ದಾವಣಗೆರೆ ಜೂ.08
ದಾವಣಗೆರೆಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರಿತಿಸುವ
ಕಾರ್ಯ ಬಹಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದು ಇಂದೇ
ಜಿಲ್ಲಾಧಿಕಾರಿಗಳ ಮೂಲಕ ಟ್ರಕ್ ಟರ್ಮಿನಲ್‍ನ ಮ್ಯಾನೇಜಿಂಗ್
ಡೈರೆಕ್ಟರ್‍ರವರಿಗೆ ಸ್ಥಳ ಪರಿಶೀಲಿಸುವಂತೆ ಪತ್ರ
ಬರೆಯಬೇಕೆಂದು ಲಾರೀ ಮಾಲೀಕರ ಸಂಘದ ಅಧ್ಯಕ್ಷ
ಸೈಯದ್ ಸೈಫುಲ್ಲಾ ಒತ್ತಾಯಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜೀವ್ ಇವರ
ಅಧ್ಯಕ್ಷತೆಯಲ್ಲಿ ಇಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ
ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ
ಅವರು ಮಾತನಾಡಿ, ಸುಮಾರು 25 ವರ್ಷಗಳ ಯೋಜನೆ
ಇದಾಗಿದ್ದು ಹಲವಾರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದರೂ ಟ್ರಕ್
ಟರ್ಮಿನಲ್ ವಿಷಯ ಇನ್ನೂ ನೆನೆಗುದಿಗೆ ಬಿದ್ದಿದೆ. ಇಂದೇ ಸರ್ಕಾರಕ್ಕೆ
ಟ್ರಕ್ ಟರ್ಮಿನಲ್ ಜಾಗ ಗುರುತಿಸುವ ಬಗ್ಗೆ ಪ್ರಸ್ತಾವನೆ
ಸಲ್ಲಿಸುವಂತೆ ಆಗ್ರಹಿಸಿದರು.
ಆರ್‍ಟಿಓ ಎನ್.ಜೆ.ಬಣಕಾರ್ ಮಾತನಾಡಿ, ಹಿಂದಿನ ಜಿಲ್ಲಾ ರಸ್ತೆ ಸುರಕ್ಷತಾ
ಸಮಿತಿ ಸಭೆಯ ನಡಾವಳಿಯಲ್ಲಿನ ಆದೇಶದಂತೆ ಟ್ರಕ್ ಟರ್ಮಿನಲ್
ಜಾಗ ಗುರುತಿಸುವ ನಿಟ್ಟಿನಲ್ಲಿ ದಾವಣಗೆರೆ ತಾಲ್ಲೂಕು ಹಳೇ ಬಾತಿ
ಗ್ರಾಮದ ಸರ್ವೇ ನಂ 83/03 ರ 5.8 ಎಕರೆ ಜಾಗವನ್ನು ಫೆ 6
ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು,
ಆರ್‍ಟಿಓ, ತಹಶೀಲ್ದಾರ್ ಮತ್ತು ತಮ್ಮ ಸಮ್ಮುಖದಲ್ಲಿ ಸ್ಥಳಕ್ಕೆ
ಭೇಟಿ ನೀಡಿ ಪರಿಶೀಲನೆ ಮಾಡಲಾಗಿತ್ತು. ಈ ವಿಷಯ ಕುರಿತಂತೆ
ತಹಶೀಲ್ದಾರ್ ದಾವಣಗರೆ ಇವರು ಕೂಡಲೇ ಜಿಲ್ಲಾ ರಸ್ತೆ
ಸುರಕ್ಷತಾ ಸಮಿತಿಗೆ ವರದಿ ಸಲ್ಲಿಸುವಂತೆ ಪತ್ರ
ಬರೆಯಲಾಗಿತ್ತು. ಕೊರೊನಾ ಹಿನ್ನೆಲೆ ಈ ಕೆಲಸಕ್ಕೆ
ಹಿನ್ನಡೆಯಾಗಿದ್ದು ಇಂದೇ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಟ್ರಕ್
ಟರ್ಮಿನಲ್ ಮ್ಯಾನೇಜಿಂಗ್ ಡೈರೆಕ್ಟರ್‍ರವರಿಗೆ ಈ ವಿಷಯ ಕುರಿತು
ಪರಿಶೀಲನೆ ನಡೆಸುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು
ಎಂದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ ಮಾತನಾಡಿ,
ಹೈವೇಗಳಲ್ಲಿ ಅಪಘಾತ ತಪ್ಪಿಸಲು ಇಂಟರ್‍ಸೆಪ್ಟರ್ ಅಳವಡಿಸುವ
ಪ್ರಸ್ತಾಪ ಇದೆ. ಆದರೆ ಅಪಘಾತ ಸಂಭವಿಸುತ್ತಿರುವುದು ಲಾರಿ,
ಬಸ್ಸುಗಳಿಂದ ಅಲ್ಲ. ಬದಲಾಗಿ ದ್ವಿಚಕ್ರ ವಾಹನಗಳಿಂದ. ದ್ವಿಚಕ್ರ
ವಾಹನ ಚಾಲಕರಿಗೆ ಹೈವೇಯಲ್ಲಿ ವಾಹನ ಚಲಾಯಿಸುವ ಬಗ್ಗೆ ಅರಿವಿಲ್ಲ.
ಅವರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಹಾಗೂ ರಾತ್ರಿ ಹೊತ್ತು ಹೈವೇಯಲ್ಲಿ ಟೇಪ್‍ರೆಕಾರ್ಡರ್
ಹಾಕಿಕೊಂಡು ಎತ್ತಿನಗಾಡಿಯನ್ನು ಸಹ ಓಡಿಸಲಾಗುತ್ತದೆ.
ಜೊತೆಗೆ ಬಹುತೇಕ ಟ್ರಾಕ್ಟರ್ ಟಿಪ್ಪರ್‍ಗಳಿಗೆ ರಿಫ್ರಾಕ್ಟರ್ ಇಲ್ಲ.
ಇದರಿಂದ ಅಪಘಾತ ಹೆಚ್ಚುತ್ತಿದೆ ಎಂದರು.
ಎಎಸ್‍ಪಿ ರಾಜೀವ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಹೈವೇ ಯಲ್ಲಿ
ರಿಫ್ರಾಕ್ಟರ್ ಅಳವಡಿಸುವ ಆಂದೋಲನ ಏರ್ಪಡಿಸಲಾಗಿತ್ತು.
ಜೊತೆಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಸಹ
ಹಮ್ಮಿಕೊಳ್ಳಲಾಗಿತ್ತು ಎಂದರು.
ಆರ್‍ಟಿಓ ಎನ್.ಜೆ.ಬಣಕಾರ್ ಮಾತನಾಡಿ, ರೈತರ ಟ್ರಾಕ್ಟರ್ ಆರ್‍ಟಿಓ
ಕಚೇರಿಗೆ ಫಿಟ್‍ನೆಸ್ ಸರ್ಟಿಫಿಕೇಟ್‍ಗಾಗಿ ಗಾಡಿ ತೆಗೆದುಕೊಂಡ 15
ವರ್ಷಗಳ ನಂತರ ಬರುವ ಕಾರಣ ಈ ಮಧ್ಯೆ ನಮ್ಮಿಂದ ಇದರ
ಉಸ್ತುವಾರಿ ಕಷ್ಟ. ಮೇಲಾಗಿ ರೈತರು ಕೆಲಸ ಮಾಡುವ
ಹೊತ್ತಿನಲ್ಲಿ ರಿಫ್ರಾಕ್ಟರ್ ಹಾಳಾಗಿ ಹೋಗುವ ಸಂಭವ ಹೆಚ್ಚಿದ್ದು,
ಅವರು ಮತ್ತೆ ಹಾಕಿಸಿಕೊಳ್ಳುವುದಿಲ್ಲ. ಆದ್ದರಿಂದ ಸರ್ಕಾರದ
ವತಿಯಿಂದಲೇ ಜಿಲ್ಲಾವಾರು ಟ್ರಾಕ್ಟರ್‍ಗಳಿಗೆ ರಿಫ್ರಾಕ್ಟರ್
ಅಳವಡಿಸುವ ಆಲೋಚನೆ ನಡೆಸಲಾಗುತ್ತಿದೆ ಎಂದರು.
ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಮಾತನಾಡಿ, ವಾಹನ ಚಾಲನೆ
ಬಗ್ಗೆ ಅರಿವು ಕೊರತೆ ಇದೆ. ಆದ್ದರಿಂದ ಡಿಎಲ್ ಸಸ್ಪೆನ್ಶನ್‍ಗಳ ಸಂಖ್ಯೆ
ಹೆಚ್ಚಿಸಬೇಕು. ಹಾಗೂ ನಗರದ ಪಾಲಿಕೆ, ಹಳೇ ಬಸ್ ನಿಲ್ದಾಣ,
ಶಾಮನೂರು ರಸ್ತೆಯಲ್ಲಿ ಡಿವೈಡರ್ ಇಲ್ಲ. ಜೊತೆಗೆ ಅಲ್ಲಿ
ಲೈಟ್‍ಗಳು ಸಹ ಇಲ್ಲ. ಇದರಿಂದ ನಾಗರೀಕರ ಓಡಾಟಕ್ಕೆ
ತೊಂದರೆಯಾಗುತ್ತಿದ್ದು ಕ್ರಮ ಕೈಗೊಳ್ಳಬೇಕು. ಹಾಗೂ
ಎಸ್‍ಪಿ ಕಚೇರಿ ಮುಂಭಾಗ ರಸ್ತೆ ಕಾಮಗಾರಿ ತುರ್ತು ಅಗತ್ಯವಿದೆ.
ಶಾಮನೂರು ರಸ್ತೆಯಿಂದ ಲಕ್ಷ್ಮೀಫ್ಲೋರ್ ಮಿಲ್‍ವರೆಗೆ
ಫುಟ್‍ಪಾತ್ ಕೆಲಸ ಆಗಬೇಕು ಎಂದರು.
ಬಸ್ ಮಾಲೀಕರ ಸಂಘದ ಖಜಾಂಚಿ ಮಹೇಶ್ ಮಾತನಾಡಿ, ನಗರದ
ಜಲಸಿರಿ ಯೋಜನೆಯಡಿ ಹಾಕಲಾಗಿರುವ ಪೈಪ್‍ಗಳನ್ನು ಮುಚ್ಚದೇ
ಹಾಗೇ ಬಿಡಲಾಗಿದೆ. ಎಂಡ್ ಕ್ಯಾಪ್ ಹಾಕಿಲ್ಲ. ಇದಕ್ಕೆ ಎಷ್ಟೋ ದ್ವಿಚಕ್ರ
ವಾಹನಗಳು ಬಡಿದುಕೊಂಡು ಬಿದ್ದಿದ್ದಾರೆ. ಇದನ್ನು
ಮುಚ್ಚಬೇಕೆಂದರು.
ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಮಲ್ಲಾಪುರ
ಮಾತನಾಡಿ, ಡಿವೈಡರ್ ಕೆಲಸ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದು,
ಈಗ ಆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇನ್ನು ಜಲಸಿರಿ
ಯೋಜನೆಯ ಪೈಪ್‍ಗಳು ಸಹ ಹಾಗೆಯೇ ಆಗಿದ್ದು ಹೈಡ್ರೋ
ಟೆಸ್ಟಿಂಗ್‍ಗಾಗಿ ಕ್ಯಾಪ್ ಹಾಕಿಲ್ಲ. ಶೀಘ್ರವಾಗಿ ಅದನ್ನು ಹಾಕುವ ಕೆಲಸ
ಮಾಡಲಾಗುವುದು. ಹಾಗೂ ಎಸ್‍ಪಿ ಕಚೇರಿ ಮುಂದೆ ಸಹ ಕೆಲಸ
ಆರಂಭಿಸಲಾಗುವುದು ಎಂದರು.
ರಸ್ತೆ ಮಾಲೀಕರ ಸಂಘದ ಅಧ್ಯಕ್ಷರು, ಗ್ರಾಮೀಣ
ಭಾಗದಲ್ಲಿ ರಾಗಿ, ಜೋಳ, ತೊಗರಿ ಬೆಳೆಗಳನ್ನು ರಸ್ತೆಗೆ
ಹಾಕುತ್ತಾರೆ. ಇದರಿಂದ ಎಷ್ಟೋ ಅಪಘಾತಗಳು ಸಂಭವಿಸಿವೆ.
ಆದ್ದರಿಂದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಈ ಬಗ್ಗೆ
ಕ್ರಮ ವಹಿಸುವಂತೆ ಸೂಚನೆ ನೀಡಬೇಕೆಂದು ಮನವಿ
ಮಾಡಿದರು. ಹಾಗೂ ನಗರದ ಕೆ.ಆರ್.ರಸ್ತೆಯ ಫುಟ್‍ಪಾತ್‍ನ್ನು
ಒತ್ತುವರಿ ಮಾಡಲಾಗಿದೆ ಎಂದರು.
ಬಸ್ ಮಾಲೀಕರ ಸಂಘದ ಸದಸ್ಯ ಸುರೇಶ್ ಪ್ರತಿಕ್ರಿಯಿಸಿ,
ತೊಗರಿ, ರಾಗಿ ಹುಲ್ಲು ಟೈರ್‍ಗಳಿಗೆ ಸಿಕ್ಕಿಹಾಕಿಕೊಂಡು ಸ್ಕಿಡ್ ಆಗಿ ರಸ್ತೆ
ಅಪಘಾತ ಹೆಚ್ಚಾಗಿ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ
ಕೈಗೊಳ್ಳಬೇಕೆಂದರು.
ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನ ಮಾಲೀಕರ
ಸಂಘದ ಅಧ್ಯಕ್ಷ ಪಳನಿಸ್ವಾಮಿ ಮಾತನಾಡಿ, ಪಾಲಿಕೆ ಎದುರು
ಇರುವ ಆಟೋ ನಿಲ್ದಾಣಕ್ಕೆ ನಾಮಫಲಕಕ್ಕೆ ಅವಕಾಶ ನೀಡಬೇಕು
ಹಾಗೂ ವಾಹನ ನಿಲ್ದಾಣಗಳಲ್ಲಿ ಚಾಲಕರಿಗೆ ಶೆಲ್ಟರ್ ವ್ಯವಸ್ಥೆ
ಮಾಡಿಕೊಡಬೇಕೆಂದರು.
ಆರ್‍ಟಿಓ ಪ್ರತಿಕ್ರಿಯಿಸಿ, ನಗರದ ಪಾಲಿಕೆ, ಕೆ.ಆರ್.ಮಾರ್ಕೆಟ್,
ಲೋಕಿಕೆರೆ ರಸ್ತೆ ಸೇರಿದಂತೆ 7 ಕಡೆ ವಾಹನ ನಿಲ್ದಾಣಕ್ಕೆ ಅವಕಾಶ
ಮಾಡಿಕೊಡಲಾಗಿದೆ. ನಾಮಫಲಕವನ್ನು ಎಲ್ಲಿ ಅಳವಡಿಸಬೇಕೆಂದು
ಪಾಲಿಕೆ ಜೊತೆಗೆ ಸ್ಥಳೀಯ ಪೊಲೀಸರೊಂದಿಗೆ ಚರ್ಚಿಸಿ
ಅವಳಡಿಸಿಕೊಳ್ಳುವಂತೆ ತಿಳಿಸಿದರು.
ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಫುಲ್ಲಾ
ಅಂಡರ್‍ಪಾಸ್‍ಗಳಲ್ಲಿ ನೀರು ನಿಲ್ಲುವುದನ್ನು ಸರಿಪಡಿಸಬೇಕು,
ಹಲವೆಡೆ ಲೈಟ್‍ಗಳನ್ನು ಅಳವಡಿಸಬೇಕು ಹಾಗೂ ಆಫೀಸರ್ಸ್ ಕ್ಲಬ್
ಬಳಿ ಹಾಕಿರುವ ಗಿಡಗಳ ನಿರ್ವಹಣೆ ಆಗಬೇಕೆಂದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಪಿಡಬ್ಲ್ಯುಡಿ
ಕಾರ್ಯಪಾಲಕ ಅಭಿಯಂತರ ಮಲ್ಲಿಕಾರ್ಜುನ, ಡಿಹೆಚ್‍ಓ
ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ
ಸದಸ್ಯರು, ಅಧಿಕಾರಿಗಳು ಇದ್ದರು.