ದಾವಣಗೆರೆ ಮೇ.19
   ರೈಸ್‍ಮಿಲ್ ಮಾಲೀಕರು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು.
ಹಾಗೂ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ
ಖರೀದಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ತಿಳಿಸಿದರು.
   ಮಂಗಳವಾರ ಜಿಲ್ಲಾಡಳಿತ ಭವನದ ತುಂಗಭದ್ರಾ
ಸಭಾಂಗಣದಲ್ಲಿ ರೈಸ್‍ಮಿಲ್ ಮಾಲೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈಸ್‍ಮಿಲ್
ಮಾಲೀಕರೊಂದಿಗೆ ಜಿಲ್ಲಾಡಳಿತವಿದೆ. ನಿಮಗೆ ಯಾವುದೇ ರೀತಿಯ
ನಷ್ಟ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಬಗ್ಗೆ
ಮುತುವರ್ಜಿ ವಹಿಸುತ್ತೇವೆ. ಈ ಹಿನ್ನೆಲೆಯಲ್ಲಿ ರೈತರಿಗೆ
ನೀವುಗಳು ನೆರವಾಗಲು ಮುಂದೆ ಬರಬೇಕು. ರೈತರಿಗೆ
ನೆರವಾಗಲು ಇದೊಂದು ಒಳ್ಳೆಯ ಅವಕಾಶ ಎಂದರು.
   ಜಿಲ್ಲೆಯಲ್ಲಿ ರೈತರು ಸಾಕಷ್ಟು ಭತ್ತ ಬೆಳೆದಿದ್ದಾರೆ. ಜಿಲ್ಲೆಯ
ನಾಲ್ಕೈದು ಜನ ರೈಸ್‍ಮಿಲ್ಲರ್ಸ್ ರೈತರಿಂದ ಭತ್ತ ಖರೀದಿಗೆ
ಮುಂದಾಗಬೇಕು. ಉತ್ತಮವಾದ ನಂಬರ್ ಒನ್ ಭತ್ತವನ್ನೇ
ರೈತರಿಂದ ಖರೀದಿ ಮಾಡಿರಿ. ಕನಿಷ್ಟ ಬೆಂಬಲ ಬೆಲೆ ಯೋಜನೆಯು
ರೈತರ ಪರವಾಗಿ ಇರುವ ಯೋಜನೆಯಾಗಿದ್ದು, ನೀವು ಇದರಡಿ
ಯಾವುದೇ ರೀತಿಯಲ್ಲಿ ನಷ್ಟ  ಮಾಡಿಕೊಂಡು ಭತ್ತ ಖರೀದಿಸುವ
ಅವಶ್ಯಕತೆಯಿಲ್ಲ. ಬದಲಾಗಿ ರೈತರು ಬೆಳೆದಿರುವು ಉತ್ತಮ
ಗುಣಮಟ್ಟದ ಭತ್ತವನ್ನೇ ಖರೀದಿಸಿ. ಈ ರೀತಿಯ ಸಂಕಷ್ಟದ
ಸಂದರ್ಭದಲ್ಲಿ ರೈಸ್‍ಮಿಲ್ಲರ್ಸ್‍ಗಳಲ್ಲೇ ಯಾರಾದರೂ ಭತ್ತ

ಖರೀದಿಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನಾವು ನೀಡುತ್ತೇವೆ
ಎಂದು ಭರವಸೆ ನೀಡಿದರು.
    ಅತ್ಯಂತ ಕಷ್ಟದ ಕಾಲವಾದ ಕೊರೊನಾ ಲಾಕ್‍ಡೌನ್ ವೇಳೆಯಲ್ಲಿ
ರೈಸ್ ಮಿಲ್ಲರ್ಸ್ ಅನೇಕ ರೀತಿಯ ಪ್ರೋತ್ಸಾಹ, ಸಹಕಾರ
ನೀಡಿರುವುದು ಹೆಮ್ಮೆಯ ಸಂಗತಿ. ಅದಕ್ಕಾಗಿ ನಿಮ್ಮೆಲ್ಲರಿಗೂ
ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರೂ ಸೇರಿ
ಜಿಲ್ಲೆ ನಡೆಸಬೇಕು. ಒಬ್ಬೊಬ್ಬರು ಒಂದೊಂದು ಅಂಗವಾಗಿ ಕೆಲಸ
ಮಾಡಿದಾಗಲೇ ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯ
ಎಂದರು.
    ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ
ಮಂಟೆಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರೈತರ ಭತ್ತ ಖರೀದಿ
ಮಾಡಲಾಗುತ್ತಿದೆ. ವಿವಿಧ ತಾಲ್ಲೂಕುಗಳಲ್ಲಿ ಭತ್ತ ಮಾರಾಟ
ಮಾಡಲು 17 ಜನ ರೈತರು ನೋಂದಾಯಿಸಿಕೊಂಡಿದ್ದರು. ಆ
ಸಂದರ್ಭದಲ್ಲಿ ಕೊರೊನಾ ಸೋಂಕು ಇದ್ದ ಕಾರಣ ಒಂದು
ತಿಂಗಳು ಭತ್ತ ಖರೀದಿ ಮಾಡಲು ಆಗಿರಲಿಲ್ಲ. ಆದರೆ ಇದೀಗ ಸರ್ಕಾರ
ಭತ್ತ ಖರೀದಿಗೆ ಅನುಮತಿ ನೀಡಿದ್ದು, ರೈತರ ನೋಂದಣಿಗೆ
ಅವಕಾಶ ಕಲ್ಪಿಸಲಾಗಿದೆ ಎಂದರು.
    ಈಗಾಗಲೇ 3 ಜನ ರೈಸ್‍ಮಿಲ್‍ನವರು ನೋಂದಣಿ
ಮಾಡಿಕೊಂಡಿದ್ದಾರೆ. ಹೊನ್ನಾಳಿಯ ನೀಲಕಂಠೇಶ್ವರ ಹಾಗೂ
ಮಂಜುನಾಥ್ ರೈಸ್‍ಮಿಲ್ ಮತ್ತು ಕುಂಬಳಗೋಡಿನ ಆಂಜನೇಯ
ರೈಸಮಿಲ್‍ನ್ನು ಭತ್ತ ಖರೀದಿಗಾಗಿ ನೋಂದಾಯಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಭತ್ತ ತುಂಬಾ ಬೆಳೆಯಲಾಗಿದ್ದು, ಬೆಲೆ
ಕೂಡ ಕಮ್ಮಿಯಾಗಿದೆ. ಈ ಹಿನ್ನೆಲೆಯಲ್ಲಿ ಭತ್ತ ಖರೀದಿಗೆ ಈ ಭಾಗದ
ರೈತರ ಅನುಕೂಲಕ್ಕೆ ಜಿಲ್ಲೆಯಲ್ಲಿ ಕನಿಷ್ಠ ಪಕ್ಷ 5 ಜನ
ರೈಸ್‍ಮಿಲ್‍ನವರು ಮುಂದಾಗಬೇಕಿದೆ ಎಂದು ಹೇಳಿದರು.
    ರೈಸಮಿಲ್ ಮಾಲೀಕರ ಸಂಘದ ಅಧ್ಯಕ್ಷರಾದ ಹೂಗುಂಟೆ
ಬಕ್ಕೇಶ್ ಮಾತನಾಡಿ, ಸೋನಾ ಮಸೂರಿ, ಆರ್‍ಎನ್‍ಆರ್ ಭತ್ತದ ತಳಿಗಳ
ಬೆಲೆ ಜಾಸ್ತಿ ಇರುತ್ತದೆ. ಮಳೆ ಇರುವುದರಿಂದ ಭತ್ತ ಹಸಿ
ಇರುತ್ತವೆ. ಈ ರೀತಿಯ ಸಂದರ್ಭ ನಮಗೆ ಹೊಸದಾಗಿದೆ.
ನಾವೆಲ್ಲರೂ ಮಾತನಾಡಿಕೊಂಡು ನಿಮಗೆ ಸಹಕಾರ ನೀಡುತ್ತೇವೆ
ಎಂದು ಭರವಸೆ ನೀಡಿದರು.
   ಈ ಸಂದರ್ಭದಲ್ಲಿ ರೈತರಾದ ಕುಂದವಾಡ ಹನುಮಂತಪ್ಪ
ಮಾತನಾಡಿ, ಮಳೆಗಾಲದಲ್ಲಿ ಭತ್ತ ಒಣಗಿಸಲು ರೈತರಿಗೆ ತುಂಬಾ
ಕಷ್ಟವಾಗುತ್ತದೆ. ಜಿಲ್ಲಾಧಿಕಾರಿಗಳು ದಯಮಾಡಿ ಭತ್ತಕ್ಕೆ
ರೂ. 1,500 ಬೆಲೆ ನಿಗದಿ ಮಾಡಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು
ಎಂದು ಮನವಿ ಮಾಡಿದರು.
    ಸಭೆಯಲ್ಲಿ ಸಣ್ಣ ಕೈಗಾರಿಕೆಗಳ ಇಲಾಖೆಯ ಉಪನಿರ್ದೇಶಕ
ಮುಂಜುನಾಥ್, ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೃಷಿ ಜಂಟಿ ನಿರ್ದೇಶಕ
ಶರಣಪ್ಪ ಮುದಗಲ್ ಇದ್ದರು.

Leave a Reply

Your email address will not be published. Required fields are marked *

You missed