ಸಂಕಟ ಬಂದಾಗ ವೆಂಕಟರಮಣ ಎಂಬ ಮಾತಿದೆ. ನಿಜಕ್ಕೂ ಈ ಮಾತು ಎಷ್ಟು ಸಮಜಂಸ ಅಲ್ಲವೇ? ನಾನಿಲ್ಲಿ ಹೇಳ ಹೊರಟಿರುವುದು ಸಂಕಟ ಎಂದರೆ ರೋಗಗಳು ವೆಂಕಟರಮಣನೆಂದರೆ ಈ ರೋಗಗಳನ್ನು ವಾಸಿ ಮಾಡುವ ವೈದ್ಯರು. ಆದ್ದರಿಂದಲೇ ವೈದ್ಯನನ್ನು ನಾರಾಯಣ ಎನ್ನುವುದು. ದೇವರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾನೆ. ಅದೇ ಕೆಲಸವನ್ನು ವೈದ್ಯರು ನಮ್ಮ ಅದೆಷ್ಟೋ ಸಮಸ್ಯೆಗಳ ಪರಿಹಾರ ಮಾಡುವ ಕೆಲಸ ಮಾಡುತ್ತಾರೆ. ಅದಕ್ಕಾಗಿ ಅವರನ್ನು ನೆನೆಯಲು ಒಂದು ದಿನ ನಿಗದಿಗೊಳಿಸಿದೆ. ಅದುವೇ ಜುಲೈ 1.

ಈ ದಿನವಿಶೇಷವಾದ ದಿನ. ವೈದ್ಯರಾಗಿದ್ದಲ್ಲದೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬಿ.ಸಿ ರಾಯ್‌ ಅವರ ಜನ್ಮದಿನವನ್ನು ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ವೈದ್ಯಕೀಯ ಸೇವೆಯ ಮೂಲಕ ಅದೆಷ್ಟೋ ಜೀವಗಳನ್ನು ಉಳಿಸಿದ ವೈದ್ಯರನ್ನು ಅಭಿನಂದಿಸುವ ಕಾರ್ಯವು ನಮ್ಮದು.

ನನ್ನ ಜೀವನದಲ್ಲಿ ಬಹು ಮಹತ್ವದ ಪಾತ್ರ ವಹಿಸಿದ್ದವರು ಹಲವು ವೈದ್ಯರಿದ್ದಾರೆ.ನನ್ನ ಆ ಕಾರಳ ಸಮಯವನ್ನು ನೆನಸಿಕೊಳ್ಳುವ ಮೂಲಕ ನನ್ನ ಜೀವ ಉಳಿಸಿದ ವೈದ್ಯರನ್ನು ನೆನಸಿಕೊಳ್ಳಲು ಇದು ಸದಾವಕಾಶ ಒದಗಿಸಿದೆ. ಆ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇಲ್ಲಿಗೆ 10 ವರ್ಷಗಳ ಹಿಂದೆ ಕಮ್ಮಾರಗಟ್ಟೆಯ ಬಳಿ ಬೈಕ್ ಅಪಘಾತವಾಗಿತ್ತು. ನಾನು ಹಿಂಬದಿಯಲ್ಲಿ ಕುಳಿತಿದ್ದೆ. ಬೈಕ್‌ಬೈಕ್ ನಡುವೆ ಮುಖಾಮುಖಿಯಾಗಿದ್ದವು. ನಾನು ಹಿಂಬದಿಯಲ್ಲಿ ಕುಳಿತಿದ್ದು, ನನ್ನ ತಲೆಗೆ ಬಲವಾಗಿ ಹೊಡೆತ ಬಿದ್ದಿದು. ನಾನು ಬಿದ್ದಿರುವ ಸ್ಥಿತಿಯನ್ನು ಗಮನಿಸಿದ ಹಲವರು ಈತ ಸತ್ತಿದ್ದಾನೆ ಎಂದು ತಿಳಿದುಕೊಂಡು ನನ್ನ ಮುಟ್ಟುವಲ್ಲಿ ಹಿಂದೇಟು ಹಾಕಿದರು ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.ನನಗೆ ಈ ಘಟನೆಯ ಬಗ್ಗೆ ನೆನಪಿಲ್ಲ. 

ಇನ್ನು ನಾನು ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಸಂಸ್ಥೆಯ ಕಾರ್ಯದರ್ಶಿಯು ವೈದ್ಯರಾಗಿದ್ದ ಡಾ.ಎಚ್‌.ಪಿ ರಾಜ್‌ಕುಮಾರ್ ಸರ್, ನನಗೆ ಮಾವರಾಗಿದ್ದ ಡಾ.ಚಿದಾನಂದ ಇಬ್ಬರು ಹಾಗೂ ಅಲ್ಲಿಯೇ ಇದ್ದ ಹೊನ್ನಾಳಿ ಸರ್ಕಾರಿ ವೈದ್ಯರು ಚಿಕಿತ್ಸೆಯನ್ನು ನೀಡಿದರು. ನಂತರ ನನ್ನಲ್ಲಿ ನಿಲ್ಲದೆ ವಾಂತಿಯಾಗುತ್ತಿದ್ದರಿಂದ ತಲೆಯಲ್ಲಿ ಏನೋ ಸಮಸ್ಯೆಯಿದೆ ಎಂದರಿತ ನನ್ನ ಆತ್ಮೀಯ ವೈದ್ಯರಿರ್ವರು ದಾವಣಗೆರೆಯ ಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಿ ತಲೆಯ ಎಂಆರ್‌ಐ ಸ್ಯ್ಕಾನ್ ಮಾಡಿದಾಗ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದಿದೆ.ತಲೆಯಲ್ಲಿ ರಕ್ತ ಹೆಪ್ಪುಗಟ್ಟಿದರೆ ತೊಂದರೆ. ಈ ರಕ್ತವನ್ನು ಮದುಳೂಳಗೆ ಸೇರುವ ಮುನ್ನವೇ ತೆಗೆಯಬೇಕು. ಎಂದು ರಾತ್ರಿ 12 ಗಂಟೆಯಲ್ಲಿಯೇ ನನ್ನನ್ನು ಬೆಂಗಳೂರಿನ ಸೆಂಟ್‌ಜಾನ್ಸ್ ಆಸ್ಪತ್ರೆಗೆ ನನ್ನ ಮಾವನಾದ ಡಾ.ಚಿದಾನಂದ್ ನೇತೃತ್ವದಲ್ಲಿ ದಾಖಲಿಸಿದರು. ಅಲ್ಲಿನ ವೈದ್ಯರು 6 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದರು. ಅದರ ಪರಿಣಾಮ ನನ್ನ ಆರೋಗ್ಯದಲ್ಲಿ ಏರುಪೇರಾಗದೆ ಯಥಾ ಪ್ರಕಾರ ಬದುಕಿದ್ದೇನೆ. 

ಒಂದು ವೇಳೆ  ಶಸ್ತ್ರ ಚಿಕಿತ್ಸೆ ವಿಫಲವಾಗಿದ್ದರೆ. ನಾನು ಹುಚ್ಚನಾಗಿಯೋ, ಎಲ್ಲಾ ನೆನಪುಗಳನ್ನು ಕಳದುಕೊಂಡ ಜೀವಂತ ಶವವಾಗಿಯೋ ಇರಬೇಕಾಗಿತ್ತು. ಇದು ನನ್ನ ಜೀವನದಲ್ಲಿ ನಡೆದ ಘಟನೆ. ಇಂತಹ ಹಲವು ಜನರ ಆರೋಗ್ಯವನ್ನು ವೈದ್ಯರು ಕಾಪಾಡಿದ್ದಾರೆ. ಅದೆಷ್ಟೋ ಜೀವಗಳನ್ನು ಉಳಿಸಿ ಮರುಜೀವ ನೀಡಿದ್ದಾರೆ. ಈ ಎಲ್ಲಾ ವೈದ್ಯರುಗಳಿಗೆ ಜೀವ ಉಳಿಸಿದ ಜೀವದಾತರಿಗೆ ಅನಂತ ಅನಂತ ವಂದನೆಗಳು. ಅದೆಷ್ಟೋ ಜನರು ಜೀವ ಉಳಿಸಿದ ವೈದ್ಯರ ಪೋಟೋಗಳನ್ನು ಇಟ್ಟು ಪೂಜಿಸುತ್ತಾರೆ. ಈಗ ಕೊರೊನಾದ ಹಾವಳಿಯಲ್ಲಿಯೂ ಅದೆಷ್ಟೋ ವೈದ್ಯರು ತಮ್ಮ ಕುಟುಂಬ, ತಮ್ಮ ಜೀವ, ತಮ್ಮ ಆಸೆ ಬದಿಗಿಟ್ಟು ನಮ್ಮಂತಹ ಅದೆಷ್ಟೋ ಜನರ ಜೀವ ಉಳಿಸಲು ಟೊಂಕಕಟ್ಟಿ ನಿಂತಿದ್ದಾರೆ. ಅಂತಹ ಸಹಸ್ರಾರು ವೈದ್ಯರಿಗೆ ಜುಲೈ 1 ರಾಷ್ಟ್ರೀಯ ವೈದ್ಯ ದಿನಾಚರಣೆಯಂದು ಅಂದು ನಮ್ಮ ಮನೆಯಲ್ಲಿಯೇ ದೀಪ ಹಚ್ಚಿ ವೈದ್ಯರಿಗೊಂದು ನಮನವನ್ನು ಸಲ್ಲಿಸೋಣ. ಅಮೇರಿಕಾದಲ್ಲಿ ಜೀವ ಕೊರೊನಾದಿಂದ ಜೀವ ಉಳಿಸಿದ ಭಾರತೀಯ ಮೂಲದ ವೈದ್ಯೆಗೆ ವಾಹನಗಳ ಮೂಲಕ ಅವರ ಮನೆಯ ಮುಂದೆ ಪಥ ಸಂಚಲನ ಮಾಡುವ ಮೂಲಕ ಅಭಿನಂದನೆಯನ್ನು ಸಲ್ಲಿಸಿದರು. ಈಗ ನಮ್ಮ ದೇಶದಲ್ಲಿಯೂ ಅದೆಷ್ಟೋ ಕೊರೊನಾ ರೋಗಿಗಳ ಗುಣಮುಖರಾಗಿದ್ದಾರೆ. ಅವರಿಗೂ ನಾವು ನಮ್ಮದೆ ರೀತಿಯಲ್ಲಿ ನಮನವನ್ನು ಸಲ್ಲಿಸೋಣ. ನಮ್ಮ ಕಣ್ಣಮುಂದೆ ಕಾಣುವ ದೇವರಲ್ಲಿ ವೈದ್ಯರೂ ಒಬ್ಬರು ಅವರಿಗೆ ಕೋಟಿ ಕೋಟಿ ನಮನಗಳು.

ಗಿರೀಶ ಎಂ ನಾಡಿಗ್  ಹನುಮನಹಳ್ಳಿ, ಶಿಕ್ಷಕರು ಭಾರತೀಯ ವಿದ್ಯಾಸಂಸ್ಥೆ ಹೊನ್ನಾಳಿ.

Leave a Reply

Your email address will not be published. Required fields are marked *