ಅನಗತ್ಯವಾಗಿ ಶಾಂತಿ ಸುವ್ಯವಸ್ಥೆ ಕದಡುವುದು ಅಥವಾ ಗದ್ದಲ
ಸೃಷ್ಟಿಸುವ ಪ್ರಯತ್ನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ
ಪ್ರಚೋದನಾಕಾರಿ ಸಂದೇಶ ಹಾಕುವುದನ್ನು ಯಾರು
ಮಾಡಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾಗಿರುವ ಹಿನ್ನಲೆಯಲ್ಲಿ
ಶುಕ್ರವಾರ ದಾವಣಗೆರೆ ನಗರದ ಆಜಾದ್ ನಗರ, ಭಾಷಾನಗರ,
ವಿನೋಬನಗರ ದಲ್ಲಿರುವ ಮಸೀದಿಗಳಿಗೆ ಭೇಟಿ ನೀಡಿ, ಜನರಲ್ಲಿ ಅರಿವು
ಮೂಡಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಗಲಾಟೆಗಳಾಗದೆ
ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ. ಹಾಗಾಗಿ ಜನಸಂದಣಿ
ಇರುವ ಪ್ರದೇಶಗಳಿಗೆ ಹಾಗೂ ಮಸೀದಿಗಳಿಗೆ ಭೇಟಿ ನೀಡಿ
ಜನರೊಂದಿಗೆ ಮಾತನಾಡಿ ಅವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ
ಮಾಡುತ್ತಿದ್ದೇವೆ. ನೀಷೆಧಾಜ್ಞೆ ಜಾರಿ ಇರುವುದರಿಂದ ಸಾಮೂಹಿಕವಾಗಿ
ನಮಾಜ್ ಮಾಡದೆ 144 ಸೆಕ್ಷನ್ ತೆರವಾಗುವವರೆಗೂ ತಮ್ಮ
ಮನೆಗಳಲ್ಲಿ ಪ್ರಾರ್ಥನೆ ಮಾಡುವಂತೆ ಅರಿವು ಮೂಡಿಸಲಾಗುತ್ತಿದ್ದು
ಯಾವುದೇ ಸಂದರ್ಭದಲ್ಲಿಯೂ ಜನರು ಕಾನೂನು
ಕೈಗೆತ್ತಿಕೊಳ್ಳುವುದಕ್ಕೆ ಮುಂದಾಗಬಾರದು. ಕೆಲವೆಡೆ
ಅನವಶ್ಯಕವಾಗಿ ಸಣ್ಣ ಪುಟ್ಟ ಗಲಾಟೆಗಳಾಗಿವೆ, ಅವುಗಳನ್ನು ಜಿಲ್ಲಾ
ಪೊಲೀಸ್ ಇಲಾಖೆ ಯಶಸ್ವಿಯಾಗಿ ನಿಭಾಯಿಸಿದೆ ಮತ್ತು ಮುಂದೆಯೂ
ಕೂಡ ಈ ರೀತಿಯ ಗಲಾಟೆಗಳಾಗದಂತೆ
ನೋಡಿಕೊಳ್ಳಲಾಗುವುದು. ಸುಳ್ಳು ಸಂದೇಶ ಹಾಗೂ
ವದಂತಿಗಳಿಗೆ ಯಾರು ಕಿವಿಗೂಡಬಾರದು, ಪ್ರಚೋದನಾಕಾರಿ
ಹೇಳಿಕೆಗಳು, ಸಂದೇಶ ನೀಡುವವರ ಮೇಲೆ ಸೂಕ್ತ ಕಾನೂನು
ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ ಹಿಜಾಬ್ ಮತ್ತು
ಕೇಸರಿಶಾಲಿನ ಕುರಿತ ಚರ್ಚೆಗೆ ಸಂಬಂಧಿಸಿದಂತೆ ನ್ಯಾಯಾಲಯ
ನೀಡುವ ಆದೇಶ, ಸೂಚನೆಗಳನ್ನು ಪಾಲಿಸುವುದು ನಮ್ಮ
ಕರ್ತವ್ಯ. ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ವಾಟ್ಸಪ್,
ಇನ್ಸ್ಟಾಗ್ರಾಮ್‍ಗಳಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ಹಾಗೂ
ಪೊಸ್ಟರ್ ಹಂಚಿಕೊಂಡಲ್ಲಿ ಮತ್ತು ಗುಂಪುಗಾರಿಗೆ, ಗಲಾಟೆ
ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ
ಕೈಗೊಳ್ಳಲಾಗುವುದು. ಈಗಾಗಲೇ ಕೆಲವರ ಮೇಲೆ ಪ್ರಕರಣ
ದಾಖಲಿಸಿ ಬಂಧಿಸಲಾಗಿದೆ. ಗುಂಪುಗಾರಿಕೆ, ಪ್ರಚೋದನಾಕಾರಿ ಹೇಳಿಕೆ,
ಪೋಸ್ಟರ್‍ಗಳ ಹಂಚಿಕೆ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ
ದೊರೆತಲ್ಲಿ, ಕಾನೂನು ಕೈಗೆತ್ತಿಕೊಳ್ಳದೆ ಹತ್ತಿರದ ಪೊಲೀಸ್
ಠಾಣೆಗೆ ತಿಳಿಸಬೇಕು. ಜಿಲ್ಲೆಗೆ ರಕ್ಷಣಾ ಪಡೆಗಳು ಕೂಡ
ಆಗಮಿಸಿದ್ದು ಇದುವರೆಗೂ ಬಳಕೆ ಮಾಡುವಂತಹ ಪರಿಸ್ಥಿತಿ
ನಿರ್ಮಾಣವಾಗಿಲ್ಲ, ಸಾರ್ವಜನಿಕರು ಹೀಗೆಯೇ ಶಾಂತಿಯುತವಾಗಿ
ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಮುಖಂಡ ಖಾಸಿಂಸಾಬ್,
ಡಿವೈಎಸ್‍ಪಿ ನರಸಿಂಹ ತಾಮ್ರಧ್ವಜ ಹಾಗೂ ಇತರರು ಹಾಜರಿದ್ದರು.
ಹರಿಹರದ ಜಾಮಿಯಾ ಮಸೀದಿ ಹಾಗೂ ಹೆಚ್.ಎಸ್. ಬಡಾವಣೆಯ ಮಸ್ಜಿದ್ ಇ
ಅಜಾಮ್ ಮಸೀದಿಗಳಿಗೆ ಮತ್ತು ಮಲೆಬೇನ್ನೂರಿಗೆ ಜಿಲ್ಲಾಧಿಕಾರಿಗಳು,
ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ಭೇಟಿ ನೀಡಿ ಸಾಮೂಹಿಕ
ಪ್ರಾರ್ಥನೆ ಕೈಗೊಳ್ಳದಂತೆ ಅರಿವು ಮೂಡಿಸಲಾಯಿತು.