ದಾವಣಗೆರೆ ಜೂ.22
ಸೋಮವಾರ ನಗರದ ತಾಲ್ಲೂಕು ಪಂಚಾಯತ್
ಸಭಾಂಗಣದಲ್ಲಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅವರ
ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯತ್ ಸಾಮಾನ್ಯ ಸಭೆ
ನಡೆಸಲಾಯಿತು. ಸಭೆಯಲ್ಲಿ ವಿವಿಧ ಇಲಾಖಾ ಯೋಜನೆಗಳು,
ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸದಸ್ಯರ ಆಯಾ
ಕ್ಷೇತ್ರಗಳಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದಾರುಕೇಶ್ ಮಾತನಾಡಿ,
ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ ಸರ್ಕಾರಿ
ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕರೆಯುತ್ತಿಲ್ಲ ಎಂದು
ಸದಸ್ಯರ ದೂರುಗಳಿವೆ. ಈ ಕುರಿತು ಸ್ಥಳೀಯ
ಜನಪ್ರತಿನಿಧಿಗಳನ್ನು ಕರೆದು ಕಾರ್ಯಕ್ರಮ
ನಡೆಸುವುದು ಸರ್ಕಾರಿ ಅಧಿಕಾರಿಗಳ ಬಾಧ್ಯತೆ ಹಾಗೂ
ಜವಾಬ್ದಾರಿಯಾಗಿದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು
ಸರ್ಕಾರ ಇದ್ದಹಾಗೆ. ಅಧಿಕಾರಿಗಳು ಸರ್ಕಾರದ ಶಿಷ್ಟಾಚಾರ
ಪಾಲಿಸಬೇಕು. ಗ್ರಾಮ ಮಟ್ಟದಿಂದ ಹಿಡಿದು ಎಲ್ಲಾ ಜನಪ್ರತಿನಿಧಿಗಳಿಗೆ
ಮೊದಲು ಆದ್ಯತೆ ನೀಡಬೇಕು. ಇನ್ನುಮುಂದೆ ಅಧಿಕಾರಿಗಳು
ಜನಪ್ರತಿನಿಧಿಗಳನ್ನು ಕರೆದು ಕಾರ್ಯಕ್ರಮ
ಮಾಡುವುದಿಲ್ಲವೋ ಅಂತಹವರ ವಿರುದ್ಧ ಶಿಸ್ತುಕ್ರಮ
ಜರುಗಿಸಲು ನೋಟಿಸ್ ನೀಡಲಾಗುವುದು ಎಂದರು.
ಮಳೆಗಾಲ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಗಾಳಿ ಮಳೆಗೆ
ವಿದ್ಯುತ್ ಅವಘಡ ಸಂಭವಿಸುವ ಲಕ್ಷಣಗಳು ಹೆಚ್ಚಿವೆ. ಈ
ಹಿನ್ನೆಲೆಯಲ್ಲಿ ತಾಲ್ಲೂಕಿನ ಜನ ಸಾಮಾನ್ಯರ ಹಿತದೃಷ್ಟಿಯಿಂದ
ಯಾವುದೇ ತೊಂದರೆ ಆಗದಂತೆ ಅಧಿಕಾರಿಗಳು ಕ್ರಮ
ವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು
ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬೇತೂರು ಕ್ಷೇತ್ರದ ಸದಸ್ಯ ಸಂಗಜ್ಜಗೌಡ್ರು ಮಾತನಾಡಿ,
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ತಂತಿ ತುಂಡಾಗಿ ಬೀಳುವ
ಸಾಧ್ಯತೆ ಹೆಚ್ಚಿದೆ. ಈ ಕುರಿತು ಜನರಲ್ಲಿ ಗ್ರಾಮ ಪಂಚಾಯಿತಿ
ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಇದಕ್ಕೆ ಬೆಸ್ಕಾಂ
ಅಧಿಕಾರಿ ಉತ್ತರಿಸಿ, ವಿದ್ಯುತ್ ತಂತಿ ಕಟ್ಟಾಗಿ ಆಕಸ್ಮಾತ್‍ಗಿ ಯಾರಾದರೂ
ಮುಟ್ಟಿದಲ್ಲಿ ಅವಘಡ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ನಾವೂ
ವಿದ್ಯುತ್ ಅವಘಡದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಲು ಬೀದಿ
ನಾಟಕದಂತಹ ಅನೇಕ ಕಾರ್ಯಕ್ರಮ ನಡೆಸಿಕೊಂಡು
ಬರಲಾಗಿದ್ದು, ವಿದ್ಯುತ್ ಕಂಬಗಳಿಗೆ ಜಾನುವಾರು ಕಟ್ಟಬೇಡಿ ಎಂದು
ತಿಳಿ ಹೇಳಲಾಗುತ್ತಿದೆ ಎಂದರು.
ಬೋರ್‍ವೆಲ್ ಹೊಂದಿರುವ ರೈತರಿಗೆ ಬೆಳೆ ಬೆಳೆಯಲು ವಿದ್ಯುತ್
ಸಮಸ್ಯೆ ಉಂಟಾಗಿದ್ದು, ಇದರಿಂದ ರೈತರು ತುಂಬಾ ತೊಂದರೆ
ಅನುಭವಿಸುತ್ತಿದ್ದಾರೆ. ಸರ್ಕಾರದಿಂದ ಬರುವ ಸೌಲಭ್ಯವನ್ನು
ಸರಿಯಾದ ರೀತಿಯಲ್ಲಿ ನೀಡಬೇಕು. ವಿದ್ಯುತ್ ಟೆಂಡರ್
ಪಡೆದವರು ಒಂದು ಟಿ.ಸಿ ಹಾಕಿಸಲು ಒಬ್ಬ ರೈತನಿಂದ ರೂ. 40 ಸಾವಿರ
ಕೇಳುತ್ತಿದ್ದಾರೆ. ರೈತರಿಂದ ಹಗಲು ದರೋಡೆ
ಮಾಡುತ್ತಿದ್ದಾರೆ. ಈ ರೀತಿಯಾದರೆ ರೈತರು ಎಲ್ಲಿಂದ ಹಣ
ತರುತ್ತಾರೆ ನೀವೆ ಹೇಳಿ ಎಂದು ಬೇತೂರು ಕ್ಷೇತ್ರದ
ಸದಸ್ಯರಾದ ಸಂಗಜ್ಜಗೌಡ್ರು ಪ್ರಶ್ನಿಸಿದರು. ಇದಕ್ಕೆ
ಪ್ರತಿಕ್ರಿಯಿಸಿದ ಇಓ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ
ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಲೋಕಿಕೆರೆ ಕ್ಷೇತ್ರದ ಸದಸ್ಯ ಮುರುಗೇಂದ್ರಪ್ಪ
ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಕಂಟ್ರಾಕ್ಟರ್‍ಗಳು
ರೈತರ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಬಗ್ಗೆ
ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಇಓ ಅವರು, ಈ ರೀತಿಯಾಗಿದ್ದಲ್ಲಿ ಕೂಡಲೇ
ಅಂತಹ ಕಂಟ್ರಾಕ್ಟರ್‍ಗಳನ್ನು ಬ್ಲಾಕ್ ಲಿಸ್ಟ್‍ಗೆ ಸೇರಿಸಿ ಕ್ರಮ
ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಶು ಇಲಾಖೆಯ ಅಧಿಕಾರಿ ಜಗದೀಶ್ ಮಾತನಾಡಿ, ಉಚಿತ
ಜಾನುವಾರು ವಿಮೆಯನ್ನು ಎಸ್‍ಸಿಪಿ ಹಾಗೂ ಟಿಎಸ್‍ಪಿ ಅಡಿಯಲ್ಲಿ
ಫಲನುಭವಿಗಳಿಗೆ ನೀಡಿದೆ. ಎನ್‍ಎಲ್‍ಎಮ್ ಜಾನುವಾರು ವಿಮೆ ಕೂಡ
ಪ್ರಗತಿ ಸಾಧಿಸಲಾಗಿದೆ. ಜೊತೆಗೆ ಜಾನುವಾರುಗಳ ಆಕಸ್ಮಿಕ
ಮರಣಕ್ಕೆ ಫಲಾನುಭವಿಗಳಿಗೆ ಹಣ ನೀಡಲಾಗುತ್ತಿದ್ದು, ಮೇವು
ಕತ್ತರಿಸುವ ಯಂತ್ರಕ್ಕೆ ಈಗಾಗಲೇ ಹಣ ಮಂಜೂರು
ಮಾಡಲಾಗಿದೆ ಎಂದರು.
ಆಲೂರು ಕ್ಷೇತ್ರದ ಸದಸ್ಯ ಲಿಂಗರಾಜು ಅವರು, ಸರ್ಕಾರದ
ಹಲವು ಯೋಜನೆಗಳ ಸಹಾಯಧನವು ಫಲಾನುಭವಿಗಳಿಗೆ
ತಲುಪುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಎಂದರು. ಇದಕ್ಕೆ ಉತ್ತರಿಸಿದ ಇಓ, ಸಹಾಯಧನ ತಲುಪಿಸಲು
ಅಧಿಕಾರಿಗಳು ವಿಫಲವಾದರೆ ಜನಪ್ರತಿನಿಧಿಗಳು ಜನರಿಗೆ ಹೇಗೆ
ಉತ್ತರಿಸುತ್ತಾರೆ. ಈ ರೀತಿ ತೊಂದರೆ ಆಗದಂತೆ ಕೂಡಲೇ
ಸಂಬಂಧಪಟ್ಟ ಫಲಾನುಭವಿಗಳಿಗೆ ಸಹಾಯಧನ
ತಲುಪಿಸಬೇಕೆಂದು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿ.ಡಿ.ಪಿ.ಓ ಧರಣೀಶ್
ಮತನಾಡಿ, ಪ್ರತಿ ಅಂಗನವಾಡಿ ಕೇಂದ್ರಗಳಿಗೆ ತರಕಾರಿ, ಮೊಟ್ಟೆ,
ಆಹಾರ ಪದಾರ್ಥಗಳು ಹಾಗೂ ಗ್ಯಾಸ್‍ನ್ನು ಇಲಾಖೆಯಿಂದ
ನೀಡುತ್ತೇವೆ. ಇನ್ನುಳಿದಂತೆ ಹಾಲಿನ ಪುಡಿಯನ್ನು ಕೆಎಂಎಫ್‍ನಿಂದ
ನೀಡಲಾಗುತ್ತಿದೆ. ಅಲ್ಲದೆ ಲಾಕ್‍ಡೌನ್ ವೇಳೆಯಲ್ಲಿ ಮಕ್ಕಳಿಗೆ ಆಹಾರ
ಪದಾರ್ಥಗಳನ್ನು ಪ್ಯಾಕೇಜ್ ಮೂಲಕ ಪ್ರತಿ ಮನೆ ನೀಡಲಾಗಿದೆ.
ಮೊದಲ ಗರ್ಭಿಣಿಯರಿಗೆ ರೂ. 3000 ಸಾವಿರ ಪೋತ್ಸಾಹ ಧನ
ನೀಡಲಾಗುವುದು. ಭಾಗ್ಯಲಕ್ಷ್ಮೀ ಶಿಶುಪಾಲನಾ ಕೇಂದ್ರ ಮತ್ತು
ಸ್ತೀಶಕ್ತಿ ಸಂಘಗಳಿಗೆ ಪೋತ್ಸಾಹಧನ ನೀಡಲಾಗಿದೆ. ಮುಂದಿನ
ತಿಂಗಳಲ್ಲಿ ಬಾಲ ಸಮಿತಿ ನೇಮಿಸಿ ಮೊದಲ ಶನಿವಾರ ಮತ್ತು
ಮೂರನೇ ಶನಿವಾರ ಸಭೆ ಮಾಡಲಾಗುವುದು ಎಂದು ತಿಳಿಸಿದರು.
ಸಹಾಯಕ ಕಾರ್ಯಪಾಲಕ ಅಭಿಯಂತರರು ರವೀಂದ್ರ
ಮಾತನಾಡಿ, ದಾವಣಗೆರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ
ಇಲ್ಲ. 2019-20ನೇ ಸಾಲಿನಲ್ಲಿ ಎಸ್.ಸಿ.ಪಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ
- ಗಿರಿಜನ ಉಪ ಯೋಜನೆ (ಎಸ್.ಟಿ.ಪಿ) 2 ವಿಶೇಷ ಘಟಕ ಮತ್ತು ಗಿರಿಜನ
ಉಪ ಹಾಗೂ ಸಾಮಾನ್ಯ ಯೋಜನೆಯಲ್ಲಿ ಒಟ್ಟು 37 ಶುದ್ಧ
ಕುಡಿಯುವ ನೀರಿನÀ ಘಟಕಗಳನ್ನು ನಿರ್ಮಿಸಿಲಾಗಿದೆ. ಕೇಂದ್ರ
ಸರ್ಕಾರ ಜಲಜೀವ ಯೋಜನೆ ಜಾರಿ ಮಾಡಿದೆ. ಇದರ ಉದ್ದೇಶ 2024
ರೊಳಗೆ ಪ್ರತಿ ಮನೆಗೆ ನಳ ಹಾಕುವ ಯೋಜನೆ ಹೊಂದಿದೆ.
ಜೊತೆಗೆ ಜಿಲ್ಲಾ ಪಂಚಾಯಿತಿಯಿಂದ 9 ಕಾಮಗಾರಿಗಳನ್ನು
ಪೂರ್ಣಗೊಳಿಸಲಾಗಿದ್ದು, ದನಕರುಗಳಿಗೆ ಕುಡಿಯುವ ನೀರಿನ
ವ್ಯವಸ್ಥೆಗಾಗಿ ತೊಟ್ಟಿ ನಿರ್ಮಿಸಲಾಗಿದೆ. ಅಲ್ಲದೆ ಹೊಸದಾಗಿ
ಕೊಡಗನೂರು ಕೆರೆಗೆ ಟೆಂಡರ್ ನೀಡಲಾಗಿದೆ ಎಂದು
ಹೇಳಿದರು
ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿಂಗಪ್ಪ ಮಾತನಾಡಿ,
ಆಲೂರಿನಲ್ಲಿ ಶುದ್ಧ ನೀರಿನ ಘಟಕದÀ ಸಮೀಪದಲ್ಲಿ ವಿದ್ಯುತ್
ಸ್ಪರ್ಶದಿಂದ ಒಂದು ಹೋರಿ ಮೃತಪಟ್ಟಿದೆ. ಅಧಿಕಾರಿಗಳ
ನಿರ್ಲಕ್ಷ್ಯತನದಿಂದ ಇನ್ನು ಎಷ್ಟು ಅನಾಹುತಗಳು
ಸಂಭವಿಸಬೇಕು ಎಂದುರು. ಇದಕ್ಕೆ ಪ್ರತಿಕ್ರಿಯಿಸಿದ
ಅಭಿಯಂತರರಾದ ರವೀಂದ್ರ, ಸರ್ಕಾರದಿಂದ ಈಗಾಗಲೇ ಅವರಿಗೆ
ಪರಿಹಾರ ನೀಡಲಾಗಿದೆ. ಈ ರೀತಿ ಮುಂದೆ ಅನಾಹುತವಾಗದಂತೆ ಕ್ರಮ
ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ತಾಲ್ಲೂಕು
ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.