ಹಿಜಾಬ್ ಹಾಗೂ ಕೇಸರಿ ಶಾಲು ವಿಷಯಕ್ಕೆ ಸಂಭಂಧಿಸಿದಂತೆ
ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪನ್ನು
ಎಲ್ಲರೂ ಗೌರವಿಸಿ, ಪಾಲಿಸೋಣ, ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಶಿಕ್ಷಣ ಇಲಾಖೆಯ
ವಿಡಿಯೋ ಕಾನ್ಪರೆನ್ಸ್ ನಂತರ ಮಾತನಾಡಿದ ಅವರು, ಫೆ.15 ರಿಂದ 09
ಮತ್ತು 10 ನೇ ತರಗತಿಗಳು ಆರಂಭಗೊಂಡಿದ್ದು ಒಂದೆರೆಡು
ಘಟನೆ ಹೊರತುಪಡಿಸಿ ಜಿಲ್ಲೆಯಾದ್ಯಂತ ಶಾಂತಿಯುತವಾಗಿ
ಶಾಲೆಗಳು ಆರಂಭವಾಗಿವೆ. ಬುಧವಾರದಿಂದ ಪದವಿ ಪೂರ್ವ ಹಾಗೂ
ಪದವಿ ತರಗತಿಗಳು ಆರಂಭವಾಗಲಿದ್ದು ಶಾಲಾ ಕಾಲೇಜುಗಳು
ಸುಗಮವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವೆಂದರು.
ಶಿಕ್ಷಣ ಇಲಾಖೆಯ ಎಸಿಎಸ್ ಸೆಲ್ವಕುಮಾರ್ ಅವರು ಸ್ಪಷ್ಟಪಡಿಸಿರುವಂತೆ
ಫೆ.16 ರಿಂದ ಪದವಿ ಪೂರ್ವ, ಪದವಿ, ಇಂಜಿನಿಯರಿಂಗ್ ಕಾಲೇಜುಗಳು
ಆರಂಭವಾಗುತ್ತಿದ್ದು, ರಾಜ್ಯ ಉಚ್ಚನ್ಯಾಯಾಲಯ ನೀಡಿರುವ ತೀರ್ಪಿಗೆ
ಎಲ್ಲರೂ ಬದ್ದವಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ಧರ್ಮದ
ಸಂಕೇತ ಸೂಚಿಸುವ ವಸ್ತ್ರಗಳನ್ನು ಧರಿಸಬಾರದು, ಒಂದು
ವೇಳೆ ಅಂತಹ ಡ್ರೆಸ್ ಹಾಕಿಕೊಂಡು ಬಂದಿದ್ದರೂ ಶಾಲೆಯಲ್ಲಿ
ನಿಗದಿಪಡಿಸಿರುವ ಒಂದು ಸ್ಥಳದಲ್ಲಿ ಅವುಗಳನ್ನು ಇಡಬೇಕು
ತರಗತಿಗಳಲ್ಲಿ ಎಲ್ಲರೂ ಏಕರೀತಿಯ ಸಮವಸ್ತ್ರ ಧರಿಸಬೇಕು
ಎಂದರು.
ಕಾಲೇಜುಗಳ ಆಡಳಿತ ಮಂಡಳಿಗಳು ಸಮವಸ್ತ್ರ
ಹೊರತುಪಡಿಸಿ ಬೇರೆ ರೀತಿಯ ಧರ್ಮ, ನಂಬಿಕೆಯನ್ನು
ಪ್ರತಿನಿಧಿಸುವ ವಸ್ತ್ರಗಳನ್ನು ಧರಿಸಿ ಬಂದವರನ್ನ ಕಾಲೇಜು
ಹೊರಭಾಗದಲ್ಲಿ ಅಥವ ರಸ್ತೆಯಲ್ಲಿ ನಿಲ್ಲಿಸಿ ತೆಗೆಯಲು
ಹೇಳಬಾರದು, ಕಾಲೇಜಿನ ಆವರಣದಲ್ಲಿ ತೆಗೆಯಲು ಸೂಚಿಸಬೇಕು.
ಕೆಲ ಕಾಲೇಜುಗಳಲ್ಲಿ ನಿಗದಿತ ಸಮವಸ್ತ್ರ ಇರುವುದಿಲ್ಲ, ಅಂತಹ
ಕಡೆಯೂ ಯಾವುದೇ ವಿದ್ಯಾರ್ಥಿ ಧರ್ಮ ಸಂಕೇತ ಸೂಚಿಸುವ
ಸಮವಸ್ತ್ರಗಳನ್ನು ಧರಿಸಬಾರದು. ಹಾಗೂ ಈಗಾಗಲೇ ಕಳೆದ
ಶನಿವಾರ ನಡೆದಿರುವ ಸಭೆಯಲ್ಲಿ ಸೂಚಿಸಿರುವ ಅಂಶಗಳನ್ನೇ
ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಜಿ.ಪಂ. ಸಿಇಓ ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ
ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ,
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ದೂಡ
ಆಯುಕ್ತ ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ
ನಿರ್ದೇಶಕಿ ನಜ್ಮ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.