ನ್ಯಾಮತಿ : ಕೆರೆಗಳು ರೈತರ ಜೀವನಾಡಿಯಾಗಿವೆ. ಅವುಗಳನ್ನು ಉಳಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚುನಾವಣಾ ಪೂರ್ವದಲ್ಲಿ ಕೊಟ್ಟ ಮಾತಿನಂತೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. 518 ಕೋಟಿ ರೂ.ಗಳ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೆರೆಗಳನ್ನು ತುಂಬಿಸುವುದರ ಜೊತೆಗೆ ಅವುಗಳನ್ನು ಅಭಿವೃದ್ಧಿಪಡಿಸಿ, ಹೂಳೆತ್ತುವ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಕೆರೆಗಳಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಲು ಅನುಕೂಲವಾಗಲಿದೆ. ಅಲ್ಲದೇ, ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಾಗಿ ರೈತರ ಬಾಳು ಹಸನಾಗಲಿದೆ ಎಂದರು.
ತುಂಗಭದ್ರಾ ನದಿಯ ಮೇಲ್ಭಾಗದಲ್ಲಿ ಬರುವ ಹಳ್ಳಿಗಳ ಕೆರೆಗಳಿಗೆ ನೀರು ತುಂಬಿಸಲು 460 ಕೋಟಿ ರೂ.ಗಳು, ತುಂಗಭದ್ರೆಯ ಕೆಳಭಾಗದಲ್ಲಿ ಬರುವ ಹಳ್ಳಿಗಳ ಕೆರೆಗಳನ್ನು ತುಂಬಿಸಲು 58 ಕೋಟಿ ರೂ. ವೆಚ್ಚದ ಬೆನಕನಹಳ್ಳಿ ಏತ ನೀರಾವರಿ ಯೋಜನೆ ಸೇರಿ ಒಟ್ಟು 518 ಕೋಟಿ ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದು ತಿಳಿಸಿದರು.
ಹೊನ್ನಾಳಿ-ನ್ಯಾಮತಿ ತಾಲೂಕುಗಳ ಒಣ ಭೂಮಿ ಪ್ರದೇಶಕ್ಕೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷೆಯ 100 ಕೋಟಿ ರೂ.ಗಳ ಯೋಜನೆಯ ವಿಸ್ತøತ ಯೋಜನಾ ವರದಿ ಈಗಾಗಲೇ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಅನುಮೋದನೆ ನೀಡಿ, ಅದಕ್ಕೂ ಸರಕಾರ ಹಣ ಬಿಡುಗಡೆ ಮಾಡಲಿದೆ. ತಾಲೂಕಿನ ಒಂದು ಪ್ರದೇಶದಲ್ಲಿ ತುಂಗಭದ್ರಾ ನದಿ ನೀರು ಸಂಗ್ರಹಿಸಿ, ಕಾಲುವೆಗಳ ಮೂಲಕ ಜಮೀನುಗಳಿಗೆ ಹರಿಸಿ, ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿವರಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ : ತಾಲೂಕಿನ ಆರುಂಡಿ ಗ್ರಾಮದಲ್ಲಿ ಈಗಾಗಲೇ ಎರಡು ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಮಾಡಿದ್ದು, ಇದೀಗ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ ಎಂದ ರೇಣುಕಾಚಾರ್ಯ, ಗ್ರಾಮದ ಕೆರೆ ಅಭಿವೃದ್ದಿಗೆ 2.31 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಲಾಗಿದೆ ಎಂದರು. ಕೆಂಚಿಕೊಪ್ಪ ಗ್ರಾಮದಲ್ಲಿ 3.60 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಮಾಡಿದ್ದು ಇದೀಗ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, 25 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಉದ್ಘಾಟಿಸಿದ್ದು, ಗ್ರಾಮದ ಕೆರೆಗಳ ಅಭಿವೃದ್ದಿಗೆ 3.60 ಕೋಟಿ ಅನುದಾನ ಮಂಜೂರು ಮಾಡಿಸಿರುವುದಾಗಿ ತಿಳಿಸಿದರು. ರಾಮೇಶ್ವರ ಗ್ರಾಮದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು, 1.78 ಕೋಟಿಯನ್ನು ಕೆರೆಗಳಿಗೆ ನೀರು ತುಂಬಿಸಲು ಮಂಜೂರು ಮಾಡಿರುವುದಾಗಿ ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷರಾದ ಕೆಂಚಿಕೊಪ್ಪದ ಜಿ.ಎಸ್. ಸುರೇಶ್, ಗ್ರಾಪಂ ಉಪಾಧ್ಯಕ್ಷೆ ಗುತ್ಯಮ್ಮ, ಸದಸ್ಯರಾದ ಚಂದ್ರಪ್ಪ, ಗಿರೀಶ್, ತಾಪಂ ಮಾಜಿ ಸದಸ್ಯರಾದ ರುದ್ರೇಶ್ ಸೇರಿದಂತೆ ಗ್ರಾಮದ ಮುಖಂಡರಾದ ಕೋಮೇಶಪ್ಪ, ಶಂಕರಪ್ಪ, ಮಂಜಪ್ಪ, ಪ್ರಭು, ಹುತ್ತೇಶ್, ಚೇತನ್, ಜಗದೀಶ್, ಅನಂತಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.