ದಾವಣಗೆರೆ ಮೇ.14
ದಾವಣಗೆರೆಯಲ್ಲಿ ಇಂದು ಹೊಸದಾಗಿ 3 ಕೊರೊನಾ ಪಾಸಿಟಿವ್
ಪ್ರಕರಣಗಳು ವರದಿಯಾಗಿದ್ದು, ಈ ಸೋಂಕಿತರ ಪ್ರಾಥಮಿಕ
ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ,
ಪ್ರತ್ಯೇಕವಾಗಿರಿಸುವ ಹಾಗೂ ಅವರ ಗಂಟಲುದ್ರವ
ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಕ್ರಮ
ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಜಿಲ್ಲಾಡಳಿತ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಟಿಯನ್ನು
ಉದ್ದೇಶಿಸಿ ಮಾತನಾಡಿದ ಅವರು ರೋಗಿ ಸಂಖ್ಯೆ 960 ಇವರು 40
ವರ್ಷದ ಪುರುಷ ಆಗಿದ್ದು ರೋಗಿ ಸಂಖ್ಯೆ 852 ರ ಮನೆ ಮೇಲೆ
ಬಾಡಿಗೆ ಇರುವವರಾಗಿದ್ದಾರೆ. ಇವರ 10 ಜನ ಪ್ರಾಥಮಿಕ ಮತ್ತು 21
ಜನ ದ್ವಿತೀಯ ಸಂಪರ್ಕಿತರನ್ನು ಈಗಾಗಲೇ ಐಸೋಲೇಟ್ ಮಾಡಿ
ಸ್ವಾಬ್ ಸಂಗ್ರಹ ಕಾರ್ಯ ನಡೆಯುತ್ತಿದೆ.
ರೋಗಿ ಸಂಖ್ಯೆ 975 ಇವರು 34 ವರ್ಷದ ಪುರುಷ ಆಗಿದ್ದು
ಇವರು ಕೆಟಿಜೆ ನಗರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಕರ್ತವ್ಯ
ನಿರ್ವಹಿಸಿದ್ದ ಟ್ರಾಫಿಕ್ ಪೊಲೀಸ್ ಪೇದೆಯಾಗಿದ್ದು ಇವರು ಈಗಾಗಲೇ
ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದರು. ಇವರ 9 ಜನ ಪ್ರಾಥಮಿಕ
ಮತ್ತು 32 ಜನ ದ್ವಿತೀಯ ಸಂಪರ್ಕಿತರನ್ನು
ಐಸೋಲೇಷನ್‍ನಲ್ಲಿರಿಸಿ ಇವರ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಇನ್ನು ರೋಗಿ ಸಂಖ್ಯೆ 976 ಇವರು 32 ವರ್ಷದ ಪುರುಷ
ಆಗಿದ್ದು ಇನ್‍ಫ್ಲುಯೆನ್ಸಾ ಲೈಕ್ ಇಲ್‍ನೆಸ್ ಅಂದರೆ ಶೀತ ಜ್ವರದಂತಹ
ಪ್ರಕರಣದವರಾಗಿದ್ದು ಇವರು ಈ ಹಿಂದೆ ಚಿಕನ್ ಬಿರಿಯಾನಿ ಅಂಗಡಿ
ನಡೆಸುತ್ತಿದ್ದರು. ಈಗ ಕೆಲವು ದಿನಗಳಿಂz ನಗರದ ಎಂಬಿಆರ್
ಟ್ರೇಡರ್ಸ್ ಇವರಿಂದ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಖರೀದಿಸಿ
ತಳ್ಳುಗಾಡಿಯಲ್ಲಿ ಹೈಸ್ಕೂಲ್ ಮೈದಾನದ ಸುತ್ತಮುತ್ತ
ಮತ್ತು ವಿನಾಯಕ ಮೆಡಿಕಲ್ಸ್ ಸುತ್ತಮುತ್ತ ಮಾರಾಟ
ಮಾಡುತ್ತಿದ್ದರೆಂದು ಹೇಳಿರುತ್ತಾರೆ. ಇವರ ಮನೆ ಪಿಜೆ
ಬಡಾವಣೆಯ ರೈತರ ಬೀದಿಯಲ್ಲಿದ್ದು ರೈತರ ಬೀದಿಯನ್ನು
ಕಂಟೈನ್‍ಮೆಂಟ್ ಝೋನ್ ಮಾಡಲು ಈಗಾಗಲೇ ಸರ್ವೇ
ಮಾಡಲಾಗಿದೆ. ಇವರಿಗೆ 8 ಜನ ಪ್ರಾಥಮಿಕ ಮತ್ತು 16 ಜನ ದ್ವಿತೀಯ
ಸಂಪರ್ಕಿತರನ್ನು ಗುರುತಿಸಿ ಐಸೋಲೇಟ್ ಮಾಡಿ ಸ್ವಾಬ್
ಸಂಗ್ರಹಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪ್ರಕರಣ
ದಾಖಲಾಗಿದ್ದು 2 ಗುಣಮುಖ, 4 ಸಾವು ಸಂಭಿಸಿದ್ದು 82 ಸಕ್ರಿಯ
ಪ್ರಕರಣಗಳಿವೆ. ಇಂದು ಒಟ್ಟು 385 ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಲಾಗಿದೆ. ಈವತ್ತು 160 ನೆಗೆಟಿವ್ ಎಂದು ವರದಿ ಬಂದಿದೆ. ಬಾಕಿ
545 ವರದಿ ಬರಬೇಕಿದ್ದು, ರೋಗಿ ಸಂಖ್ಯೆ 976 ಓಡಾಡಿದ ಬೀದಿ
ಬೀದಿಗಳಲ್ಲಿ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಪ್ರಯತ್ನ
ಮಾಡಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಪಿಜೆ
ಬಡಾವಣೆಯ ರೈತರ ಬೀದಿಯನ್ನು 8ನೇ ಕಂಟೈನ್‍ಮೆಂಟ್
ಝೋನ್ ಆಗಿಸಲು ಸರ್ವೇ ಕಾರ್ಯ ನಡೆದು ಬ್ಯಾರಿಕೇಡಿಂಗ್ ಆಗಿದೆ. ಈ
ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರವಾದ ಅಧ್ಯಯನ
ಅವಶ್ಯಕತೆ ಇದೆ. ಈ ರೋಗಿಗೆ ಹೇಗೆ ಸೋಂಕು
ತಗುಲಿರಬಹುದೆಂದು ಸ್ಟಡಿ ಮಾಡಬೇಕಿದೆ. ಎಲ್ಲಿಂದೆಲ್ಲ
ಪ್ರಮುಖವಾಗಿ ಬೆಳ್ಳುಳ್ಳಿ, ಈರುಳ್ಳಿ ಈತ ತರುತ್ತಿದ್ದ ಟ್ರೇಡರ್ಸ್‍ಗೆ
ಬರುತ್ತದೆ. ಎಪಿಎಂಸಿ ಅಥವಾ ಬೇರೆ ಪ್ರದೇಶಗಳಿಂದ ಬರುವ
ಕುರಿತಾಗಿ ಮೂಲ ಪತ್ತೆ ಹಚ್ಚಬೇಕಾಗಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಕಂಟೈನ್‍ಮೆಂಟ್
ಝೋನ್‍ನಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳಿಗೆ ಫೇಸ್‍ಶೀಲ್ಡ್,
ಟ್ರಿಪಲ್ ಲೇಯರ್ ಮಾಸ್ಕ್, ಗ್ಲೊವ್ಸ್, ಸ್ಯಾನಿಟೈಸರ್ ಇತರೆ
ಒದಗಿಸುತ್ತಿದ್ದೇವೆ. ಜಿಲ್ಲಾಡಳಿತ ಸಹ ಪಿಪಿಇ ಕಿಟ್‍ಗಳನ್ನು
ನೀಡುತ್ತಿದೆ. ವೈಯಕ್ತಿಕವಾಗಿ ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ಬಗ್ಗೆ ಹಾಗೂ ಮನೆಗೆ ಬಂದ ಮೇಲೆ ಹೇಗೆ
ಪ್ರೊಟೊಕಾಲ್ ನಿರ್ವಹಿಸಬೇಕೆಂದು ಅರಿವು ಮೂಡಿಸಲಾಗಿದೆ. ಹಾಗೂ
ಆಯುಷ್ ಇಲಾಖೆಯಿಂದ ಆರ್ಸ್ ಆಲ್ಬಾ ಎಂಬ ರೋಗನಿರೋಧಕ ಶಕ್ತಿ
ಹೆಚ್ಚಿಸುವ ಔಷಧಿಯನ್ನು ಜೊತೆಗೆ ಚ್ಯವನ್‍ಪ್ರಾಶ್ ನೀಡಲಾಗಿದೆ
ಎಂದು ಮಾಹಿತಿ ನೀಡಿದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿ, ಕೊರೊನಾ
ನಿಯಂತ್ರಣ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಪಾಲಿಕೆ ಉತ್ತಮ
ಸಹಯೋಗದಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದರು. ವರ್ತಕರು
ಕೊರೊನಾಗೆ ಕಾರಣವಾದರೆ ಅವರೇ ಹಣ ಭರಿಸಬೇಕಂಬ ಸುದ್ದಿ
ಹರಿದಾಡುತ್ತಿದೆ ಎಂಬ ಪ್ರಶ್ನೆಗೆ ಅವರು ಉತ್ತರಿಸಿ ಸ್ವಯಂ ಘೊಷಿತ
ಮುಚ್ಚಳಿಕೆ ನೀಡುವಂತೆ ತಿಳಿಸಿದ್ದೇವೆ ಹೊರತು ಹಣ ಭರಿಸುವಂತೆ
ತಿಳಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ
ಪ್ರಮೋದ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ
ಮಾತನಾಡಿದರು.