ಹೊನ್ನಾಳಿ: ‘ಮಕ್ಕಳಿಗೆ ಆರೋಗ್ಯವು ಅತಿಮುಖ್ಯ ಕೊವಿಡ್ 19 ಜಗತ್ತೆ ತಲ್ಲಣಗೊಳಿಸಿದೆ. ಹಲವು ದೇಶಗಳಲ್ಲಿ ಶಾಲೆಯ ಪ್ರಾರಂಭಕ್ಕಾಗಿ ಹಲವು ಚರ್ಚೆಗಳು, ಮುನ್ನೆಚರಿಕೆಯ ಕ್ರಮಗಳನ್ನು ಅಲ್ಲಿನ ಸರ್ಕಾರಗಳು ತೆಗೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ರಾಜ್ಯ, ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆಯನ್ನು ಇಡುತ್ತದೆ ಎಂಬ ನಂಬಿಕೆ ಇದೆ. ಹಾಗೇಯೆ ಮಕ್ಕಳಿಗೆ ಶಿಕ್ಷಣದ ಕೊರತೆಯಾಗದಂತೆ ಎಚ್ಚರಿಕೆಯನ್ನು ವಹಿಸಬೇಕು’ ಎಂದು ಭಾರತೀಯ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ.ಎಚ್.ಪಿ ರಾಜ್‍ಕುಮಾರ್ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಸರಣಿ ಪೋಷಕರ ಸಭೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪೋಷಕರ ಅಭಿಪ್ರಾಯ ಸಮೀಕರಿಸಿ ಮಾತನಾಡಿದ ಅವರು, ‘ಶಾಲೆ ಪ್ರಾರಂಭವು ಕೋವಿಡ್ 19 ಹತೋಟಿಗೆ ಬಂದ ನಂತರ ಶಾಲೆಗಳನ್ನು ಪ್ರಾರಂಭಿಸಿದರೆ ಒಳ್ಳೆಯದು ಎಂಬ ಅಭಿಪ್ರಾಯವಿದೆ. ಆದಾಗ್ಯೂ ಸರ್ಕಾರ ಹಲವು ಮುಂಜಾಗ್ರತ ಕ್ರಮವಹಿಸಿ ಶಾಲೆ ಪ್ರಾರಂಭಿಸಿದರೆ ನಮ್ಮ ಅಭ್ಯಂತರವಿಲ್ಲ ಎಂಬ ಅಭಿಪ್ರಾಯವು ಪೋಷಕರದ್ದು. ಅವರ ಕಾಳಜಿ ಒಂದೇ, ನಮ್ಮ ಮಕ್ಕಳಿಗೆ ತಡವಾಗಿಯಾದರೂ ಪರವಾಗಿಲ್ಲ 10 ತಿಂಗಳ ಶೈಕ್ಷಣಿಕ ವರ್ಷವನ್ನು ಕಡಿತಗೊಳಿಸುವ ನಿರ್ಧಾರ ಬೇಡ. ಎಂದು ಶಾಲೆ ಪ್ರಾರಂಭವಾಗುತ್ತದೆಯೋ ಅಂದಿನಿಂದ 10 ತಿಂಗಳು ಶಿಕ್ಷಣ ನೀಡಬೇಕು. ಪಠ್ಯ, ಪಠ್ಯೇತರ ವಿಷಯದಲ್ಲಿ ಕಡಿತಗೊಳಿಸಬಾರದು’ ಎಂಬ ಸಲಹೆಯನ್ನು ಸರ್ಕಾರವು ಪಾಲಿಸಬೇಕು ಎಂದರು.
ಕೊರೊನಾ ರೋಗವು ಬಹುಬೇಗ ಹರಡುವುದರಿಂದ ಎಚ್ಚರಿಕೆಯಿಂದ ಇರಬೇಕು. ಅದು ಹರಡುವ ಕೊಂಡಿಯನ್ನು ಕತ್ತರಿಸಿದರೆ ನಾವು ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ನಾವು ಮುನ್ನೆಚ್ಚರಿಕೆಯನ್ನು ಕೈಗೊಂಡರೆ ಸಾಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ್ಗೆ ಕೈ, ಕಾಲು ತೊಳೆದುಕೊಳ್ಳಿ, ಅಂತರ ಕಾಯ್ದುಕೊಳ್ಳುವುದರಿಂದ ಈ ರೋಗದಿಂದ ದೂರವಿರಬಹುದು ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಲ್.ಎಸ್ ವೈಶ್ಯರ್, ಸಹಕಾರ್ಯದರ್ಶಿ ಎಚ್.ಲಿಂಗಯ್ಯ, ಖಜಾಂಚಿ ಎಚ್.ಎನ್ ಬಸವರಾಜಪ್ಪ, ನಿರ್ದೇಶಕರುಗಳಾದ ಹಾಲೇಶ್ ಕುಂಕೋದ್, ಗಣೇಶ್ ಕೆ. , ಎಚ್.ಎಂ ಅರುಣ್‍ಕುಮಾರ್ ಸಲಹಾ ಸಮಿತಿ ಸದಸ್ಯರು, ಮಖ್ಯೋಪಾಧ್ಯಾಯರಾದ ತಿಮ್ಮೇಶ್ ಆರ್, ದೇವಿರಮ್ಮ ಜೆ. ಹಾಗೂ ಗಿರೀಶ್ ಎನ್.ಎಂ, ಶಿಕ್ಷಕರು , ಪೋಷಕರು ಇದ್ದರು.
ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾಸಂಸ್ಥೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಶಾಲೆ ಪ್ರಾರಂಭದ ಬಗ್ಗೆ ಆಡಳಿತ ಮಂಡಳಿಯ ಸದಸ್ಯರು ಪೋಷಕರೊಂದಿಗೆ ಚರ್ಚಿಸಿದರು.