ದಾವಣಗೆರೆ ಜೂ 8
   2019-20 ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದು ಕೋವಿಡ್-
19 ಲಾಕ್‍ಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ರೈತರಿಗೆ
ರೂ. 5 ಸಾವಿರ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ
ಮೂಲಕ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಹೇಳಿದರು.
   ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕೃಷಿ
ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ
ಅವರು, ಲಾಕ್‍ಡೌನ್‍ನಿಂದಾಗಿ ಮುಸುಕಿನ ಜೋಳ ಬೆಳೆ ಬೇಡಿಕೆ
ಕಳೆದುಕೊಂಡಿತ್ತು. ಇದರಿಂದಾಗಿ ಮುಸುಕಿನ ಜೋಳ ಬೆಳೆದ
ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ 
ಮುಸುಕಿನ ಜೋಳ ಬೆಳೆಗಾರರಿಗೆ ಆರ್ಥಿಕ ನೆರವು
ನೀಡುವುದು ಅವಶ್ಯಕವಾಗಿದೆ ಎಂದರು.
   ಈ ಯೋಜನೆಯ ಕುರಿತು ಜಿಲ್ಲಾ ಮಟ್ಟದಲ್ಲಿ ವ್ಯಾಪಕವಾಗಿ
ಪ್ರಚಾರ ಕೈಗೊಳ್ಳಬೇಕು. ಯೋಜನೆ ಅನುಷ್ಟಾನದಲ್ಲಿ
ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಗಧಿತ
ಸಮಯದೊಳಗೆ ಹಾಗೂ ಸಮರ್ಪಕವಾಗಿ ಕಾರ್ಯ
ನಿರ್ವಹಿಸಬೇಕು. ಸಂಬಂಧಪಟ್ಟ ವಿವಿಧ ಇಲಾಖೆಗಳೊಂದಿಗೆ
ಸಮನ್ವಯ ಸಾಧಿಸಿ ಹೋಬಳಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
ತಂಡವನ್ನು ರಚಿಸುವ ಮೂಲಕ ಕ್ಷೇತ್ರ ತಪಾಸಣೆ
ತ್ವರಿತವಾಗಿ ಕೈಗೊಳ್ಳುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು
ಎಂದು ಅಧಿಕಾರಿಗೆ ಸೂಚಿಸಿದರು.
   ತಾಲ್ಲೂಕುಗಳಿಂದ ಪರಿಹಾರ ನೀಡಲು ತಯಾರಿಸಿರುವ
ರೈತರುಗಳ ಪಟ್ಟಿಯನ್ನು ಪರಿಹಾರ ನೀಡುವ ಸಲುವಾಗಿ
ಅನುಮೋದಿಸಬೇಕು. ತಾಲ್ಲೂಕು ಮಟ್ಟದ ಸಮಿತಿಯೊಂದಿಗೆ
ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಿಗಧಿತ
ಅವಧಿಯಲ್ಲಿ ಯೋಜನೆಯಡಿ ಆರ್ಥಿಕ ಹಾಗೂ ಭೌತಿಕ ಗುರಿ
ಸಾಧಿಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ತಿಳಿಸಿದರು.
   ರೈತರಿಗೆ ಅಲ್ಪಾವಧಿ ಆರ್ಥಿಕ ನೆರವು ನೀಡಲು ಕರ್ನಾಟಕ
ಸರ್ಕಾರದ ಇ-ಆಡಳಿತ ವತಿಯಿಂದ ಕೈಗೊಳ್ಳಲಾದ 2019-20ನೇ
ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ಬೆಳೆ
ಸಮೀಕ್ಷೆ ತಂತ್ರಾಂಶದಲ್ಲಿ ಈಗ ದಾಖಲಾಗಿರುವ ಬೆಳೆ
ವಿವರಗಳ ಆಧಾರದ ಮೇರೆಗೆ ಪಾವತಿಸಬೇಕು. ಜೊತೆಗೆ
ಬೆಳೆ ಸಮೀಕ್ಷೆಯಲ್ಲಿ ಇರುವಂತೆ ಮುಸುಕಿನ ಜೋಳ
ಬೆಳೆಗಾರರ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ
ಸಂಪರ್ಕ ಕೆಂದ್ರ ಹಾಗೂ ತಾಲ್ಲೂಕು ಕಚೇರಿಯ
ನಾಪಫಲಕದಲ್ಲಿ ಪ್ರದರ್ಶಿಸಬೇಕು. ಸದರಿ ಪಟ್ಟಿಯಲ್ಲಿ
ದಾಖಲಾಗದೇ ಇರುವ ಮುಸುಕಿನ ಜೋಳ ಬೆಳೆಗಾರರಿದ್ದಲ್ಲಿ,
ಅಂತಹ ರೈತರಿಂದ ಅರ್ಜಿ ಪಡೆಯಬೇಕು ಎಂದು ಯೋಜನೆ
ಕುರಿತು ವಿವರಿಸಿದರು.
   ಬೆಳೆ ಸಮೀಕ್ಷೆಯಲ್ಲಿ ದಾಖಲಾಗದಿದ್ದಲ್ಲಿ ಅಂತಹ ರೈತರಿಂದ ಅರ್ಜಿ
ಪಡೆದು ಹೋಬಳಿ ಮಟ್ಟದಲ್ಲಿ ಕೃಷಿ ಅಧಿಕಾರಿ. ಸಹಾಯಕ ಅಧಿಕಾರಿ
ಹಾಗೂ ಗ್ರಾಮ ಲೆಕ್ಕಿಗರನ್ನು ಒಳಗೊಂಡ ತಂಡವನ್ನು

ರಚಿಸಿ ಕೃಷಿ ಬೆಳೆಗಳ ತಾಲ್ಲೂಕುಗಳನ್ನು ಪರಿಶೀಲಿಸಿ,
ಸ್ಥಳೀಯವಾಗಿ ಪಂಚನಾಮೆ ಮಾಡಿಕೊಂಡು ಪರಿಹಾರ ವಿತರಿಸಲು
ತಾಲ್ಲೂಕು ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಬೇಕು ಎಂದು
ತಿಳಿಸಿದರು.
   ಲಾಕ್‍ಡೌನ್ ವೇಳೆ ಅಧಿಕಾರಿಗಳು ರೈತರ ಸಂಕಷ್ಟಕ್ಕೆ
ಸ್ಪಂದಿಸಬೇಕು. ಸರ್ಕಾರದ ಸೂಚನೆ ಪಾಲಿಸುವ ಮೂಲಕ
ರೈತರ ಸಹಾಯಕ್ಕೆ ಮುಂದಾಗಬೇಕು. ಈ ಬಾರಿ ಮಳೆ ಜಾಸ್ತಿ
ಬರಬಹುದು. ಮುನ್ನೆಚರಿಕಾ ಕ್ರಮವಾಗಿ ಅಧಿಕಾರಿಗಳು
ತಯಾರಿ ನಡೆಸಿಕೊಂಡಿರಬೇಕು. ಕೊರೊನಾ ಸಂದರ್ಭದಲ್ಲಿ
ಕಾರ್ಯ ನಿರ್ವಹಿಸಿದಂತೆ, ಜಿಲ್ಲೆಯಲ್ಲಿ ಪ್ರವಾಹ ಬಂದರೆ ಕೊರೊನಾ
ಜೊತೆ ಜೊತೆಗೆ ಕೆಲಸ ಮಾಡಲು ಸನ್ನದ್ಧರಾಗಬೇಕು.
ಯಾವುದೇ ರೀತಿಯ ಪ್ರಾಣ ಹಾನಿ, ಜೀವ ಹಾನಿ ಆಗದಂತೆ
ನೋಡಿಕೊಳ್ಳಬೇಕು ಎಂದರು.
   ಕೃಷಿ ಜಂಟಿ ಸಹಾಯಕ ನಿರ್ದೇಶಕರು ಶರಣಪ್ಪ ಮುದಗಲ್,
ತಹಶೀಲ್ದಾರ್ ಗಿರೀಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *