ದಾವಣಗೆರೆ , ಆಗಸ್ಟ್ 10: “ಜಂತುಹುಳು ರಹಿತ ಮಕ್ಕಳೇ ದೇಶದ ಆರೋಗ್ಯವಂತ ಮಕ್ಕಳು. ಜಂತುಹುಳು ನಿವಾರಣಾ ಮಾತ್ರೆಯನ್ನು ನೀರು ಹಾಗೂ ಆಹಾರ ಸೇವನೆಯ ನಂತರ ಸರಿಯಾಗಿ ಚೀಪಿ ನುಂಗಬೇಕು ಎಂದು ಆರ್.ಸಿ.ಹೆಚ್. ಡಾ.ರೇಣುಕಾರಾಧ್ಯ ಅವರು ತಿಳಿಸಿದರು.

ಅವರು ಸೋಮವಾರ ನಗರದ ಮುದ್ದೇಗೌಡ್ರ ಮಲ್ಲಮ್ಮ ಮುರಿಗೆಪ್ಪ ಬಾಲಿಕಾ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ಉದ್ಪಾಟಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಊಟಕ್ಕೂ ಮುನ್ನ ಮತ್ತು ಶೌಚಾಲಯ ಬಳಕೆಯ ನಂತರ ಕೈ-ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು. ವಾರಕ್ಕೊಮ್ಮೆ ಉಗುರುಗಳನ್ನು ಕತ್ತರಿಸುವುದು, ಶುದ್ಧ ಕುಡಿಯುವ ನೀರನ್ನು ಬಳಸುವುದು ಹಾಗೂ ಆಹಾರ ಪದಾರ್ಥಗಳನ್ನು ಸದಾ ಮುಚ್ಚಿಡುವುದು ಅತ್ಯಗತ್ಯ ಎಂದು ತಿಳಿಸಿದರು.
ತರಕಾರಿ ಮತ್ತು ಹಣ್ಣುಗಳನ್ನು ಬಳಸುವ ಮುನ್ನ ಶುದ್ಧ ನೀರಿನಿಂದ ತೊಳೆಯಬೇಕು. ಬರಿಗಾಲಿನಲ್ಲಿ ನಡೆಯದೆ ಕಡ್ಡಾಯವಾಗಿ ಚಪ್ಪಲಿ ಧರಿಸಬೇಕು. ಮನೆ ಹಾಗೂ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಮಕ್ಕಳಲ್ಲಿ ಜಂತುಹುಳು ಭಾದೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದರು.
ಪ್ರತಿ ವರ್ಷ ಫೆಬ್ರವರಿ 10 ಮತ್ತು ಆಗಸ್ಟ್ 10 ರಂದು 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಈ ಜಂತುಹುಳು ನಾಶಕ (ಅಲ್ಬೆಂಡಜೋಲ್) ಮಾತ್ರೆಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಣೆ ಹಾಗೂ ನೈರ್ಮಲ್ಯದ ಕುರಿತು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಸುಶೀಲಮ್ಮ, ಜಿಲ್ಲಾ ಆರೋಗ್ಯ ಅಧಿಕಾರಿಗಳು , ತಾಲೂಕು ಆರೋಗ್ಯಾಧಿಕಾರಿಗಳು , ಬಿ.ಎಚ್.ಇ.ಒ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ವಿರೂಪಾಕ್ಷಪ್ಪ ಅವರು ಉಪಸ್ಥಿತರಿದ್ದರು.
