ದಾವಣಗೆರೆ ಮೇ.4
ಕೊರೊನಾ ಸೋಂಕು ನಿಯಂತ್ರಣ ಸಂದರ್ಭದಲ್ಲಿ ಜಿಲ್ಲೆಯ
ಹೋಟೆಲ್ ಮಾಲೀಕರು ತುಂಬಾ ಸಹಕಾರ ನೀಡಿದ್ದೀರ.
ನೀವುಗಳು ಮಾನವೀಯತೆ ಮೆರೆಯುವುದರ ಮೂಲಕ
ನಮ್ಮೊಂದಿಗೆ ಕೈಜೋಡಿಸಿದ್ದೀರಿ. ಇದಕ್ಕಾಗಿ ಜಿಲ್ಲಾಡಳಿತದ ಪರವಾಗಿ
ಅಭಿನಂದನೆ ಸಲ್ಲಿಸಲು ಇಷ್ಟಪಡುತ್ತೇನೆ. ಆದರೆ ಕೆಲವು ಕಡೆ
ನಿರೀಕ್ಷಿತ ಮಟ್ಟದಲ್ಲಿ ಸಹಕಾರ ದೊರೆಯುತ್ತಿಲ್ಲ. ನೀವೆಲ್ಲರೂ
ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಹೋಟೆಲ್ ಹಾಗೂ ಲಾಡ್ಜ್
ಮಾಲೀಕರಿಗಾಗಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿದ ಅವರು, ಇಲ್ಲಿಯವರೆಗೆ ಸಹಕಾರ ನೀಡಿದ್ದೀರಿ. ಇನ್ನೂ
ಮುಂದೆಯೂ ಸಹ ಹೆಚ್ಚಿನ ರೀತಿಯ ಸಹಕಾರ ನೀಡಬೇಕು.
ನಿಮಗೆ ಬೇಕಾದ ಎಲ್ಲಾ ವ್ಯವಸ್ಥೆ ನಾವು ಮಾಡುತ್ತೇವೆ.
ಜಿಲ್ಲಾಡಳಿತ ನಿಮಗೆ ಸಹಕರಿಸುತ್ತದೆ. ಇನ್ನು ಮುಂದಿನ 14
ದಿನಗಳು ಬಹಳಷ್ಟು ಗಂಭೀರವಾಗಿರುವುದರಿಂದ
ನೀವೆಲ್ಲರೂ ಕೈಜೋಡಿಸಬೇಕು ಎಂದರು.
ಕೊರೊನಾ ಹಾಗೂ ಎಸಿ ಒಂದಕ್ಕೊಂದು
ಹೊಂದಾಣಿಕೆಯಾಗುವುದಿಲ್ಲ. ಪರಸ್ಪರ ತದ್ವಿರುದ್ದ. ಹಾಗಾಗಿ ಎಸಿ
ಇರುವ ರೂಮ್‍ಗಳು ಸದ್ಯಕ್ಕೆ ಬೇಡ. ರೂಮ್‍ಗಳನ್ನು
ಬಳಸುವ ಸಂದರ್ಭ ಬಂದರೆ ಎಸಿ ಕಡಿತಗೊಳಿಸಿ ರೂಮ್ ಬಳಕೆ
ಮಾಡಿಕೊಳ್ಳಲಾಗುವುದು.

ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಲಾಡ್ಜ್ ಹಾಗೂ ಹೋಟೆಲ್‍ಗಳಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್
ಸೇರಿದಂತೆ ಯಾವುದೇ ರೀತಿಯ ತೊಂದರೆ ಆದರೆ ಕೂಡಲೇ ಸರಿ
ಮಾಡಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ
ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ನಮ್ಮ
ಸಹಾಯ ತೆಗೆದುಕೊಳ್ಳಿ. ಪ್ರಧಾನ ಮಂತ್ರಿ ಮೋದಿ ಅವರ
ಕರೆಯಂತೆ ಇಂತಹ ಪರಿಸ್ಥಿತಿಯಲ್ಲಿ ನೀವೆಲ್ಲರೂ
ಭಾಗಿಯಾಗುವುದರ ಮೂಲಕ ಇಡೀ ದೇಶವೇ ನಿಮಗೆ
ಋಣಿಯಾಗಿರುತ್ತದೆ ಎಂದು ಪ್ರಶಂಸಿದರು.

ಕೊರೊನಾ ಸೋಂಕು ನಿಯಂತ್ರಣ ಒಂದು ಯುದ್ಧವಾಗಿದೆ.
ಇಂತಹ ತುರ್ತು ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಲು
ಜಿಲ್ಲಾಡಳಿತ ತಮ್ಮ ಕುಟುಂಬ ಮರೆತು, ವೈಯಕ್ತಿಕ ಜೀವನ
ಪಣಕ್ಕಿಟ್ಟು ಕೆಲಸ ಮಾಡುತ್ತಿದೆ. ಇನ್ನೇನು ಎಲ್ಲಾ ಮುಗಿತು. 28
ದಿನದಿಂದ ಒಂದು ಪಾಸಿಟಿವ್ ಕೇಸ್ ಇಲ್ಲ ಎಂದು ಗ್ರೀನ್ ಜೋನ್
ಘೋಷಣೆ ಮಾಡಲಾಯಿತು. ಅಷ್ಟರಲ್ಲಿ ಮರು ದಿನವೇ
ಕೊರೊನಾ ಪಾಸಿಟಿವ್ 2 ಪ್ರಕರಣಗಳು ಕಂಡುಬಂದವು. ಆ 2
ಪ್ರಕರಣಕ್ಕೆ ಸಂಬಂಧಪಟ್ಟವರ 21 ಪಾಸಿಟಿವ್ ಪ್ರಕರಣಗಳು
ಪತ್ತೆಯಾಗಿದೆ. ಇನ್ನೂ ಸುಮಾರು 290 ಸ್ಯಾಂಪಲ್‍ಗಳ ವರದಿ ಬಾಕಿ
ಇದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ. ಜೊತೆಗೆ ಪಾಸಿಟಿವ್
ಪ್ರಕರಣಕ್ಕೆ ಸಂಬಂಧಪಟ್ಟವರ ಪ್ರಾಥಮಿಕ ಹಾಗೂ ದ್ವಿತೀಯ
ಸಂಪರ್ಕದಲ್ಲಿದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು
ಮಾಹಿತಿ ನೀಡಿದರು.
ಜಿಲ್ಲಾ ಹೋಟೆಲ್ ಸಂಘದ ಅಧ್ಯಕ್ಷರಾದ ಅಣಬೇರು ನಾಗರಾಜ
ಮಾತನಾಡಿ, ಜಿಲ್ಲಾಡಳಿತ ನಮಗಾಗಿ ನಮ್ಮ ಉಳಿವಿಗಾಗಿ ಹಗಲು
ರಾತ್ರಿಯಿಡಿ ಕಷ್ಟಪಟ್ಟು ಕೆಲಸ ಮಾಡುತ್ತಿದೆ. ಇದಕ್ಕಾಗಿ ಹೋಟೆಲ್
ಸಂಘದ ಹಾಗೂ ಜಿಲ್ಲೆಯ ನಾಗರಿಕರ ಪರವಾಗಿ ಧನ್ಯವಾದ
ತಿಳಿಸಲು ಇಷ್ಟಪಡುತ್ತೇನೆ ಎಂದರು.
ಸದಾ ನಿಮ್ಮ ಜೊತೆ ಒಗ್ಗಟ್ಟಾಗಿ ಇರುತ್ತೇವೆ. ನಿಮ್ಮ ಕೆಲಸಕ್ಕೆ
ಕೈ ಜೋಡಿಸುತ್ತೇವೆ. ಆದರೆ ಲಾಡ್ಜ್ ಹಾಗೂ ಹೋಟೆಲ್‍ಗಳಲ್ಲಿ
ಕೆಲಸಗಾರರಿಲ್ಲ. ಹಾಗಾಗಿ ತರಬೇತಿ ಹೊಂದಿದ್ದವರನ್ನು ಹಾಗೂ
ಪೊಲೀಸ್ ಸಿಬ್ಬಂದಿಯನ್ನು ನೇಮಿಸಬೇಕು. ಅವರಿಗೆ ನಮ್ಮ
ಸಂಪೂರ್ಣ ಸಹಕಾರ ನೀಡುತ್ತೇವೆ. ಜೊತೆಗೆ ಲಾಡ್ಜ್ ಹಾಗೂ
ಹೋಟೆಲ್‍ಗಳಿಗೆ ತೆರಳಲು ಮಾಲೀಕರಿಗೆ ಪಾಸ್ ವ್ಯವಸ್ಥೆ
ಮಾಡಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್
ಮುದಜ್ಜಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ನಜ್ಮಾ,
ಜಿಲ್ಲಾ ಹೋಟೆಲ್ ಸಂಘದ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *