ದಾವಣಗೆರೆ ಮೇ.12
ಜಿಲ್ಲೆಯ ಎಲ್ಲಾ ಬಗೆಯ ವ್ಯಾಪಾರ ವಹಿವಾಟು ನಡೆಸುವ
ವರ್ತಕರು ತಮ್ಮ ವ್ಯಾಪಾರ ವಹಿವಾಟು ಹಾಗೂ ಕಾರ್ಮಿಕರ,
ದಿನಗೂಲಿ ಕೆಲಸಗಾರರ ಹಿತದೃಷ್ಟಿಯಿಂದ ಬೆಳಗಿನಿಂದ ಸಂಜೆವರೆಗೆ
ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕು ಹಾಗೂ ಕೆಲ
ಜಿಲ್ಲೆಗಳಲ್ಲಿ ಇದೇ ರೀತಿ ಇದ್ದು ನಮ್ಮ ಜಿಲ್ಲೆಯಲ್ಲಿಯೂ ಬೆಳಗಿನಿಂದ
ಸಂಜೆವರೆಗೆ ವ್ಯಾಪಾರಕ್ಕೆ ಅನುಮತಿ ಕೊಡಬೇಕೆಂದು
ಜಿಲ್ಲಾಡಳಿತವನ್ನು ಒತ್ತಾಯಿಸಲಾಯಿತು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಇಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆದ
ಸಭೆಯಲ್ಲಿ ಮೆಡಿಕಲ್ ಶಾಪ್ ಅಂಗಡಿಗಳ ಸಂಘದ ಪದಾಧಿಕಾರಿ
ಸಪಟ್‍ಲಾಲ್ ಮಾತನಾಡಿ, ಹೊರಗಿನಿಂದ ಬರುವ ಔಷಧಿಗಳ
ಅನ್‍ಲೋಡಿಂಗ್ ಬಹಳ ಹೊತ್ತು ಆಗುತ್ತದೆ. ಬಂದಂತಹ ಸ್ಟಾಕ್‍ನ್ನು
ಪ್ರತಿದಿನ ಅಪ್‍ಲೋಡ್ ಮಾಡಬೇಕು. ಪ್ರತಿದಿನ ಅಪ್‍ಲೋಡ್
ಮಾಡದಿದ್ದರೆ ಅಫೆನ್ಸ್ ಆಗುತ್ತದೆ. ಹಾಗಾಗಿ ಕಷ್ಟ ಆಗುತ್ತ್ತಿದೆ.
ಇನ್ನು 1 ಗಂಟೆಗೆ ಬಾಗಿಲು ಮುಚ್ಚುವುದರಿಂದ ಜನ ಮೈಮೇಲೆ
ಬೀಳುತ್ತಾರೆ. ಈ ಅವಧಿಯಲ್ಲಿ ಅವರನ್ನು ನಿಯಂತ್ರಿಸಿ ಸ್ಟಾಕ್ ಎಲ್ಲಾ
ಸೆಟಲ್ ಮಾಡೋದು ಕಷ್ಟ ಆಗಲಿದ್ದು ಬೆಳಗಿನಂದ ಸಂಜೆವರೆಗೆ
ಮೆಡಿಕಲ್ ಶಾಪ್‍ಗಳು ಓಪನ್ ಇರಲು ಅವಕಾಶ ನೀಡಬೇಕೆಂದು
ಹಾಗೂ ಬೆಳಗಾವಿ ಜಿಲ್ಲೆಯಲ್ಲಿಯೂ ನಮ್ಮಂತೆಯೇ ಹೆಚ್ಚು
ಕೇಸ್‍ಗಳಿದ್ದರೂ ಅಲ್ಲಿಯ ಜಿಲ್ಲಾಡಳಿತ ಬೆಳಗಿನಿಂದ ಸಂಜೆವರೆಗೆ
ಅವಕಾಶ ನೀಡಿದೆ. ಹಾಗಾಗಿ ತಮ್ಮ ಷರತ್ತುಗಳೇನಿವೆಯೋ
ಅವುಗಳನ್ನು ಹಾಕಿ ನಮಗೆ ದಿನಪೂರ್ತಿ ವ್ಯಾಪಾರ ಮಾಡಲು
ಅವಕಾಶ ನೀಡಿ ಎಂದರು.
ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಂಘದ ಪದಾಧಿಕಾರಿ ಮಾತನಾಡಿ
ನಮ್ಮ ಪ್ರೆಸ್‍ಗಳು ಕಾರ್ಯನಿರ್ವಹಿಸುತ್ತಿದ್ದರೆ ಮಾತ್ರ ಉತ್ತಮ
ಸ್ಥಿತಿಯಲ್ಲಿ ಇರುತ್ತವೆ. ಇಲ್ಲದಿದ್ದರೆ ಮೆಷಿನ್ ಒಣಗುತ್ತವೆ. ಸದ್ಯಕ್ಕೆ
ಅವುಗಳಿಗೆ ಸಾಲ್ವೆಂಟ್ ಹೊಡಿದಿದ್ದೀವಿ. ಇದರಿಂದ ಮಷಿನ್ ಹೆಡ್ ಹಾಳಾಗಲಿವೆ.

ಒಂದು ಹೆಡ್ ರೂ.4 ರಿಂದ 5 ಲಕ್ಷ. ಮಷಿನ್‍ಗಳಿಗೆ ರೂ.10 ರಿಂದ 12 ಲಕ್ಷ
ಆಗುತ್ತದೆ. ಹಾಗಾಗಿ ಮತ್ತೆ ಅವುಗಳನ್ನು ಈ ರೀತಿ
ಮಾಡಿಸಬೇಕಾದರೆ ಇಂಜಿನಿಯರ್‍ಗಳು ಬೆಂಗಳೂರಿನಿಂದ ಬರಬೇಕು.
ಸದ್ಯಕ್ಕೆ ಅಲ್ಲಿಂದ ಬರುವ ಸ್ಥಿತಿ ಇಲ್ಲ. ಹಾಗಾಗಿ ನಮ್ಮ ಪ್ರೆಸ್‍ಗಳಿಗೆ
ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಿ ಎಂದರು.
ತೆರಿಗೆ ಸಲಹೆಗಾರರ ಸಂಘದ ಹಾಲೇಶ್ ಮಾತನಾಡಿ, ಈ ತಿಂಗಳ 31
ರೊಳಗೆ ವೃತ್ತಿ ತೆರಿಗೆ ಪಾವತಿಸಬೇಕಾಗಿದೆ. ಇಲ್ಲದಿದ್ದರೆ ದಂಡ
ಬೀಳುತ್ತದೆ. ದಾವಣಗೆರೆ ಜಲ್ಲೆಯಿಂದಲೇ ರೂ.25 ಕೋಟಿ ಜಿಎಸ್‍ಟಿ
ಸಂಗ್ರಹವಾಗಲಿದೆ. ಸಮಯಕ್ಕೆ ಸರಿಯಾಗಿ ಜಿಎಸ್‍ಟಿ ಕಟ್ಟದಿದ್ದರೆ ಶೇ.9
ಬಡ್ಡಿ ಬೀಳಲಿದೆ ಹಾಗಾಗಿ ತೆರಿಗೆ ಸಲಹೆಗಾರರಿಗೆ ಅನುಕೂಲ ಮಾಡಿಕೊಡಿ
ಎಂದರು.
ಅಜ್ಜಂಪುರ ಶಂಭಣ್ಣ ಮಾತನಾಡಿ ಬೇರೆ ಜಿಲ್ಲೆಗಳಂತೆ
ನಮಗೂ ಅವಕಾಶ ಮಾಡಿಕೊಡಿ. ಅನಗತ್ಯ ಬ್ಯಾರಿಕೇಡ್ ತೆಗೆಯಿರಿ.
ಕೆಲಸ ಕಾರ್ಯಗಳು ಸ್ಥಗಿತಗೊಂಡು ಕೂಲಿ ಕಾರ್ಮಿಕರಿಗೆ
ಕಷ್ಟವಾಗಿದೆ. ತೆರಿಗೆದಾರರೂ ಸಂಬಳ ಕೊಡುವುದು
ಕಷ್ಟವಾಗಿದೆ ಎಂದರು.
ಟೆಕ್ಸ್‍ಟೈಲ್ಸ್ ಸಂಘದ ವೃಷಬೇಂದ್ರಪ್ಪ ಮಾತನಾಡಿ, ವಾರದಲ್ಲಿ
ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಮಾಡಲು
ಅವಕಾಶ ಮಾಡಿಕೊಡಿ. ಎಲ್ಲಾ ಇಂಡಸ್ಟ್ರಿಯಲ್ ಏರಿಯಾಗಳಿಗೂ 6
ನಿಬಂಧನೆಗಳನ್ನು ಸರ್ಕಾರ ತಿಳಿಸಿದೆ. ಆ ನಿಬಂಧನೆಗಳಂತೆ ಕೆಲಸ
ಮಾಡುತ್ತೇವೆ. ಕಂಟೈನ್‍ಮೆಂಟ್ ಏರಿಯಾ ಹೊರತುಪಡಿಸಿ
ಇತರೆಡೆ ಇರುವವರಿಗೆ ಕೆಲಸ ಮಾಡಲು ಅವಕಾಶ ಕೊಡಿ. ಆ
ನೌಕರರ ವೈದ್ಯಕೀಯ ತಪಾಸಣೆ ಸರ್ಟಿಫಿಕೇಟ್ ಕೊಡುತ್ತೇವೆ
ಎಂದರು.
ಕಾಸಿಯಾ ಸಂಘದ ಮಂಜುನಾಥ್ ಮಾತನಾಡಿ, ಟೆಕ್ಸ್‍ಟೈಲ್ ಉದ್ಯಮ
ಜಿಲ್ಲೆಯಲ್ಲಿ 5 ರಿಂದ 6 ಸಾವಿರ ಜನಕ್ಕೆ ಉದ್ಯೋಗ ನೀಡಿದೆ. ಈ ನೌಕರರ
ಜೀವನ ನಿರ್ವಹಣೆ ಕಷ್ಟವಾಗಿದ್ದು ಜಿಲ್ಲೆಯಲ್ಲಿ ಲಾಕ್‍ಡೌನ್
ಸಡಿಲಿಸಬೇಕೆಂದರು.
ಇಂಡಸ್ ಆಗ್ರೋ ಪ್ರತಿನಿಧಿ ಗಿರೀಶ್ ಮಾತನಾಡಿ, ನಮ್ಮ
ಕಂಪೆನಿಯಿಂದ ಮಿಡಿ ಸೌತೆಯನ್ನು ರೈತರಿಂದ ಖರೀದಿ ಮಾಡುತ್ತಿದ್ದು,
ರೂ.100 ಕೋಟಿ ವಹಿವಾಟು ಇದೆ. 150 ಕೆಲಸಗಾರರಿಗೆ ಉದ್ಯೋಗ
ನೀಡಿದ್ದೇವೆ. ಈಗಾಗಲೇ 300 ಎಕರೆಯಲ್ಲಿ ಮಿಡಿ ಸೌತೆ ಕಟಾವಿಗೆ
ಬಂದಿದ್ದು ಪ್ರತಿನಿತ್ಯ 50 ರಿಂದ 60 ಟನ್ ಪ್ರೊಸೆಸ್ ಆಗಿ ವಿದೇಶಿ
ಮಾರುಕಟ್ಟೆಗೆ ರಫ್ತಾಗಲಿದೆ. ಒಂದು ದಿನ ಉಳಿದರೆ ಮತ್ತೆ
ನಾಳೆಯ ಉತ್ಪನ್ನವೂ ಸೇರಿಕೊಂಡು ಪ್ರೊಸೆಸಿಂಗ್
ಕಷ್ಟವಾಗುತ್ತದೆ. ಆದ್ದರಿಂದ ಬೆಳಗಿನಿಂದ ಸಂಜೆವರೆಗೆ ಕೆಲಸ
ಮಾಡಲು ಅವಕಾಶ ಕೊಡಿ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಮಾತನಾಡಿ ಎಪಿಎಂಸಿ
ಯಲ್ಲಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದ್ದು ರೈತರಿಗೆ
ಯಾವುದೇ ರೀತಿ ತೊಂದರೆ ಆಗಿಲ್ಲ. 50 ರಿಂದ 55 ಕೋಟಿ ವಹಿವಾಟು
ನಡೆದಿದೆ. ದೂರದ ಊರುಗಳಿಂದ ತರಕಾರಿ ಬರುವುದು ಸ್ವಲ್ಪ

ತಡವಾಗುತ್ತಿದ್ದು, ಸಣ್ಣ ಪುಟ್ಟ ತೊಂದರೆಗಳಾಗುತ್ತಿವೆ
ಎಂದರು.
ಶಾಸಕ ಎಸ್.ಎ. ರವೀಂದ್ರನಾಥ ಮಾತನಾಡಿ, ಜಿಲ್ಲಾಡಳಿತದ ಒಳ್ಳೇ
ಕೆಲಸಕ್ಕೆ ಎಲ್ಲರೂ ಸಹಕರಿಸಿ. ಸರ್ಕಾರದ ಆದೇಶದಂತೆ ಅವರು
ಕೆಲಸ ಮಾಡಬೇಕಾಗುತ್ತದೆ. ಹಾಗೂ ಕೆಲವೊಮ್ಮೆ ಸ್ಥಳೀಯ
ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.
ಈ ನಡುವೆ ರೈತರು ಸಾವಿರಾರು ರೂಪಾಯಿ ಸಾಲ ಮಾಡಿ ಬೀಜ,
ಗೊಬ್ಬರ ಖರೀದಿಸಿ ಭತ್ತ ಬೆಳೆದಿದ್ದಾರೆ. ಅವರೆಡೆಗೆ ಗಮನ
ಹರಿಸಬೇಕು. ವರ್ತಕರು ರೈತರ ಬಗ್ಗೆ ಚಿಂತನೆ ಮಾಡಬೇಕು.
ಕೆಲವೆಡೆ ಟ್ರಾಕ್ಟರ್‍ನಲ್ಲಿ ಹೋಗುವ ರೈತರನ್ನು ಪೊಲೀಸರು
ತಡೆ ಹಿಡಿಯುತ್ತಿದ್ದಾರೆ. ಹಾಗಾಗಬಾರದು. ಎಸ್‍ಪಿಯವರು
ಪೊಲೀಸರಿಗೆ ತಿಳಿಸಿ ರೈತರಿಗೆ ತೊಂದರೆಯಾಗದಂತೆ
ನೋಡಿಕೊಳ್ಳಬೇಕು ಎಂದರು.
ಹರಪನಹಳ್ಳಿಯ ಬಳ್ಳಾರಿ ಹಾಗೂ ದಾವಣಗೆರೆ ಗಡಿ
ಹಂಚಿಕೊಂಡಿರುವುದರಿಂದ ಈ ರೈತರ ಜಮೀನುಗಳು ಎರಡೂ
ಕಡೆ ಸೇರಿಕೊಂಡಿವೆ. ಹಾಗಾಗಿ ಅವರಿಗೆ ತೊಂದರೆ ಆಗದಂತೆ ಕೆಲಸ
ಮಾಡಿ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಇಷ್ಟು ದಿನಗಳ ಲಾಕ್‍ಡೌನ್‍ಗೆ ಸಹಕರಿಸಿದ್ದೀರಿ. ಇದೊಂದು ಜಾಗತಿಕ
ತುರ್ತು ಪರಿಸ್ಥಿತಿಯಾಗಿದ್ದು, ನಿಯಂತ್ರಣ ಕಷ್ಟವಾಗಿದೆ.
ಕೆಲವೊಮ್ಮೆ ಒಳ್ಳೆಯದಕ್ಕಾಗಿ ಕಷ್ಟ ಅನುಭವಿಸಬೇಕಾಗುತ್ತದೆ.
ಇಲ್ಲದಿದ್ದರೆ ನಾವೆಲ್ಲ ನಶಿಸಿ ಹೋಗುತ್ತೇವೆ. ಪುಣ್ಯಕ್ಕೆ ನಮ್ಮ ದೇಶ
ಸಾಕಷ್ಟು ಸೇಫ್ ಝೋನ್‍ನಲ್ಲಿದೆ. ಈ ಹಿಂದೆ ಬಿಸಿಜಿ ಲಸಿಕೆ ಹಾಕಿದ್ದು
ನಮ್ಮಲ್ಲಿರುವ ದೇಹ ನಿರೋಧಕ ಶಕ್ತಿ ಹಾಗೂ ದೇವರ
ಆಶೀರ್ವಾದ ನಮ್ಮನ್ನು ಕಾಪಾಡುತ್ತಿದೆ. ಮೇ 4 ರವರೆಗೆ ಜಿಲ್ಲೆಯ
ಪರಿಸ್ಥಿತಿ ದೇಶದ ಪರಿಸ್ಥಿತಿಯಂತೆಯೇ ಇತ್ತು. ಆದರೆ ಮೇ 4ರ
ನಂತರ ಕೆಲವೊಂದು ಕಠಿಣ ನಿರ್ಧಾರ ತೆಗೆದುಕೊಂಡಿದ್ದರಿಂದ
ಲಾಕ್‍ಡೌನ್ ಯಶಸ್ವಿಯಾಯಿತು. ವೈರಸ್ ತಡೆಯಲು ಆಗುವುದಿಲ್ಲ.
ಅದು ಈ ಹಿಂದೆಯೂ ಇತ್ತು. ಈಗಲೂ ಇದೆ. ಮುಂದೆಯೂ
ಇರುತ್ತದೆ. ಹಾಗಾಗಿ ನಾವೇ ಬದಲಾಗಿ ಅದಕ್ಕೆ ಹೊಂದಿಕೊಳ್ಳಬೇಕು.
ವೈಯಕ್ತಿಕ ಆರೋಗ್ಯದ ಬಗ್ಗೆ ಗಮನ ಕೊಡಬೇಕು.
ದಾವಣಗೆರೆಯಲ್ಲಿ ಸಂಭವಿಸಿರುವ ಎಲ್ಲಾ ಪ್ರಕರಣಗಳು ಕೆಲವೇ
ಕುಟುಂಬಗಳಿಗೆ ಸಂಬಂಧಿಸಿವೆ. ಬೇರೆ ಭಾಗದಲ್ಲಿ ಕಂಡುಬಂದಿಲ್ಲ.
ಹಾಗಾಗಿ ನೀವು ಮತ್ತು ನಾವುಗಳು ಲಾಕ್‍ಡೌನ್‍ನಿಂದ ಅನುಭವಿಸಿದ
ಕಷ್ಟಗಳಿಂದ ವೈರಸ್‍ನಿಂದ ಬಚಾವಾಗಿದ್ದೇವೆ ಎಂದ ಅವರು ಕೆಲವು
ನಿರ್ಧಾರಗಳನ್ನು ಸ್ಥಳೀಯವಾಗಿ
ತೆಗೆದುಕೊಳ್ಳಬೇಕಾಗಿರುತ್ತದೆ. ದಾವಣಗೆರೆ ನಗರದಲ್ಲಿರುವ
ವೈನ್ ಶಾಪ್‍ಗಳನ್ನು ಒಮ್ಮೆಲೇ ತೆರೆದು ಜನ ಬಂದಿದ್ದರೆ,
ಪ್ರತಿನಿತ್ಯ ನಾಲ್ಕರಿಂದ ಐದು ಸಾವಿರ ಜನರು ಸೇರುತ್ತಿದ್ದರು.
ಅವರುಗಳನ್ನು ನಿಯಂತ್ರಿಸುವದೇ ಕಷ್ಟ ಆಗುತ್ತಿತ್ತು.
ಹಾಗಾಗಿ ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು
ತೆಗೆದುಕೊಳ್ಳಲಾಗಿದೆ ಎಂದರು.

ಜಿಲ್ಲೆಯ ವರ್ತಕರ ಮನವಿ ಆಲಿಸಿದ ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಪ್ರತಿಕ್ರಿಯಿಸಿ ನಿಮ್ಮ ಅನಿಸಿಕೆಗಳನ್ನು ಆಲಿಸಿದ್ದೇನೆ.
ಸಮಸ್ಯೆಗಳ ಅರಿವು ನಮಗೂ ಇದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ
ಗಮನಕ್ಕೂ ತರುತ್ತೇನೆ. ಹಾಗೂ ಇಂದು ಸಂಜೆ
ಸರ್ಕಾರದೊಂದಿಗೆ ಚರ್ಚಿಸಿ ಸರ್ಕಾರದ ನಿಯಮಾವಳಿಗಳು ಹಾಗೂ
ನಿಮ್ಮ ವ್ಯವಹಾರ ವಹಿವಾಟಿಗೆ ಯಾವುದಕ್ಕೂ ಧಕ್ಕೆಯಾಗದಂತೆ
ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆಶಾ
ಮನೋಭಾವದಿಂದ ಇರಿ ಎಂದರು.
ಸಭೆಯಲ್ಲಿ ಮಾಜಿ ಶಾಸಕರಾದ ಯಜಮಾನ್ ಮೋತಿವೀರಣ್ಣ, ಜಿಲ್ಲಾ
ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ನಗರಾಭಿವೃದ್ದಿ
ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಜಿಲ್ಲಾ ವರ್ತಕರ ಸಂಘದ
ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *