“ಶಿಕ್ಷಣವು ಕೇವಲ ಓದು-ಬರಹ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಹೊರತೆಗೆಯುವ ಮಹತ್ವದ ಕಾರ್ಯವನ್ನು ಪ್ರತಿಭಾ ಕಾರಂಜಿ ವೇದಿಕೆ ಮಾಡುತ್ತಿದೆ” ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಕಸಬಾ-1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
“ಶೈಕ್ಷಣಿಕ ವರ್ಷದ ಮೊದಲಾರ್ಧದಲ್ಲಿ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯಕ್ಕೆ ಪೂರಕವಾಗಿ ಕ್ರೀಡಾ ಚಟುವಟಿಕೆಗಳು ನಡೆದರೆ, ದ್ವಿತೀಯಾರ್ಧದಲ್ಲಿ ಅವರ ಸೃಜನಶೀಲತೆ ಮತ್ತು ಕಲಾತ್ಮಕ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೆ.ಎಂ. ಕರಿಬಸಯ್ಯ ಅವರು ಪರಿಸರ ಮತ್ತು ಸಂಪನ್ಮೂಲಗಳ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. “ಜಗತ್ತಿನಲ್ಲಿಯೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದ ಕೇಪ್ಟೌನ್ ನಗರವು ನೀರಿನ ತೀವ್ರ ಅಭಾವದಿಂದ ಮುಚ್ಚುವ ಹಂತಕ್ಕೆ ತಲುಪಿದೆ. ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ನೀರನ್ನು ಮಿತವಾಗಿ ಬಳಸುವುದನ್ನು ರೂಢಿಸಿಕೊಳ್ಳಬೇಕು ಮತ್ತು ಆಹಾರವನ್ನು ವ್ಯರ್ಥ ಮಾಡಬಾರದು” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎನ್ಜಿಒ ಅಧ್ಯಕ್ಷ ಅರುಣ್ ಕುಮಾರ್, ಟಿಪಿಇಒ ಜಗದೀಶ್, ಇಸಿಒ ಕಿರಣ್ ಕುಮಾರ್, ಎನ್ಜಿಒ ಗೌರವಾಧ್ಯಕ್ಷ ಎಚ್.ಎಸ್. ಚಂದ್ರಶೇಖರ್, ಜಿಲ್ಲಾಧ್ಯಕ್ಷ ಎಸ್.ಜಿ. ಉಮಾಪತಿ, ತಾಲೂಕು ಅಧ್ಯಕ್ಷ ಜಿ. ತಿಮ್ಮಪ್ಪ,, ಕಾರ್ಯದರ್ಶಿ ಪ್ರಕಾಶ್ ನಾಯಕ್, ಸಿಆರ್ಪಿ ಡಿ.ಎಂ. ವೀರೇಶ್, ಭಾರತೀಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಚ್. ಲಿಂಗಯ್ಯ, ಸೋಮಶೇಖರಪ್ಪ ಕೆ, ಗಣೇಶ್ ಕೆ, ಹಾಲೇಶ್ ಕುಂಕೋದ್, ರೂಪ ಕರಿಸಿದ್ದಪ್ಪ ಹಾಗೂ ಮಹೇಂದ್ರ ಕುಮಾರ್, ಎನ್. ಹೊನ್ನೇಶ್, ಪ್ರಶಾಂತ್, ಗಿರೀಶ್ ನಾಡಿಗ್ ಉಪಸ್ಥಿತರಿದ್ದರು.
ಚಿತ್ರ ಶೀರ್ಷಿಕೆ
ಹೊನ್ನಾಳಿಯ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಛದ್ಮವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.
