ದಾವಣಗೆರೆ,ಮೇ 7- ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ಆಗಿರುವ ಲಾಕ್ ಡೌನ್ ಪರಿಣಾಮ ಟೈಲರ್ (ದರ್ಜಿ)ಗಳಿಗೆ ಮಾಸಿಕ ರೂ. 5 ಸಾವಿರ ರೂ. ಪ್ಯಾಕೇಜ್ ನೀಡುವಂತೆ ಅಂತರ ರಾಷ್ಟ್ರೀಯ ಭಾವಸಾರ ಮಹಾಸಭಾದ ಅಧ್ಯಕ್ಷರೂ ಆಗಿರುವ ರಾಜ್ಯ ಬಿಜೆಪಿ ಸ್ಲಂ ಮೋರ್ಚಾ ಅಧ್ಯಕ್ಷ ಜಯಪ್ರಕಾಶ್ ಅಂಬರ್ ಕರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಶ್ರಮಿಕ ವರ್ಗದವರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ 1600 ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕ್ರಮವನ್ನು ಸ್ವಾಗತಿಸಿರುವ ಅಂಬರ್ ಕರ್, ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ಭಾವಸಾರ ಸಮಾಜದ ಕುಲ ಕಸುಬಾದ ಟೈಲರಿಂಗ್ ವೃತ್ತಿಯನ್ನೇ ಸಮಾಜದ ಬಹುತೇಕ ಜನರು ಅವಲಂಬಿಸಿದ್ದಾರೆ. ಕಾರಣ, ಸವಿತಾ ಸಮಾಜ, ಮಡಿವಾಳ ಸಮಾಜದಂತಿರುವ ಭಾವಸಾರ ಸಮಾಜದ ಟೈಲರ್ (ದರ್ಜಿ) ಗಳನ್ನೂ ಈ ಪ್ಯಾಕೇಜ್ ನಲ್ಲಿ ಸೇರ್ಪಡೆ ಮಾಡುವುದರ ಮೂಲಕ ಅವರನ್ನು ಮಾನಸಿಕವಾಗಿ ಚೇತೋಹಾರಿಯನ್ನಾಗಿಸುವಂತೆ ಜಯಪ್ರಕಾಶ್ ಸರ್ಕಾರವನ್ನು ವಿನಂತಿಸಿದ್ದಾರೆ.

ಭಾವಸಾರ ಸಮಾಜದವರು ದೇಶಾದ್ಯಂತ ಸುಮಾರು 1 ಕೋಟಿಯಷ್ಟಿದ್ದು, ಕರ್ನಾಟಕದ ಪ್ರತಿ ಗ್ರಾಮಗಳಲ್ಲೂ ಸೇರಿದಂತೆ ರಾಜ್ಯದಲ್ಲಿ ಸುಮಾರು 30 ಲಕ್ಷದಷ್ಟಿದ್ದಾರೆ. ಜಾಗತಿಕರಣದ ಭರಾಟೆಯಲ್ಲಿ ರೆಡಿಮೇಡ್ ಮಾರುಕಟ್ಟೆ ವಿಸ್ತರಣೆಗೊಂಡರೂ ಧೃತಿಗೆಡದೇ ತಮ್ಮ ಕಲಾ ನೈಪುಣ್ಯತೆಯಿಂದ ಮೆಚ್ಚಿನ ಗ್ರಾಹಕರಿಗೆ ಸಂತೃಪ್ತಿಪಡಿಸುತ್ತಲೇ ಬದುಕಿನ ಬಂಡಿ ದೂಡುತ್ತಿದ್ದಾರೆ. ಸುಮಾರು 10 ಲಕ್ಷ ಕಾಯಕ ಜೀವಿಗಳು ಬಟ್ಟೆ ಹೊಲಿಯುವ ಬದುಕನ್ನೇ ನೆಚ್ಚಿಕೊಂಡಿದ್ದು, ಲಾಕ್ ಡೌನ್ ಪರಿಣಾಮ, ಕಳೆದ 2 ತಿಂಗಳಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ ಎಂದು ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಕೈಯಲ್ಲಿ ಕೆಲಸವಿಲ್ಲದಿದ್ದರೂ ಸುಮ್ಮನೆ ದಿನ ಕಳೆಯಲು ಇಷ್ಟಪಡದ ಟೈಲರ್ ಗಳು (ದರ್ಜಿ) ಬಡ ಜನರಿಗೆ, ಅಸಹಾಯಕರಿಗೆ ತಮ್ಮಲ್ಲಿ ಉಳಿದ ತುಂಡು – ತುಂಡು ಬಟ್ಟೆಗಳನ್ನು ಅಂದವಾಗಿ ಜೋಡಿಸಿ ಮಾಸ್ಕ್ ಗಳನ್ನು ತಯಾರಿಸಿ ವಿತರಿಸುವುದರ ಮೂಲಕ ಸಾರ್ವಜನಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂಬುದನ್ನು ಜಯಪ್ರಕಾಶ್ ಅಂಬರ್ ಕರ್ ಅವರು ಸರ್ಕಾರಕ್ಕೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಕೂಡಲೇ ಟೈಲರ್ (ದರ್ಜಿ) ಗಳಿಗೆ ವಿಶೇಷ ಪ್ಯಾಕೇಜ್ ನಲ್ಲಿ ಪರಿಹಾರ ನೀಡಲು ಆದೇಶ ಹೊರಡಿಸುವಂತೆ ಯಡಿಯೂರಪ್ಪ ಅವರನ್ನು ಜಯಪ್ರಕಾಶ್ ಕೋರಿದ್ದಾರೆ.

Leave a Reply

Your email address will not be published. Required fields are marked *