ಕಲಬುರಗಿ.ಜೂನ್.07.(ಕ.ವಾ)-ಕೊರೋನಾ ಸಾಂಕ್ರಾಮಿಕ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ 2020-21ನೇ ಶೈಕ್ಷಣಿಕ ಸಾಲಿಗೆ ಶಾಲೆ ಪುನರ್ ಆರಂಭದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿದ್ದು, ಯಾವಾಗ ಶಾಲೆ ಆರಂಭಿಸಬೇಕು ಎಂಬುದರ ಕುರಿತು ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ ಕುಮಾರ ಸ್ಪಷ್ಠಪಡಿಸಿದರು.

ರವಿವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಶಾಲೆ ಪುನರ್ ಆರಂಭಿಸುವ ಕುರಿತು ಪೋಷಕರು ಮತ್ತು ಸ್ಟೇಕ್ ಹೋಲ್ಡರ್ಸ್‍ಗಳ ಅಭಿಪ್ರಾಯ ಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪೋಷಕರು, ಸ್ಟೇಕ್ ಹೋಲ್ಡರ್ಸ್ ಹಾಗೂ ಶಿಕ್ಷಣ ತಜ್ಞರುಗಳ ಅಭಿಪ್ರಾಯ ಪಡೆದು ಕೇಂದ್ರ ಸರ್ಕಾರದ ಎಸ್.ಓ.ಪಿ. ಮಾರ್ಗಸೂಚಿಯನ್ವಯ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಕೊರೋನಾದಿಂದ ಶೈಕ್ಷಣಿಕ ವರ್ಷ ತಡವಾಗಿ ಆರಂಭವಾಗುವುದರಿಂದ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಮಕ್ಕಳಿಗೆ ಹೊರೆಯಾಗದಂತೆ ಪಠ್ಯಕ್ರಮ ಸಿದ್ದಪಡಿಸಲು ಮತ್ತು ಮುಂದಿನ ಶೈಕ್ಷಣಿಕ ಚಟುವಟಿಕೆಯ ರೂಪುರೇಷೆ ಬಗ್ಗೆ ಡಿ.ಎಸ್.ಇ.ಆರ್.ಟಿ. ಅಧ್ಯಯನ ನಡೆಸುತ್ತಿದೆ ಎಂದು ಸಚಿವ ಎಸ್.ಸುರೇಶ ಕುಮಾರ ತಿಳಿಸಿದರು.

ಇತ್ತೀಚೆಗೆÉ ಆನ್‍ಲೈನ್ ಪಾಠ ಬೋಧನೆಗೆ ಎಲ್ಲೆಡೆ ಕೇಳಿಬರುತ್ತಿದೆ. ಆನ್‍ಲೈನ್ ಪಾಠ ಮಕ್ಕಳ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತೆ, ಎಷ್ಟು ವಯಸ್ಸಿನ ಮಕ್ಕಳಿಗೆ ಆನ್‍ಲೈನ್ ಪಾಠ ಭೋಧಿಸಬಹುದು ಎಂಬುದರ ಬಗ್ಗೆ ನಿಮ್ಹಾನ್ಸ್‍ಗೆ ಪತ್ರ ಬರೆಯಲಾಗಿತ್ತು. ಇದೀಗ ಅವರಿಂದ ಉತ್ತರ ಬಂದಿದ್ದು, ಇದರ ಸಾಧಕ-ಬಾಧಕ ಚರ್ಚಿಸಿ ಆನ್‍ಲೈನ್ ಪಾಠದ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಪರೀಕ್ಷೆ ನಂತರ ಉಪನ್ಯಾಸಕರ ಕೌನ್ಸೆಲಿಂಗ್: ಜೂನ್ 18 ರಂದು ದ್ವಿತೀಯ ಪಿ.ಯು.ಸಿ.ಯ ಇಂಗ್ಲೀಷ್ ಪರೀಕ್ಷೆ ನಡೆಯಲಿದ್ದು, ತದನಂತರ ಪಿ.ಯು.ಸಿ. ಉಪನ್ಯಾಸಕರ ನೇಮಕಾತಿಯ ಕೌನ್ಸಿಲಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಸುದ್ದಿಗಾರರೊಬ್ಬರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಕಂಟೇನ್‍ಮೆಂಟ್ ಝೋನ್ ಹೊರಗಡೆ ಪರೀಕ್ಷೆ: ಪರೀಕ್ಷೆಯ ಮೂರು ದಿನ ಮುನ್ನ ನಿಗಧಿತ ಪರೀಕ್ಷಾ ಕೇಂದ್ರ ಪ್ರದೇಶವು ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆಯಾದ್ದಲ್ಲಿ ಅಲ್ಲಿನ ಮಕ್ಕಳನ್ನು ಬೇರೆ ಪ್ರದೇಶದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ ಕುಮಾರ ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಸುಭಾಷ ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಎಂ.ಎಲ್.ಸಿ. ಬಿ.ಜಿ.ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ನಳೀನ್ ಅತುಲ್, ಕಲಬುರಗಿ ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಯಾದಗಿರಿ ಜಿಲ್ಲಾ ಪಂಚಯತ್ ಸಿ.ಇ.ಓ. ಶಿಲ್ಪಾ ಶರ್ಮಾ ಇದ್ದರು.

Leave a Reply

Your email address will not be published. Required fields are marked *