ದಾವಣಗೆರೆ ಜೂ.13  
ಮಳೆಗಾಲದ ಅವಧಿಯಲ್ಲಿ 22 ಕೆರೆಗಳಿಗೆ ನೀರು ತುಂಬಿಸುವ
ಯೋಜನೆಯಾದ ರಾಜನಹಳ್ಳಿ ಏತ ನೀರಾವರಿಗೆ ಜೂನ್ 22 ರಂದು
ಚಾಲನೆ ನೀಡಲಾಗುವುದು ಎಂದು ಸಂಸದರಾದ ಜಿ.ಎಂ.ಸಿದ್ದೇಶ್ವರ
ಹೇಳಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 22
ಕೆರೆಗಳಿಗೆ ನೀರು ತುಂಬಿಸುವ ರಾಜನಹಳ್ಳಿ ಏತ ನೀರಾವರಿ
ಯೋಜನೆಯ ನಿರ್ವಹಣೆ ಮತ್ತು ರಾಷ್ಟ್ರೀಯ ಹೆದ್ದಾರಿ-4 ರ
ಪಕ್ಕದಲ್ಲಿನ ಪೈಪ್ ಶಿಫ್ಟಿಂಗ್ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಮಾರು 9 ವರ್ಷಗಳ ಹಿಂದೆ ಮಂಜೂರಾತಿ ಪಡೆದುಕೊಂಡ
ರಾಜನಹಳ್ಳಿ ಜಾಕ್‍ವೆಲ್ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ.
ಇದಕ್ಕೆ ಕಂಟ್ರಾಕ್ಟುದಾರರು ಸೇರಿದಂತೆ ಅನೇಕ ತಾಂತ್ರಿಕ
ತೊಂದರೆಗಳು ಕಾರಣವಾಗಿದ್ದವು. ಈ ಬಾರಿ ಶೇ.100 ಕೆರೆಗಳಿಗೆ
ನೀರು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಎಲ್ಲ
ಕಾಮಗಾರಿಗಳು ಮುಗಿದಿವೆ. ಆದರೆ ರೈತರು ಈ ಯೋಜನೆ
ಸಫಲವಾಗುವಲ್ಲಿ ಸಹಕರಿಸಬೇಕು. ಎಲ್ಲರೂ
ಚೆನ್ನಾಗಿರಬೇಕೆಂಬುದೇ ನಮ್ಮ ಆಶಯ. ಎಲ್ಲ 22 ಕೆರೆಗಳಿಗೆ
ನೀರು ತಲುಪಿಸಲು ಪ್ರಯತ್ನ ಮಾಡಲಾಗುವುದು. ಆದಕಾರಣ
ರೈತರು ಮಧ್ಯದಲ್ಲಿ ವಾಲ್ವ್ ಒಡೆಯುವ, ಇನ್ನಿತರೆ ಮಾಡದೇ
ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಯೋಜನೆಯಡಿ ತುಂಗಭದ್ರ ನದಿಗೆ ಅಡ್ಡಲಾಗಿ 30 ಅಡಿ
ಬ್ಯಾರೇಜ್ ನಿರ್ಮಿಸಲಾಗಿದೆ. ನದಿಯಿಂದ 240 ಮೀಟರ್‍ವರೆಗಿನ
ಕಾಲುವೆಯಲ್ಲಿ 1 ಅಡಿ ಶಿಲ್ಟ್ ಇದ್ದು ಅದನ್ನು ಕ್ಲಿಯರ್
ಮಾಡಿಸಲಾಗುವುದು. ಕೆಇಬಿ ಇಲಾಖೆ ಸಹ ಅನಿರ್ಬಂಧಿತ ವಿದ್ಯುತ್
ನೀಡುವ ಭರವಸೆ ನೀಡಿದ್ದು ನೀರಾವರಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ
ಮತ್ತು ಕೆಇಬಿ ಎಲ್ಲ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, 22
ಕೆರೆ ತುಂಬಿಸುವ ಹೋರಾಟ ಸಮಿತಿ ಅಧ್ಯಕ್ಷರು, ಸದಸ್ಯರು,
ಶಾಸಕರು, ಜನಪ್ರತಿನಿಧಿಗಳು, ಸಿರಿಗೆರೆ ಶ್ರೀಗಳು ಎಲ್ಲ ಸೇರಿ 22

ಕೆರೆ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈ
ಯೋಜನೆ ಯಶಸ್ವಿಯಾಗಲು ರೈತರೂ ಸಹಕರಿಸಬೇಕು.
ಜೊತೆಗೆ ವರುಣನ ಕೃಪೆ ಅತ್ಯವಶ್ಯಕವಾಗಿದೆ ಎಂದರು.
ಈ ಯೋಜನೆಯು ಜೂನ್ ತಿಂಗಳಿನಿಂದ ನವೆಂಬರ್ ತಿಂಗಳವರೆಗೆ
ಒಟ್ಟು 180 ದಿನಗಳ ವರೆಗೆ ತುಂಗಭದ್ರ ನದಿಯಿಂದ ನೀರನ್ನು
ಎತ್ತಿ 22 ಕೆರೆಗಳಿಗೆ ಶೇ.75 ತುಂಬಿಸುವ ಯೋಜನೆಯಾಗಿದೆ. ಈ
ಯೋಜನೆಯು ಎರಡು ಹಂತಗಳನ್ನು ಒಳಗೊಂಡಿದ್ದು
ಮೊದಲನೇ ಹಂತದಲ್ಲಿ ಹರಿಹರ ತಾಲ್ಲೂಕಿನಲ್ಲಿ ಹಲಸಬಾಳು
ಗ್ರಾಮದ ಬಳಿ ತುಂಗಭದ್ರ ನದಿಯಿಂದ 100 ಮೀಟರ್ ಎತ್ತರಕ್ಕೆ
ನೀರನ್ನೆತ್ತಿ 28 ಕಿ.ಮೀ. ದೂರದಲ್ಲಿರುವ ದಾವಣಗೆರೆ ತಾಲ್ಲೂಕಿನ
ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಎರಡನೇ ಹಂತಕ್ಕೆ
ನೀರೊದೊಗಿಸುವುದು. ಎರಡನೇ ಹಂತದಲ್ಲಿ ಉದ್ದೇಶಿತ
ಕೆರೆಗಳಿಗೆ ಸುಮಾರು 70 ಮೀಟರ್ ಎತ್ತರಕ್ಕೆ ನೀರೆತ್ತಿ ಒಟ್ಟು 150
ಕಿ.ಮೀ ಪೈಪ್‍ಲೈನ್ ಮುಖಾಂತರ ಯೋಜಿತ ಕೆರೆಗಳಿಗೆ
ನೀರೊದೊಗಿಸಲಾಗುವುದು.
ಕ ನೀರಾವರಿ ನಿ ನಿ ನಂ.5 ಭದ್ರನಾಲಾ ವಿಭಾಗದ ಕಾರ್ಯಪಾಲಕ
ಅಭಿಯಂತರ ಮಲ್ಲಪ್ಪ ಮಾತನಾಡಿ, ರಾಜನಹಳ್ಳಿ ಜಾಕ್‍ವೆಲ್
ಯೋಜನೆಗೆ ಸಂಬಂಧಿಸಿದಂತೆ ಇನ್ನು 5.5 ಕಿ.ಮೀ ಪೈಪ್‍ಲೈನ್ ಕೆಲಸ
ಬಾಕಿ ಇದೆ ಹಾಗೂ ಮೂರು ಕಡೆ ಗ್ಯಾಪ್ ಇದ್ದು ಇನ್ನೊಂದು
ವಾರದೊಳಗೆ ಆ ಕೆಲಸವನ್ನು ಪೂರ್ಣಗೊಳಿಸಿ ಜೂನ್ 22 ರೊಳಗೆ
ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ4 ರ ಪಕ್ಕದಲ್ಲಿನ ಪೈಪ್ ಶಿಫ್ಟಿಂಗ್
ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ
ಯೋಜನಾ ನಿರ್ದೇಶಕ ಮಲ್ಲಿಕಾರ್ಜುನಪ್ಪ ಮಾತನಾಡಿ, ರಾಷ್ಟ್ರೀಯ
ಹೆದ್ದಾರಿ-4 ರ ಸರಪಳಿ 260 ರಿಂದ 278 ರವರೆಗೆ ಆಯ್ದ ಭಾಗಗಳಲ್ಲಿ
ಒಟ್ಟು ಉದ್ದ 12 ಕಿ.ಮೀ ಗಳಲ್ಲಿ 6.25 ಕಿ.ಮೀ ಪೂರ್ಣಗೊಂಡಿದ್ದು ಉಳಿದ
5.75 ಕಾಮಗಾರಿ ಮಾಡಿಸಬೇಕಾಗಿದೆ. ಭೂಸ್ವಾಧೀನ ಪ್ರಕ್ರಿಯೆ
ತಡವಾದ್ದರಿಂದ ಈ ಕಾಮಗಾರಿ ಬಾಕಿ ಇದೆ ಎಂದರು.
ಸಂಸದರು ಪ್ರತಿಕ್ರಿಯಿಸಿ ಇದೇ ಜೂನ್ 26 ಕ್ಕೆ ಈ ಕಾಮಗಾರಿ
ಮುಗಿಯಬೇಕಿತ್ತು. ಭೂಸ್ವಾಧೀನವಾಗಿಲ್ಲವೆಂದು ನಮ್ಮ
ಗಮನಕ್ಕೆ ತರಬೇಕಿತ್ತು. ಕೂಡಲೇ ಈ ಕಾರ್ಯ ಕೈಗೊಂಡು
ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸಂಬಂಧಿಸಿದ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಶಾಮನೂರು ಬಳಿ ಈ
ಸಮಸ್ಯೆ ಇದ್ದು ನಾನು, ಎಸಿ ಮತ್ತು ತಹಶೀಲ್ದಾರ್ ಮತ್ತು
ಸಂಬಂಧಿಸಿದ ಅಧಿಕಾರಿಗಳೊಂದಿಗೆ ಅಲ್ಲಿಗೆ ಭೇಟಿ ನೀಡಿ ಕ್ರಮ
ವಹಿಸುತ್ತೇನೆ ಎಂದರು.
ಸಭೆಯಲ್ಲಿ ಶಾಸಕರಾದ ಪ್ರೊ.ಲಿಂಗಣ್ಣ, 22 ಕೆರೆಗಳಿಗೆ ನೀರು
ತುಂಬಿಸುವ ಯೋಜನಾ ಸಮಿತಿಯ ಅಧ್ಯಕ್ಷ ಡಾ.ಮಂಜುನಾಥ
ಗೌಡ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್‍ಪಿ ರಾಜೀವ್, ಎಸಿ ಮಮತಾ
ಹೊಸಗೌಡರ್ ದಾವಣಗೆರೆ ತಹಶೀಲ್ದಾರ್ ಗಿರೀಶ್, ಹರಿಹರ ತಹಶೀಲ್ದಾರ್
ರಾಮಚಂದ್ರಪ್ಪ, ಇತರೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *