ಪಶು ವೈದ್ಯಕೀಯ ಕ್ಷೇತ್ರ ಚಿಕಿತ್ಸೆ ನೀಡುವುದು ಮಾತ್ರವಲ್ಲ
ದೇಶದ ಆರ್ಥಿಕ ವಲಯಕ್ಕೆ ಅತೀ ದೊಡ್ಡ ಮಟ್ಟದಲ್ಲಿ ಕೊಡುಗೆ
ನೀಡುತ್ತಿದೆ. ವೈದ್ಯಕೀಯ ವೃತ್ತಿಯಲ್ಲಿ ಪಶು ವೈದ್ಯರ ವೃತ್ತಿ
ಅತ್ಯುತ್ತಮವಾದುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ಡಾ.ವಿಜಯ ಮಹಾಂತೇಶ್ ದಾನಮ್ಮನವರ್
ಹೇಳಿದರು.
ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ
ಇಲಾಖೆ ಮತ್ತು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ
ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ, ಶಿವಮೊಗ್ಗ ಹಾಗೂ
ಕರ್ನಾಟಕ ಪಶುವೈದ್ಯಕೀಯ ಸಂಘ, ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಶನಿವಾರ ದಾವಣಗೆರೆಯ
ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರ ಕಚೇರಿ
ಸಭಾಭವನದಲ್ಲಿ 2021-22ನೇ ಸಾಲಿನ ವಿಸ್ತರಣಾ ಚಟುವಟಿಕೆಯಡಿ
ಪಶುವೈದ್ಯರಿಗೆ ಆಯೋಜಿಸಿದ್ದ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟಿಸಿ
ಅವರು ಮಾತನಾಡಿದರು.
ಪಶು ವೈದ್ಯಕೀಯ ವೃತ್ತಿಯ ಬಗ್ಗೆ ಯಾವುದೇ ಕೀಳರಿಮೆ
ಬೇಡ. ವೈದ್ಯೋ ನಾರಾಯಣೋ ಹರಿ ಎಂಬಂತೆ ಕೋವಿಡ್ ಬಂದ
ನಂತರದ ಕಾಲಘಟ್ಟದಲ್ಲಿ ವೈದ್ಯರನ್ನು ದೇವರಿಗೆ ಸಮಾನವಾಗಿ
ನೋಡುವ ಪರಿಸ್ಥಿತಿ ಸೃಷ್ಠಿಯಾಯಿತು. ಜನಸಾಮ್ಯಾನರು
ಅನಾರೋಗ್ಯದಿಂದ ವೈದ್ಯರ ಬಳಿ ಹೋಗಿ ತಮ್ಮ ಸಮಸ್ಯೆಗಳನ್ನು
ಹೇಳಿಕೊಂಡಾಗ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ಆದರೆ
ಮೂಕಪ್ರಾಣಿಗಳು ತಮ್ಮ ನೋವನ್ನು
ಹೇಳಿಕೊಳ್ಳಲಾಗುವುದಿಲ್ಲ, ಆದರೂ ಪಶುವೈದ್ಯರು ಅವುಗಳ
ಸೂಕ್ಷ್ಮತೆಗಳನ್ನು ಗಮನಿಸಿ ಸೂಕ್ತ ಚಿಕಿತ್ಸೆ ನೀಡಿ ವಾಸಿ ಮಾಡುತ್ತೀರಿ.
ಹಾಗಾಗೀ ನೀವು ಕೂಡ ನಿಜವಾದ ದೇವರಿಗೆ ಸಮಾನರು ಎಂದು ಪಶು
ವೈದ್ಯರನ್ನು ಶ್ಲಾಘಿಸಿದರು.
ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು
ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರ ಬಡವರಿಗೆ
ಅನೇಕ ಯೋಜನೆ ರೂಪಿಸಿದೆ. ಪಶುಸಂಗೋಪನೆ, ಹೈನುಗಾರಿಕೆ,
ಕುರಿ ಮತ್ತು ಮೇಕೆ ಸಾಕಾಣಿಕೆಗೆ ಹೆಚ್ಚಿನ ಪ್ರೋತ್ಸಾಹ
ನೀಡುತ್ತಿದ್ದು, ಜನರು ಇದರ ಸದುಪಯೋಗ
ಪಡೆದುಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಪ್ರಾಣಿಗಳ
ಮಾಲೀಕರು ಬಡವರು ಮತ್ತು ಕಡು ಬಡವರು ಇರುತ್ತಾರೆ.
ಶ್ರೀಮಂತರಂತೆ ಅವರಿಗೂ ಸ್ಪಂದಿಸಬೇಕು. ಪಶು ವೈದ್ಯರು
ಮುಖ್ಯವಾಗಿ ತಾಳ್ಮೆ, ಸಮಗ್ರತೆ, ಹೊಂದಾಣಿಕೆ ಹಾಗೂ ಜನರೊಂದಿಗೆ
ಉತ್ತಮ ಸಂಬಂಧ ಗಳಿಸಿಕೊಳ್ಳುವ ಗುಣಗಳನ್ನು
ಹೊಂದಿರುವುದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ
ವೇಗವಾಗಿ ಬೆಳೆಯುತ್ತಿದೆ ಪ್ರತಿಯೊಬ್ಬ ಪಶು ವೈದ್ಯರು
ವಿಶೇಷವಾಗಿ ಆಧುನಿಕ ಮಾಹಿತಿಗಳನ್ನು ಕಲೆ ಹಾಕಿಕೊಳ್ಳಬೇಕು
ಎಂದು ತಿಳಿಸಿದರು.
ಇದೇ ವೇಳೆ ಗೋಹತ್ಯೆ ನಿಷೇಧ, ಜಾನುವಾರು ಸಾಗಾಣಿಕೆ
ನಿಯಮಗಳು ಮತ್ತು ಪ್ರತಿಯೊಬ್ಬ ಪ್ರಜೆಯೂ
ತಿಳಿದಿರಬೇಕಾದ ಪ್ರಾಣಿ ಸಂಬಂಧಿತ ಕಾನೂನುಗಳ ಕುರಿತ 03 ಭಿತ್ತಿ
ಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ
ಡಾ.ಚಂದ್ರಶೇಖರ್ ಎಸ್ ಸುಂಕದ ಪ್ರಾಸ್ತಾವಿಕ ನುಡಿಗಳನ್ನಾಡಿದರು,
ಅನ್ನಪೂರ್ಣ ಪಾಟೀಲ್ ನಿರೂಪಿಸಿದರು, ಡಾ.ಅನಿಲ್ ಕುಮಾರ್ ವಂದಿಸಿದರು.
ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ವೀರೇಶ್ ಅಧ್ಯಕ್ಷತೆ ವಹಿಸಿದ್ದರು,
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಪಶುವೈದ್ಯಕೀಯ ಮಹಾವಿದ್ಯಾಲಯ
ಡೀನ್ ಡಾ.ಪ್ರಕಾಶ ನಡೂರ್, ಐಸಿಎಆರ್ ಪ್ರಧಾನ ವಿಜ್ಞಾನಿ ಡಾ.ದಿವಾಕರ್
ಹೇಮಾದ್ರಿ, ಕರ್ನಾಟಕ ಪಶುವೈದ್ಯಕೀಯ ಸಂಘ ಕಾರ್ಯಧ್ಯಕ್ಷ
ಡಾ.ಎಸ್.ಬಿ ರವಿಕುಮಾರ್, ಪ್ರಾಣಿ ಕಲ್ಯಾಣಾಧಿಕಾರಿ ಡಾ.ರಾಮಪ್ರಸಾದ್
ಕುಲಕರ್ಣಿ ಹಾಗೂ ಇತರರು ಹಾಜರಿದ್ದರು.