ದಾವಣಗೆರೆ ಮೇ.26
ದಾವಣಗೆರೆ ನಗರವನ್ನು ಅತ್ಯುತ್ತಮವಾಗಿ
ಅಭಿವೃದ್ದಿಪಡೆಸಬೇಕೆಂಬ ಆಶಯವನ್ನು ಹೊಂದಿದ್ದೇನೆ. ಈ
ನಿಟ್ಟಿನಲ್ಲಿ ಪಾಲಿಕೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ
ಕಾಮಗಾರಿಗಳನ್ನು ಪಾದರಸದಂತೆ ಆದಷ್ಟು ಶೀಘ್ರದಲ್ಲಿ
ಮುಗಿಸಿ, ನಗರದ ಜನತೆಗೆ ಕುಡಿಯುವ ನೀರು, ಉತ್ತಮ ರಸ್ತೆ,
ಬೀದಿ ದೀಪಗಳು ಸೇರಿದಂತೆ ಎಲ್ಲ ರೀತಿಯ ಮೂಲಭೂತ
ಸೌಕರ್ಯಗಳನ್ನು ಒದಗಿಸಬೇಕೆಂದು ಪಾಲಿಕೆಯ ಎಲ್ಲ
ಅಧಿಕಾರಿಗಳಿಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ ತಿಳಿಸಿದರು.
ಇಂದು ಮಹಾನಗರಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ
ಏರ್ಪಡಿಸಲಾಗಿದ್ದ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ
ಸ್ಥಗಿತಗೊಂಡಿದ್ದ ನಗರದ ಎಲ್ಲ ಕಾಮಗಾರಿಗಳನ್ನು ಆರಂಭಿಸಿ
ಆದಷ್ಟು ಶೀಘ್ರದಲ್ಲಿ ನಿಗದಿತ ಅವಧಿಯಲ್ಲಿ ಕೆಲಸ
ಪೂರೈಸಬೇಕು. ಸೀಲ್‍ಡೌನ್ ಆದ ಕಂಟೈನ್‍ಮೆಂಟ್ ಝೋನ್
ಹೊರತುಪಡಿಸಿ ಉಳಿದೆಡೆ ಕಾಮಗಾರಿ ಆರಂಭಿಸುವಂತೆ ಅವರು
ಸೂಚಿಸಿದರು.
ಅಮೃತ್ ಯೋಜನೆಯಡಿ ಕೆಯುಐಡಿಎಫ್‍ಸಿ ವತಿಯಿಂದ
ಕೈಗೊಳ್ಳಲಾಗಿರುವ 24*7 ಕುಡಿಯುವ ನೀರಿನ ಯೋಜನೆಯಾದ
ಜಲಸಿರಿಯನ್ನು ಆದಷ್ಟು ಶೀಘ್ರವಾಗಿ ಸಂಪೂರ್ಣಗೊಳಿಸಿ ನಗರದ
ಜನರಿಗೆ ನೀರು ಪೂರೈಕೆ ಮಾಡಬೇಕು ಎಂದರು.
ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರರು ಮಾತನಾಡಿ,
ಈಗಾಗಲೇ ಶೇ.50 ಕೆಲಸ ಮುಗಿದಿದೆ. ಗುರಿ ಹೊಂದಲಾದ 18 ಓವರ್
ಹೆಡ್ ಟ್ಯಾಂಕ್‍ಗಳ ಪೈಕಿ 14 ಓಹೆಚ್‍ಟಿ ಕಾಮಗಾರಿ ಪ್ರಗತಿಯಲ್ಲಿವೆ.
ಒಟ್ಟು 50 ಝೋನ್‍ಗಳನ್ನಾಗಿ ಮಾಡಿಕೊಂಡು ಕೆಲಸ

ನಿರ್ವಹಿಸಲಾಗುತ್ತಿದೆ. ಓಹೆಚ್‍ಟಿ ನಿರ್ಮಿಸಲು ಚಿಕ್ಕನಹಳ್ಳಿ ಸೇರಿದಂತೆ
ಎರಡು ಕಡೆ ಜಾಗದ ಸಮಸ್ಯೆ ಎದುರಾಗಿದೆ ಎಂದರು. ಸಹಾಯಕ
ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಮಾತನಾಡಿ,
ಚಿಕ್ಕನಹಳ್ಳಿಯಲ್ಲಿ ಸರ್ಕಾರಿ ಜಮೀನು ಸಿಗುತ್ತಿಲ್ಲ. ಆದ್ದರಿಂದ ಓಹೆಚ್‍ಟಿ
ನಿರ್ಮಾಣ ವಿಳಂಬವಾಗಿದೆ ಎಂದರು.
ಸ್ಮಾರ್ಟ್‍ಸಿಟಿ ಎಂಡಿ ಮತ್ತು ಜಲಸಿರಿ ಯೋಜನೆಯ ಅಧಿಕಾರಿ ರವೀಂದ್ರ
ಮಲ್ಲಾಪರ ಮಾತನಾಡಿ, 2022 ರ ಜನವರಿಗೆ ಜಲಸಿರಿ ಯೋಜನೆಯನ್ನು
ಪೂರ್ಣಗೊಳಿಸುವ ಗುರಿ ನೀಡಲಾಗಿದೆ. 50 ಝೋನ್‍ಗಳ ಪೈಕಿ 2
ಝೋನ್‍ಗಳಲ್ಲಿ ಕಾರ್ಯ ಪೂರ್ಣಗೊಳಿಸಿ ಡೆಮೋ ನೀಡಬೇಕಿತ್ತು.
ಕೊರೊನಾ ಹಿನ್ನೆಲೆ ಈ ಕೆಲಸ ತಡವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಈ
ಎರಡು ಝೋನ್‍ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡೆಮೊಗೆ ಸಿದ್ದತೆ
ಮಾಡಿಕೊಳ್ಳಲಾಗುವುದು ಎಂದರು.
ಶಾಸಕರಾದ ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ
ಯೋಜನೆ ಆರಂಭಿಸಿದ ಆರು ತಿಂಗಳಲ್ಲೇ 2 ಜೋನ್‍ನಲ್ಲಿ 24*7
ನೀರು ಕೊಡುತ್ತೇವೆಂದು ಅಧಿಕಾರಿಗಳು ಹೇಳಿದ್ದರು. ಆದರೆ
ಇಷ್ಟು ದಿನವಾದರೂ ಕಾಮಗಾರಿಯೇ ಪೂರ್ಣಗೊಂಡಿಲ್ಲ.
ಇಂಜಿನಿಯರ್‍ಗಳ ಕೆಲಸ ತೃಪ್ತಿಕರವಾಗಿಲ್ಲ ಎಂದರು.
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಬಿ.ಬಿ
ಮಾತನಾಡಿ, ಜಲಸಿರಿ ಯೋಜನೆಗೆ ನೀಡಿರುವ ಟೈಮ್‍ಲೈನ್ ಪ್ರಕಾರ
ಕೆಲಸ ಆದರೂ ನಿಗದಿತ ಸಮಯದಲ್ಲಿ ಮುಗಿಯುತ್ತದೆ. ಈ
ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.
ಸಚಿವರು ಪ್ರತಿಕ್ರಿಯಿಸಿ ಇಂಜಿನಿಯರ್‍ಗಳು, ಅಧಿಕಾರಿಗಳು ಜಾಗ
ಸಿಕ್ಕಿಲ್ಲ, ಕೆಲಸಗಾರರಿಲ್ಲ ಎಂದು ಸಬೂಬು ಹೇಳಬಾರದು. ಆ ಎಲ್ಲ
ಸಮಸ್ಯೆಗಳನ್ನು ನೀಗಿಸಿಕೊಂಡು ನಿಗದಿತ ಅವಧಿಯಲ್ಲಿ ಕೆಲಸ
ಮುಗಿಸಬೇಕು. ಕಂಟ್ರಾಕ್ಟ್ ಹಿಡಿದಿರುವ ಕಂಪೆನಿಗಳಿಗೆ ನೋಟಿಸ್
ನೀಡಿ ಕೆಲಸಗಾರರನ್ನು ಕರೆಯಿಸಿಕೊಂಡು ಕೆಲಸವನ್ನು ಆರಂಭಿಸಿ
ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಆ 2 ಜೋನ್‍ನಲ್ಲಿ
ಮಾತ್ರ ಡೆಮೋ ಏಕೆ, ಪೂರ್ಣ ಕಾರ್ಯಾರಂಭ ಮಾಡಿರಿ ಎಂದ ಅವರು
ಪಾಲಿಕೆ ಮತ್ತು ಈ ಯೋಜನೆಯ ಕಾರ್ಯಪಾಲಕ
ಅಭಿಯಂತರರು ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ
ಆರಂಭಿಸಬೇಕು. ನಾನು ಮುಂದಿನ ವಾರವೇ ಈ ಎಲ್ಲ
ಕೆಲಸಗಳನ್ನು ಪರಿಶೀಸುತ್ತೇನೆ ಎಂದರು.
ಪಿ.ಬಿ ರಸ್ತೆ ಸೇರಿದಂತೆ ಬೀದಿ ದೀಪಗಳನ್ನು ಸಮರ್ಪಕವಾಗಿ
ನಿರ್ವಹಿಸುತ್ತಿಲ್ಲ. ನಾನೇ ನೋಡಿದ್ದೇನೆ. ಅನೇಕ ಲೈಟುಗಳು
ಉರಿಯುತ್ತಿಲ್ಲ. ಸಂಬಂಧಿಸಿದ ಕಾರ್ಯಪಾಲಕ ಇಂಜಿನಿಯರ್ ಒಂದು
ವಾರದೊಳಗೆ ಈ ದೀಪಗಳ ನಿರ್ವಹಣೆ ಕೆಲಸ ಮಾಡಿಸಬೇಕು.
ಹಾಗೂ ನಿರಂತರವಾಗಿ ನಿರ್ವಹಣೆ ಕಾರ್ಯ ಆಗಬೇಕು. ಇಲ್ಲದಿದ್ದರೆ

ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ
ನೀಡಿದರು.
14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ನಿಧಿಯಲ್ಲಿ 2017-
18 ರಲ್ಲಿ ಶೇ.95.05 ಪ್ರಗತಿಯಾಗಿದೆ. 2018-19 ರಲ್ಲಿ ಶೇ72.35 ಆದರೆ
2019-20 ನೇ ಸಾಲಿನಲ್ಲಿ ಶೇ.24.05 ಆಗಿದೆ ಯಾಕಿಷ್ಟು ಪ್ರಗತಿಯಲ್ಲಿ
ಹಿಂದೆ ಇದೆ. ಹಾಗೂ 2018-19 ರ ಮೂರು ಕಾಮಗಾರಿಗಳು ಇನ್ನೂ
ಟೆಂಡರ್ ಹಂತದಲ್ಲಿವೆ. ಇವುಗಳನ್ನು ಆದಷ್ಟು ಶೀಘ್ರದಲ್ಲಿ
ಮುಗಿಸಬೇಕು ಎಂದರು.
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ,
ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಒಟ್ಟು 381
ಮನೆಗಳು ಮಂಜೂರಾಗಿದ್ದು ಈ ಪೈಕಿ 244 ಗೃಹಗಳ
ಮೇಲ್ಛಾವಣೆ ಪೂರ್ಣಗೊಂಡಿದೆ. 56 ಮನೆಗಳು ಲಿಂಟಲ್
ಹಂತದಲ್ಲಿದ್ದರೆ 81 ತಳಪಾಯ ಹಂತದಲ್ಲಿದೆ ಎಂದರು.
ಪಾಲಿಕೆಯು ಆಸ್ತಿ ತೆರಿಗೆ ವಸೂಲಾತಿಯಲ್ಲಿ 2018-19 ರಲ್ಲಿ ಶೇ.83 , 2019-
20 ರಲ್ಲಿ ಶೇ83.49 ಪ್ರಗತಿ ಸಾಧಿಸಿದರೆ 2020-21 ರಲ್ಲಿ 0.24 ಪ್ರಗತಿ
ಸಾಧಿಸಿದೆ. ಕಾರಣ ಆಸ್ತಿ ತೆರಿಗೆ ಬಹುತೇಕ ಏಪ್ರಿಲ್ ಮತ್ತು ಮೇ
ಮಾಹೆಯಲ್ಲಿ ಆಗುತ್ತದೆ. ಈ ಬಾರಿ ಕೊರೊನಾ ಹಿನ್ನೆಲೆ ತೆರಿಗೆ
ವಸೂಲಾತಿ ಕಡಿಮೆಯಾಗಿದೆ. ಆದ್ದರಿಂದ ಸೇ5 ವಿನಾಯಿತಿಯನ್ನು ಜೂನ್
ಮಾಹೆಯ ಅಂತ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರೆ,
ಪಾಲಿಕೆ ವಿರೋಧಪಕ್ಷ ನಾಯಕ ಎ.ನಾಗರಾಜ್ ತೆರಿಗೆ ರಿಬೇಟ್‍ಗೆ
ಮುಂದಿನ ವರ್ಷದ ವರೆಗೆ ಅವಧಿ ವಿಸ್ತರಿಸಬೇಕೆಂದು ಮನವಿ
ಮಾಡಿದರು.
ಆಯುಕ್ತರು ನೀರಿನ ಶುಲ್ಕದಲ್ಲಿ ನಿಗದಿತ ಬೇಡಿಕೆಗಿಂತ ಕಡಿಮೆ
ವಸೂಲಾತಿ ಆಗುತ್ತಿದೆ ಕಾರಣ ಈ ಹಿಂದೆ ವಾರ್ಷಿಕ ತಲಾ ಮನೆಯಿಂದ
ರೂ. 1500 ವಸೂಲಾತಿ ಮಾಡಬೇಕೆಂದು ಆದೇಶಿಸಲಾಗಿತ್ತು.
ನಂತರ ರೂ.2100 ವಸೂಲಾತಿಗೆ ಆದೇಶವಾಗಿತ್ತು. ಆದರೆ
ಅನೇಕರು ರೂ.1500 ನ್ನೇ ಕಟ್ಟುತ್ತಾ ಬಂದಿದ್ದರಿಂದ ನಿಗದಿತ
ಬೇಡಿಕೆಗಿಂತ ಕಡಿಮೆ ಇದೆ. ಹಾಗೂ ಕೋವಿಡ್ ಹಿನ್ನೆಲೆ ಈ ಬಾರಿ
ಶೇಕಡಾವಾರು ಪ್ರಗತಿ ಕೂಡ ಕಡಿಮೆ ಇದೆ ಎಂದರು.
ಮಳಿಗೆ ಬಾಡಿಗೆ ವಸೂಲಾತಿಯಲ್ಲಿ 2019-20 ರಲ್ಲಿ ಶೇ30.83
ಸಾಧನೆಯಾಗಿದ್ದರೆ 2020-21 ರಲ್ಲಿ ಈವರೆಗೆ ಶೇ.4.28 ಪ್ರಗತಿ ಆಗಿದೆ
ಎಂದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರೇಶ್ ಮಾತನಾಡಿ,
ಮಳಿಗೆಗಳನ್ನು ಸಬ್‍ಲೀಸ್ ಮಾಡುತ್ತಿರುವುದರಿಂದ ಆದಾಯ
ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಬೇಕೆಂದರು.

ಸಚಿವರು ಪ್ರತಿಕ್ರಿಯಿಸಿ ಪೌರಕಾರ್ಮಿಕರ ಗೃಹಗಳ
ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ
ಪೂರೈಸಬೇಕೆಂದರು.
ನಾನು ರಸ್ತೆಯಲ್ಲಿ ಬರುತ್ತಿದ್ದಾಗ ಪಿ.ಬಿ.ರಸ್ತೆಯ ಬದಿಗಳಲ್ಲಿ ಜಲ್ಲಿ
ಕಲ್ಲುಗಳನ್ನು ಹಾಕಿ ಹಾಗೆಯೇ ಬಿಡಲಾಗಿದೆ. ಯಾಕೆ ರಸ್ತೆ
ಕಾಮಗಾರಿಯನ್ನು ಅರ್ಧಕ್ಕೇ ನಿಲ್ಲಿಸಿದ್ದೀರಿ ಆದಷ್ಟು ಶೀಘ್ರದಲ್ಲಿ
ಪಿಡಬ್ಲ್ಯುಡಿಯವರು ಕೆಲಸ ಪೂರ್ಣಗೊಳಿಸಬೇಕೆಂದರು.
ಪಿಡಬ್ಲ್ಯುಡಿ ಎಇ ಮಲ್ಲಿಕಾರ್ಜುನ ಮಾತನಾಡಿ, ನಾಲ್ಕು ಕಿ.ಮೀ ಕಾಮಗಾರಿ
ಪೈಕಿ ಎರಡು ಕಿ.ಮೀ ಪೂರ್ಣ ಆಗಿದೆ. ಕೊರೊನಾ ಹಿನ್ನೆಲೆ
ಕಾರ್ಮಿಕರು ಸಿಗದ ಕಾರಣ ಇನ್ನೆರಡು ಕಿ.ಮೀ ಪೂರ್ಣ ಆಗಿದೆ ಎಂದಾಗ
ಸಚಿವರು ಇನ್ನೊಂದು ವಾರದೊಳಗೆ ಆ ಕೆಲಸ ಪೂರ್ಣ ಆಗಬೇಕು.
ಮುಂದಿನ ವಾರ ನಾನು ಖುದ್ದು ಪರಿಶೀಲಿಸುತ್ತೇನೆ ಎಂದರು.
ನಗರೋತ್ಥಾನ, ಎಸ್.ಎಫ್.ಸಿ ವಿಶೇಷ ಅನುದಾನ, ಎಸ್.ಎಫ್.ಸಿ
ಮುಕ್ತನಿಧಿ, ಎಸ್‍ಸಿಪಿ ಟಿಎಸ್‍ಪಿ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು
ಮುಂದಿನ ವಾರ ಪಾಲಿಕೆ, ಸ್ಮಾರ್ಟ್‍ಸಿಟಿ, ಜಲಸಿರಿ, ಲೈಟ್‍ಗಳು, ರಾಜಾಕಾಲುವೆ
ಹೀಗೆ ವಿವಿಧ ಕಾಮಗಾರಿಗಳನ್ನು ದಿಢೀರ್ ಭೇಟಿ ನೀಡಿ
ವೀಕ್ಷಿಸುತ್ತೇನೆ. ಲೋಪ ಹಾಗೂ ವಿಳಂಬ ನೀತಿ ಕಂಡುಬಂದಲ್ಲಿ
ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸುತ್ತೇನೆ.
ಸ್ಮಾರ್ಟ್‍ಸಿಟಿ, ಪಾಲಿಕೆ, ಪಿಡಬ್ಲ್ಯುಡಿ ಹೀಗೆ ವಿವಿಧ ಸಂಸ್ಥೆಗಳು,
ಇಲಾಖೆಗಳು ಸಹಕಾರ ಮತ್ತು ಸಹಯೋಗದೊಂದಿಗೆ ಕೆಲಸ
ಮಾಡಿ ನಗರವನ್ನು ಅಭಿವೃದ್ದಿಪಡಿಸಬೇಕು. ನಗರಾಭಿವೃದ್ದಿಗೆ
ಸಂಬಂಧಿಸಿದಂತೆ ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುವೆ
ಎಂದರು.
ಸಭೆಯಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ, ಶಾಸಕ
ಎಸ್.ಎ.ರವೀಂದ್ರನಾಥ್, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಪಾಲಿಕೆ
ಮೇಯರ್ ಬಿ.ಜಿ.ಅಜಯಕುಮಾರ್, ಉಪ ಮೇಯರ್ ಸೌಮ್ಯ
ನರೇಂದ್ರಕುಮಾರ್, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ
ಅಧ್ಯಕ್ಷರಾದ ಪ್ರಸನ್ನಕುಮಾರ್, ಜಯಮ್ಮ ಆರ್
ಗೋಪಿನಾಯಕ್, ಎಸ್.ಟಿ.ವೀರೇಶ್, ಗೌರಮ್ಮ, ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ, ಪಾಲಿಕೆ ಸದಸ್ಯರು, ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *