ದಾವಣಗೆರೆ ಮೇ.27
ಕೋವಿಡ್ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು
ನಿಗಮಗಳಿಗೆ ಆಗಿರುವ ಹಾನಿಯನ್ನು ತಗ್ಗಿಸಲು ಆಡಳಿತಾತ್ಮಕ
ವೆಚ್ಚಗಳನ್ನು ಕಡಿತಗೊಳಿಸಲು ಅಗತ್ಯವಾದ
ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ರಾಜ್ಯದಲ್ಲಿ ಎಸಿ
ಬಸ್ ಸೇರಿದಂತೆ ಕೆಎಸ್‍ಆರ್‍ಟಿಸಿ ಬಸ್‍ಗಳನ್ನು 24*7 ಕಾರ್ಯಾಚರಣೆ
ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ
ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ಇಂದು ದಾವಣಗೆರೆ ಕೆಎಸ್‍ಆರ್‍ಟಿಸಿ ವಿಭಾಗ ಕಚೇರಿಯಲ್ಲಿ
ಏರ್ಪಡಿಸಲಾಗಿದ್ದ ಕೆಎಸ್‍ಆರ್‍ಟಿಸಿ ಪ್ರಗತಿ ಪರಿಶೀಲನೆ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಿಯಂತ್ರಣ ಹಿನ್ನೆಲೆ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದ
ನಾಲ್ಕು ನಿಗಮಗಳಿಂದ ಈ ತಿಂಗಳವರೆಗೆ ರೂ.1800 ಕೋಟಿ ನಷ್ಟ
ಆಗಿದೆ. ಇನ್ನೂ ಹೀಗೆ ಮುಂದುವರೆಗೆ ಏನೆಲ್ಲ ಕ್ರಮ
ಕೈಗೊಳ್ಳಬೇಕೆಂದು ಚಿಂತಿಸಬೇಕಿದೆ. ಅಧಿಕಾರಿ/ನೌಕರರ
ಸಂಬಳಕ್ಕೇ ರೂ. 326 ಕೋಟಿ ಅವಶ್ಯಕತೆ ಇದೆ. ಆದ್ದರಿಂದ
ನಿಗಮಗಳ ಆಡಳಿತಾತ್ಮಕ ವೆಚ್ಚನ್ನು ಹೇಗೆ
ಕಡಿತಗೊಳಿಸಬೇಕೆಂಬ ಬಗ್ಗೆ ಕ್ರಮ ವಹಿಸಬೇಕು ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ
ಕಾಯ್ದುಕೊಳ್ಳಬೇಕು. ಇದಕ್ಕಾಗಿ ಬಸ್ಸಿನಲ್ಲಿ ಶೇ.52 ಸೀಟಿಂಗ್ ಮಾತ್ರ
ಹಾಕಿಕೊಳ್ಳಬೇಕು. ಇದರಿಂದ 54 ಜನರು ಕೂರುವ ಬಸ್ಸಿನಲ್ಲಿ 30
ಜನರಿಗೆ ಮಾತ್ರ ಅವಕಾಶ ನೀಡಬೇಕಿದೆ. ಈ ಕಾರಣದಿಂದ ಆದಾಯ
ಕುಂಠಿತವಾಗಿದೆ.
ಹಾಗೂ ಎಸಿ ಬಸ್‍ಗಳಿಗೆ ಅವಕಾಶ ಇಲ್ಲ. ಅಂತರರಾಜ್ಯ ಓಡಾಟ ಇಲ್ಲ.
ಜೊತೆಗೆ ಬೆಳಗಿನ ವೇಳೆಗೆ ಮಾತ್ರ ಸೀಮಿತಗೊಂಡಿರುವುದು
ಕೂಡ ಆದಾಯ ಕುಂಠಿತಕ್ಕೆ ಕಾರಣಗಳಾಗಿವೆ. ಇವೆಲ್ಲ
ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಂಡು ಆದಾಯ
ಹೆಚ್ಚಿಸುವ ಪ್ರಯತ್ನ ಮಾಡಬೇಕಿದೆ ಎಂದರು.
ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ ರೆಡ್ಡಿ
ಮಾತನಾಡಿ, ಪ್ರತಿ ಕಿ.ಮೀ ಗೆ ರೂ.34 ಖರ್ಚು ಬರುತ್ತಿದ್ದರೆ ರೂ.24
ಆದಾಯವಿದೆ. ರೂ.12 ನಷ್ಟ ಸಂಭವಿಸುತ್ತಿದೆ. ಇದೀಗ ಸಾಮಾಜಿಕ
ಅಂತರ ಹಾಗೂ ಬೆಳಿಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಬಸ್
ಓಡಿಸುತ್ತಿರುವುದರಿಂದ ಶೇ 15 ರಿಂದ 20 ಅಂದರೆ 1 ಕೋಟಿ ಆದಾಯ
ಮಾತ್ರ ಬರುತ್ತಿದೆ. ಇನ್ನು ಶಾಲಾ ಕಾಲೇಜು ಆರಂಭವಾದರೆ
ಸಾಮಾಜಿಕ ಅಂತರವೂ ಕಷ್ಟ ಆಗುತ್ತದೆ. ಹೆಚ್ಚು ಬಸ್‍ಗಳನ್ನು
ಬಿಡಬೇಕಾಗುತ್ತದೆ. ಆದರೆ ಸಾಮಾಜಿಕ ಅಂತರದ ನಿಯಮ
ಅನುಸರಿಸಿ ಹೆಚ್ಚು ಬಸ್ ಬಿಟ್ಟಷ್ಟು ನಷ್ಟ ಹೆಚ್ಚು ಆಗುತ್ತದೆ.
ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ, ಲಾಕ್‍ಡೌನ್ ಇನ್ನಷ್ಟು
ಸಡಿಲಗೊಂಡಲ್ಲಿ ಬಸ್ ಬಳಸುವವರ ಸಂಖ್ಯೆ ಹೆಚ್ಚಾದರೆ
ನಿರ್ವಹಿಸುವುದು ಕಷ್ಟ. ಈಗ ಜನರೇ ಹೆಚ್ಚು ಬರುತ್ತಿಲ್ಲ, ಹಾಗಾಗಿ
ಸಾಮಾಜಿಕ ಅಂತರ ಸಾಧ್ಯವಾಗುತ್ತಿದೆ ಎಂದರು.
ಕೆಎಸ್‍ಆರ್‍ಟಿಸಿ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ
ಸಿದ್ದೇಶ್ವರ ಹೆಬ್ಬಾಳ್ ದಾವಣಗೆರೆ ವಿಭಾಗದ ಕುರಿತು ಪ್ರಗತಿ ಮಾಹಿತಿ
ನೀಡಿ, ಅಂತರರಾಜ್ಯ ಮತ್ತು ಬೆಂಗಳೂರಿಗೆ ತೆರಳುವ
ಬಸ್ಸುಗಳಿಂದ ಲಾಭ ಇದೆ. ಈ ಕಾರ್ಯಾಚರಣೆ ಆರಂಭವಾದ ಮೇಲೆ
ಸ್ವಲ್ಪ ಸುಧಾರಣೆ ಕಾಣಬಹುದು. ನಿಗಮದಲ್ಲಿ ಸಾಕಷ್ಟು ಜನರು
ಹೊರ ಗುತ್ತಿಗೆ ಆಧಾರದಲ್ಲಿ ನೌಕರರು ಇದ್ದು, ಅಗತ್ಯವಿರುವ
ಇಲಾಖೆಗಳಿಗೆ ಇವರನ್ನು ನಿಯೋಜಿಸುವ ಮೂಲಕ ಆಡಳಿತಾತ್ಮಕ
ವೆಚ್ಚ ತಗ್ಗಿಸಬಹುದು ಎಂದರು.
ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಶಿವಕುಮಾರಯ್ಯ ಮಾತನಾಡಿ,
ಜಾತ್ರೆ ಮತ್ತು ಇತರೆ ಉತ್ಸವದಂತಹವುಗಳಿಗೆ ವಿಶೇಷ ಬಸ್
ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಹಾನಿಯನ್ನು
ಭರಿಸಬಹುದೆಂದರು.
ಸಚಿವರು ಮಾತನಾಡಿ, ವಿಮಾನ ಯಾನದಲ್ಲಿ ಸಾಮಾಜಿಕ ಅಂತರ
ಇಲ್ಲ. ಹಾಗೂ ಎಸಿ ಇರುತ್ತದೆ. ಬೈಕ್ ಸವಾರಿಯಲ್ಲೂ ಅಂತರ ಇಲ್ಲ.
ಕೆಎಸ್‍ಆರ್‍ಟಿಸಿ ಸೇವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು
ಸೇವೆ ನೀಡುವುದು ಕಷ್ಟ ಹಾಗೂ ಹಾನಿಗೆ ಕಾರಣವಾಗುತ್ತದೆ.
ಕೇಂದ್ರದ ಹೊಸ ಮಾರ್ಗಸೂಚಿಗಳು ಬಂದ ನಂತರ ಸಾಮಾಜಿಕ
ಅಂತರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಇನ್ನು
ಬೆಳಗಿನ ಹೊತ್ತು ಮಾತ್ರ ಕೆಎಸ್‍ಆರ್‍ಟಿಸಿ ಸೇವೆಯಿಂದ ನಷ್ಟ
ಹೆಚ್ಚುತ್ತಿದೆ. ಆದ ಕಾರಣ ಇನ್ನು ಮುಂದೆ 24*7 ಜೊತೆಗೆ
ಸುಮಾರು ಶೇ.25 ತಾಪಮಾನದ ಎಸಿ ಯೊಂದಿಗೆ ಬಸ್‍ಗಳ ಸೇವೆ
ನೀಡುವಂತೆ ಸೂಚಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ರೂ.120 ಕೋಟಿ ವೆಚ್ಚದಲ್ಲಿ
ವಿನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ
ಹಳೆಯ ಟೆಂಡರ್‍ದಾರರು ದರ ಹೊಂದಾಣಿಕೆ ಮಾಡಿಕೊಳ್ಳದ
ಕಾರಣ ಹೊಸ ಟೆಂಡರ್ ಕರೆಯುವಂತೆ ಸಚಿವರು ಸ್ಮಾರ್ಟ್‍ಸಿಟಿ ಎಂ.ಡಿ
ರವೀಂದ್ರ ಮಲ್ಲಾಪುರ ಇವರಿಗೆ ಸೂಚಿಸಿದರು.
ಜಗಳೂರು ಮತ್ತು ಚನ್ನಗಿರಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ
ನಿರ್ಮಾಣಕ್ಕೆ ಸಂಬಂಧಿಸಿದಂತೆ ಚನ್ನಗಿರಿಯಲ್ಲಿ ಜಾಗ ಸಿಕ್ಕಿಲ್ಲದ ಕಾರಣ
ಪ್ರಸ್ತಾವನೆ ಹಾಗೆಯೇ ಇದೆ ಎಂದು ಸ್ಮಾರ್ಟ್ ಸಿಟಿ ಅಧಿಕಾರಿ ತಿಳಿಸಿದರು.
ಸಂಸದರಾದ ಜಿ.ಎಂ ಸಿದ್ದೇಶ್ವರ್ ಮಾತನಾಡಿ, ಚನ್ನಗಿರಿಯಲ್ಲಿ
ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಜಾಗ ಹುಡುಕಬೇಕು.
ಮಾಯಕೊಂಡದಲ್ಲಿ ಜಾಗ ಇದ್ದು ಇಲ್ಲಿ ಒಂದು ಕೆಎಸ್‍ಆರ್‍ಟಿಸಿ ಡಿಪೋ
ಆಗಬೇಕು. ಹಾಗೂ ಸಂತೆಬೆನ್ನೂರು ಮತ್ತು ತ್ಯಾವಣಗಿಯಲ್ಲಿ
ನಿಲ್ದಾಣ ನಿರ್ಮಾಣ ಆಗಬೇಕಿದೆ. ಹಾಗೂ ರೂ.14 ಕೋಟಿ ವೆಚ್ಚದಲ್ಲಿ
ಹರಿಹರ ಬಸ್‍ನಿಲ್ದಾಣ ಉನ್ನತೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಅನೇಕ ಹಳ್ಳಿಗಳಿಗೆ ಬಸ್ ಬೇಕೆಂದು ಬೇಡಿಕೆ ಇದೆ. ಅಲ್ಲಿಗೆ
ಬಸ್‍ಗಳನ್ನು ಬಿಡಬೇಕು ಎಂದರು.
ಸಚಿವರು ಪ್ರತಿಕ್ರಿಯಿಸಿ ದಾವಣಗೆರೆ ವಿಭಾಗಕ್ಕೆ 63 ಹೊಸ
ಬಸ್‍ಗಳನ್ನು ನೀಡಲಾಗಿದೆ. ಇನ್ನು ಮುಂದೆ ಅವು ಕಾರ್ಯಾರಂಭ
ಮಾಡಲಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿಯ ಬಸ್ ನಿಲ್ದಾಣಗಳ
ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಕೈಗೊಳ್ಳಲು
ಕ್ರಮ ಕೈಗೊಳ್ಳಬೇಕು ಎಂದರು.
ಪರಿಸರ ಮತ್ತು ಸಿಬ್ಬಂದಿ ನಿರ್ದೇಶಕಿ ಕವಿತಾ ಎಸ್ ಮನ್ನಿಕೇರಿ
ಮಾತನಾಡಿ, ನಿಗಮಗಳಿಗೆ ಆಗಿರುವ ಹಾನಿಯನ್ನು ತಗ್ಗಿಸುವ
ಮತ್ತು ಸಮತೋಲನ ಕಾಪಾಡಿಕೊಳ್ಳುವ ಬಗ್ಗೆ ಸಲಹೆಗಳನ್ನು
ನೀಡಿದರು.
ಸಭೆಯಲ್ಲಿ ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ, ಪಾಲಿಕೆ ಮಹಾಪೌರ ಬಿ.ಜಿ.ಅಜಯಕುಮಾರ್, ಎಸ್‍ಪಿ
ಹನುಮಂತರಾಯ,
ಸಾರಿಗೆ ಸಂಜೀವಿನಿ – ಮೊಬೈಲ್ ಕೋವಿಡ್ ಫಿವರ್ ಸೆಂಟರ್‍ಗೆ ಚಾಲನೆ :
ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಜ್ವರ ತಪಾಸಣೆ ಹಾಗೂ ಕೋವಿಡ್ ಪರೀಕ್ಷೆಗಾಗಿ
ಸ್ವ್ಯಾಬ್ ಸಂಗ್ರಹ ವ್ಯವಸ್ಥೆಯನ್ನು ಮಾಡಿರುವ ಮೊಬೈಲ್
ಕೋವಿಡ್-19 ಮೊಬೈಲ್ ಫಿವರ್ ಸೆಂಟರ್‍ಗೆ ಸಾರಿಗೆ ಸಚಿವರಾದ ಲಕ್ಷ್ಮಣ
ಸವದಿ, ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಹಾಗೂ ಸಂಸದರಾದ
ಜಿ.ಎಂ.ಸಿದ್ದೇಶ್ವರ್ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ
ನೀಡಿ, ವೀಕ್ಷಿಸಿದರು.
ಕೋವಿಡ್ ವಾರಿಯರ್ಸ್‍ಗೆ ಅಭಿನಂದನೆ : ಕೋವಿಡ್ ಕರ್ತವ್ಯ
ನಿರ್ವಹಿಸಿದ್ದ ವಾಹನ ಚಾಲಕರು ಮತ್ತು ನಿರ್ವಾಹಕರಿಗೆ ಸಚಿವರಾದ
ಲಕ್ಷ್ಮಣ ಸವದಿ, ಬಿ.ಎ ಬಸವರಾಜ ಮತ್ತು ಸಂಸದರಾದ ಜಿ.ಎಂ
ಸಿದ್ದೇಶ್ವರ ಪುಷ್ಪ ಎರಚುವ ಮೂಲಕ ಹಾಗೂ ಚಪ್ಪಾಳೆ
ತಟ್ಟುವ ಮೂಲಕ ಅಭಿನಂದಿಸಿದರು.