ದಾವಣಗೆರೆ ಜೂ.19
  ವ್ಯಕ್ತಿಗತ ಸುರಕ್ಷತೆಯ ಜೊತೆಗೆ ಸಮಾಜದ ಆರೋಗ್ಯ
ರಕ್ಷಣೆಗೂ ಮಾಸ್ಕ್ (ಮುಖಗವುಸು) ಧರಿಸುವುದು ಉತ್ತಮ
ಅಭ್ಯಾಸ. ಇದರಿಂದ ಕೊರೊನಾ ಸೇರಿದಂತೆ ಯಾವುದೇ ವೈರಾಣು
ಹರಡದಂತೆ ತಡೆಯಲು ಸಹಕಾರಿ ಎಂದು ಜಿಲ್ಲಾ ಸರ್ವೇಕ್ಷಣಾ
ಅಧಿಕಾರಿ ಡಾ. ರಾಘವನ್ ತಿಳಿಸಿದರು.
   ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಏರ್ಪಡಿಸಿದ್ದ ಮಾಸ್ಕ್
ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೈರಾಣು
ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನಿನ ಹನಿಗಳು
ಗಾಳಿಯಲ್ಲಿರುವಾಗ ಅದರ ಮೂಲಕ ಕೊರೊನಾ ವೈರಾಣು
ಆರೋಗ್ಯವಂತ ವ್ಯಕ್ತಿಯಯನ್ನು ಪ್ರವೇಶಿಸಿ ಶ್ವಾಸಕೋಶಕ್ಕೆ
ತೊಂದರೆ ಮಾಡುವ ಸಾಧ್ಯತೆಗಳು ಹೆಚ್ಚು. ಮಾಸ್ಕ್ ಧರಿಸಿದರೆ
ರೋಗಾಣು ಪ್ರವೇಶಿಸುವ ಅವಕಾಶಗಳನ್ನು ತಡೆಯುತ್ತದೆ
ಎಂದರು.
    ಕೆಲವು ಸಂದರ್ಭದಲ್ಲಿ ಸೋಂಕಿತ ವ್ಯಕ್ತಿಯಲ್ಲಿ ಯಾವುದೇ
ರೀತಿಯ ರೋಗ ಲಕ್ಷಣಗಳು ಕಾಣದಿದ್ದರೂ ಆಂತರಿಕವಾಗಿ
ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು
ಇರುತ್ತವೆ. ಎಲ್ಲರೂ ಮಾಸ್ಕ್ ಧರಿಸಿದರೆ ಕೊರೊನಾ ವೈರಾಣುವನ್ನು
ಶೇ. 80 ರಷ್ಟು ನಿಯಂತ್ರಿಸಬಹುದು. ಅಲ್ಲದೆ ಸಮಸ್ಯೆ ಹಾಗೂ
ಗಂಭೀರತೆಯನ್ನೂ ತಡೆಯಲು ಸಹಕಾರಿಯಾಗಿದ್ದು,
ಸಮಾಜದಲ್ಲಿ ವೈರಾಣು ಹರಡದಂತೆ ತಡೆಯಲು
ನೆರವಾಗುವುದು ಎಂದು ಹೇಳಿದರು.
   ಮಾಸ್ಕ್ ಮೂರು ವಿಧಗಳಿವೆ. ಬಟ್ಟೆಯಿಂದ ತಯಾರಿಸಿದ
ಮಾಸ್ಕ್‍ಗಳಿಂದ ಶೇ. 60ರಷ್ಟು ರೋಗಾಣು ತಡೆಯಬಹುದು.

ಶಸ್ತ್ರ ಚಿಕಿತ್ಸಕ ಮಾಸ್ಕ್ ಆರೋಗ್ಯಕರವಾದರೂ 8 ತಾಸಿಗಿಂತ
ಹೆಚ್ಚು ಹೊತ್ತು ಬಳಸಲು ಸಾಧ್ಯವಾಗದು. ಎನ್-95 ಮಾಸ್ಕ್
ಆರೋಗ್ಯ ನಿಯಂತ್ರಣಕ್ಕೆ ಉತ್ತಮವಾಗಿದ್ದು, ಅದನ್ನು ಮರು
ಬಳಕೆ ಮಾಡಬಹುದು. ಇವೆಲ್ಲವುಗಳಿಗಿಂತ ಮನೆಯಲ್ಲಿಯೇ
ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಧರಿಸುವುದು ಉತ್ತಮ ಎಂದು
ಹೇಳಿದರು.
   ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಸವರಾಜ ಬಣಕಾರ
ಮಾತನಾಡಿ, ಮಾಸ್ಕ್ ಧರಿಸುವುದರಿಂದ ಕೇವಲ ಕೊರೊನಾ
ವೈರಸ್‍ನಿಂದ ರಕ್ಷಣೆ ಪಡೆಯುವುದಕ್ಕೆ ಸೀಮಿತವಾಗಿಲ್ಲ.
ಪರಿಸರದಲ್ಲಿ ವಾಹನಗಳ ದಟ್ಟಣೆಯಿಂದ ತುಂಬಿರುವ ಇಂಗಾಲದ
ಡೈ ಆಕ್ಸೈಡ್ ಹಾಗೂ ಇನ್ನಿತರ ವೈರಾಣುಗಳಿಂದಲೂ ಮುಕ್ತಿ
ಪಡೆಯಲು ಸಹಕಾರಿ. ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲರ
ಸಹಕಾರ ಅಗತ್ಯ ಎಂದು ತಿಳಿಸಿದರು.
   ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಾಸ್ಕ್ ಧರಿಸುವುದನ್ನು
ಕಡ್ಡಾಯ ಮಾಡಲಾಗಿದೆ. ಅಲ್ಲದೆ ಮಾಸ್ಕ್ ಧರಿಸುವುದರ
ಮಹತ್ವವನ್ನು ಸಮಾಜಕ್ಕೆ ತಿಳಿಸಿ, ಜಾಗೃತಿ ಮೂಡಿಸುವ
ಪ್ರಯತ್ನ ಮಾಡಿದೆ. ಈ ಬಾರಿ ವಿಶ್ವವಿದ್ಯಾನಿಲಯದ ವತಿಯಿಂದ
ಸುಮಾರು ರೂ. 1.5 ಲಕ್ಷ ಮೌಲ್ಯದ ಮಾಸ್ಕ್‍ಗಳನ್ನು
ಸಾರ್ವಜನಿಕರಿಗೆ ವಿತರಿಸಿ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸಲಾಗಿದೆ
ಎಂದು ಹೇಳಿದರು.
   ಪ್ರಾಧ್ಯಾಪಕರಾದ ಪ್ರೊ.ವಿ.ಕುಮಾರ್, ಪ್ರೊ.ಕೆ.ಬಿ.ರಂಗಪ್ಪ,
ಪ್ರೊ.ಕೆ.ವೆಂಕಟೇಶ್, ನೋಡಲ್ ಅಧಿಕಾರಿ ಡಾ.ಶರತ್,
ಪ್ರಾಧ್ಯಾಪಕರಾದ ಡಾ.ಎಚ್.ವಿಶ್ವನಾಥ, ಪ್ರೊ.ಮಹಾಬಲೇಶ್ವರಪ್ಪ,
ಡಾ.ಎನ್.ಎಸ್. ಗುಂಡೂರ, ಡಾ.ಅಶೋಕ ಕುಮಾರ ಪಾಳೇದ,
ಪ್ರೊ.ರವಿಕುಮಾರ ಪಾಳೇದ, ಡಾ.ಸಂತೋಷ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *