ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ ಶಾಸಕರು ಕಿಟ್ ವಿತರಿಸುವಾಗ ಮುಸ್ಲೀಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಸಾಸ್ವೆಹಳ್ಳಿ ಜಮೀಯ ಮಸೀದಿ ಅಧ್ಯಕ್ಷ ಅಪ್ತಾಬ್ ಅಹಮದ್ ಅಲಿ ಖಾನ್ ಗಂಭೀರವಾಗಿ ಆರೋಪಿಸಿದ್ದಾರೆ.
ಮಾವಿನಕೋಟೆ (ಮಲ್ಲಿಕಟ್ಟೆ)ಐ ಜಾಮೀಯ ಮಸೀದಿಯಲ್ಲಿ ಭಾನುವಾರ ಅಧ್ಯಕ್ಷರ ಕುಟುಂಬ ವತಿಯಿಂದ ಸಾವಿರ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಮುಸ್ಲೀಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಡುಬಡವರಿದ್ದಾರೆ. ದಿನಾಲೂ ಹಣ್ಣು, ತರಕಾರಿ, ಗುಜುರಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ಕೋವಿಡ್ 19 ರಿಂದಾಗಿ 2 ತಿಂಗಳಿನಿಂದಲೂ ನಮ್ಮ ಸಮುದಾಯದವರು ಕೆಲಸ ಕಾರ್ಯವಿಲ್ಲದೆ ಕೈಚೆಲ್ಲಿ ಕೂತಿದ್ದಾರೆ. ಈ ಸಂದರ್ಭದಲ್ಲಿ ನೊಂದವರಿಗೆ ಆರ್ಥಿಕ ನೆರವು, ಆಹಾರ ಕಿಟ್ ಒದಗಿಸಿ ಚೈತನ್ಯ ನೀಡಬೇಕಾಗಿದ್ದ ಶಾಸಕರು ತಾರತಮ್ಯ ನೀತಿ ಸರಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಅವರು ಹೋಬಳಿ ವ್ಯಾಪ್ತಿ ಸಮಾಜದ ಕಡು ಬಡವರನ್ನು ಗುರುತಿಸಿ ಆಹಾರ ಕಿಟ್ ನೀಡುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಅಬೀದ್ ಅಲಿಖಾನ್ ಮಾತನಾಡಿ, ಹಿಂದೂ ಮುಸ್ಲೀಂ ಬಾಂಧವರು ಹೋಬಳಿ ವ್ಯಾಪ್ತಿಯಲ್ಲಿ ಹಿಂದಿನಿಂದಿಲೂ ಅಣ್ಣತಮ್ಮದಿರಂತೆ ಕೂಡಿಕೊಂಡು ಬದುಕುತ್ತಿದ್ದೇವೆ. ಹಬ್ಬ ಹರಿದಿನಗಳನ್ನು ಭಾತೃತ್ವದಿಂದ ಆಚರಿಸಿಕೊಂಡು ಬರುತ್ತಿದ್ದೇವೆ. ಈ ಬಾರಿ ಕೋವಿಡ್ 19 ಬಂದಿದ್ದರಿಂದ ಸಮುದಾಯವರು ಅಧಿಕ ದುಂದು ವೆಚ್ಚ ಮಾಡದೆ,ಸರ್ಕಾರದ ಆದೇಶವನ್ನು ಪಾಲಿಸಿ ಮನೆಯಲ್ಲಿಯೇ ರಂಜಾನ್ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿ ಸಮಾಜಕ್ಕೆ ಮತ್ತು ಸರ್ಕಾರಕ್ಕೂ ಒಳ್ಳೆಯ ಸಂದೇಶವನ್ನು ನೀಡೋಣ ಎಂದರು.
ವಿತರಣಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಜಬ್ಬರ್ ಅಲಿಖಾನ್, ಜಮತ್‍ನ ಅಧ್ಯಕ್ಷ ಕಲೀಲ್, ಕಾರ್ಯದರ್ಶಿ ಅಬೀಬ್, ಖಜಾಂಚಿ ಸಮೀರ್, ಮಾಜಿ ಗ್ರಾ.ಪಂ. ಸದಸ್ಯ ಮೆಹಬೂಬ್ ಇದ್ದರು.
ಮಾವಿನಕೋಟೆ ( ಮಲ್ಲಿಕಟ್ಟೆ)ಯ ಜಾಮೀಯ ಮಸೀದಿಯಲ್ಲಿ ಭಾನುವಾರ ಜಮೀಯ ಮಸೀದಿ ಅಧ್ಯಕ್ಷ ಅಪ್ತಾಬ್ ಅಹಮದ್ ಅಲಿಖಾನ್ ಹಾಗೂ ಅವರ ಕುಟುಂಬದವರು ಬಡವರಿಗೆ ಆಹಾರ ಕಿಟ್ ವಿತರಿಸಿದರು.