ದಾವಣಗೆರೆ ಜೂ.29
ಕೊರೊನಾ ಮುಚ್ಚಿಡುವ ವಿಷಯವೂ ಅಲ್ಲ. ಕೊರೊನಾ ಬಂದರೆ
ಯಾರೊಬ್ಬರು ಆತಂಕವೂ ಪಡಬೇಕಿಲ್ಲ. ಆಸ್ಪತ್ರೆಗೆ
ತೋರಿಸಿಕೊಂಡು ಗುಣಮುಖರಾಗುವುದು ಎಲ್ಲರ ಕರ್ತವ್ಯವಾಗಿದೆ
ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಸೋಮವಾರ ನ್ಯಾಮತಿ ತಾಲ್ಲೂಕಿನ ಸುರುಹೊನ್ನೆ ಗ್ರಾಮದಲ್ಲಿ
ಅಂಗನವಾಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡ ಮೇಲಂತಸ್ತು
ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ
ಅವರು, ಕೊರೊನಾ ಬಂದವರು ವಯಸ್ಸಾದವರನ್ನು, ಗರ್ಭಿಣಿ
ಸ್ತ್ರೀಯರನ್ನು ಹಾಗೂ ಸಣ್ಣ ಮಕ್ಕಳನ್ನು ಮುಟ್ಟುವುದು
ಸರಿಯಲ್ಲ. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದಿಲ್ಲ.
ಹಾಗಾಗಿ ಬಹಳ ಜಾಗೃತಿಯಿಂದ ಇರಬೇಕು. ಬಹುಶಃ ಕೊರೊನಾ
ತೊಲಗುವವರೆಗೂ ಬಹಳಷ್ಟು ಎಚ್ಚರಿಕೆ ವಹಿಸುವುದು ಸೂಕ್ತ
ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯನ್ನು ಕೊರೊನಾ ಮುಕ್ತವಾಗಿಸಲು ಸಾಧ್ಯವಾಗುತ್ತಿಲ್ಲ.
ಯಾಕೆಂದರೆ ತಾಲ್ಲೂಕಿನಲ್ಲಿಯೂ ಕೂಡ ಕೊರೊನಾ ಕೇಸ್
ಪತ್ತೆಯಾಗುತ್ತಿವೆ. ಆದ್ದರಿಂದ ಸಾಮಾಜಿಕ ಅಂತರ
ಕಾಪಾಡಿಕೊಳ್ಳಬೇಕು. ಮಾಸ್ಕ್ ಹಾಕಿಕೊಂಡು ಓಡಾಡಬೇಕು.
ಯಾರೊಬ್ಬರು ಸಮ್ಮನೆ ಓಡಾಡವುದು, ಹರಟೆ
ಹೊಡೆಯುವುದು ಜೊತೆಗೆ ಗುಂಪು ಕಟ್ಟಿಕೊಂಡು
ಸೇರುವುದು ಮಾಡಬಾರದು. ಇದರಿಂದ ಕೊರೊನಾ ಸಂಖ್ಯೆ
ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ
ಎಂದರು.
ದೇಶದಲ್ಲಿ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ ಹೊರತು
ಕಡಿಮೆಯಾಗುತ್ತಿಲ್ಲ. ಇದೀಗ ಎಲ್ಲೆಡೆ ಹೆಚ್ಚು ಲ್ಯಾಬ್
ತೆರೆಯಲಾಗಿದೆ. ಇದರಿಂದ ಕೊರೊನಾ ಗಂಟಲು ದ್ರವ ಪರೀಕ್ಷೆ
ಸಂಖ್ಯೆ ಜಾಸ್ತಿಯಾಗಿದ್ದು, ಹೆಚ್ಚೆಚ್ಚು ಜನರು ಕೊರೊನಾಕ್ಕೆ
ತುತ್ತಾಗಿರುವುದು ಕಂಡು ಬರುತ್ತಿವೆ ಎಂದರು.
ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು ಸಹ ಕೋಟ್ಯಂತರ ರೂಪಾಯಿ
ಮೊತ್ತದ ಕಾಮಗಾರಿಗೆ ಹೊನ್ನಾಳಿ-ನ್ಯಾಮತಿ ಅವಳಿ
ತಾಲ್ಲೂಕುಗಳಲ್ಲಿ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ
ಹಂತ ಹಂತವಾಗಿ ಶಾಸಕರ ಜೊತೆ ಸೇರಿಕೊಂಡು ಅಭಿವೃದ್ಧಿ
ಕೆಲಸಗಳನ್ನು ಮಾಡಲಾಗುವುದು ಎಂದು ಭರವಸೆ
ನೀಡಿದರು.
ಪ್ರಪಂಚದಲ್ಲಿನ ಎಲ್ಲ ರಾಷ್ಟ್ರಗಳು ಕೊರೊನಾದಿಂದಾಗಿ
ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿವೆ. ಇಂತಹ ಸಂದರ್ಭದಲ್ಲಿ
ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು
ವಿಶೇಷವಾಗಿ ರೂ. 1.70 ಲಕ್ಷ ಕೋಟಿ ಗರೀಬ್ ಕಲ್ಯಾಣ
ಯೋಜನೆಯಡಿಯಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ತದನಂತರ
ರೂ.20 ಲಕ್ಷ ಕೋಟಿ, ಕೇಂದ್ರ ಸರ್ಕಾರದ ಅರ್ಧ ಬಜೆಟ್
ಹಣವನ್ನು ಕೊರೊನಾ ಸಂಕಷ್ಟದಲ್ಲಿ ಸಿಲುಕಿದ್ದ ರೈತರು, ಸಣ್ಣ
ಉದ್ದಿಮೆ ಹಾಗೂ ಕಾರ್ಮಿಕರು ಸೇರಿದಂತೆ ಅನೇಕ ಯೋಜನೆಗಳಿಗೆ
ಹಣ ಬಿಡುಗಡೆ ಮಾಡಲಾಗಿದ್ದು, ಸರ್ಕಾರ ಜನಪರವಾಗಿದೆ ಎಂಬುದು
ಇದರಿಂದ ತಿಳಿದು ಬರುತ್ತದೆ ಎಂದು ಹೇಳಿದರು.
ಹಣ ಮುಖ್ಯವಲ್ಲ. ಹಣಕ್ಕಿಂತ ಜೀವ ಮುಖ್ಯ. ಅದಕ್ಕಾಗಿ
ಮೋದಿಯವರು ರೈತರಿಗೆ, ಅಸಂಘಟಿತ ಕಾರ್ಮಿಕರಿಗೆ
ಪ್ರೋತ್ಸಾಹಧನ ನೀಡಿದ್ದಾರೆ. ಉಜ್ವಲ್ ಯೋಜನೆಯಲ್ಲಿ ಉಚಿತ ಗ್ಯಾಸ್
ಸಿಲಿಂಡರ್ ಒದಗಿಸಿದ್ದಾರೆ. ಜೊತೆಗೆ ಜನ್‍ಧನ್ ಯೋಜನೆಯಡಿಯಲ್ಲಿ
ಖಾತೆಗೆ ಹಣ ಜಮಾ ಮಾಡಲಾಗಿದೆ. ಸ್ವತಂತ್ರ ಬಂದಮೇಲೆ ಈ
ರೀತಿಯಾದ ಯೋಜನೆಗಳು ಹಾಗೂ ಖಾತೆಗೆ ಹಣ ಜಮಾ
ಮಾಡಿರುವುದು ಮೋದಿ ಮಾತ್ರ ಎಂದು ಶ್ಲಾಘೀಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಮತ್ತು
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಸುರುಹೊನ್ನೆ
ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಹಾಗೂ ವಾಣಿಜ್ಯ ಕಟ್ಟಡ
ಮೇಲಂತಸ್ತು ಮಳಿಗೆಗಳ ಉದ್ಘಾಟನೆ ಸೇರಿದಂತೆ, 95 ಲಕ್ಷದ
ಸಿಮೆಂಟ್ ಸಿಸಿ ರಸ್ತೆಯ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು
ಸರಳವಾಗಿ ಆಚರಿಸಲಾಗಿದೆ ಎಂದರು.
ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ಹೆಚ್ಚುತ್ತಿದ್ದು,
ನಮ್ಮ ರಾಷ್ಟ್ರದಲ್ಲೂ ಸಹ ಕೊರೊನಾ ಕೇಸ್‍ಗಳ ಸಂಖ್ಯೆ
ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ನಿನ್ನೆ ಒಂದು ದಿನಕ್ಕೆ ದೇಶದಲ್ಲಿ 25
ಸಾವಿರ ಕೇಸ್ ಪತ್ತೆಯಾಗಿವೆ. ಅದರಂತೆ ರಾಜ್ಯದಲ್ಲಿ 1200 ಕೇಸ್ ಬಂದಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್
ಧರಿಸುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು
ಸಹಕರಿಸಬೇಕು ಎಂದರು.
ಅವಳಿ ತಾಲ್ಲೂಕುಗಳಾದ ಹೊನ್ನಾಳಿ ಮತ್ತು ನ್ಯಾಮತಿ
ತಾಲ್ಲೂಕಿನಲ್ಲಿ 7 ಪ್ರಕರಣ ಬಂದು ವಾಸಿಯಾಗಿದ್ದು, ಇದೀಗ ಮತ್ತೆ 5
ಕೇಸ್ ಕಂಡುಬಂದಿದೆ. ಕೇವಲ ಪ್ರಧಾನಮಂತ್ರಿ, ಮುಖ್ಯಮಂತ್ರಿ,
ಸರ್ಕಾರ ಹಾಗೂ ಅಧಿಕಾರಿಗಳು ಪಾಲಿಸುವುದಲ್ಲ. ಅದರೊಂದಿಗೆ
ಜನರು ಎಚ್ಚೆತ್ತುಕೊಳ್ಳಬೇಕು. ಸರ್ಕಾರದ
ನಿಯಮಗಳನ್ನು ಪಾಲಿಸುವ ಮೂಲಕ ಸ್ವಯಂ ಪ್ರೇರಿತರಾಗಿ
ಜನರು ಜಾಗೃತಿ ಹೊಂದಬೇಕು ಎಂದರು.
ಕೊರೊನಾ ನಿಯಂತ್ರಣಕ್ಕೆ ವಾರಿಯರ್ಸ್, ವೈದ್ಯರು, ದಾದಿಗಳು,
ಆಶಾ ಕಾರ್ಯಕರ್ತೆಯರು ಸೇರಿದಂತೆ ಪ್ರತಿಯೊಂದು
ಇಲಾಖೆಯ ಎಲ್ಲ ಅಧಿಕಾರಿಗಳು ಹಗಲಿರುಳು ಕೆಲಸ
ಮಾಡುತ್ತಿದ್ದಾರೆ. ನಮ್ಮ ಆರೋಗ್ಯಕ್ಕಾಗಿ ಕಾರ್ಯ
ನಿರ್ವಹಿಸುತ್ತಿರುವವರಿಗೆ ಸಹಕಾರ ನೀಡುವುದು ಬಹಳ
ಮುಖ್ಯವಾಗಿದ್ದು, ನಮ್ಮೆಲ್ಲರ ಜವಾಬ್ದಾರಿ ಕೂಡ ಆಗಿದೆ. ಈ
ಹಿನ್ನೆಲೆಯಲ್ಲಿ ಜನಸಾಮಾನ್ಯರು ಕೊರೊನಾ ನಿಯಂತ್ರಣಕ್ಕೆ
ಸಹಕರಿಸಬೇಕು. ಅನವಶ್ಯಕವಾಗಿ ಓಡಾಡಬಾರದು. ಈ ಮೂಲಕ
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು
ಅರಿಯಬೇಕು ಎಂದರು.
ಸರ್ಕಾರ ರೈತರ ಹಾಗೂ ಜನರ ಪರವಾಗಿದ್ದು, ಜನಪರವಾದ
ಪ್ಯಾಕೇಜ್ ಘೋಷಣೆ ಮಾಡಿದೆ. ಕೃಷಿ ಕಾರ್ಮಿಕರಿಗೆ, ತರಕಾರಿ ಹಣ್ಣು
ಬೆಳೆಗಾರರಿಗೆ ಹಾಗೂ ಹೂ ಬೆಳೆಗಾರರು ಸೇರಿದಂತೆ ಆಟೋ
ಡ್ರೈವರ್ ಹಾಗೂ ಮಡಿವಾಳರು ಮತ್ತು ಅಸಂಘಟಿತ
ಕಾರ್ಮಿಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ ಜಗದೀಶ್ ಮಾತನಾಡಿ,
ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಜನರ ಆರೋಗ್ಯ
ದೃಷ್ಟಿಯಿಂದ ಹಲವಾರು ಕಾರ್ಯಕ್ರಮ ಘೋಷಣೆ ಮಾಡಿದೆ. ಈ
ಕಾರ್ಯಕ್ರಮಗಳು ಯಶಸ್ವಿಯಾಗಲು ನಾಗರಿಕರ
ಸಹಭಾಗಿತ್ವ ಮುಖ್ಯವಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡಲು
ಪ್ರತಿಯೊಬ್ಬರು ಮುಂದಾಗಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಜಿಲ್ಲಾ
ಪಂಚಾಯತ್ ಸದಸ್ಯರಾದ ಉಮಾ ಎಂ.ಪಿ.ರಮೇಶ್, ಎಂ.ಆರ್.ಮಹೇಶ್,
ಸುರುಹೊನ್ನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ ಹಿರಿಯಮ್ಮ,
ಉಪಾಧ್ಯಕ್ಷರಾದ ಎಸ್.ಸದಾಶಿವಪ್ಪ ಮತ್ತಿತರರು ಹಾಜರಿದ್ದರು.