ದಾವಣಗೆರೆ ಮೇ.01
ದಾವಣಗೆರೆ ಜಿಲ್ಲೆಯಲ್ಲಿ ಇಂದು 6 ಹೊಸ ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, ಕೊರೊನಾ ಸಕ್ರಿಯ
ಸೋಂಕಿತರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಅವರು ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ
ದೃಢಪಟ್ಟ ಸೊಂಕಿತ ವ್ಯಕ್ತಿಗಳ ಪ್ರಾಥಮಿಕ ಹಾಗೂ ದ್ವಿತೀಯ
ಸಂಪರ್ಕದಲ್ಲಿರುವವರನ್ನು ಗುರುತಿಸಿ, ತಪಾಸಣೆ
ನಡೆಸಲಾಗುತ್ತಿದೆ ಎಂದರು.
ದಾವಣಗೆರೆಯ ಭಾಷಾ ನಗರದ ರೋಗಿ ಸಂಖ್ಯೆ-533
ಸೋಂಕಿತ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿರುವ
ಆಕೆಯ ಮಗನಿಗೂ (16 ವರ್ಷ) ಕೊರೊನಾ ದೃಢಪಟ್ಟದೆ.
ರೋಗಿ ಸಂಖ್ಯೆ-556 ರ ಜಾಲಿ ನಗರದ ವಯೋವೃದ್ಧನ
ಪ್ರಾಥಮಿಕ ಸಂಪರ್ಕದಲ್ಲಿದ್ದ 5 ಜನರಿಗೆ ಸೋಂಕು ಇರುವುದು
ವರದಿಯಾಗಿದೆ. ವಯೋವೃದ್ಧನ ಸೊಸೆ 1 (31 ವರ್ಷ), ಸೊಸೆ 2 (26
ವರ್ಷ), ಸೊಸೆ 3 (18), ಮಗ (34 ವರ್ಷ), ಹಾಗೂ ಮೊಮ್ಮಗ (1
ವರ್ಷ) ಒಟ್ಟು 5 ಜನರಿಗೆ ಸೋಂಕು ತಗಲಿರುವುದು
ದೃಢಪಟ್ಟಿದೆ ಎಂದು ತಿಳಿಸಿದರು.
ಈಗಾಗಲೇ ಗುರುತಿಸಲಾದ ಎಪಿಸೆಂಟರ್‍ನಲ್ಲಿ ಸರ್ವೇ ಕಾರ್ಯ
ನಡೆದಿದ್ದು, ಒಟ್ಟು 82 ಜನರ ಗಂಟಲು ದ್ರವದ ಸ್ಯಾಂಪಲ್ ಸಂಗ್ರಹಿಸಿ
ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದ್ದು, ಪರೀಕ್ಷಾ ವರದಿಯ
ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ಜಾಲಿ ನಗರದ ಪಿ-556 ವಯೋವೃದ್ಧರು ಚಿಕಿತ್ಸೆಗೆ
ಉತ್ತಮವಾಗಿ ಸ್ಪಂದಿಸುತ್ತಿದ್ದು, ಸದ್ಯ ಅವರ ಆರೋಗ್ಯವು
ಉತ್ತಮ ಸ್ಥಿತಿಯಲ್ಲಿದೆ ಎಂದ ಅವರು, ಪಿ-533 ಹಾಗೂ ಪಿ-556 ರ
ಸೋಂಕಿತ ವ್ಯಕಿಗಳ ಪ್ರಕರಣದ ಮೂಲವನ್ನು ಪತ್ತೆ
ಹಚ್ಚಲು ಅವರ ಮನವೊಲಿಸಿ ಆರೋಗ್ಯ ಹಾಗೂ ಪೊಲೀಸ್
ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಿದ್ದಾರೆ ಎಂದರು.
ಸರ್ಕಾರದ ನಿರ್ದೇಶನದ ಮೇರೆಗೆ ಇಂದು ತಜ್ಞ ವೈದ್ಯರ
ಸಮಿತಿ ರಚಿಸಿ ಸಭೆ ನಡೆಸಲಾಯಿತು. ಸಭೆಯಲ್ಲಿ ರೋಗ
ನಿಯಂತ್ರಣ ಹಾಗೂ ರೋಗಿಗಳ ಆರೋಗ್ಯ ಸ್ಥಿತಿಯನ್ನು
ಸಮತೋಲನ ತರುವ ಬಗ್ಗೆ ಪೂರ್ವ ತಯಾರಿಯಾಗಿ
ಚರ್ಚಿಸಲಾಯಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ
ವೀರಮಲ್ಲಪ್ಪ, ದೂಡಾ ಆಯುಕ್ತ ಕುಮಾರಸ್ವಾಮಿ ಹಾಜರಿದ್ದರು.