ಪ್ರತಿಯೊಬ್ಬರು ಕೂಡ ಕಾನೂನು ತಿಳಿಯಬೇಕು, ತಮ್ಮನ್ನು
ತಾವು ರಕ್ಷಿಸಿಕೊಳ್ಳುವ ಜೊತೆಗೆ ಇತರರನ್ನು ರಕ್ಷಿಸಲು
ಕಾನೂನು ಅಧ್ಯಯನ ಮಾಡಬೇಕು ಎಂದು ಕರ್ನಾಟಕ ರಾಜ್ಯ
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ
ಶಂಕರಪ್ಪ.ಡಿ ಹೇಳಿದರು.
ಬುಧವಾರ ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಉಪ ನಿರ್ದೇಶಕರ ಕಛೇರಿಯಲ್ಲಿ ಕರ್ನಾಟಕ ರಾಜ್ಯ
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ
ಮಕ್ಕಳ ರಕ್ಷಣಾ ಘಟಕ ದಾವಣಗೆರೆ ಇವರ
ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹದಿಂದ ಆಗುವ
ದುಷ್ಪರಿಣಾಮಗಳು ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು
ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನನ್ನು ಎಷ್ಟು, ಹೇಗೆ, ಯಾಕೆ ತಿಳಿಯುತ್ತೇವೆ
ಎನ್ನುವುದು ಮುಖ್ಯ. ಹೇಗೆ ನಡವಳಿಕೆಗಳನ್ನು
ರೂಪಿಸಿಕೊಳ್ಳಬೇಕು ಎನ್ನುವುದನ್ನು ಕಾನೂನು ಮಾರ್ಗದರ್ಶನ
ಮಾಡುತ್ತದೆ. ಬಾಲ್ಯವಿವಾಹ ನಿಷೇಧಾದಿಕಾರಿಗಳು ಸರಿಯಾದ ರೀತಿಯಲ್ಲಿ
ಬಾಲ್ಯವಿವಾಹ ಕಾಯ್ದೆ ಕುರಿತು ಅರಿವು ಹೊಂದಿದ್ದರೆ, ಪ್ರಸ್ತುತ
ದಿನಮಾನಗಳಲ್ಲಿ ಇಷ್ಟೊಂದು ಬಾಲ್ಯ ವಿವಾಹಗಳು
ನಡೆಯುತ್ತಿರಲಿಲ್ಲ. ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಪಂಚಾಯಿತಿ
ಅಭಿವೃದ್ಧಿ ಅಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರು ಹಾಗೂ
ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಾಗೂ
ಇನ್ನಿತರೇ ನಿಷೇಧಾದಿಕಾರಿಗಳು ಬಾಲ್ಯವಿವಾಹ ತಡೆಯುವಲ್ಲಿ
ಮಹತ್ತರವಾದ ಪಾತ್ರ ವಹಿಸಬೇಕು ಎಂದರು.
ಕಾನೂನು ಅರಿತುಕೊಂಡವರು ಶಿಕ್ಷೆ ಪಡೆಯುವ ಗೋಜಿಗೆ
ಹೋಗಬಾರದು ಮತ್ತು ಕಾನೂನು ತಿಳಿದವರಿಂದಲೂ ಅದರ
ದುರುಪಯೋಗ ಆಗಬಾರದು. ಬಾಲ್ಯವಿವಾಹ ತಡೆಗಟ್ಟುವ
ಅಧಿಕಾರಿಗಳು ಕಾನೂನು ಗೊತ್ತಿಲ್ಲ ಎನ್ನುವ ಕಾರಣಗಳನ್ನು
ಹೇಳಬಾರದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ
ಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ್ ನಾಯ್ಕ್ ಮಾತನಾಡಿ, ಕಾನೂನು
ಎಂದರೆ ಏನು ಮಾಡಬೇಕು, ಏನು ಮಾಡಬಾರದು ಎನ್ನುವ
ಸಾಮಾನ್ಯ ಜ್ಞಾನವಾಗಿದೆ. ಕಾನೂನಿನ ಬಗ್ಗೆ ಅರಿತುಕೊಳ್ಳುವುದು
ಪ್ರತಿಯೊಬ್ಬರ ಕರ್ತವ್ಯವಾಗಿದೆ. ಬಾಲ್ಯವಿವಾಹ ತಡೆಗಟ್ಟುವಲ್ಲಿ ಗ್ರಾಮ
ಮಟ್ಟದ ಎಲ್ಲಾ ಅಧಿಕಾರಿಗಳ ಪಾತ್ರ ಅತೀ ಮುಖ್ಯವಾದದ್ದು. ಆಶಾ ಹಾಗೂ
ಅಂಗನವಾಡಿ ಕಾರ್ಯಕರ್ತೆಯರು, ಅಲ್ಲದೆ ಶಿಕ್ಷಕರ ಪಾತ್ರವು
ಇದರಲ್ಲಿ ಪ್ರಮುಖವಾಗಿದೆ. ಬಾಲ್ಯವಿವಾಹದ ಕುರಿತ ಮಾಹಿತಿಗಳ ಗೌಪ್ಯತೆ
ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು
ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವುದರ
ಜೊತೆಗೆ, ಜನ ಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ ಮತ್ತು ಪೊಲೀಸ್ ಇಲಾಖೆಯ
ಮುಖಾಂತರ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ಉಪನಿರ್ದೇಶಕ ಕೆ.ಹೆಚ್ ವಿಜಯಕುಮಾರ್, ಸಾರ್ವಜನಿಕ ಶಿಕ್ಷಣ
ಇಲಾಖೆಯ ಉಪನಿರ್ದೇಶಕ ತಿಪ್ಪೇಶಪ್ಪ ಜಿ.ಆರ್, ಜಿಲ್ಲಾ ಕಾರ್ಮಿಕ ಅಧಿಕಾರಿ
ಜಿ.ಇಬ್ರಾಹಿಂ ಸಾಬ್, ಮಹಿಳಾ ಪೊಲೀಸ್ ಠಾಣೆ ವೃತ್ತ ನಿರೀಕ್ಷಕಿ ಶಿಲ್ಪಾ, ಹಿರಿಯ
ವಕೀಲ ಎನ್.ಎಮ್ ಆಂಜನೇಯ ಗುರೂಜಿ, ಅಂಗನವಾಡಿ ಹಾಗೂ ಆಶಾ
ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ
ಇತರರು ಭಾಗವಹಿಸಿದ್ದರು.