ದಾವಣಗೆರೆ ಜೂ.16 
     ಜೂನ್ 25 ರಿಂದ ಜುಲೈ 3 ರವರೆಗೆ ನಡೆಯಲಿರುವ ಎಸ್‍ಎಸ್‍ಎಲ್‍ಸಿ
ಪರೀಕ್ಷೆಗೆ ಕೊರೊನಾ ಹಿನ್ನೆಲೆ ಸರ್ಕಾರದ ನಿಯಮಾವಳಿಯಂತೆ
ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್, ಡಿಸ್‍ಇನ್‍ಫೆಕ್ಷನ್ ಸೇರಿದಂತೆ ಎಲ್ಲ
ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು
ಯಾವುದೇ ಅಭದ್ರತೆ, ಕಳವಳವಿಲ್ಲದೇ ಎಸ್‍ಎಸ್‍ಎಲ್‍ಸಿ
ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ತಿಳಿಸಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಎಸ್‍ಎಸ್‍ಎಲ್‍ಸಿ
ಪರೀಕ್ಷೆ ವೇಳಾಪಟ್ಟಿ ಪ್ರಕಟವಾಗಿದ್ದು ಕೋವಿಡ್ ಹಿನ್ನೆಲೆಯಲ್ಲಿ ಈ
ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಒಂದು ಸವಾಲಿನ ಮತ್ತು ವಿಶೇಷ
ಪರೀಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಎದುರಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗಿದ್ದು,
ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಪರೀಕ್ಷೆ ನಡೆಸುವಂತೆ
ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಒಟ್ಟು 21683 ವಿದ್ಯಾರ್ಥಿಗಳು ಒಟ್ಟು 93 (79+14)
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳು
ಪರೀಕ್ಷಾ ಕೇಂದ್ರಗಳವರೆಗೆ ಬರಲು ಸಮರ್ಪಕ ಸಾರಿಗೆ
ವ್ಯವಸ್ಥೆ ಮಾಡಬೇಕು. ಯಾವುದೇ ಒಂದು ಮಗು ಕೂಡ
ಸಾರಿಗೆಯಿಂದ ವಂಚಿತರಾಗಿ ಪರೀಕ್ಷೆ ಬರೆಯದಂತೆ ಸಂಬಂಧಿಸಿದ
ಅಧಿಕಾರಿಗಳು ಕಾಳಜಿ ವಹಿಸಬೇಕು. ಇದೊಂದು ವಿಶೇಷ
ಸಂದರ್ಭವಾಗಿರುವ ಹಿನ್ನೆಲೆ ಕೆಎಸ್‍ಆರ್‍ಟಿಸಿಯವರು ವಿಶೇಷವಾಗಿ
ಮಕ್ಕಳನ್ನು ಪರೀಕ್ಷೆಗಳಿಗೆ ತೆರಳಲು ಕಳಕಳಿಯಿಂದ
ವ್ಯವಸ್ಥೆ ಮಾಡಬೇಕೆಂದರು.
ಪ್ರತಿ ಪರೀಕ್ಷೆಗಳ ಮುನ್ನ ಒಟ್ಟು 7 ಬಾರಿ ಪ್ರತಿ
ಕೊಠಡಿಗಳನ್ನು ಡಿಸ್‍ಇನ್‍ಫೆಕ್ಷನ್ ಮಾಡಲಾಗುವುದು.
ನಗರದಲ್ಲಿ ಮಹಾನಗರಪಾಲಿಕೆ ವತಿಯಿಂದ, ಪಟ್ಟಣಗಳಲ್ಲಿ ಪಟ್ಟಣ
ಮತ್ತು ಪುರಸಭೆಗಳು ಹಾಗೂ ಗ್ರಾಮೀಣ ಭಾಗದಲ್ಲಿ ಅಲ್ಲಿನ

ಸ್ಥಳೀಯ ಸಂಸ್ಥೆಗಳು ಪರೀಕ್ಷಾ ಕೇಂದ್ರಗಳನ್ನು
ಡಿಎಸ್‍ಇನ್‍ಫೆಕ್ಷನ್ ಮಾಡುವ ಕೆಲಸ ಮಾಡಲಿದ್ದು, ಇದಕ್ಕೆ
ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಯೋಜನೆ ಮಾಡಿಕೊಂಡು
ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿ ಪರೀಕ್ಷಾ ಕೇಂದ್ರಗಳಿಗೆ ತಲಾ ಇಬ್ಬರು ಆರೋಗ್ಯ
ಸಹಾಯಕರು/ಆಶಾ ಕಾರ್ಯಕರ್ತೆಯರನ್ನು(ಅಗತ್ಯ
ಔಷಧಗಳೊಂದಿಗೆ)ನಿಯೋಜಿಸಲಾಗುವುದು. ಸ್ಕೌಟ್ ಮತ್ತು
ಗೈಡ್ ವತಿಯಿಂದ ಸ್ಕೌಟರ್ ಮತ್ತು ಗೈಡರ್, ರೇಂಜರ್ ಮತ್ತು
ರೋವರ್, ಕಬ್ ಮಾಸ್ಟರ್ ಮತ್ತು ಫ್ಲೋಕ್ ಲೀಡರ್‍ಗಳು
ಸ್ವಯಂ ಸೇವಕರಾಗಿ ಪಾಲ್ಗೊಳ್ಳುವರು. ಭಾರತ್ ಸ್ಕೌಟ್ ಮತ್ತು
ಗೈಡ್ ಸಂಸ್ಥೆಯಿಂದ ಒಟ್ಟು 22 ಸಾವಿರ ಮಾಸ್ಕ್‍ಗಳನ್ನು
ನೀಡುತ್ತಿದ್ದು ಇದರೊಂದಿಗೆ ಪ್ರತಿ ತಾಲ್ಲೂಕಿನ ತಹಶೀಲ್ದಾರರು
ತಲಾ 5 ಸಾವಿರ ಮಾಸ್ಕ್‍ಗಳನ್ನು ನೀಡುವಂತೆ ಸಭೆಯಲ್ಲಿ ತಿಳಿಸಿದ
ಅವರು ತಾಲ್ಲೂಕುಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಮಾಸ್ಕ್
ವಿತರಣೆ ಮಾಡಲು ಮುಂದೆ ಬಂದಿದ್ದಾರೆ ಎಂದರು.
ಮಂಡಳಿಯಿಂದ ಈಗಾಗಲೇ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ
ಸ್ಯಾನಿಟೈಸರ್ ಅರ್ಧ ಲೀಟರ್ ಬಾಟಲ್‍ಗಳನ್ನು ನೇರವಾಗಿ ಕ್ಷೇತ್ರ
ಶಿಕ್ಷಣಾಧಿಕಾರಿಗಳ ಮೂಲಕ ಸರಬರಾಜು ಮಾಡಲಾಗಿದೆ. ಎಸ್‍ಓಪಿ
ಪ್ರಕಾರ ಎಲ್ಲಾ ಪರೀಕ್ಷಾ ಕೇಂದ್ರಗಳ ಸಾಮಾನ್ಯ ಮತ್ತು
ವಿಶೇಷ ಕೊಠಡಿಗಳಲ್ಲಿ ಸಾಮಾಜಿಕ ಅಂತರ
ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ.
ಮಾರ್ಗಗಳ ಮೂಲಕ ಪ್ರಶ್ನೆ ಪತ್ರಿಕೆ ವಿತರಣೆಗೆ ವಾಹನ
ವ್ಯವಸ್ಥೆ ಮಾಡುವಂತೆ ಎಡಿಸಿಯವರಿಗೆ ಸೂಚನೆ ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ನಿಷೇಧವಿದ್ದು, ಪರೀಕ್ಷಾ
ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸಿ ಜೆರಾಕ್ಸ್
ಮತ್ತು ಸೈಬರ್ ಕೆಫೆ ಮುಚ್ಚಿಸಲು ಕ್ರಮ ವಹಿಸಲಾಗುವುದು.
ಹಾಗೂ ವಾಟ್ಸಾಪ್ ಇತರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ
ಹಬ್ಬಿಸುವವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು
ಎಂದರು.
ಜನಪ್ರತಿನಿಧಿಗಳು ಪತ್ರ ಮುಖೇನ ಎಸ್‍ಎಸ್‍ಎಲ್‍ಸಿ
ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ ಬರೆದಿದ್ದಾರೆ.
ಇದೇ ರೀತಿ ನಾವೆಲ್ಲರೂ ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ
ಯಾವುದೇ ಅಭದ್ರತೆ ಉಳಿಯದಂತೆ ಧನಾತ್ಮಕ
ಸಂದೇಶಗಳನ್ನು ಹರಡಬೇಕಿದೆ. ಜಿಲ್ಲಾಡಳಿತ, ಜಿಲ್ಲಾ
ಪಂಚಾಯತ್ ಎಲ್ಲ ಇಲಾಖೆಗಳು ಶಿಕ್ಷಣ ಇಲಾಖೆಯೊಂದಿಗೆ ಇದೆ.
ಎಲ್ಲರೂ ಸೇರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಯಶಸ್ವಿಯಾಗಿ
ಮುಗಿಸೋಣ. ಜಿಲ್ಲೆಗೆ ಒಳ್ಳೆಯ ಹೆಸರು ತರೋಣವೆಂದು
ಆಶಿಸಿದರು.
ನಾನು ಕೆಲವು ಶಾಲೆಗಳಿಗೆ ಭೇಟಿ ನೀಡಿದ್ದೆ. ಶಾಲಾ ಕೊಠಡಿಗಳು
ಇಷ್ಟು ದಿನ ಬಂದ್ ಆದ ಕಾರಣ ಧೂಳು ಹಿಡಿದಿವೆ. ಹಾಗೂ
ಗಿಡಗಂಟಿಗಳು ಬೆಳೆದಿವೆ. ಡಿಸ್ ಇನ್‍ಫೆಕ್ಷನ್ ಮಾಡುವ ಮುನ್ನ
ಗಿಡಗಂಟಿಗಳನ್ನು ಕಡಿದು, ಕೊಠಡಿಗಳಲ್ಲಿ ಧೂಳು ತೆಗೆಸಿ

ಸ್ವಚ್ಚ ಮಾಡಬೇಕು. ಹಾಗೂ ಶೌಚಾಲಯಗಳನ್ನು ಕೂಡ
ಸ್ವಚ್ಚಗೊಳಿಸಿ ಸೋಂಕು ನಿವಾರಕವನ್ನು ಸಿಂಪಡಿಸಬೇಕು. ಹಾಗೂ
ಗ್ರಾಮೀಣ ಭಾಗದಲ್ಲಿ ಶೌಚಾಲಯಗಳ ಸಣ್ಣಪುಟ್ಟ ರಿಪೇರಿ ಇತರೆ
ಇದ್ದರೆ ನನಗೆ ತಿಳಿಸಿದಲ್ಲಿ ಶೀಘ್ರವಾಗಿ ಮಾಡಿಸಲು ಕ್ರಮ
ಕೈಗೊಳ್ಳಲಾಗುವುದು.
ಪದ್ಮಾ ಬಸವಂತಪ್ಪ, ಜಿ.ಪಂ ಸಿಇಓ
ಪ್ರತಿ ದಿನ ವಿದ್ಯಾರ್ಥಿಗಳು ಶಾಲೆಗಳಲ್ಲಿರುವ ಶೌಚಾಲಯಗಳನ್ನು
ಬಳಸದಂತೆ ಮುಂಜಾಗ್ರತೆಯಾಗಿ ಮನೆಯಲ್ಲೇ ಶೌಚವನ್ನು
ಮುಗಿಸಿಕೊಂಡು ಬರುವುದು ಒಳ್ಳೆಯದು. ಶಾಲೆಗಳಲ್ಲಿ
ಶೌಚಾಲಯಗಳನ್ನು ಸ್ವಚ್ಚ ಮಾಡಿಸಿ, ಡಿಸ್‍ಇನ್‍ಫೆಕ್ಷನ್ ಮಾಡುವಂತೆ
ಸೂಚಿಸಲಾಗಿದೆ. ಆದಾಗ್ಯೂ ಕೋವಿಡ್ ಹಿನ್ನೆಲೆಯಲ್ಲಿ ಆದಷ್ಟು
ಮಕ್ಕಳು ಸಾರ್ವಜನಿಕ ಶೌಚಾಲಯ ಬಳಸದಂತೆ ಕ್ರಮ ವಹಿಸಿದರೆ
ಸೂಕ್ತ.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ
ಮಾತನಾಡಿ, ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು
ಕಾಲ್ನಡಿಗೆಯಲ್ಲಿ 6174 ವಿದ್ಯಾರ್ಥಿಗಳು, ಪೋಷಕರ ಸಹಾಯದಿಂದ
12581, ಕೆಎಸ್‍ಆರ್‍ಟಿಸಿ ಬಸ್ ಮೂಲಕ 229, ಖಾಸಗಿ ಶಾಲಾ ವಾಹನಗಳ
ವ್ಯವಸ್ಥೆ ಮೂಲಕ 1690, ಹಾಸ್ಟೆಲ್‍ನಲ್ಲಿ ತಂಗಿ ಪರೀಕ್ಷೆ
ಬರೆಯುವವರು 674, ವ್ಯಾಸಂಗ ಮಾಡುತ್ತಿರುವ ಶಾಲಾ
ವಾಹನಗಳಲ್ಲಿ 335 ಸೇರಿದಂತೆ ಒಟ್ಟು 21683 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ
ಪರೀಕ್ಷೆ ಬರೆಯುತ್ತಿದ್ದಾರೆ.
ನಿಯಮದಂತೆ ಎಲ್ಲ 93 ಪರೀಕ್ಷಾ ಕೇಂದ್ರಗಳಲ್ಲಿ ಅಡ್ಡ
ಮತ್ತು ಉದ್ದವಾಗಿ ಮೂರು ಅಡಿ ಅಂತರದಲ್ಲಿ ಡೆಸ್ಕ್ ವ್ಯವಸ್ಥೆ
ಮಾಡಲಾಗಿದೆ. ಒಂದು ಡೆಸ್ಕ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳು
ಕೂರುತ್ತಾರೆ. ಮೂಲಭೂತ ಸೌಕರ್ಯಗಳ ವ್ಯವಸ್ಥೆ
ಮಾಡಲಾಗಿದೆ. ನೀರಿನ ವ್ಯವಸ್ಥೆ ಮಾಡಿದ್ದರೂ ಮಕ್ಕಳು
ಮನೆಯಿಂದ ಬಾಟಲಿಯಲ್ಲಿ ನೀರು ತಂದರೆ ಒಳಿತು ಎಂದು
ತಿಳಿಸಲಾಗಿದೆ.
ಎಸ್‍ಓಪಿ ಪ್ರಕಾರ ಪರೀಕ್ಷೆಯ ಮುಖ್ಯ ಅಧೀಕ್ಷಕರಿಗೆ ಕ್ರಮ
ವಹಿಸುವಂತೆ ಸೂಚನೆ ನೀಡಲಾಗಿದೆ. ಮಂಡಳಿಯಿಂದ 200 ಮಕ್ಕಳಿಗೆ
ಒಂದರಂತೆ ಥರ್ಮಲ್ ಸ್ಕ್ಯಾನರ್‍ಗಳನ್ನು ನೀಡಿದ್ದು, 14 ಹೆಚ್ಚುವರಿ
ಕೇಂದ್ರಗಳಿಗೆ ಥರ್ಮಲ್ ಸ್ಕ್ಯಾನರ್ ಅವಶ್ಯಕತೆ ಇದೆ. ನಗರದಲ್ಲಿ
ಕಂಟೈನ್‍ಮೆಂಟ್ ಜೋನ್‍ನಿಂದ 90 ವಿದ್ಯಾರ್ಥಿಗಳು ಇದ್ದಾರೆಂದು
ಗುರುತಿಸಲಾಗಿದೆ. ಇವರಿಗೆ ಎನ್95 ಮಾಸ್ಕ್ ನೀಡಬೇಕಿದೆ ಎಂದರು.
ಜೊತೆಗೆ ಒಟ್ಟು 1300 ಕೊಠಡಿ ಇದ್ದು ಪ್ರತಿ ಕೊಠಡಿಗೆ ಒಂದು
ಸ್ಯಾನಿಟೈಸರ್ ನೀಡಬೇಕು ಎಂದು ಮನವಿ ಮಾಡಿದರು ಡಿಸಿಯವರು
ಪ್ರತಿಕ್ರಿಯಿಸಿ ಇತ್ತೀಚೆಗೆ ಕೆಲವು ಕಂಟೈನ್‍ಮೆಂಟ್
ಝೋನ್‍ಗಳನ್ನು ಡಿನೋಟಿಫೈ ಮಾಡಲಾಗಿದೆ ಆದ್ದರಿಂದ ಈ
ಪಟ್ಟಿಯನ್ನು ಪರಿಷ್ಕರಿಸುವಂತೆ ತಿಳಿಸಿದ ಅವರು ಡಿಹೆಚ್‍ಓ ರವರು
ಎನ್95 ಮಾಸ್ಕ್, ಥರ್ಮಲ್ ಸ್ಕ್ಯಾನರ್‍ಗಳು ಹಾಗೂ 1500 ಸ್ಯಾನಿಟೈಸರ್
ಬಾಟಲ್ ನೀಡುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಎಸ್‍ಪಿ ರಾಜೀವ್, ಸಹ
ನಿರ್ದೇಶಕರು ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ವೀರಣ್ಣ, ಪಾಲಿಕೆ
ಆಯುಕ್ತ ವಿಶ್ವನಾಥ ಮುದಜ್ಜಿ, ತಾಲ್ಲೂಕುಗಳ ಇಓಗಳು,
ತಹಶೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಹಿಂದುಳಿದ
ಕಲ್ಯಾಣ ಇಲಾಖೆ, ವಿವಿಧ ನಿಗಮಗಳ ಅಧಿಕಾರಿಗಳು, ಬಿಇಓಗಳು,
ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಜಿಲ್ಲಾ
ಖಜಾನಾಧಿಕಾರಿ, ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಇತರೆ ಅಧಿಕಾರಿಗಳು
ಹಾಜರಿದ್ದರು.

Leave a Reply

Your email address will not be published. Required fields are marked *