ದಾವಣಗೆರೆ ಮೇ.13
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಗರದಲ್ಲಿ
ಪ್ರಸ್ತುತ ಇರುವ ಜಾಲಿನಗರ, ಬಾಷಾನಗರ, ಇಮಾಮ್‍ನಗರ,
ಬೇತೂರು ರಸ್ತೆ, ಎಸ್‍ಪಿಎಸ್ ನಗರ, ಶಿವನಗರ ಮತ್ತು ಕೆಟಿಜೆ
ನಗರ ಈ ಏಳು ಕಂಟೈನ್‍ಮೆಂಟ್ ಝೋನ್‍ಗಳ ಇನ್ಸಿಡೆಂಟ್
ಕಮಾಂಡರ್‍ಗಳ ಸಭೆ ನಡೆಯಿತು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್
ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಸಂಬಂಧಿಸಿದ
ಕಂಟೈನ್‍ಮೆಂಟ್ ಝೋನ್‍ಗೆ ಆಯಾ ಇನ್ಸಿಡೆಂಟ್
ಕಮಾಂಡರ್‍ಗಳೇ ಸಂಪೂರ್ಣ ಜವಾಬ್ದಾರರು ಮತ್ತು ಅಧಿಕಾರ
ಹೊಂದಿದ್ದು, ಅಗತ್ಯ ವಸ್ತುಗಳು, ಸಕ್ರಿಯ ಸರ್ವೇಕ್ಷಣೆ
ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ನಿಯಮಾನುಸಾರ
ಒದಗಿಸುವಂತೆ ಸೂಚನೆ ನೀಡಿದರು. ಹಾಗೂ ಕಂಟೈನ್‍ಮೆಂಟ್
ಝೋನ್‍ಗಳಲ್ಲಿನ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ
ನಿರ್ದೇಶನಗಳನ್ನು ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಇಂದಿನ ರಾಜ್ಯ ಮಟ್ಟದ
ವಿಡಿಯೋ ಕಾನ್ಫರೆನ್ಸ್‍ನಲ್ಲಿ ಜಿಲ್ಲಾ ಚಿಗಟೇರಿ ಕೋವಿಡ್ ಆಸ್ಪತ್ರೆಯಲ್ಲಿ
20 ವರ್ಷದ ಯುವತಿ ಹೃದ್ರೋಗದಿಂದ ಮತ್ತು ಕೋವಿಡ್ ನಿಂದ
ಬಳಲುತ್ತಿರುವ ಯುವತಿಗೆ ಚಿಗಟೇರಿ ಮತ್ತು ಇತರೆ ತಜ್ಞ
ವೈದ್ಯರು ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸರ್ಕಾರದ ಮುಖ್ಯ
ಕಾರ್ಯದರ್ಶಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ನಮ್ಮ ಜಿಲ್ಲಾ
ಆಸ್ಪತ್ರೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಈ ವೇಳೆ ಜಿ ಪಂ ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಕೋವಿಡ್ ನೋಡಲ್
ಅಧಿಕಾರಿ ಪ್ರಮೋದ್ ನಾಯಕ್, ಏಳು ಕಂಟೈನ್‍ಮೆಂಟ್
ಝೋನ್‍ಗಳ ಇನ್ಸಿಡೆಂಟ್ ಕಮಾಂಡರ್‍ಗಳು ಹಾಜರಿದ್ದರು.
(ಫೋಟೊ ಇದೆ)
ಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ
ದಾವಣಗೆರೆ ಮೇ.13 (ಕರ್ನಾಟಕ ವಾರ್ತೆ)-
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮೇ 4 ರಂದು ಜಾರಿ
ಮಾಡಲಾಗಿದ್ದ ಮದ್ಯ ನಿಷೇಧ ಆದೇಶವನ್ನು
ಹಿಂಪಡೆಯಲಾಗಿರುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿ ಅಬಕಾರಿ
ಆಯುಕ್ತಾಲಯದ ಆದೇಶದಂತೆ ಹಾಲಿ ಮುಚ್ಚಲಾಗಿರುವ ಸಿಎಲ್-4,
ಸಿಎಲ್-7 ಮತ್ತು ಸಿಎಲ್-9 ಸನ್ನದುಗಳನ್ನು ಸಿಎಲ್-2 ಸನ್ನದುಗಳ
ರೀತಿಯಲ್ಲಿ ಮೇ 17 ರವರೆಗೆ ಹಾಲಿ ಇರುವ ಮದ್ಯ/ಬಿಯರ್
ದಾಸ್ತಾನು ಖಾಲಿ ಆಗುವವರೆಗೆ ಅಥವಾ ಮೇ17 ರವರೆಗೆ
ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ
ಕಾರ್ಯನಿರ್ವಹಿಸಲು ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ
ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ಆದೇಶವು ಜಿಲ್ಲಾಡಳಿತವು ಘೋಷಿಸಿರುವ ಕಂಟೈನ್‍ಮೆಂಟ್
ಝೋನ್‍ಗಳಲ್ಲಿ ಇರುವಂತಹ ಸನ್ನದುಗಳಿಗೆ
ಅನ್ವಯವಾಗುವುದಿಲ್ಲ ಮತ್ತು ಕಂಟೈನ್‍ಮೆಂಟ್
ಝೋನ್‍ಗಳಲ್ಲಿ ಮದ್ಯ ಮಾರಾಟ ಸನ್ನದುಗಳು ಕಾರ್ಯ
ನಿರ್ವಹಿಸುವಂತಿಲ್ಲ.
ಕಾರ್ಯನಿರ್ವಹಿಸುವ ಸನ್ನದುಗಳು ಆದೇಶಿತ ಅವಧಿಯಲ್ಲಿ
ಬೆಳಿಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ಮಾತ್ರವೇ ಮದ್ಯ
ಮಹಿವಾಟನ್ನು ನಡೆಸುವುದು. ಉಳಿದಂತೆ ರೆಸ್ಟೋರೆಂಟ್‍ನಲ್ಲಿ
ಕೇವಲ ಪಾರ್ಸಲ್ ರೂಪದಲ್ಲಿ ಮಾತ್ರ ನೀಡಲು ಅನುಮತಿ
ನೀಡಲಾಗಿದೆ.
ಸನ್ನದು ಮಳಿಗೆಯಲ್ಲಿ ಕೇವಲ 5 ಜನರು ಮಾತ್ರ
ಗ್ರಾಹಕರು ಇರುವಂತೆಯು ಹಾಗೂ ಅವರುಗಳು ಸಾಮಾಜಿಕ
ಅಂತರವಾದ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಕಾಪಾಡಿಕೊಳ್ಳುವುದು
ಸೇರಿದಂತೆ ಇತರೆ ಷರತ್ತುಗಳನ್ನು ಅನುಸರಿಸಬೇಕೆಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.