ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಜಾರಿಯಲ್ಲಿರುವ ಸರ್ಕಾರದ
ಸೌಲಭ್ಯಗಳು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅರ್ಹ
ಫಲಾನುಭವಿಗಳಿಗೆ ತಲುಪಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನ ಮಂತ್ರಿಯವರ ಹೊಸ
15-ಅಂಶ ಕಾರ್ಯಕ್ರಮ ಕುರಿತು ಮಂಗಳವಾರ ಜಿಲ್ಲಾಧಿಕಾರಿಗಳ
ಕಛೇರಿ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಭಾರತ ಸಂವಿಧಾನದಡಿ ಭಾಷೆ ಮತ್ತು ಧಾರ್ಮಿಕ
ಅಲ್ಪಸಂಖ್ಯಾತರ ಹಿತಕ್ಕಾಗಿ ಸರ್ಕಾರದಿಂದ ಕೆಲವು ವಿಶೇಷ
ಸೌಕರ್ಯಗಳನ್ನು ಕಲ್ಪಿಸಲಾಗಿದ್ದು, ನಾವು ಕೇವಲ ನಮ್ಮ
ಹಕ್ಕುಗಳಿಗೆ ಮಾತ್ರ ಧ್ವನಿ ಎತ್ತುವುದಕ್ಕೆ ಸೀಮಿತರಾಗಬಾರದು
ಕರ್ತವ್ಯಗಳನ್ನು ಅರಿತು ಪಾಲಿಸಬೇಕು. ಈ ನಿಟ್ಟಿನಲ್ಲಿ
ಸಮುದಾಯಗಳ ಮುಖಂಡರು ಸಮಾಜದಲ್ಲಿ ಜಾಗೃತಿ
ಮೂಡಿಸಬೇಕು ಎಂದು ಹಾಜರಿದ್ದ ಅಲ್ಪಸಂಖ್ಯಾತರ ನಾಮನಿರ್ದೇಶಿತ
ಸದಸ್ಯರಿಗೆ ತಿಳಿಸಿದರು.
ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದಿಂದ ಇರುವ
ಯೋಜನೆಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿ ಸಾರ್ವಜನಿಕರಿಗೆ
ತಲುಪುವಂತೆ ಕ್ರಮವಹಿಸಲು ಸೂಚಿಸಿದರು.
ಅಲ್ಪಸಂಖ್ಯಾತರ ಸಮುದಾಯಗಳು ಸರ್ಕಾರ ನೀಡಿರುವ ಎಲ್ಲಾ
ಸೌಲಭ್ಯಗಳನ್ನು ಬಳಸಿಕೊಂಡು ಸಂವಿಧಾನದ ಆಶಯ, ದೇಶದ
ಹಿತಾಸಕ್ತಿ ಹಾಗೂ ಸಮಗ್ರತೆ ಎತ್ತಿ ಹಿಡಿಯಲು ಸಂಕಲ್ಪ ಮಾಡುವ
ಮೂಲಕ ಅಲ್ಪಸಂಖ್ಯಾತರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು
ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಮಿತ್ ಬಿದರಿ.ಆರ್
ಮಾತನಾಡಿ 2021ರ ಜನಗಣತಿ ಆಧಾರದಲ್ಲಿ ಜಿಲ್ಲೆಯ ಒಟ್ಟು
ಜನಸಂಖ್ಯೆಯಲ್ಲಿ ವಿವಿಧ 05 ಅಲ್ಪಸಂಖ್ಯಾತರ ಧರ್ಮಗಳ ಶೇಕಡ
12.8 ರಷ್ಟು ಜನರಿದ್ದು ಇಲಾಖೆಯಿಂದ ವಿದ್ಯಾಸಿರಿ, ಶಿಕ್ಷಣ ಪ್ರೋತ್ಸಾಹ,
ಆರ್ಥಿಕ, ಸಾಮಾಜಿಕ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ
ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ಹೊಸ-15 ಅಂಶಗಳ
ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ. ಅಲ್ಲದೆ
ಇಲಾಖೆಯಿಂದ ಮದರಸಗಳಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ
ಕಂಪ್ಯೂಟರ್, ವಿಜ್ಞಾನ, ಗಣಿತಕಲಿಕೆ, ಕ್ರೀಡಾ ಚಟುವಟಿಕೆಗಾಗಿ ಕ್ರೀಡಾ
ಸಾಮಾಗ್ರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ನಾಮ ನಿರ್ದೇಶಿತ ಸದಸ್ಯರಾದ ಖಾಸಿಂಸಾಬ್
ಮಾತನಾಡಿ, ನಗರದಲ್ಲಿ ಸರಕು ಸಾಗಾಣಿಕೆ ಮಾಡುವ ಭಾರಿ
ವಾಹನಗಳನ್ನು ನಿಲ್ಲಿಸಲು ನಗರದ ಹೊರವಲಯದಲ್ಲಿ
ಜಾಗವನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ
ಕೋರಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ತುಂಗಭದ್ರ
ಬಡಾವಣೆಯಲ್ಲಿ ಲಭ್ಯವಿರುವ ಡಫರ್‍ಜಾಗವನ್ನು ಮಂಜೂರು
ಮಾಡುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ
ಸೂಚಿಸಿದರು.
ಸಭೆಯಲ್ಲಿ ಹಾಜರಿದ್ದ ಅಲ್ಪಸಂಖ್ಯಾತರ ನಾಮನಿರ್ದೇಶಿತ
ಸದಸ್ಯರಾದ ಬುನಿಯನ್ ಸುಮಿತ್ರ ಮತ್ತು
ಅಶೋಕ್‍ಕುಮಾರ್‍ಜೈನ್ ರವರು ಎಲ್ಲಾ ಇಲಾಖೆಯ ಪ್ರಗತಿ
ವರದಿಯನ್ನು ಪಡೆದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಜಿಲ್ಲಾ ಪಂಚಾಯತ್
ಉಪ ಕಾರ್ಯದರ್ಶಿ ಆನಂದ್ .ಬಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ.ಜಿ
ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.