ದಾವಣಗೆರೆ ಜೂ 8
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೊರೊನಾ
ಸಂದರ್ಭದಲ್ಲಿ ರೈತರಿಗೆ ಉಂಟಾಗಿರುವ ಸಂಕಷ್ಟದ ಕುರಿತು
ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ
ಮುಖಂಡರೊಂದಿಗೆ ಸಭೆ ನಡೆಸಲಾಯಿತು.
ಬಿತ್ತನೆ ಬೀಜ ರಸಗೊಬ್ಬರ ಪೂರೈಕೆ, ತೋಟಗಾರಿಕೆ
ಬೆಳೆಗಳಿಗೆ ಬೆಳೆ ಹಾನಿ ಪರಿಹಾರ ಹಾಗೂ ಬೆಂಬಲ ಬೆಲೆ ನೀಡುವಿಕೆ,
ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು, ಕೃಷಿ ಬೆಳೆಗಳ
ಖರೀದಿ ಕೆಂದ್ರಗಳ ಸ್ಥಾಪನೆ, ಬ್ಯಾಂಕ್‍ಗಳಿಂದ ಕೃಷಿಗೆ
ಸಂಬಂಧಿಸಿದಂತೆ ಸಾಲ ಮಂಜೂರಾತಿ ಹಾಗೂ ವಸೂಲಾತಿ
ಕ್ರಮಗಳ ಕುರಿತು, ಅರಣ್ಯ ಇಲಾಖೆ ವತಿಯಿಂದ ಗಿಡ ನೆಡುವ
ಕಾರ್ಯಕ್ರಮ, ಪರಿಸರ ಇಲಾಖೆಗೆ ಸಂಬಂಧಿಸಿದ ವಿಷಯ, ಅಡಿಕೆ
ಬೆಳೆಗಳಿಗೆ ಮಂಗಗಳ ಹಾವಳಿ ತಪ್ಪಿಸಲು
ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೂಲಂಕುಷವಾಗಿ
ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ರೈತರ ಸಂಕಷ್ಟದಲ್ಲಿ
ಜಿಲ್ಲಾಡಳಿತ ನಿಮ್ಮೊಂದಿಗಿದೆ. ಕಾಲ ಕಾಲಕ್ಕೆ ನಿಮ್ಮೆಲ್ಲರ ಸಲಹೆ
ಸೂಚನೆ ತೆಗೆದುಕೊಂಡು ಒಳ್ಳೆಯ ರೀತಿಯಲ್ಲಿ ಕೆಲಸ
ಮಾಡುತ್ತೇವೆ. ನೀವು ಕೂಡ ನಮ್ಮ ಕೆಲಸದ ಅಂಗವಾಗಿದ್ದೀರಿ.
ನಿಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು
ನಿಮ್ಮ ಸಹಕಾರ ಬೇಕು ಎಂದರು.
ಮುಂಗಾರು ಸಂದರ್ಭ ಇದಾಗಿದ್ದು, ಬಿತ್ತನೆ ಬೀಜ
ರಸಗೊಬ್ಬರಗಳ ಪೂರೈಕೆ ಸರಿಯಾಗಿ ಆಗಬೇಕು.
ರೈತರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು.
ಜೊತೆಗೆ ತೋಟಗಾರಿಕೆ ಹಾಗೂ ಕೃಷಿ ಬೆಳಗೆಳಿಗೆ ಉತ್ತಮ
ರೀತಿಯ ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಬೆಳೆ
ಹಾನಿಗಳಿಗೆ ಪರಿಹಾರ ಒದಗಿಸಬೇಕು ಎಂದು ಅಧಿಕಾರಿಗಳಿಗೆ
ಸೂಚಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ಬ್ಯಾಂಕ್
ಸಾಲಕ್ಕೆ ಎನ್.ಒ.ಸಿ ಕೇಳುತ್ತಿದ್ದಾರೆ. ಆದರೆ ರಿಸರ್ವ್ ಬ್ಯಾಂಕ್ ಎನ್.ಒ.ಸಿ
ಅಗತ್ಯವಿಲ್ಲ ಎಂದಿದೆ ಅಂದಾಗ, ಲೀಡ್ ಬ್ಯಾಂಕ್ ಮ್ಯಾನೇಜರ್
ಪ್ರತಿಕ್ರಿಯಿಸಿ ಯಾವ ಬ್ಯಾಂಕಿನಲ್ಲೂ ಸಹ ಎನ್.ಒ.ಸಿ ಕೇಳುತ್ತಿಲ್ಲ.
ಆದರೆ ಕೆಲವು ನಿರ್ದಿಷ್ಟ ಕಾರಣಗಳಿಗಷ್ಟೇ ಎನ್.ಒ.ಸಿ ಬೇಕಾಗಿದೆ. ಈ
ಕುರಿತು ಲೀಡ್ ಬ್ಯಾಂಕ್‍ಗಳಿಗೆ ಮಾರ್ಗದರ್ಶನ
ಮಾಡಲಾಗುವುದು ಎಂದ ಅವರು, ಕೆಲವೊಮ್ಮೆ ಆರ್.ಟಿ.ಸಿ ಯಲ್ಲಿ
ತಪ್ಪುಗಳಿದ್ದರೆ ಹೀಗೆ ಆಗುತ್ತದೆ ಎಂದರು. ಇದಕ್ಕೆ
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಎನ್.ಒ.ಸಿ ಬಗ್ಗೆ ಪ್ರಚಾರ
ಮಾಡಬೇಕು. ಯಾವ ಬ್ಯಾಂಕ್‍ನಲ್ಲೂ ರೈತರ ಸಾಲಗಳಿಗೆ
ಎನ್.ಒ.ಸಿ ಅವಶ್ಯಕತೆಯಿಲ್ಲ ಎಂಬುದರ ಬಗ್ಗೆ ತಿಳಿಸಬೇಕು ಎಂದು
ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಲ್ಲಿ ಕರಿಬೇವು ನುಗ್ಗೆ ಮಾತ್ರ ಹಚ್ಚುತ್ತಿದ್ದಾರೆ. 170
ಶಾಲೆಗಳಲ್ಲಿ 48 ಶಾಲೆಗಳಿಗೆ ಕಾಂಪೌಂಡ್ ಇದೆ. ಆ ಶಾಲೆಗಳಲ್ಲಿ ಗಿಡ
ನೆಡಲು ಕ್ರಮ ಕೈಗೊಳ್ಳಬೇಕು. ಈ ಹಿಂದೆ 8,9,10ನೇ
ತರಗತಿಯ ವಿದ್ಯಾರ್ಥಿಗಳಿಗೆ ಗಿಡಗಳ ಜವಾಬ್ದಾರಿ ನೀಡಿ ಅವರಿಗೆ
ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಇದೀಗ ಶಾಲೆಗಳು
ಆರಂಭವಾಗಿಲ್ಲ. ಅದರ ಬದಲಾಗಿ ರಸ್ತೆಗಳಲ್ಲಿ ಈ ಹಿಂದೆ ಹಾಕಿದ
ಗಿಡಗಳು ಮರಗಳಾಗಿ ಬೆಳೆದಿವೆ. ಅದೇ ರೀತಿ ರಸ್ತೆಗಳಲ್ಲಿ
ಹಾಕಿದ ಗಿಡಗಳು ಎಲ್ಲಿ ಹಾಳಗಿದ್ದವೋ ಅಲ್ಲಿ ಮತ್ತೊಮ್ಮೆ ಗಿಡ
ನೆಡಬೇಕು. ಆದರೆ ಅರಣ್ಯ ಇಲಾಖೆಯವರು ಬಾಕಿ ಗಿಡಗಳು
ಸಿಗುತ್ತಿಲ್ಲ ಅನ್ನುತ್ತಿದ್ದಾರೆ ಎಂದಾಗ ಅರಣ್ಯಾಧಿಕಾರಿ ಮಾತನಾಡಿ,
ಹಸಿರು ಕರ್ನಾಟಕ ಯೋಜನೆಯಡಿ ಶಾಲಾ ಕಾಂಪೌಂಡ್ ಒಳಗೆ ಗಿಡ
ನೆಡಲು ಸಸ್ಯಗಳ ಕೊರತೆ ಇಲ್ಲ. ಅಗತ್ಯ ಇರುವೆಡೆ ಗಿಡ
ನೀಡಲಾಗುವುದು ಎಂದರು.
ಮತ್ತೋರ್ವ ರೈತ ಮುಖಂಡರು ಮಾತನಾಡಿ, ಎಪಿಎಂಸಿ ಹಿಂಭಾಗ
ಅಡಿಕೆ ಗಿಡಗಳು ಒಣಗುತ್ತಿವೆ. ನೀರಿನ ಕೊರತೆ ಇಲ್ಲ. ಈ ಕುರಿತು
ಎಲ್ಲಾ ಇಲಾಖೆಗಳಿಗೆ ತಿಳಿಸಲಾಗಿದೆ. ಈ ಕುರಿತು ಕ್ರಮ
ಕೈಗೊಳ್ಳಬೇಕು. ಜೊತೆಗೆ ಅಡಿಕೆ ಬೆಳೆಗೆಳಿಗೆ ಮಂಗಗಳ
ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ
ಕೈಗೊಳ್ಳಬೇಕು. ಮಂಗಗಳು ಅಡಿಕೆಯ
ಒಳಭಾಗಗಳಲ್ಲಿನ ನೀರಿನ ಅಂಶ ಹೀರುತ್ತವೆ. ಹಾಗೂ
ಇತ್ತೀಚೆಗೆ 1 ಎಕರೆಯಲ್ಲಿ 8 ರಿಂದ 10 ಅಡಿಕೆ ಮರಗಳು
ಓಣಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು
ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಅಧಿಕಾರಿಗಳು, ಕೇವಲ
ಮೂರ್ನಾಲ್ಕು ಮಂಗಗಳಾದರೆ ಓಡಿಸಬಹುದು. ಆದರೆ ತುಂಬಾ
ಹಿಂಡುಗಳಿದ್ದರೆ ಕಷ್ಟವಾಗುತ್ತದೆ ಎಂದರು.
ಈ ವೇಳೆ ರವಿ ಕುಮಾರ್ ಪ್ರತಿಕ್ರಿಯಿಸಿ, ಮಂಗಗಳು ನಾಡು
ಅರಸಿಕೊಂಡು ಬರುವುದು ಆಹಾರಕ್ಕಾಗಿ. ಎಷ್ಟು ದಿನ
ಅವುಗಳನ್ನು ಓಡಿಸಲಾಗುತ್ತದೆ. ಅದರ ಬದಲಾಗಿ ಅರಣ್ಯ
ಪ್ರದೇಶಗಳಲ್ಲಿ ಅವುಗಳ ಜೀವಿತಕ್ಕಾಗಿ ಹಣ್ಣಿನ ಗಿಡಗಳಾದ
ನೇರಳೆ, ಹಲಸು, ಗಸಗಸೆ ಹಣ್ಣಿನ ಗಿಡ ಬೆಳೆಸಿದರೆ,
ಅವುಗಳು ನಾಡು ಹುಡುಕಿಕೊಂಡು ಬರುವುದಿಲ್ಲ ಎಂದು
ಸಲಹೆ ನೀಡಿದರು.
ಆಹಾರ ಇಲಾಖೆ ಜಂಟಿ ನಿರ್ದೆಶಕ ಮಂಟೆಸ್ವಾಮಿ ಮಾತನಾಡಿ, ಬೆಂಬಲ
ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಮೇ 31 ರವರೆಗೆ ನಿಗದಿ
ಮಾಡಲಾಗಿತ್ತು. ನಂತರ ಅದನ್ನು ಜೂ 30 ರವರೆಗೆ
ವಿಸ್ತರಿಸಲಾಗಿದೆ. ಭತ್ತಕ್ಕೆ ಹೊರತು ಬೇರೆ ಬೆಳೆಗಳಿಗೆ ಇಲ್ಲ
ಎಂದು ಮಾಹಿತಿ ನೀಡಿದರು.
ಕೃಷಿ ಜಂಟಿ ಸಹಾಯಕ ನಿರ್ದೇಶಕರು ಶರಣಪ್ಪ ಮುದಗಲ್,
ತೋಟಗಾರಿಕಾ ಉಪನಿರ್ದೇಶಕ ಲಕ್ಷ್ಮೀಕಾಂತ್ ಮತ್ತು ಜಿಲ್ಲಾ
ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಚಿಕ್ಕನಹಳ್ಳಿ
ರೇವಣ ಸಿದ್ದಪ್ಪ, ಬಲ್ಲೂರು ಪರಶುರಾಮ ರೆಡ್ಡಿ, ಲಿಂಗಾ ರೆಡ್ಡಿ,
ಆನಗೋಡು ಭೀಮಾ ರೆಡ್ಡಿ ಇದ್ದರು.