ನ್ಯಾಮತಿ : ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟ, ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರುಗಳ ಪ್ರದರ್ಶನ ಮತ್ತು ಪಶುಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ರೈತರ ಉಪಕಸುಬಾಗಿದ್ದು, ರೈತರು ಮನೆಯಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೋ ಅದೇ ರೀತಿ ಜಾನುವಾರುಗಳನ್ನು ನೋಡಿಕೊಳ್ಳುತ್ತಿದ್ದು, ಹೈನುಗಾರಿಕೆ ಎಂಬುದು ರೈತರಿಗೆ ವರದಾನವಾಗಿ ಪರಿಣಮಿಸಿದೆ ಎಂದರು.
ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನಲ್ಲಿ 116 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, ಪ್ರತಿನಿತ್ಯ 60 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ ಎಂದ ಶಾಸಕರು,
ಶಿವಮೊಗ್ಗ,ಚಿತ್ರದುರ್ಗ ಹಾಗೂ ದಾವಣಗೆರೆ ಸಹಕಾರಿ ಹಾಲು ಒಕ್ಕೂಟದಿಂದ ದಾವಣಗೆರೆ ಬೇರ್ಪಡಿಸ ಬೇಕೆಂದು ರೈತರ ಬೇಡಿಕೆ ಇದ್ದು, ಈ ಬಾರೀಯ ಬಜೆಟ್ನಲ್ಲಿ ದಾವಣಗೆರೆ ಒಕ್ಕೂಟವನ್ನು ಬೇರ್ಪಡಿಸಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಬಳಿ ಮನವಿ ಮಾಡುವುದಾಗಿ ರೇಣುಕಾಚಾರ್ಯ ತಿಳಿಸಿದರು.
ಕರುಗಳ ಪ್ರದರ್ಶನ ಹಾಗೂ ಪಶುಚಿಕಿತ್ಸಾ ಶಿಬಿರದಲ್ಲಿ ನೂರಾರು ಜನ ರೈತರು ಪಾಲ್ಗೊಂಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆಂದ ರೇಣುಕಾಚಾರ್ಯ, ಸರ್ಕಾರ ಸದಾ ರೈತರೊಂದಿಗಿದೆ ಎಂದರು.
ಜಾನುವಾರುಗಳು ರೈತರ ಬೆನ್ನಲೆಬಾಗಿದ್ದು, ಹೈನುಗಾರಿಕೆ ಮೂಲಕ ಸಾಕಷ್ಟು ಜನ ರೈತರು ಬದುಕು ಕಟ್ಟಿಕೊಂಡಿದ್ದಾರೆ ಎಂದ ಶಾಸಕರು, ಹೈನುಗಾರಿಕೆ ಇದೀಗ ಉದ್ಯಮವಾಗಿ ಮಾರ್ಪಟ್ಟಿದೆ ಎಂದರು.
ಇದೇ ವೇಳೆ ಉತ್ತಮ ಕರುಗಳನ್ನು ಸಾಕಣೇ ಮಾಡಿದ್ದ 12 ಜನ ರೈತರಿಗೆ ಶಾಸಕರು ಬಹುಮಾನ ವಿತರಿಸಿದರು.
ಈ ಸಂದರ್ಭ ಹಾಲು ಒಕ್ಕೂಟದ ನಿದೇರ್ಶಕ ಬಸವರಾಜಪ್ಪ, ನ್ಯಾಮತಿ ತಾಲೂಕು ಪಶುವೈದ್ಯಾಧಿಕಾರಿ ಚಂದ್ರಶೇಖರ್, ಗ್ರಾ.ಪಂ ಅಧ್ಯಕ್ಷರಾದ ವಿಶ್ವನಾಥ್, ಉಪಾಧ್ಯಕ್ಷರಾದ ಲಲಿತಮ್ಮ ಸೇರಿದಂತೆ ಗ್ರಾ.ಪಂ ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಇಲಾಖೆ ಸಿಬ್ಬಂಧಿಗಳಿದ್ದರು.