ಪ್ರಕೃತಿ ಮಡಿಲಲ್ಲಿ ಅರಳಿದ ಕನಕ ಸಂದೇಶದ ಕಲಾಕೃತಿಗಳು
ಪ್ರವಾಸಿಗರ ಮನ ಸೆಳೆಯುವ ಕಾಗಿನೆಲೆ ಕನಕ ಥೀಮ್ ಪಾರ್ಕ್
ನಿನ್ನಂತಾಗಬೇಕು..! ಕನಕ ನಿನ್ನಂತಾಗಬೇಕು!! ಕನಕನೆಂದರೆ ಕನಕ! ಜನರ ಕಣ್ಣು ತೆರೆದ ಬೆಳಕು!! ಕುಲಭೇದ ಮೀರಿದವ! ನೀ ಎಲ್ಲಾರವ....!!” ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವಥ್ ಅವರ ಈ ಸಾಲುಗಳು ಕನಕದಾಸರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕನಕದಾಸರು ಈ ಸಮಾಜದ ಕಣ್ಣು ತೆರೆಸಿದ ಬೆಳಕು. ಜಾತಿ, ಧರ್ಮ, ವರ್ಗ, ವರ್ಣ ಅಂಧಕಾರ ಮೌಢ್ಯದಿಂದ ಬಳಲುತ್ತಿದ್ದ ಸಮಾಜಕ್ಕೆ ಸಮಾನತೆಯ ಬೆಳಕನ್ನು ತೋರಿಸಿದ ಮಹಾನ್ ದಾರ್ಶನಿಕ. ಕನಕದಾಸರ ಮೂಲ ಹೆಸರು ತಿಮ್ಮಪ್ಪನಾಯಕ. ಮೂಲತಃ ಒಂದು ಪ್ರಾಂತ್ಯದ ದಂಡನಾಯಕನಾಗಿದ್ದ ತಿಮ್ಮಪ್ಪನಾಯಕ ರಾಜದಂಡವನ್ನು ಬದಿಗಿರಿಸಿ ತಂಬೂರಿಯನ್ನು ಹೆಗಲೇಗೆರಿಸಿಕೊಂಡು ಕೈಯಲ್ಲಿ ತಾಳದ ಝೆಂಕಾರದೊಂದಿಗೆ ಸಮಾಜ ಜಾಗೃತಿ ಬೆಳಗಿಸುತಾ ಮಹಾನ್ ಸಂತನಾದ ದಾರಿ ರೋಚಕವಾಗಿದೆ. ತಿಮ್ಮಪ್ಪ ನಾಯಕ ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದ ಬೀರಪ್ಪ ಮತ್ತು ಬಚ್ಚಮ್ಮ ಎಂಬ ದಂಪತಿಗಳ ಮಗನಾಗಿ ಜನ್ಮ ತಾಳಿದ. ತಂದೆಯ ಬಳುವಳಿಯಿಂದ ಬಂದ ರಾಜ ಪ್ರಭುತ್ವವನ್ನು ಧಿಕ್ಕರಿಸಿ ತನ್ನ ಎದೆಯಾಳದಲ್ಲಿ ಅಡಗಿದ ಮಾನವೀಯ ಧರ್ಮಕ್ಕೆ ಮನ ತೆರೆದು ಸಂತನಾದ ಪರಿ ವರ್ಣಾತೀತ. ಕನಕರು ಬಾಡದಲ್ಲಿ ಜನ್ಮ ತಾಳಿದರೂ ತಮ್ಮ ಕರ್ಮಭೂಮಿಯನ್ನು ಆದಿಕೇಶವನ ನೆಲೆಯಾದ ಕಾಗಿನೆಲೆಯಲ್ಲಿ ನೆಲೆಯೂರಿ ತನ್ನ ಅಂತರಂಗ ನೈಜ ಗುಣವ್ಯಕ್ತಿತ್ವವನ್ನು ಸಾಣಿಗಿಡಿದು ತನ್ನ ಸಾಧನೆಗೆ ತೆರೆದುಕೊಂಡು ಜಗತ್ತಿನ ಜನಮಾನಸದಲ್ಲಿ ನೆಲೆಯೂರಿರುವುದು ಈಗ ಐತಿಹ್ಯ. ಕನಕದಾಸರು ತತ್ವ ಸಂದೇಶಗಳ ಜನಮಾನಸಕ್ಕೆ ತಲುಪಿಸಲು ಕೀರ್ತನೆ, ಊಗಾಭೋಗ, ಸುಳಾದಿಗಳ ಮಾಧ್ಯಮವನ್ನಾಗಿಸಿಕೊಂಡು ಸಮಾಜದ ಸಮಾನತೆಗಾಗಿ ಶ್ರಮಿಸಿದವರು.

ಅವರ ಜನ್ಮ ಭೂಮಿ ಬಾಡ ಹಾಗೂ ಕರ್ಮಭೂಮಿ ಕಾಗಿನೆಲೆಯಲ್ಲಿ ಅವರ ಜೀವನ ವೃತ್ತಾಂತಗಳು ಅವರ ಸಾಮಾಜಿಕ ಸಂದೇಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಶಾಶ್ವತ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಗಿನೆಲೆನಲ್ಲಿ ಸುಮಾರು 138 ಎಕರೆ ಜಾಗದಲ್ಲಿ ಕನಕ ಪರಿಸರ ಸ್ನೇಹಿ ಉದ್ಯಾನವನ ನಿರ್ಮಿಸಿದ್ದು, ಇದನ್ನುಥೀಮ್ ಪಾರ್ಕ್” ಎಂದು ಹೆಸರಿಸಲಾಗಿದೆ. ಕನಕದಾಸರ ಬಾಲ್ಯದಿಂದ ಅವರ ಕೊನೆಯವರೆಗಿನ ಜೀವನ ವೃತ್ತಾಂತವನ್ನು ಪ್ರತಿಬಿಂಬಿಸುವ ನೂರಾರು ಕಲಾಕೃತಿಗಳನ್ನು ನಿರ್ಮಿಸಲಾಗಿದೆ. ಹಸಿರು ಹಾಸು ವರ್ಣಾಮಯ ಸಹಜ ಹೂ-ಗಿಡ ಬಳ್ಳಿಗಳ ಮಧ್ಯೆ ಅಲ್ಲಿಲ್ಲಿ ಕನಕರ ಜೀವನದ ಪ್ರಮುಖ ಘಟ್ಟಗಳ ಸಿಮೆಂಟ್ ಕಬ್ಬಿಣದಿಂದ ನಿರ್ಮಾಣ ಮಾಡಿದ ಕಲಾಕೃತಿಗಳು ಆ ಕಲಾಕೃತಿಗಳ ಕೆಳಗಡೆ ಘಟನೆಗಳ ಸಂದರ್ಭಗಳ ಸಂಕ್ಷಿಪ್ತ ವಿವರಣೆ ಕನಕದಾಸರ ಬದುಕು ಸಾಧನೆ ಕೊಡುಗೆ ತತ್ವ ಸಂದೇಶಗಳ ಸಾರವನ್ನು ಲೀಲಾಜಾಲವಾಗಿ ತಿಳಿಯಬಹುದಾಗಿದೆ.
ಕಾಗಿನೆಲೆ ಕ್ಷೇತ್ರದಲ್ಲಿ ಅವರ ಜೀವನ ವೃತ್ತಾಂತಗಳು, ತತ್ವಗಳನ್ನು ಸಾರುವ ಕಲಾಕೃತಿಗಳನ್ನು ಒಳಗೊಂಡ ಒಂದು ಥೀಮ್ ಪಾರ್ಕ್ ಆಗಿ ಅಭಿವೃದ್ಧಿಪಡಿಸಲಾಗಿದೆ ಅಲ್ಲದೇ ಪ್ರವಾಸಿ ತಾಣವನ್ನಾಗಿ ಮಾಡಲಾಗಿದೆ. ಸುಂದರ ಪ್ರಕೃತಿ ತಾಣಗಳ ಜೊತೆಗೆ ಹಸಿರು ಹಾಸಿನ ನಡುವೆ ಕನಕನ ಮೂರ್ತಿಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಪ್ರತಿ ಕನಕ ಮೂರ್ತಿಗಳ ಹಿಂದೆ ಅವರ ಜೀವನ ವೃತ್ತಾಂತದ ಸಂದೇಶಗಳು ನೋಡುಗರಿಗೆ ಇಡೀ ಕನಕದಾಸರ ಚರಿತ್ರೆಯನ್ನು ಅರ್ಥಪೂರ್ಣವಾಗಿ ಅರ್ಥೈಸಿಕೊಳ್ಳುವುದಕ್ಕೆ ಸಹಕಾರಿಯಾಗಿದೆ.


“ಎಲ್ಲರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂದ ಕನಕದಾಸರು ಯಾವುದೇ ವೃತ್ತಿಯನ್ನು ಮಾಡಿದರೂ ಅದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ. ಯಾವುದೇ ಕೆಲಸ ಮಾಡಿದರು ಅದರ ಬಗ್ಗೆ ಗೌರವ ಹೊಂದಬೇಕು. ಮಾಡುವ ಕೆಲಸ ಚಿಕ್ಕದು-ದೊಡ್ಡದು ಎಂಬ ತಾರತಮ್ಯ ಬೇಡ ಎಂದ ಅವರು ವೃತಿ ಸಮಾನತೆಯ ಕುರಿತು ಸಂದೇಶ ಸಾರುವ ದೃಶ್ಯ ಮನಮೋಹಕವಾಗಿ ಕೆತ್ತಲಾಗಿದೆ.
ಜಾತಿ, ಮತ, ಪಂಥಗಳೆಲ್ಲ ಮಾನವ ನಿರ್ಮಿತ. ಅದರಲ್ಲಿ ಮೇಲು-ಕೀಳುಗಳೆಂಬ ಭೇದ ಮಾಡದೇ ಒಂದಾಗಿರಬೇಕು ಎಂಬ ಸಂದೇಶ ಸಾರುವ ಕನಕದಾಸರು ಪುರೋಹಿತ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ವ್ಯಕ್ತಿಗಳ ಪ್ರತಿಮೆಗಳೊಂದಿಗೆ ತಂಬೂರಿ ಹಿಡಿದು ನಿಂತಿರುವ ಪ್ರತಿಕೃತಿಗಳು ಸಮಾನತೆ ಬಿಂಬಿಸುತ್ತವೆ.
ಕನಕದಾಸರು ರಚಿಸಿದ ನಳಚರಿತೆ ಕಾವ್ಯದಲ್ಲಿ ನಳ ಮಹಾರಾಜರು ಹಂಸದ ಮೂಲಕ ಕಳುಹಿಸಿದ ಪ್ರೇಮ ಸಂದೇಶವನ್ನು ದಮಯಂತಿ ಆಲಿಸುತ್ತಿರುವ ಶಿಲ್ಪಕಲಾಕೃತಿ ಆದರ್ಶ ಪ್ರೇಮ ಹಾಗೂ ಆದರ್ಶ ದಾಂಪತ್ಯದ ಕುರಿತು ತಿಳಿಸುತ್ತದೆ.
ಕನಕದಾಸರು ಶ್ರೀರಂಗಪಟ್ಟಣದಿಂದ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುವಾಗ ಮಹದೇವಪುರದಲ್ಲಿ ಕಾವೇರಿ ನದಿಯನ್ನು ದಾಟುವಾಗ ಕನಕದಾಸರ ಮೈಗೆ ಕಜ್ಜಿಗಳಾಗಿದ್ದರಿಂದ ದೋಣಿಯಿಂದ ಇಳಿಸುತ್ತಾರೆ ಆಗ ಕನಕದಾಸರು ಬಾಳೆ ಎಲೆ ಮೇಲೆ ಕುಳಿತು ನದಿ ದಾಟುತ್ತಿರುವುದು ಅವರು ಭಕ್ತಿಶ್ರೇಷ್ಠತೆಯ ಬಗೆಯನ್ನು ತೋರುತ್ತದೆ.
ಶಂಖನಾದ ಮೊಳಗಿಸುತ್ತಿರುವ 30 ಅಡಿ ಎತ್ತರ ಹಾಗೂ 35 ಅಡಿ ಸುತ್ತಳತೆ ಹೊಂದಿರುವ ಬೃಹತ್ ಕನಕಮೂರ್ತಿ ನೋಡಗರನ್ನು ಮೂಕವಿಸ್ಮಯನಾಗಿ ಮಾಡುತ್ತದೆ.
ಕನಕದಾಸರ ಹುಟ್ಟು, ವಿದ್ಯಾರ್ಥಿ ಜೀವನ, ಉಡುಪಿಯಲ್ಲಿ ಶ್ರೀಕೃಷ್ಣ ತಿರುಗಿ ನಿಂತಿದ್ದು, ಚಿನ್ನದ ಕೊಪ್ಪರಿಗೆಯು ಅವರಿಗೆ ಸಿಕ್ಕು ಕನಕನಾಯಕರಾಗಿದ್ದು, ಮೌಢ್ಯತೆಯನ್ನು ಪ್ರಶ್ನಿಸುವ ಬಗೆ, ಬಿಳಿಗಿರಿರಂಗನ ಬೆಟ್ಟದಲ್ಲಿ ಆನೆ ಕನಕರಿಗೆ ಶರಣಾಗತಿಯಾಗಿದ್ದು ಹೀಗೆ ಕನಕದಾಸರ ಜೀವನದ ಸಂದೇಶ ಸಾರುವ ಪ್ರತಿ ಶಿಲ್ಪಕಲಾಕೃತಿಗಳ ಒಂದೊಂದು ಚಾರಿತ್ರಿಕ ಹಿನ್ನೆಲೆ ಹಾಗೂ ಸಂದೇಶಗಳನ್ನು ಬಿಂಬಿಸುತ್ತವೆ. ಕೋಶ ಓದು ಇಲ್ಲ ದೇಶ ಸುತ್ತು ಎಂಬ ನಾಣ್ಣುಡಿಯಂತೆ ದೇಶ ಸುತ್ತಾವ ಜನರಿಗೆ ಕೋಶ ಓದಿದ ಅನುಭವ ಕನಕ ಥೀಮ್ ಪಾರ್ಕ್ ನಲ್ಲಿ ಓಡಾಡುವವರಿಗೆ ಸತ್ಯ ದರ್ಶನ ಮಾಡಿಸುತ್ತದೆ. ಶಿಲಾಕೃತಿಗಳ ದರ್ಶನದೊಂದಿಗೆ ಉದ್ಯಾನವನದಲ್ಲಿ ಅಲಂಕಾರಿಕ ಗಿಡಗಳೊಂದಿಗೆ ಜಾಷಧೀಯ ಸಸ್ಯಗಳ ಕಿರು ಉದ್ಯಾನವನ ಇದೆ. ಚಿಟ್ಟೆ ಉದ್ಯಾನ ರೂಪಿಸಲಾಗಿದ್ದು, ಚಿಟ್ಟೆಗಳ ಹಾರಾಟ ಅದ್ಭುತ ಕಲ್ಪನಾಲೋಕಕ್ಕೆ ಕೊಂಡೊಯ್ಯತ್ತವೆ. ಮಕ್ಕಳಿಗಾಗಿ ಜಾರಬಂಡಿ, ಜೋಕಾಲಿ ಇತ್ಯಾದಿ ಆಟಿಕೆ ವಸ್ತುಗಳು ಮಕ್ಕಳನ್ನು ರಂಜಿಸುತ್ತವೆ ಮಕ್ಕಳಾದಿಯಾಗಿ ವಯೋವೃದ್ದರಿಗೂ ಸಂತಸ ನೀಡುವ ಪವಿತ್ರ ಪರಿಸರ ಯಾತ್ರಾ ತಾಣವಾಗಿ ಮುದ ನೀಡುತ್ತದೆ.

ಶನಿವಾರ ಮತ್ತು ಭಾನುವಾರ ಬಣ್ಣ ಬಣ್ಣದ ಬೆಳಕಿನಲ್ಲಿ ವಿವಿಧ ಸಂಗೀತ, ಹಾಡುಗಳಿಗೆ ತಕ್ಕಂತೆ ನೀರು ಚಿಮ್ಮುವ ಮೂಲಕ ಪ್ರವಾಸಿಗರನ್ನು ನಾಚಿ ನೀರಾಗುವಂತೆ ಮಾಡುತ್ತವೆ. ಕೃತಕ ಬಂಡೆಗಳ ಮೇಲಿಂದ ನೀರು ಸುರಿಸಿ ಕೃತಕ ಜಲಪಾತ ನಿರ್ಮಿಸಲಾಗಿದೆ.
ಕಾಗಿನೆಲೆ ಕನಕ ಥೀಮ್ ಪಾರ್ಕ್ ಪ್ರವಾಸಿಗರಿಗೆ ಮನರಂಜನೆಯ ಜೊತೆಗೆ ಕನಕದಾಸರ ಸಂದೇಶದ ವಿವೇಕ ವಿವೇಚನೆ ಜಾಗೃತಿಯ ಜೊತೆಗೆ ಒಮ್ಮೆ ನೋಡಲೇಬೇಕಾದ ಅದ್ಭುತ ಹಸಿರು ತುಂಬಿದ ಪ್ರಕೃತಿಯ ತಾಣ ಇದಾಗಿದೆ.

Leave a Reply

Your email address will not be published. Required fields are marked *