ದಾವಣಗೆರೆ ಮೇ.20
ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಬುಧವಾರ ಸಂತಸದ ವಾತಾವರಣ
ಏರ್ಪಟ್ಟಿದ್ದು, ವೈದ್ಯರಲ್ಲಿ ಸಂಭ್ರಮ ತುಂಬಿಕೊಂಡಿತ್ತು. ಇದಕ್ಕೆ
ಮುಖ್ಯ ಕಾರಣ ಕೊರೊನಾದಿಂದ ರೋಗಿಗಳು ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆಗೊಂಡ ಕ್ಷಣವಾಗಿತ್ತು.
ಕೊರೊನಾದಿಂದ ಗುಣಮುಖರಾದ ಮೂವರನ್ನು ಇಂದು
ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡಲಾಯಿತು. ಕೊರೊನಾ
ಪಾಸಿಟಿವ್ ಬಾಧಿತರಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಕೋವಿಡ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಮೂವರು
ಸಂಪೂರ್ಣ ಗುಣಮುಖರಾಗಿದ್ದು, ಇವರನ್ನು ಇಂದು ಜಿಲ್ಲಾಡಳಿತ
ಹಾಗೂ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹೂ
ಮಳೆ ಸುರಿಸಿ, ಚಪ್ಪಾಳೆ ತಟ್ಟುವ ಮೂಲಕ ಹೃದಯಸ್ಪರ್ಶಿ
ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ,
ಇದು ಎರಡನೇ ಕಂತಿನ ಬಿಡುಗಡೆಯಾಗಿದೆ. ಈ ಮೊದಲು
ಮೂವರು ಗುಣಮುಖರಾಗಿದ್ದರು. ಬಳಿಕ ಇದೀಗ ಒಟ್ಟು ಏಳು
ಜನರನ್ನು ಬಿಡುಗಡೆ ಮಾಡಲು ಸರ್ಕಾರವೂ ಅನುಮತಿಸಿದ್ದು,
ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಅದರಲ್ಲಿ ಇಂದು
ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ್ದಾರೆ. ಇನ್ನುಳಿದ ನಾಲ್ವರು ಕೋವಿಡ್ ಅಲ್ಲದೆ ಹೃದಯ
ಹಾಗೂ ಇನ್ನಿತರ ಬೇರೆ ಸಮಸ್ಯೆಯಿಂದ ಬಳಲುತ್ತಿರುವವರಿದ್ದಾರೆ.
ಅವರನ್ನು ಬೇರೆ ಆಸ್ಪತ್ರೆಗೆ ಸೇರಿಸಲು ಸೂಚಿಸಲಾಗಿದ್ದು, ಕೋವಿಡ್
ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು
ತಿಳಿಸಿದರು.

ಇವತ್ತು ಸಂಜೆಯೊಳಗೆ ಇನ್ನು 12 ಜನರ ವರದಿ
ನೋಡಿಕೊಂಡು ವೈದ್ಯರ ಸಲಹೆ ಮೇರೆಗೆ ಸರ್ಕಾರದ
ನಿಯಮದಂತೆ ಬಿಡುಗಡೆಗೊಳಿಸಲು ಕ್ರಮ
ಕೈಗೊಳ್ಳಲಾಗುವುದು. ಅತ್ಯಂತ ಪರಿಣಿತಿ ಹೊಂದಿದ ವೈದ್ಯರು
ನಮ್ಮ ಜಿಲ್ಲೆಯೊಳಗೆ ಇದ್ದಾರೆ. ಎಲ್ಲರ ಪ್ರಯತ್ನದಿಂದ ಹಾಗೂ
ಉತ್ಸಾಹ ಮತ್ತು ಹುಮ್ಮಸ್ಸಿನಿಂದ ವೈದ್ಯರು ಮತ್ತು
ವೈದ್ಯಕೀಯ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಕಾರ್ಯ
ನಿರ್ವಹಿಸುವ ವಿಶ್ವಾಸವಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ
ಪಡಬಾರದು. ನಮ್ಮ ಸರ್ವೇಕ್ಷಣಾ ತಂಡ ಬಹಳ
ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ಎಪಿಸೆಂಟರ್ ಭಾಗದ
ಸುತ್ತಮುತ್ತಲಿನ ಪ್ರತಿಯೊಂದು ಬೀದಿ ಬೀದಿಯ
ಮನೆಗಳಲ್ಲಿನ ಜನರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಲಾಗುತ್ತಿದೆ ಎಂದರು.
ಸಾಕಷ್ಟು ಕೊರೊನಾ ರೋಗಿಗಳನ್ನು ಗುಣಮುಖರನ್ನಾಗಿಸಿ
ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆ ಮಾಡಿ ಕಳುಹಿಸುವ
ವಿಶ್ವಾಸವಿದೆ. ಜಿಲ್ಲೆಯಲ್ಲಿ ವೈದ್ಯಕೀಯ ತಂಡ ಸೇರಿದಂತೆ
ಪ್ರತಿಯೊಬ್ಬರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ವಿಶೇಷವಾಗಿ
ಮೇಯರ್ ಅವರು ನಮಗೆ ಕೈಜೋಡಿಸಿ ಬೆನ್ನೆಲುಬಾಗಿ ನಿಂತಿದ್ದಾರೆ.
ಅವರ ಎಲ್ಲ ಪ್ರಯತ್ನ ಹಾಗೂ ಕೆಲಸಗಳಿಗೆ ನಾವು ಕೃತಜ್ಞತೆ
ಸಲ್ಲಿಸುತ್ತೇವೆ. ಈ ಸಫಲತೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ
ತಿಳಿಸಲು ಇಷ್ಟಪಡುತ್ತೇನೆ ಎಂದರು.
ಮೇಯರ್ ಬಿ.ಜಿ.ಅಜಯ ಕುಮಾರ್ ಮಾತನಾಡಿ, ಇವತ್ತು ತುಂಬಾ
ಸಂತೋಷದ ದಿನ. ಯಾಕೆಂದರೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್
ಸಂಖ್ಯೆ ಸೆಂಚುರಿ ದಾಟಿದೆ. ಈ ಹಿನ್ನೆಲೆಯಲ್ಲಿ ಜನರು
ಭಯಬೀತರಾಗಿದ್ದರು. ಈ ಹಿಂದೆ ಮೂರು ಕೊರೊನಾ ಪಾಸಿಟಿವ್
ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಹೊಂದಿದ ಸಂದರ್ಭದಲ್ಲಿ ಸಾರ್ವಜನಿಕರು ಅದನ್ನು ಗಮನಿಸಿರಲಿಲ್ಲ.
ಆದರೆ ಇದೀಗ ಮೂವರು ಕೊರೊನಾದಿಂದ ಗುಣಮುಖರಾಗಿ
ಬಿಡುಗಡೆ ಹೊಂದುತ್ತಿದ್ದು, ಮಾಧ್ಯಮದ ಮೂಲಕ ನಗರದ
ಜನತೆಗೆ ಧೈರ್ಯ ತುಂಬುವುದರೊಂದಿಗೆ ಧನಾತ್ಮಕ
ಸಂದೇಶ ರವಾನಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಮೂವರು ಸೇರಿದಂತೆ 19 ಕೇಸ್‍ಗಳನ್ನು
ಬಿಡುಗಡೆಗೊಳಿಸುವ ಬಗ್ಗೆ ಸೂಚನೆಯನ್ನು ಇಲ್ಲಿನ ವೈದ್ಯರು
ಕೊಟ್ಟಿದ್ದಾರೆ. ವೈದ್ಯರು ತುಂಬಾ ಶ್ರದ್ಧೆ ವಹಿಸಿ ಯಾವುದೇ
ಭಯವಿಲ್ಲದೆ ಸೇವೆ ಮಾಡಿ ರೋಗಿಗಳನ್ನು ನೋಡಿಕೊಂಡಿದ್ದರಿಂದ
ಇವತ್ತು ಇಷ್ಟು ಜನ ಬಿಡುಗಡೆಗೊಳ್ಳುತ್ತಿದ್ದಾರೆ. ಈ ಮೂಲಕ

ಮೊದಲ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಕೊರೊನಾ ಪಾಸಿಟಿವ್
ಸಂಖ್ಯೆ ಜಿಲ್ಲೆಯಲ್ಲಿ ಏರಿಕೆ ಮೂಲಕ ಸೆಂಚುರಿ ಕಂಡಿದೆ. ಅದೇ ರೀತಿ
ಸೆಂಚುರಿಯಿಂದ ಝೀರೋ ವರೆಗೆ ಇಳಿಕೆ ಆಗುವ ವಿಶ್ವಾಸ
ವ್ಯಕ್ತಪಡಿಸಿದರು.
ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ನಗರದಲ್ಲಿ
ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ ಯಾರೊಬ್ಬರು
ಭಯಪಡಬೇಕಾದ ಅವಶ್ಯಕತೆಯಿಲ್ಲ. ಕೊರೊನಾ ಜೊತೆಗೆ
ಬದುಕಿ ಗೆದ್ದು ತೋರಿಸಬೇಕಾದ ಸಂದರ್ಭ ಇದಾಗಿದೆ. ಯಾವ
ಕಾರಣಕ್ಕೂ ನಾವುಗಳು ಹೆದರುವ ಪ್ರಶ್ನೆಯಿಲ್ಲ. ಕೆಮ್ಮು, ಶೀತ,
ನೆಗಡಿ, ಜ್ವರದಂತೆ ಕೊರೊನಾ ಕೂಡ ಒಂದು ರೋಗವಾಗಿದೆ.
ಆದರೆ ಇದು ಕಣ್ಣಿಗೆ ಕಾಣುವುದಿಲ್ಲ. ಬೇಗ ಒಬ್ಬರಿಂದ ಇನ್ನೊಬ್ಬರಿಗೆ
ಹರಡುವಂತಹದ್ದು. ಹಾಗಾಗಿ ನಾವು ಇದರಿಂದ ಭಯಪಡದೇ,
ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ಇಷ್ಟು ದಿನ ಕೊರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ
ಎಲ್ಲರೂ ಕೂಡ ಮನೆಯಲ್ಲಿ ಇದ್ದಿರಿ. ಆದರೆ ಇದೀಗ ತಾವೆಲ್ಲರೂ
ತಮ್ಮ ತಮ್ಮ ವ್ಯವಹಾರ ಹಾಗೂ ಕೆಲಸದಲ್ಲಿ ತೊಡಗಲು
ಮುಂದಾಗಬೇಕು. ಈ ಎರಡು ತಿಂಗಳು ನೀವು ಅನುಭವಿಸಿದ
ಸಂಕಷ್ಟದಿಂದ ಪಾರಾಗಲು, ತಮ್ಮ ವ್ಯವಹಾರದಲ್ಲಿ
ತೊಡಗಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ
ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು. ಸ್ಯಾನಿಟೈಜರ್
ಬಳಸಬೇಕು. ಮಾಸ್ಕ್ ಧರಿಸುವ ಹಾಗೂ ಸಾಮಾಜಿಕ ಅಂತರ
ಕಾಪಾಡಿಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ
ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಎಲ್ಲರೂ ಸಹಕರಿಸಬೇಕು.
ಯಾರೂ ಕೂಡ ಅನಾವಶ್ಯಕವಾಗಿ ಹೊರಗೆ ಬರಬಾರದು. ಅಲ್ಲಿನ
ಸೂಚನೆಗಳನ್ನು ಕಟ್ಟುನಿಟ್ಟಾಗಿ ಪ್ರತಿಯೊಬ್ಬರು ಪಾಲಿಸಬೇಕು.
ಜೊತೆಗೆ ಸರ್ಕಾರದ ನಿಯಮದಂತೆ ನಗರದಲ್ಲಿ ಸಂಚರಿಸಲು
ಅನುವು ಮಾಡಕೊಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ
ಯಾರೊಬ್ಬರು ಗುಂಪು ಕಟ್ಟಿಕೊಂಡು ನಿಲ್ಲಬಾರದು. ಸಾಮಾಜಿಕ
ಅಂತರ ಕಾಪಾಡಿಕೊಳ್ಳಬೇಕು. ಜೊತೆಗೆ ಮಾಸ್ಕ್ ಹಾಕಿಕೊಂಡು
ಓಡಾಡಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಾದ ಶಿಸ್ತುಕ್ರಮ
ಜರುಗಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಚ್‍ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿತ್ಸಕ
ಸುಭಾಷಚಂದ್ರ ಇದ್ದರು.

Leave a Reply

Your email address will not be published. Required fields are marked *