಗಳ ಪೈಕಿ
ಈಗಾಗಲೇ ಶೇ.50 ಗುಣಮುಖರಾಗಿದ್ದಾರೆ. ಶೇ 80 ರಷ್ಟು ಜನರು
ಚಿಕಿತ್ಸೆ ಇಲ್ಲದೆಯೇ ಗುಣಮುಖರಾಗುತ್ತಾರೆ. ಮರಣ ಪ್ರಮಾಣ
ಶೇ.3.1 ರಷ್ಟಿದ್ದು, ಅದರಲ್ಲೂ ಹೃದಯ ತೊಂದರೆ, ಕ್ಯಾನ್ಸರ್,
ಡಯಾಬಿಟಿಕ್ ಇತರೆ ತೊಂದರೆಯಿಂದ ಬಳಲುವವರು ಮರಣಕ್ಕೆ
ತುತ್ತಾಗುವ ಸಂಭವ ಹೆಚ್ಚಿದೆ. ಆದ್ದರಿಂದ ಜನರಲ್ಲಿ ಭಯ
ಬೇಡ. ಆದರೆ ಅಂತರ ಕಾಯ್ದುಕೊಂಡು, ಸ್ವಚ್ಚತೆ
ಕಾಪಾಡಿಕೊಂಡು ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ
ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ಸಮರ್ಪಕ ಮಾಹಿತಿ
ಮತ್ತು ಧೈರ್ಯವನ್ನು ತುಂಬಬೇಕೆಂದರು.
ಆರೋಗ್ಯಸೇತು ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ : ಜಿಲ್ಲೆಯ ಎಲ್ಲ
ಜನತೆ ಆರೋಗ್ಯಸೇತು ಆ್ಯಪ್ ನ್ನು ಡೌನ್‍ಲೋಡ್
ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಈ ಆಪ್
ಬಗ್ಗೆ ಸಾಕಷ್ಟು ಪ್ರಚಾರ ನೀಡಬೇಕು. ಈ ಆ್ಯಪ್‍ನ ಸಹಾಯದಿಂದ
ತಾವು ಸೋಂಕಿತರಿಂದ ಎಷ್ಟು ಅಂತರದಲ್ಲಿದ್ದೀರಿ ಎಂದು
ತಿಳಿಯುತ್ತದೆ. ಹಾಗೂ ಸೋಂಕಿತರು ಹತ್ತಿರ ಬಂದರೆ ಸೂಚನೆ
ನೀಡುತ್ತದೆಯಾದ್ದರಿಂದ ಎಲ್ಲರೂ ಈ ಆಪ್‍ನ್ನು ಡೌನ್‍ಲೋಡ್ ಮಾಡಿ
ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯದಲ್ಲಿ ಮೇ ಅಂತ್ಯದೊಳಗೆ 60 ಲ್ಯಾಬ್‍ಗಳ ಭರವಸೆ :
ಕೊರೊನಾ ನಿಗ್ರಹ ಹಿನ್ನೆಲೆ ರಾಜ್ಯದಲ್ಲಿರುವ 60 ಮೆಡಿಕಲ್
ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ
ಈಗಾಗಲೇ ಆದೇಶಿಸಿದ್ದು, ಮೇ ಅಂತ್ಯದೊಳಗೆ ಪ್ರತಿ ಜಿಲ್ಲೆಯಲ್ಲಿ 2
ಪರೀಕ್ಷಾ ಲ್ಯಾಬ್ ಸಿದ್ದಗೊಳ್ಳುವ ವಿಶ್ವಾಸವಿದೆ. ದಾವಣಗೆರೆಯ ಎಸ್‍ಎಸ್
ಹೈಟೆಕ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‍ನಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ
ಆರಂಭಗೊಳ್ಳಲಿದ್ದು, ಇಂದು ಅದಕ್ಕೆ ಚಾಲನೆ
ನೀಡುತ್ತಿರುವುದು ಸಂತಸದ ವಿಷಯ. ಸಿ ಜಿ
ಆಸ್ಪತ್ರೆಯಲ್ಲಿಯೂ ಕೋವಿಡ್ ಪರೀಕ್ಷೆ ಲ್ಯಾಬ್
ಕಾರ್ಯಾರಂಭಗೊಂಡಿದ್ದು ನಾಳೆಯಿಂದಲೇ ಆರ್‍ಟಿಪಿಸಿಆರ್
ಮಷೀನ್‍ಗಳನ್ನು ಅಳವಡಿಸಲು ತಿಳಿಸಿದ್ದೇನೆ. ಇನ್ನೊಂದು ಎರಡು
ದಿನಗಳಲ್ಲಿ ಸಿಜಿ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ಲ್ಯಾಬ್
ಸಿದ್ದಗೊಳ್ಳಲಿದ್ದು ಇದರಿಂದ ಜಿಲ್ಲೆಗೆ ಅನುಕೂಲವಾಗಲಿದೆ.

ಪರೀಕ್ಷೆಗಾಗಿ ಜನರು ದಿನಗಳಟ್ಟಲೆ ಕಾಯುವುದು
ತಪ್ಪುತ್ತದೆ. ಖಾಸಗಿ ಲ್ಯಾಬ್‍ಗಳಿಗೆ ದರ ನಿಗದಿಗೊಳಿಸಿದ್ದು,
ಸರ್ಕಾರದ ವತಿಯಿಂದಲೇ ಕಿಟ್‍ಗಳನ್ನು ಒದಗಿಸುವ ವ್ಯವಸ್ಥೆ
ಮಾಡಲಾಗುವುದು.
-ಡಾ.ಕೆ.ಸುಧಾಕರ್, ವೈದ್ಯಕೀಯ
ಸಚಿವರು
ಪ್ರಾರಂಭದಲ್ಲಿ ರಾಜ್ಯದ ಕೇವಲ ಎರಡು ಲ್ಯಾಬ್‍ಗಳಲ್ಲಿ ಕೋವಿಡ್
ಪರೀಕ್ಷೆ ಮಾಡಲಾಗುತ್ತಿದ್ದು, ದಿನಕ್ಕೆ 250 ರಿಂದ 300 ಟೆಸ್ಟ್
ಮಾತ್ರ ಮಾಡಲಿಕ್ಕೆ ಸಾಧ್ಯವಾಗುತ್ತಿತ್ತು. ಇದೀಗ ಸುಮಾರು 30
ಲ್ಯಾಬ್‍ಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಮೇ
ಅಂತ್ಯದೊಳಗೆ 60 ಲ್ಯಾಬ್‍ಗಳು ಕಾರ್ಯ ನಿರ್ವಹಿಸಲಿದ್ದು
ದಿನವೊಂದಕ್ಕೆ ಸುಮಾರು 5 ರಿಂದ 5,500 ಟೆಸ್ಟ್‍ಗಳು ಮಾಡಲು
ಸಾಧ್ಯವಾಗಲಿದೆ.
6 ಹೊಸ ಪ್ರಕರಣ : ಇಂದು ಜಿಲ್ಲೆಯಲ್ಲಿ ಹೊಸದಾಗಿ 6 ಕೊರೊನಾ
ಪಾಸಿಟಿವ್ ಪ್ರಕರಣ ವರದಿಯಾಗಿವೆ. ಆದರೆ ಯಾವುದೂ ಹೊಸ
ಪ್ರಕರಣ ಅಲ್ಲ. ಹಿಂದಿನ ಪಾಸಿಟಿವ್ ಪ್ರಕರಣದ ಸಂಪರ್ಕ
ಇರುವವರಾಗಿದ್ದಾರೆ ಎಂದರು.
ಸಿ ಜಿ ಆಸ್ಪತ್ರೆ ಕೋವಿಡ್ ಆಸ್ಪತ್ರೆ : ಜಿಲ್ಲೆಯ ಚಿಗಟೇರಿ ಆಸ್ಪತ್ರೆ
ಕೋವಿಡ್ ಆಸ್ಪತ್ರೆಯಾಗಿದ್ದು 300 ಹಾಸಿಗೆಗಳ ವ್ಯವಸ್ಥೆ ಇದೆ.
ಇತರೆ ಆರೋಗ್ಯದ ಸಮಸ್ಯೆಗಳಿಗೆ ಬಾಪೂಜಿ, ಎಸ್‍ಎಸ್ ಆಸ್ಪತ್ರೆ
ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಖಾಸಗಿ ಆಸ್ಪತ್ರೆಗಳು ಈ ವೇಳೆ ತೆರೆದು ಚಿಕಿತ್ಸೆ ನೀಡದಿದ್ದಲ್ಲಿ
ಅವರ ಪರವಾನನಿ ರದ್ದುಪಡಿಸಲಾಗುವುದು ಎಂದರು.
ಮೇ 17 ರವರೆಗೆ 60 ವರ್ಷ ಮೇಲ್ಪಟ್ಟವರು, 10
ವರ್ಷದೊಳಗಿನ ಮಕ್ಕಳು ಹೊರ ಹೋಗಬಾರದು. ಹಾಗೂ
ನಗರದ ಕೆಲ ಬಡಾವಣೆಗಳ ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್
ಇರಿಸಿರುವ ಬಗ್ಗೆ ಭಯ ಬೇಡ. ಇದರಿಂದ ನಿವಾಸಿಗಳಿಗೆ ಯಾವುದೇ
ರೀತಿ ತೊಂದರೆ ಇಲ್ಲ ಎಂದರು.
ಅನೇಕರು ಕೊರೊನಾ ಹಿನ್ನೆಲೆಯ ಮಾನಸಿಕ
ಖಿನ್ನತೆಯಂತರ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ 104
ಸಹಾಯವಾಣಿಗೆ ಕರೆ ಮಾಡಿದಲ್ಲಿ ಆಪ್ತ ಸಮಾಲೋಚನೆ ವ್ಯವಸ್ಥೆ
ಮಾಡಲಾಗಿದೆ. ಆಪ್ತಮಿತ್ರ ಮತ್ತು ಟೆಲಿ ಐಸಿಯು
ವ್ಯವಸ್ಥೆಯನ್ನೂ ರಾಜ್ಯ ಮಟ್ಟದಲ್ಲಿ ಪರಿಣಿತ ತಜ್ಞರಿಂದ
ಮಾಡಲಾಗಿದ್ದು, ಸರ್ಕಾರ ಕೊರೊನಾ ನಿಗ್ರಹ ಮತ್ತು ಜನರ
ಜೀವ ಉಳಿಸಲು ಮಾಡಬೇಕಾದ ಎಲ್ಲ ಪ್ರಯತ್ನಗಳನ್ನು
ಮಾಡುತ್ತಿದೆ. ಆನರೂ ಸಹಕರಿಸಬೇಕು. ಶುಚಿತ್ವ, ಅಂತರ,
ಮಾಸ್ಕ್ ಬಳಸಬೇಕು. ಎಲ್ಲರಿಗೂ ಎನ್ 95, ಸರ್ಜಿಕಲ್ ಮಾಸ್ಕ್ ಬೇಡ.
ಹತ್ತಿಯ ಮರು ಬಳಸಬಹುದಾದ ಮಾಸ್ಕ್ ಧರಿಸಬಹುದು
ಎಂದರು.
ವೈದ್ಯರು ಮತ್ತು ಹೌಸ್‍ಸರ್ಜನ್‍ಗಳ ಸೇವೆ ದೊಡ್ಡದಾಗಿದ್ದು,
ದಾವಣಗೆರೆಯ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿರುವ ಹೌಸ್‍ಸರ್ಜನ್
ಮತ್ತು ಪಿಜಿ ವಿದ್ಯಾರ್ಥಿಗಳಿಗೆ 18 ತಿಂಗಳಿಂದ ಶಿಷ್ಯ ಭತ್ಯೆ ಬಂದಿಲ್ಲವೆಂಬ

ಮಾಹಿತಿ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರದಿಂದ ಭತ್ಯೆ
ಪಾವತಿಯಾದ ಬಗ್ಗೆ ಆಡಿಟ್ ಆಕ್ಷೇಪಣೆ ಹಿನ್ನೆಲೆ ಭತ್ಯೆ ನಿಲ್ಲಿಸಲಾಗಿದೆ. ಈ
ಬಗ್ಗೆ ಚರ್ಚಿಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದರು.
ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ
ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಪರಿಣಾಮಕಾರಿಯಾಗಿ
ಕೋವಿಡ್ ನಿಯಂತ್ರಣ ಹಿನ್ನೆಲೆ ಕೆಲಸ ಆಗಬೇಕು. ಇಂದಿನಿಂದಲೇ
ನಾನ್ ಕೋವಿಡ್ ಸೇವೆಗಳನ್ನು ಬಾಪೂಜಿ, ಎಸ್‍ಎಸ್ ಇತರೆ
ಆಸ್ಪತ್ರೆಗಳಿಗೆ ಕಳುಹಿಸಬೇಕು. ಜಿಲ್ಲಾಸ್ಪತ್ರೆಯ
ಆವರಣದಲ್ಲಿರುವ ಹೆರಿಗೆ ವಿಭಾಗವನ್ನು ಮಹಿಳಾ ಮತ್ತು
ಮಕ್ಕಳ ಆಸ್ಪತ್ರೆಗೆ ವರ್ಗಾಯಿಸಿ, ಕೋವಿಡ್ ಆಸ್ಪತ್ರೆಯಲ್ಲಿ
ಕೇವಲ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ವ್ಯವಸ್ಥೆ
ಆಗಬೇಕು ಎಂದು ಸೂಚಿಸಿದರು.
ಇಂದು ಎಸ್‍ಎಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಚಾಲನೆ
ನೀಡಲಾಗುತ್ತಿದ್ದು, ಇನ್ನೊಂದೆರಡು ದಿನಗಳಲ್ಲಿ
ಜಿಲ್ಲಾಸ್ಪತ್ರೆಯಲ್ಲಿಯೂ ಲ್ಯಾಬ್ ಆರಂಭವಾಗಲಿದೆ. ಕೊರೊನಾ
ನಿಗ್ರಹಕ್ಕಾಗಿ ಯುದ್ದೋಪಾದಿಯಲ್ಲಿ ಕೆಲಸ ನಡೆಯಬೇಕಿದ್ದು,
ಜನರೂ ಸಹಕರಿಸಬೇಕು. ಕ್ವಾರಂಟೈನ್‍ನಲ್ಲಿರುವವರಿಗೆ
ಮುತುವರ್ಜಿಯಿಂದ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದರು.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮಾತನಾಡಿ,
ಚೆಕ್‍ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಿನ ನಿಗಾವಣೆ ಆಗಬೇಕು.
ಹೊನ್ನಾಳಿ, ನ್ಯಾಮತಿಯಿಂದ ತರಕಾರಿ ಮತ್ತು ಆಸ್ಪತ್ರೆಯ
ಸೇವೆಗಳಿಗೆ ಪಾಸ್ ಕೇಳಲಾಗುತ್ತಿದೆ. ಅದನ್ನು ಎಸ್‍ಪಿ ಮತ್ತು
ಡಿಸಿಯವರು ಒದಗಿಸಿಕೊಡಬೇಕು. ಶಿವಮೊಗ್ಗಕ್ಕೂ ಕೂಡ ಈ
ಕಾರಣಗಳಿಗೆ ಪಾಸ್‍ನೀಡಿ ಕಳುಹಿಸಲಾಗುತ್ತಿದೆ ಎಂದ ಅವರು
ಚೆಕ್‍ಪೋಸ್ಟ್ ವ್ಯವಸ್ಥೆ ನೋಡಿಕೊಳ್ಳಲು ಮಿಲಿಟರಿ ಪಡೆ ಸಹಾಯ
ಪಡೆದುಕೊಳ್ಳಬಹುದೆಂದು ಸಲಹೆ ನೀಡಿದರು.
ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ,
ಕ್ಷೇತ್ರದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರು,
ಗೇಟ್‍ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ಮಾಸ್ಕ್‍ಗಳನ್ನು
ನೀಡಬೇಕು. ಹಾಗೂ ಗ್ರಾಮಗಳಲ್ಲಿ ಆರ್‍ಓ ಪ್ಲಾಂಟ್‍ಗಳು ಕೆಟ್ಟು
ಹೋಗಿರುವ ಕಾರಣ ಜನರಿಗೆ ಕುಡಿಯುವ ನೀರಿನ ಸಮಸ್ಯೆ
ಎದುರಾಗಿದೆ. ಜೊತೆಗೆ ರೂ.5 ನೀಡಿ ನೀರು ಪಡೆಯುವುದು
ಕೂಡ ಕಷ್ಟವಾಗಿರುವ ಕಾರಣ ಆರ್‍ಓ ಪ್ಲಾಂಟ್‍ಗಳನ್ನು
ಸಮರ್ಪಕವಾಗಿ ನಿರ್ವಹಿಸಿ ಉಚಿತವಾಗಿ ನೀರು ಕೊಡಬೇಕೆಂದರು.
ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಪ್ರತಿಕ್ರಿಯಿಸಿ ಎಎಂಸಿ ನೀಡಲಾದ ಏಜೆನ್ಸಿ
ಇದನ್ನು ನಿರ್ವಹಣೆ ಮಾಡಬೇಕು. ಹಾಗೂ ಉಚಿತವಾಗಿ ನೀರು
ಕೊಡಲು ಬರುವುದಿಲ್ಲ. ಈ ವೆಚ್ಚವನ್ನು ಗ್ರಾ.ಪಂ ಯಿಂದ
ಭರಿಸಬಹುದೆಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ತಾಲ್ಲೂಕುಗಳ
ಕುಡಿಯುವ ನೀರು ಸೇರಿದಂತೆ ಇತರೆ ಸಮಸ್ಯೆಗಳ ಕುರಿತು
ಉಸ್ತುವಾರಿ ಸಚಿವರೊಂದಿಗೆ ಇನ್ನೊಂದು ದಿನ ಸಭೆ ಕರೆದು
ಚರ್ಚಿಸೋಣ. ಈಗ ಕೋವಿಡ್ ನಿಯಂತ್ರಣ ಕುರಿತು ಹೆಚ್ಚಿನ ಒತ್ತು

ನೀಡಬೇಕು. ತಾಲ್ಲೂಕುಗಳಿಗೆ ದಾವಣಗೆರೆಯಿಂದ ಜನರು
ಹೋಗುತ್ತಿರುವುದ ಬಗ್ಗೆ ದೂರುಗಳಿದ್ದು, ಎಸ್‍ಪಿಯವರು
ಚೆಕ್‍ಪೋಸ್ಟ್‍ನಲ್ಲಿ ಬಿಗಿಗೊಳಿಸಬೇಕು. ಹಾಗೂ ಸಿ.ಜಿ.ಆಸ್ಪತ್ರೆಯಲ್ಲಿ
ರೋಗಿಗಳು ಮತ್ತು ವೈದ್ಯರಿಗೆ ಉತ್ತಮ ಸೌಲಭ್ಯ
ನೀಡಬೇಕು. ಜೊತೆಗೆ ಸಿಜಿ ಆಸ್ಪತ್ರೆಗೆ ಒಬ್ಬ ಹಿರಿಯ
ಅಧಿಕಾರಿಯನ್ನು ನೇಮಿಸುವ ಮೂಲಕ ನಿರ್ವಹಣೆಯನ್ನು
ಚುರುಕುಗೊಳಿಸಬೇಕೆಂದು ಸಲಹೆ ನೀಡಿದರು.
ಶಾಸಕರಾದ ಶಾಮನೂರು ಶಿವಶಂಕರಪ್ಪನವರು ಮಾತನಾಡಿ,
ಮುಖ್ಯಮಂತ್ರಿಗಳೇ ಈ ಹಿಂದೆ ಖಾಸಗಿ ಮೆಡಿಕಲ್ ಕಾಲೇಜಿನ ಪಿಜಿ
ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಬೇಕೆಂದು ಆದೇಶಿಸಿದ್ದರೂ
ಇದನ್ನು ಉಲ್ಲಂಘಿಸಲಾಗುತ್ತಿದೆ. ಆದ್ದರಿಂದ ಪಿಜಿ ವಿದ್ಯಾರ್ಥಿಗಳಿಗೆ
ಆದಷ್ಟು ಶೀಘ್ರದಲ್ಲಿ ಶಿಷ್ಯ ವೇತನ ನೀಡುವಂತೆ ಮನವಿ
ಮಾಡಿದರು. ಜೊತೆಗೆ ನಾನ್ ಕೋವಿಡ್ ರೋಗಿಗಳಿಗೆ ಬಾಪೂಜಿ
ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಶಾಸಕರಾದ ಎಸ್.ಎ.ರವೀಂದ್ರನಾಥ್ ಮಾತನಾಡಿ, ನಗರದ
ಬಡಾವಣೆಗಳಲ್ಲಿರುವ ಸರ್ಕಾರಿ ಹಾಸ್ಟೆಲ್‍ಗಳಲ್ಲಿ ಕ್ವಾರಂಟೈನ್
ಮಾಡುತ್ತಿರುವುದರಿಂದ ಜನರು ಗಾಬರಿಗೀಡಾಗಿದ್ದು ಊರಿನಿಂದ ಹೊರ
ವಲಯದಲ್ಲಿರುವ ಖಾಸಗಿ ಹಾಸ್ಟೆಲ್‍ಗಳಲ್ಲಿ ಅವರನ್ನು ಇರಿಸುವಂತೆ
ಸಲಹೆ ನೀಡಿದರು.
ವಿಧಾನಪರಿಷತ್ ಶಾಸಕ ಅಬ್ದುಲ್ ಜಬ್ಬಾರ್ ಮಾತನಾಡಿ,
ಕಂಟೈನ್‍ಮೆಂಟ್ ಝೋನ್‍ನ ಎಲ್ಲರಿಗೆ ಕೋವಿಡ್ ಪರೀಕ್ಷೆಗೆ
ಒಳಪಡಿಸಿದರೆ ಉತ್ತಮ. ಹಾಗೂ ಇತರೆ ಸಮಸ್ಯೆಗೆಂದು
ಆಸ್ಪತ್ರೆಗೆ ಹೋಗುವವರನ್ನು ಅನವಾಶ್ಯಕ ಕ್ವಾರಂಟೈನ್
ಮಾಡುವುದು ಬೇಡವೆಂದರು.
ಎಸ್‍ಪಿ ಹನುಮಂತರಾಯ ಮಾತನಾಡಿ, ದಾವಣಗೆರೆಯ ಕೊರೊನಾ
ಸೋಂಕಿನ ಮೂಲಗಳನ್ನು ಎರಡು ರೀತಿಯಲ್ಲಿ ಪತ್ತೆ
ಹಚ್ಚಲಾಗುತ್ತಿದೆ. ಒಂದು ಸರ್ವೇಲೆನ್ಸ್ ತಂಡ ಮತ್ತು ಸಿಡಿಆರ್
ವರದಿ ಮೂಲಕ. ಸೋಂಕು ಹರಡಿದ ಇಂಡೆಕ್ಸ್ ಕೇಸ್‍ಗಳಾದ
ರೋಗಿ ಸಂಖ್ಯೆ 533 ಮತ್ತು 556 ಪರಸ್ಪರ ಸಂಬಂಧಿಕರಾಗಿದ್ದು,
ರೋಗಿ ಸಂಖ್ಯೆ 533 ರ ಪ್ರಾಥಮಿಕ ಸಂಪರ್ಕದಲ್ಲಿದ್ದ ರೋಗಿ
ಸಂಖ್ಯೆ 616 ಮತ್ತು 617 ಇವರು ಈರುಳ್ಳಿ ಲಾರಿಗಳ ಮೂಲಕ
ಕೋವಿಡ್ ಇರುವ ಜಿಲ್ಲೆಗಳಾದ ಬಳ್ಳಾರಿ, ಬಾಗಲಕೋಟೆ, ಹಾಸನ
ಜಿಲ್ಲೆಗಳಲ್ಲಿ ತಿರುಗಾಡಿ ಬಂದಿರುತ್ತಾರೆ. ಬಹುತೇಕರಲ್ಲಿ ಕೋವಿಡ್
ಲಕ್ಷಣಗಳಿಲ್ಲದವರಾಗಿರುವುದರಿಂದ ಬೇರೆಯವರಿಗೆ ಸೋಂಕು
ಹಚ್ಚಿರುವ ಶಂಕೆ ಇದೆ. ಹಾಗೂ ಲಾಕ್‍ಡೌನ್ ವೇಳೆ ಅಗತ್ಯ
ವಸ್ತುಗಳ, ತರಕಾರಿಗಳ ಗಾಡಿಗಳ ಓಡಾಟದಿಂದ ಸೋಂಕನ್ನು
ತಂದು ಇಲ್ಲಿ ಹರಡಿದ್ದಾರೆಂಬ ನಿಲುವಿಗೆ ಬರಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಇದುವರೆಗೆ
1500 ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು,
1243 ನೆಗೆಟಿವ್ ವರದಿ ಬಂದಿದೆ. 257 ವರದಿ ಬಾಕಿ ಇದ್ದು, ಒಟಟು 67 ಪಾಸಿಟಿವ್
ಬಂದಿದೆ. 2 ಗುಣಮುಖ ಮತ್ತು 4 ಸಾವು ಸಂಭವಿಸಿದೆ. ಜಾಲಿನಗರ,
ಬಾಷಾನಗರ, ಇಮಾಂ ನಗರ, ಕೆಟಿಜೆ ನಗರ, ಬೇತೂರು ರಸ್ತೆ

ಮತ್ತು ಎಸ್‍ಪಿಎಸ್ ನಗರ ಆರು ಕಂಟೈನ್‍ಮೆಂಟ್ ಝೋನ್‍ಗಳಲ್ಲಿ
ಸಕ್ರಿಯ ಸರ್ವೆಲೆನ್ಸ್ ಕಾರ್ಯ ನಡೆಯುತ್ತಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ನಾಗರಾಜ್ ಮಾತನಾಡಿ, ಜಿಲ್ಲಾಸ್ಪತ್ರೆ ಕೋವಿಡ್
ಆಸ್ಪತ್ರೆಯಾಗಿದ್ದು ಒಟ್ಟು 300 ಕೋವಿಡ್ ಬೆಡ್‍ಗಳ ಪೈಕಿ 50
ಐಸಿಯು, 150 ಹೈಫ್ಲೋ ಆಕ್ಸಿಜನ್ ಮತ್ತು 100 ಕೋವಿಡ್ ಸಾಮಾನ್ಯ
ಬೆಡ್‍ಗಳೆಂದು ವಿಂಗಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ
ಹೆಚ್ಚಾದಲ್ಲಿ ಬಾಪೂಜಿ ಮತ್ತು ಎಸ್‍ಎಸ್ ಆಸ್ಪತ್ರೆಯಲ್ಲಿ ಬೆಡ್‍ಗಳನ್ನು
ಕಾಯ್ದಿರಿಸಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ 7 ವೆಂಟಿಲೇಟರ್ ಇವೆ ಎಂದು ಮಾಹಿತಿ
ನೀಡಿದರು.
ಸಭೆಯಲ್ಲಿ ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಹರಿಹರ
ಶಾಸಕರಾದ ರಾಮಪ್ಪ, ವಿಧಾನಪರಿಷತ್ ಶಾಸಕ ನಾರಾಯಣಸ್ವಾಮಿ
ಮಾತನಾಡಿದರು. ಶಾಸಕ ಪ್ರೊ.ಲಿಂಗಣ್ಣ, ಜಿ ಪಂ ಅಧ್ಯಕ್ಷೆ
ಯಶೋಧಮ್ಮ ಮರುಳಪ್ಪ, ಪಾಲಿಕೆ ಆಯುಕ್ತ
ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ಶಿವಕುಮಾರ್, ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್ ಇತರೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *