ಹೆಣ್ಣು ಮಕ್ಕಳು ಸಂಕಷ್ಟದ ಸಂದರ್ಭದಲ್ಲಿ ತಮ್ಮನ್ನು
ತಾವು ರಕ್ಷಿಸಿಕೊಳ್ಳಲು ಕೇವಲ ದೈಹಿಕವಾಗಿ ಮಾತ್ರವಲ್ಲ,
ಮಾನಸಿಕವಾಗಿಯೂ ಸದೃಢಗೊಳ್ಳುವಂತೆ ಆತ್ಮಸ್ಥೈರ್ಯ
ವೃದ್ಧಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಮಂಗಳವಾರದಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ
ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ,
ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ವಸತಿ
ಶಾಲೆ, ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ
ನೀಡಲಾಗುವ ‘ಓಬವ್ವ ಆತ್ಮ ರಕ್ಷಣಾ ಕಲೆ’ ಸ್ವಯಂ ರಕ್ಷಣಾ
ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು
ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ, ರಾಣಿ ಅಬ್ಬಕ್ಕ,
ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ ಮುಂತಾದ ವೀರ, ಧೀರ
ಮಹಿಳೆಯರನ್ನು ಸಮಾಜಕ್ಕೆ ನೀಡಿದ ದೇಶ ನಮ್ಮದು. ಪುರುಷ
ಪ್ರಧಾನ ಸಮಾಜದಲ್ಲಿ ಮಹಿಳೆಗೆ ಸಮಾನತೆ ನೀಡಿ, ಅವರನ್ನು ಎಲ್ಲ
ಕ್ಷೇತ್ರದಲ್ಲಿಯೂ ಮುಂಚೂಣಿಗೆ ತರುವಂತಹ ಯತ್ನಗಳು
ಆಗಬೇಕು. ಆದರೂ ಮಹಿಳೆಯರನ್ನು ಹತ್ತಿಕ್ಕುವ ಕೆಲಸ
ಸಮಾಜದಲ್ಲಿ ಇಂದಿಗೂ ನಡೆಯುತ್ತಿರುವುದು ಬೇಸರದ
ಸಂಗತಿಯಾಗಿದೆ. ಮಹಿಳೆ ಅಬಲೆ ಎಂಬ ಸಂದೇಶ ಪದೇ ಪದೇ
ಮುನ್ನಲೆಗೆ ಬರುತ್ತಿದ್ದು, ಶೋಷಣೆ ಕಂಡುಬರುತ್ತಿದೆ.
ಹೆಣ್ಣುಮಕ್ಕಳು ಅಬಲೆ ಎಂಬುದನ್ನು ತೊಡೆದುಹಾಕಿ, ದೈಹಿಕವಾಗಿ
ಹಾಗೂ ಮಾನಸಿಕವಾಗಿ ಸದೃಢರಾಗಿ, ಸ್ವಯಂ ರಕ್ಷಣೆ
ಮಾಡಿಕೊಳ್ಳಲು ಸಶಕ್ತರಾಗಬೇಕು. ಹೆಣ್ಣು ಮಕ್ಕಳು ಈ ದೇಶಕ್ಕೆ
ಆಸ್ತಿಯಾಗಿ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ
ಸ್ವಯಂ ರಕ್ಷಣಾ ತರಬೇತಿ ನೀಡುವಂತಹ
ಕಾರ್ಯಕ್ರಮವನ್ನು ಸರ್ಕಾರ ರೂಪಿಸಿರುವುದು ಅರ್ಥಪೂರ್ಣವಾಗಿದೆ
ಎಂದರು.
ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ
ಅಧ್ಯಕ್ಷರು ಹಾಗೂ ಮಾಯಕೊಂಡ ಶಾಸಕರಾದ ಪ್ರೊ. ಲಿಂಗಣ್ಣ

ಮಾತನಾಡಿ, ಪ್ರಸ್ತುತ ಕಾಲ ಸರಿಯಿಲ್ಲ, ಯುವತಿಯರು ಸ್ವಯಂ
ರಕ್ಷಣೆಗಾಗಿ ತರಬೇತಿ ಪಡೆಯುವಂತಹ ಕಾರ್ಯಕ್ರಮ
ಸಮಾಜಕ್ಕೆ ಅಗತ್ಯವಾಗಿ ಬೇಕಾಗಿತ್ತು. ಇಂತಹ ಸಂದರ್ಭದಲ್ಲಿ
ದೃಢಕಾಯರಾಗಿ ಸ್ವಯಂ ರಕ್ಷಣೆ ಜೊತೆಗೆ ದೇಶ ರಕ್ಷಣೆ
ಸಂದರ್ಭಕ್ಕೂ ಯುವತಿಯರು ಸಜ್ಜಾಗುತ್ತಿರುವುದು
ಒಳ್ಳೆಯ ಸಂಗತಿಯಾಗಿದೆ. ಸ್ವಯಂ ರಕ್ಷಣೆ ಕಲೆ ಕಲಿತವರು,
ಸಮಾಜದಲ್ಲಿ ಅನಗತ್ಯವಾಗಿ ಇತರರ ವಿರುದ್ಧ ಕಲೆ ಪ್ರದರ್ಶನಕ್ಕೆ
ಹೋಗಬೇಡಿ, ಸಂಕಷ್ಟ ಸಂದರ್ಭದಲ್ಲಿ ಮಾತ್ರ ಸ್ವಯಂ
ರಕ್ಷಣೆಗೆ ಸಿದ್ಧರಾಗಿರುವಂತೆ ಕಿವಿಮಾತು ಹೇಳಿದರು.
ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ಸದೃಢ
ದೇಹವಿದ್ದರೆ ಮಾತ್ರ ಸದೃಢ ಮನಸ್ಸು ಹೊಂದಿರಲು ಸಾಧ್ಯ.
ಸ್ವಾಮಿ ವಿವೇಕಾನಂದರೂ ಕೂಡ ಇದನ್ನೇ ಪ್ರತಿಪಾದಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳ
ಜೇಡರ ಬಲೆಯಲ್ಲಿ ಸಿಲುಕಿಕೊಂಡಿದ್ದು, ಇದರಿಂದ ಹೊರಬಂದು ದೈಹಿಕ
ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಯುವಕ,
ಯುವತಿಯರು ಭ್ರಾತೃತ್ವ ಭಾವನೆಯನ್ನು
ಬೆಳೆಸಿಕೊಳ್ಳಬೇಕು. ರಕ್ಷಣೆ ಕಲೆ ಕರಗತ ಮಾಡಿಕೊಂಡಲ್ಲಿ,
ಸ್ವಯಂ ರಕ್ಷಣೆಯ ಜೊತೆಗೆ ಕುಟುಂಬದ ರಕ್ಷಣೆಗೂ
ಸಹಾಯವಾಗಲಿದೆ ಎಂದರು.


ಜಿ.ಪಂ. ಸಿಇಒ ಡಾ. ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ,
ದೇಶದಲ್ಲಿ ಪ್ರಾಚೀನ ಕಾಲದಿಂದಲೂ ಮಹಿಳೆಗೆ ಉನ್ನತ ಸ್ಥಾನಮಾನ
ನೀಡಲಾಗಿದೆ. ದೇಶದಲ್ಲಿ ಸಂಭವಿಸುವ ಅಪರಾಧ
ಪ್ರಕರಣಗಳನ್ನು ಗಮನಿಸಿದಾಗ, ಮಹಿಳೆಯರ ಮೇಲಿನ ದೌರ್ಜನ್ಯ
ಪ್ರಕರಣಗಳ ಸಂಖ್ಯೆಯೇ ಹೆಚ್ಚು ಕಂಡುಬರುತ್ತವೆ. ಲೈಂಗಿಕ
ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಮುಂತಾದ
ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿರುತ್ತಾರೆ. ಗ್ರಾಮೀಣ
ಪ್ರದೇಶದ ಮಕ್ಕಳು ಉನ್ನತ ವ್ಯಾಸಂಗಕ್ಕಾಗಿ ನಗರ, ಪಟ್ಟಣಕ್ಕೆ
ತೆರಳುವುದು ಸುರಕ್ಷಿತವಲ್ಲ ಎಂಬ ಭೀತಿಯಿಂದಲೇ ತಮ್ಮ
ಶಿಕ್ಷಣವನ್ನು ಮೊಟಕುಗೊಳಿಸುವ ಅನೇಕ ನಿದರ್ಶನಗಳು ನಮ್ಮ
ಮುಂದಿವೆ. ಎಲ್ಲ ಸಂದರ್ಭದಲ್ಲಿಯೂ ಪೊಲೀಸ್ ಸ್ಪಂದನೆ
ದೊರೆಯುವುದು ಕಷ್ಟ. ಮಹಿಳೆ ತಮ್ಮನ್ನು ತಾವು ಸ್ವಯಂ
ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ
ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದಲೇ ‘ಓಬವ್ವ ಆತ್ಮ
ರಕ್ಷಣಾ ಕಲೆ’ ಹೆಸರಿನಲ್ಲಿ ಸ್ವಯಂ ರಕ್ಷಣಾ ತರಬೇತಿ
ಕಾರ್ಯಕ್ರಮ ಪ್ರಾರಂಭಗೊಂಡಿದೆ. ಈಗಾಗಲೆ ಜಿಲ್ಲೆಯ
ಹಾಸ್ಟೆಲ್‍ಗಳಲ್ಲಿ ತರಬೇತಿ ಪ್ರಾರಂಭವಾಗಿದ್ದು, ವಿದ್ಯಾರ್ಥಿನಿಯರು
ಆಸಕ್ತಿಯಿಂದ ಕಲಿಯುತ್ತಿದ್ದಾರೆ. ಇಂತಹ ಚಟುವಟಿಕೆಗಳು
ದೈಹಿಕವಾಗಿ ಸಶಕ್ತಗೊಳಿಸುವ ಜೊತೆಗೆ ಆತ್ಮಸ್ಥೈರ್ಯವೂ
ವೃದ್ಧಿಸುತ್ತದೆ. ಭವಿಷ್ಯದಲ್ಲಿ ಪೊಲೀಸ್, ರಕ್ಷಣಾ ಇಲಾಖೆಗಳಲ್ಲಿ
ಉನ್ನತ ಹುದ್ದೆ ಪಡೆಯಲೂ ಸಹ ನೆರವಾಗುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್
ಪ್ರಾಸ್ತಾವಿಕವಾಗಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ
ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ
ಸಂಸ್ಥೆಗಳ ಸಂಘ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಯ ಒಟ್ಟು 5972
ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕಲೆ ತರಬೇತಿ ನೀಡಲಾಗುತ್ತಿದೆ.
ಇದಕ್ಕಾಗಿ ಕರಾಟೆ, ಜೂಡೋ, ಟೆಕ್ವಾಂಡೋ ಇತ್ಯಾದಿ ಸ್ವಯಂ ರಕ್ಷಣಾ
ಕೌಶಲ್ಯಗಳಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಒಟ್ಟು 46 ನುರಿತ
ತರಬೇತುದಾರರನ್ನು ನೇಮಿಸಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಡಿಹೆಚ್‍ಒ ಡಾ.

ನಾಗರಾಜ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕಿ
ಸುಚೇತಾ, ಡಿಯುಡಿಸಿ ಪಿಡಿ ನಜ್ಮಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ
ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ, ಜಿಲ್ಲಾಡಳಿತ ಭವನದ ಆವರಣದಲ್ಲಿ
ಹಾಸ್ಟೆಲ್‍ಗಳ ನೂರಾರು ವಿದ್ಯಾರ್ಥಿನಿಯರು, ತಾವು ತರಬೇತಿ
ಪಡೆಯುತ್ತಿರುವ ಕರಾಟೆ ಸ್ವಯಂ ರಕ್ಷಣಾ ಕಲೆಯ
ಪ್ರದರ್ಶನ ನೀಡಿದರು. ಕರಾಟೆ, ಜೂಡೋ ತರಬೇತುದಾರರು ಈ
ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *