ಹೊನ್ನಾಳಿ: ಮಾಜಿ ಶಾಸಕ ಡಿ.ಜಿ.ಶಾಂತನಗೌಡ ನನ್ನ ಮೇಲೆ ಮಾಡಿರುವ ಆರೋಪಗಳು ಹತಾಷಾ ಮನೋಭಾವದ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸದ ಮನಸ್ಥಿತಿಯಿಂದ ಕೂಡಿದ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾಜಿ ಶಾಸಕರ ಆರೋಪಗಳ ಬಗ್ಗೆ ಸ್ಪಷ್ಟೀಕರಣ ನೀಡಿದರು.
ನೇರಲಗುಂಡಿಯ ಕೆರೆ ಕಾಮಗಾರಿಯಲ್ಲಿ ಯಾವುದೇ ಹಣ ದುರುಪಯೋಗವಾಗಿಲ್ಲ. ಇದಕ್ಕೆ ಇತ್ತೀಚೆಗೆ ಕೆರೆ ಕಾಮಗಾರಿಯ ಶಂಕುಸ್ಥಾಪನೆಯಲ್ಲಿ ಅಲ್ಲಿನ ಸಾರ್ವಜನಿಕರೊಂದಿಗೆ ಮತ್ತು ಮಾಧ್ಯಮದವರೊಂದಿಗೆ ಚರ್ಚಿಸಿದ್ದನ್ನು ನೀವೇ ಸ್ಥಳದಲ್ಲಿದ್ದು ಗಮನಿಸಿದ್ದೀರಿ. ಅಲ್ಲಿನ ಜನರೊಂದಿಗೆ ಚರ್ಚಿಸಲು ಸಿದ್ಧನಿದ್ದು ಅಲ್ಲಿನ ಸ್ಥಳೀಯರೇ ಉತ್ತರಿಸಲಿದ್ದಾರೆಂದರು. 4 ರಿಂದ 5 ಎಕರೆ ವಿಸ್ತೀರ್ಣದ ನೇರಲಗುಂಡಿ ಕೆರೆಯನ್ನು ತಾವೇ ಅಭಿವೃದ್ಧಿಪಡಿಸಿದ್ದು ಅದು ಅಲ್ಲಿನ ಗ್ರಾಮಸ್ಥರಿಗೆ ಬಹಳ ಅನುಕೂಲವಾಯಿತು. ಈ ಹಿನ್ನೆಲೆಯಲ್ಲಿ ಅಲ್ಲಿನ ಗ್ರಾಮಸ್ಥರ ಆಹ್ವಾನದ ಮೇರೆಗೆ ಕೆರೆಯ ಮಣ್ಣನ್ನು ತಮ್ಮ ಜಮೀನಿಗೆ ಸಾಗಿಸಲು ಮುಂದಾಗಿದ್ದನ್ನು ಸ್ಮರಿಸಿದರು.
ನೇರಲಗುಂಡಿಯಲ್ಲಿನ ಕೆರೆಯಲ್ಲಿನ ಮಣ್ಣನ್ನು ತಮ್ಮ ಜಮೀನಿಗೆ ಖಾಸಗಿಯಾಗಿ ಏರಿಸಿಕೊಂಡಿದ್ದೇವೆ ಹೊರತು ಸರ್ಕಾರದ ಹಣದಿಂದಲ್ಲ ಎಂದು ಸ್ಪಷ್ಟಪಡಿಸಿದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ತಮ್ಮ ಅವಧಿಯಲ್ಲಿ ಯಾವ ದೊಡ್ಡ ಯೋಜನೆಯನ್ನು ತಂದಿದ್ದಾರೆಂದು ಪ್ರಶ್ನಿಸಿದರು.
ಅವರ ರೈಸ್ ಮಿಲ್‍ನ ಅಕ್ಕಿ ವಿಚಾರಗಳು ಸುದ್ದಿ ವಾಹಿನಿಗಳಲ್ಲಿ ಈಗಾಗಲೇ ಬಂದಿದೆ. ತಾಲ್ಲೂಕಿನಲ್ಲಿ ಮರಳಿನ ಕೃತಕ ಮರಳಿನ ಅಭಾವ ಸೃಷ್ಟಿಸಿದ್ದೂ ಇವರೇ, ನಮ್ಮ ಕಾಲದಲ್ಲಿ ನಮ್ಮ ಮರಳು ಸಾರ್ವಜನಿಕರಿಗೆ ಮುಕ್ತವಾಗಿ ಕಡಿಮೆ ದರದಲ್ಲಿ ಸಿಗುವ ವ್ಯವಸ್ಥೆ ಮಾಡಿದ್ದು ದೇವಸ್ಥಾನಗಳಿಗೆ ಉಚಿತ ಮರಳನ್ನೂ ನೀಡಿದ್ದೇನೆ ಎಂದರು.
ಹಿರೇಗೋಣಿಗೆರೆಯ ಕಂದಾಯ ಅಧಿಕಾರಿಗಳು ಮಹಿಳೆಯೊಬ್ಬರಿಗೆ ನಿವಾಸಿ ದೃಢೀಕರಣ ಪತ್ರವನ್ನು ನೀಡಿರುವುದರಲ್ಲಿ ನನ್ನ ಯಾವುದೇ ಹಸ್ತಕ್ಷೇಪವಿಲ್ಲ. ಆ ಭಾಗದ ಸ್ವ-ಜಾತಿಯ ರೆವಿನ್ಯೂ ಇನಸ್ಪೆಕ್ಟರ್ ಗಂಘಾಧರ್ ಅವರಿಗೆ ಏಕವಚನದಲ್ಲಿ ನಿಂದಿಸಿ ಹಲ್ಲೆ ಪ್ರಯತ್ನ ನಡೆಸಿದ್ದರಿಂದಾಗಿ ಆನಾರೋಗ್ಯವುಂಟಾಗಿ ಇದೀಗ ಕೋಮಾಸ್ಥಿತಿಯಲ್ಲಿರುವುದಕ್ಕೆ ಇವರೇ ನೇರ ಕಾರಣ ಎಂದು ಆರೋಪಿಸಿದರು.
ಇಂತಹ ಬೆಳವಣಿಗೆಗಳಿಂದ ಕೆಲವರು ಇವರನ್ನು ಸೌಮ್ಯ ಸ್ವಭಾವದವರೆಂದು ನಂಬಿದ್ದರು ಆದರೆ ಇವರೊಬ್ಬ ಘೋ-ಮುಖ ವ್ಯಾಘ್ರ ಎಂದು ತಮಗೆ ಹಲವಾರು ವಿಷಯಗಳಿಂದ ತಿಳಿದುಬಂದಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್, ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್, ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ್, ಸದಸ್ಯರಾದ ಕಿಟ್ಟಿ ಮುರಾರಿ, ಬಡಾವಣೆ ರಂಗಪ್ಪ, ತಾಲ್ಲೂಕು ಮಾಜಿ ಅಧ್ಯಕ್ಷ ಕೆ.ಎಲ್.ರಂಗಪ್ಪ, ಎಪಿಎಂಸಿ ಸದಸ್ಯ ಕೆ.ಪಿ.ಕುಬೇಂದ್ರಪ್ಪ, ತಾಂಡಾಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ್ ಬಿಜೆಪಿ ಮುಖಂಡರಾದ ಇಂಚರ ಮಂಜು, ಮಹೇಶ್ ಹುಡೇದ್, ಸತೀಶ್, ಗುಂಡ ಚಂದ್ರು, ಜೆಸಿಬಿ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.