ದಾವಣಗೆರೆ ಜೂ.02
ಕೋವಿಡ್-19 ಸಂಕಷ್ಟದ ಈ ದಿನಗಳಲ್ಲಿ ನೀರು ಮತ್ತು
ಮಣ್ಣು ಸಂರಕ್ಷಣೆ ಕಾಮಗಾರಿಗಳನ್ನು ಕೈಗೊಂಡಿರುವುದು
ಉತ್ತಮ ಎಂದು ಮಾಯಕೊಂಡ ವಿಧಾನ ಸಭಾ ಕ್ಷೇತ್ರದ
ಶಾಸಕರಾದ ಪ್ರೊ. ಲಿಂಗಣ್ಣ ಅಭಿಪ್ರಾಯ ಪಟ್ಟರು.
ಕೃಷಿ ಇಲಾಖೆಯ ಜಲಾನಯನ ಅಭಿವೃದ್ಧಿ ಮತ್ತು
ಜಲಾಮೃತ ಯೋಜನೆಯಡಿ ಅಣಜಿ ಗ್ರಾಮದ ರೈತರ ತಾಕಿನಲ್ಲಿ
ಕೈಗೊಳ್ಳುತ್ತಿರುವ ಮಣ್ಣು ಮತ್ತು ನೀರು ಸಂರಕ್ಷಣೆ
ಕಾಮಗಾರಿಗಳನ್ನು ಪರಿಶೀಲಿಸಿ, ವೈಯಕ್ತಿಕವಾಗಿ ಮಾಸ್ಕ್ ಮತ್ತು
ಉಪಹಾರವನ್ನು ವಿತರಿಸಿ ಮಾತನಾಡಿದ ಅವರು ಕೂಲಿ ಕಾರ್ಮಿಕರು ಈ
ಕೋವಿಡ್-19 ಮಹಾಮಾರಿಯ ಬಗ್ಗೆ ಜಾಗರೂಕರಾಗಿರಬೇಕು.
ಸರ್ಕಾರ ಎಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ಇನ್ನೂ ಈ
ಮಹಾಮಾರಿಯು ಸಂಪೂರ್ಣವಾಗಿ ಹೋಗಿರುವುದಿಲ್ಲ ಎಂದರು.
ಉದ್ಯೋಗ ಖಾತರಿ ಯೋಜನೆಯಡಿ ಶ್ರಮ ವಹಿಸಿ ರೈತರ
ಜಮೀನಿನಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ
ಕಾಮಗಾರಿಯನ್ನು ಇಲಾಖೆಯವರು ನೀಡಿರುವ
ತಾಂತ್ರಿಕತೆಯಂತೆ ಉತ್ತಮವಾಗಿ ಕೈಗೊಂಡಿರುವುದು ಕಂಡು
ಬರುತ್ತಿದೆ. ಇದೇ ರೀತಿ ಈ ಭಾಗದ ಎಲ್ಲಾ ಹಳ್ಳಿಗಳಲ್ಲೂ ಎಲ್ಲಾ ರೈತರ
ಜಮೀನಿನಲ್ಲಿಯೂ ಇಂತಹ ಕಾಮಗಾರಿಯನ್ನು ಕೈಗೊಳ್ಳಬೇಕು
ಎಂದು ಹಾಜರಿದ್ದ ರೈತ ಬಾಂಧವರಲ್ಲಿ ಮನವಿ ಮಾಡಿದ ಅವರು ನೀರು
ಮತ್ತು ಮಣ್ಣು ವ್ಯವಸಾಯಕ್ಕೆ ಅಮೂಲ್ಯ. ಅವುಗಳ
ವ್ಶೆಜ್ಞಾನಿಕ ರಕ್ಷಣೆ ಅಗತ್ಯ. ಆದ್ದರಿಂದ ಎಲ್ಲಾ ರೈತರು
ಸರ್ಕಾರದ ಈ ಯೋಜನೆಯನ್ನು ತಮ್ಮ ತಮ್ಮ ಜಮೀನಿನಲ್ಲಿ
ಅಳವಡಿಸಿಕೊಂಡು ಪ್ರಯೋಜನ ಪಡೆಯಬೇಕು ಎಂದರು.
ಕೂಲಿಕಾರರನ್ನು ವಿಚಾರಿಸಿದಾಗ ಅನೇಕ ಪದವಿ ಮತ್ತು ಉನ್ನತ
ವ್ಯಾಸಂಗ ಮಾಡಿದ ಯುವಕರು ಕೆಲಸದಲ್ಲಿ
ತೊಡಗಿಕೊಂಡಿರುವುದು ಕಂಡುಬಂದಿದ್ದು, ನಿಗದಿಪಡಿಸಿದ
ಕೆಲಸವನ್ನು ಕೇವಲ 2 ರಿಂದ 3 ತಾಸುಗಳಲ್ಲಿ
ಪೂರ್ಣಗೊಳಿಸುತ್ತಿದ್ದಾರೆ ಎಂದರು.
ದಿನಕ್ಕೆ ರೂ. 275/- ಕೂಲಿ ಪಾವತಿಸುತ್ತಾರೆ ಎಂಬುದನ್ನು
ಕೂಲಿಕಾರರಿಂದ ಕೇಳಿ ಖಾತ್ರಿ ಪಡಿಸಿಕೊಂಡು. ಸ್ಥಳದಲ್ಲಿ ಹಾಜರಿದ್ದ
ಕೃಷಿ ಇಲಾಖೆ ಅಧಿಕಾರಿಗಳು ಈ ಯೋಜನೆಯ ಕುರಿತು ಎಲ್ಲಾ
ಗ್ರಾಮಗಳಲ್ಲಿ ಹೆಚ್ಚಿನ ಪ್ರಚಾರ ಕೈಗೊಂಡು ರೈತರು
ಸ್ವಯಂ ಪ್ರೇರಿತರಾಗಿ ಉದ್ಯೋಗ ಖಾತರಿ ಯೋಜನೆಯಡಿ
ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಲು
ಸೂಚಿಸಿದರು.
ಹಾಜರಿದ್ದ ಸಹಾಯಕ ಕೃಷಿ ನಿರ್ದೇಶಕರು ಪ್ರಸ್ತುತ
ತಾಲ್ಲೂಕಿನಲ್ಲಿ ಜಲಾಮೃತ ಮತ್ತು ಸಮಗ್ರ ಜಲಾಮೃತ
ಯೋಜನೆಗಳು ಜಾರಿಯಿದ್ದು ಜಲಾಮೃತ ಯೋಜನೆಯಡಿ
ಕಂದನಕೋವಿ, ಹೆಬ್ಬಾಳು, ಗುಡಾಳು, ಹುಲಿಕಟ್ಟೆ, ಅಣಜಿ ಗ್ರಾಮ
ಪಂಚಾಯಿತಿಗಳು ಮತ್ತು ಸಮಗ್ರ ಜಲಾಮೃತ ಯೋಜನೆಯಡಿ
ಅಣಜಿ, ಹೆಮ್ಮನಬೇತೂರು, ಆಲೂರು, ಹುಲಿಕಟ್ಟೆ ಗ್ರಾಮ
ಪಂಚಾಯಿತಿಗಳ ಎಲ್ಲಾ ಗ್ರಾಮಗಳ ಸುಮಾರು 9 ಸಾವಿರ ಹೆಕ್ಟೇರ್
ಪ್ರದೇಶದ ಸಣ್ಣ, ದೊಡ್ಡ ಮತ್ತು ಎಲ್ಲಾ ವರ್ಗದ ರೈತರು
ತಮ್ಮ ತಮ್ಮ ಜಮೀನಿನಲ್ಲಿ ಲಾಭ ಪಡೆಯಬಹುದು ಎಂದು
ತಿಳಿಸಿದರು.
ಅಣಜಿ ಗ್ರಾಮದ ಪ್ರಗತಿಪರ ರೈತ ರಾಜಪ್ಪ ಮಾತನಾಡಿ, ಸರ್ಕಾರ
ಉದ್ಯೋಗ ಖಾತರಿ ಮೂಲಕ ಮಾಡುತ್ತಿರುವ ಈ ಯೋಜನೆ ನಮ್ಮ
ಗ್ರಾಮದ ಕೂಲಿಕಾರ್ಮಿಕರಿಗೆ ಕೆಲಸ ಕೊಡುವ ಮೂಲಕ ನಮ್ಮ
ಹೊಲದಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಸಾಧ್ಯವಾಗಿದೆ. ಎಲ್ಲಾ
ರೈತರು ಇದನ್ನು ಅಳವಡಿಸಿಕೊಳ್ಳುವುದು ಉತ್ತಮ ಎಂದರು.
ಈಗ ಪರಿಶೀಲಿಸಲಾದ ಕಾಮಗಾರಿಯು ಕಂದಕ ಬದು ಮತ್ತು
ಕೋಡಿ ನಿರ್ಮಾಣವಾಗಿದ್ದು, ಒಂದು ಕಂದಕ ಬದು 15 ಅಡಿ ಉದ್ದ 4 ಅಡಿ
ಅಗಲ ಮತ್ತು 2 ಅಡಿ ಆಳ ಇದ್ದು, ಇದರಲ್ಲಿ 3 ಸಾವಿರ ಲೀಟರ್ ನೀರು
ಸಂಗ್ರಹಣಾ ಸಾಮಥ್ರ್ಯವಿದ್ದು ಇಂತಹ ಗುಂಡಿಗಳು ಎಕರೆಗೆ 15
ರಿಂದ 20 ಬರುತ್ತವೆ. ಅಂದರೆ ಎಕರೆಗೆ 60-75 ಸಾವಿರ ಲೀಟರ್ ನೀರು
ಹೊಲಗಳಲ್ಲಿ ಜಲ ಮರುಪೂರಣವಾಗುತ್ತದೆ. ಇದೇ ತರಹ
ಒಂದು ಹಂಗಾಮಿನಲ್ಲಿ ಕನಿಷ್ಟ 08-10 ಮಳೆಗಳಾದರೆ 3-4 ಲಕ್ಷ
ಲೀಟರ್ ಮರುಪೂರಣವಾಗುತ್ತದೆ. ಆದುದರಿಂದ ಸದರಿ ಜಲಾನಯನ
ಪ್ರದೇಶದ ಅಂತರ್ಜಲ ಸಹ ಹೆಚ್ಚಲು ಸಹಾಯವಾಗುತ್ತದೆ. ಈ
ಹಿನ್ನೆಲೆಯಲ್ಲಿ ಈಗಾಗಲೇ ತಾಲ್ಲೂಕಿನಲ್ಲಿ 11 ಸಾವಿರ ಮಾನವ
ದಿನಗಳನ್ನು ಸೃಜಿಸಲಾಗಿದ್ದು, ಈಗಾಗಲೇ 30 ಲಕ್ಷ ಕೂಲಿ
ಹಣವನ್ನು ಪಾವತಿಸಲು ಕ್ರಮವಹಿಸಲಾಗಿದೆ ಮತ್ತು ಈಗ
ನಿರ್ಮಾಣಗೊಂಡಿರುವ ಬದುಗಳ ಮೇಲೆ ರೈತರು ತಮ್ಮ ಇಚ್ಛೆ
ಅನುಸಾರ ಆಯ್ದ ತೋಟಗಾರಿಕೆ ಮತ್ತು ಅರಣ್ಯೀಕರಣ
ಸಸಿಗಳನ್ನು ಸಹ ಹಾಕಿಕೊಳ್ಳಲು ಉದ್ಯೋಗ ಖಾತರಿ
ಯೋಜನೆಯಡಿಯಲ್ಲಿ ಅವಕಾಶವಿರುತ್ತದೆ. ಅದನ್ನು ಸಹ ಎಲ್ಲಾ
ರೈತರು ಬಳಸಿಕೊಂಡು ಒಂದು ಮಾದರಿ ಜಲಾನಯನ ಪ್ರದೇಶ
ಮಾಡಿಕೊಂಡು ನೀರಿನ ಸದ್ಭಳಕೆ ಮಾಡಿಕೊಂಡು ಉತ್ಪಾದಕತೆ,
ಉತ್ಪಾದನೆ ಮತ್ತು ಆದಾಯ ಹೆಚ್ಚಿಸಿಕೊಂಡು ತಮ್ಮ ಜೀವನಮಟ್ಟ
ಸುಧಾರಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಾವಣಗೆರೆ ಎಪಿಎಂಸಿ ಅಧ್ಯಕ್ಷರಾದ
ಚಂದ್ರಶೇಖರ್, ಕೃಷಿ ಅಧಿಕಾರಿಗಳಾದ ಗಿರೀಶ್, ಚಂದ್ರಪ್ಪ ಬಿ.ಕೆ.,
ಭೀಮಣ್ಣ ಮತ್ತು ಗ್ರಾಮದ ಮುಖಂಡರು ಹಾಜರಿದ್ದರು.