ನ್ಯಾಮತಿ : ಸುರಹೊನ್ನೆ ಗ್ರಾಮವು ಮುಖ್ಯಮಂತ್ರಿಗಳ ಅಮೃತ ಗ್ರಾಮ ಯೋಜನೆಗೆ ಅಯ್ಕೆಯಾಗಿದ್ದು, ಸುರಹೊನ್ನೆ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಸುರಹೊನ್ನೆ ಗ್ರಾಮದ ಎಸ್‍ಸಿ ಕಾಲೋನಿಯಿಂದ ಸ್ಮಶಾನಕ್ಕೆ ತೆರಳುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗ್ರಾಮದಲ್ಲಿ ಸಿಸಿ ರಸ್ತೆಗಳು, ಸಿಸಿ ಚರಂಡಿ ಕಾಮಗಾರಿಗಳು ಭರದಿಂದ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವುದಾಗಿ ಹೇಳಿದ ರೇಣುಕಾಚಾರ್ಯ, ಜನಪ್ರತಿನಿಧಿಗಳು ಜನಸೇವಕರಾಗಿ ಕೆಲಸ ಮಾಡಿದರೆ ಮಾತ್ರ ಗ್ರಾಮಗಳ ಏಳ್ಗೆ ಸಾಧ್ಯ ಎಂದರು.
ಈ ಹಿಂದೆ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಸುರಹೊನ್ನೆ ಗ್ರಾಮವನ್ನು ಸರ್ವಾಂಗೀಣ ಅಭಿವೃದ್ದಿ ಮಾಡಿದ್ದು ಪ್ರಸ್ತುತ ಮುಖ್ಯಮಂತ್ರಿಗಳ ಅಮೃತಗ್ರಾಮ ಯೋಜನೆಯಡಿ ಈ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸುರಹೊನ್ನೆ ಗ್ರಾಮವನ್ನು ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಅಭಿವೃದ್ದಿ ಮಾಡಿದ್ದು, ಸುವರ್ಣ ಗ್ರಾಮ ಯೋಜನೆ ಮೂಲಕ ಮತ್ತೆ ಅಭಿವೃದ್ದಿ ಮಾಡಿ ಸುರಹೊನ್ನೆಯನ್ನು ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳಿಗೆ ಎಂದಿಗೂ ಕೊನೆಯಿಲ್ಲಾ, ನಿರಂತರವಾಗಿ ಅವಳಿ ತಾಲೂಕಿನಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದು ಅವಳಿ ತಾಲೂಕನ್ನು ರಾಜ್ಯದಲ್ಲೇ ಮಾದರಿ ತಾಲೂಕು ಮಾಡುತ್ತೇನೆಂದರು.
ಇದೇ ಸಂದರ್ಭದಲ್ಲಿ ಸ್ಮಶಾನಕ್ಕೆ ತೆರಳುವ ರಸ್ತೆ ರೂ.35ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಹಿಂದುಳಿದ ವರ್ಗದ ಕಾಲೋನಿಯ ಸಿಸಿ ಚರಂಡಿ ನಿರ್ಮಾಣಕ್ಕೆ ರೂ.34 ಲಕ್ಷ ಹಾಗೂ ನ್ಯಾಮತಿ ಪಟ್ಟಣದ ಶಿವಾನಂದಪ್ಪ ಬಡಾವಣೆಯಲ್ಲಿ ರೂ.40ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಗ್ರಾ.ಪಂ ಅಧ್ಯಕ್ಷ ಹಾಲೇಶ್,ತಾಪಂ ಮಾಜಿ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಮುಖಂಡರಾದ ಸದಾಶಿವಪ್ಪ,ಪಿಎಸ್‍ಐ ರಮೇಶ್ ಸೇರಿದಂತೆ ಗ್ರಾಮಸ್ಥರಿದ್ದರು.