ಸಂಸದರ ಮನವಿ

ಕೋವಿಡ್ ರೋಗಿಗಳು ಸರ್ಕಾರಿ ಆಸ್ಪತ್ರೆಯಿಂದ ರೆಫರೆನ್ಸ್
ಪಡೆದು ಎಬಿಎಆರ್‍ಕೆ ಯೋಜನೆಯಡಿ ಎಂಪಾನೆಲ್ ಆಗಿರುವ ಖಾಸಗಿ
ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದ್ದು,
ಕೋವಿಡ್ ಸೋಂಕಿತರು ಈ ಯೋಜನೆಯ ಉಪಯೋಗ
ಪಡೆಯಬೇಕೆಂದು ಸಂಸದರಾದ ಜಿ.ಎಂ ಸಿದ್ದೇಶ್ವರ ಮನವಿ
ಮಾಡಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಕ್ಸಿಜನ್
ಪೂರೈಕೆ ಮತ್ತು ಬೆಡ್‍ಗಳು ಮತ್ತು ಲಸಿಕೆ ನಿರ್ವಹಣೆ
ಕುರಿತು ಚರ್ಚಿಸಲು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿ, ಸುವರ್ಣ ಆರೋಗ್ಯ ಸುರಕ್ಷ ಟ್ರಸ್ಟ್
ವತಿಯಿಂದ ಸರ್ಕಾರ ಜಾರಿಗೊಳಿಸಿರುವ ಎಬಿಎಆರ್‍ಕೆ ಯೋಜನೆಯಡಿ
ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯ
ಸೌಲಭ್ಯವನ್ನು ಜನ ಸಾಮಾನ್ಯರು ಪಡೆಯಬೇಕೆಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಮತ್ತು ಮೆಡಿಕಲ್ ಕಾಲೇಜಿನ
ಆಸ್ಪತ್ರೆಯಲ್ಲಿ ಶೇ.75 ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ
ಮೀಸಲಿಡಬೇಕೆಂಬ ನಿಯಮವಿದೆ. ಇದುವರೆಗೆ ಎಬಿಎಆರ್‍ಕೆ ಯಿಂದ
ಖಾಸಗಿ ಆಸ್ಪತ್ರೆಗೆ ರೆಫರೆನ್ಸ್ ಪಡೆದು ಕೇವಲ 64 ಜನರು
ಮಾತ್ರ ಉಚಿತ ಚಿಕಿತ್ಸೆಯ ಸದುಪಯೋಗ ಪಡೆದಿದ್ದಾರೆ. ಸಿ.ಜಿ.
ಆಸ್ಪತ್ರೆ ಹೊರತುಪಡಿಸಿ ಖಾಸಗಿಯಲ್ಲಿ 1535 ಬೆಡ್‍ಗಳು
ರೋಗಿಗಳಿಗೆ ನಿಗದಿ ಆಗಿದ್ದು ಬಹಳಷ್ಟು ಜನರು ಈ
ಯೋಜನೆಯ ಬಳಕೆ ಮಾಡುತ್ತಿಲ್ಲ. ಆದ ಕಾರಣ
ಸೋಂಕಿತರು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ
ರೆಫರೆನ್ಸ್ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ
ಪಡೆಯಬಹುದು. ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆ
ನೀಡಿದ ವೆಚ್ಚ ಭರಿಸುವುದು ಎಂದು ಮಾಹಿತಿ ನೀಡಿದರು.
ಎಬಿಎಆರ್‍ಕೆ ರೆಫರೆನ್ಸ್ ನೀಡಲು ತಂಡ : ಎಬಿಎಆರ್‍ಕೆ ಅಡಿ ಖಾಸಗಿ
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರೆಫರೆನ್ಸ್ ನೀಡಲು
ಜಿಲ್ಲಾಸ್ಪತ್ರೆಯಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುವ
ವೈದ್ಯರು ಸೇರಿದಂತೆ 8 ಜನರ ಹೆಲ್ಪ್‍ಡೆಸ್ಕ್ ತಂಡ ರಚಿಸಲಾಗಿದೆ.
ಇವರನ್ನು ಭೇಟಿ ಮಾಡಿ ಖಾಸಗಿ ಆಸ್ಪತ್ರೆ ದಾಖಲಾತಿಗೆ ಮುನ್ನ
ರೆಫರೆನ್ಸ್ ಪಡೆಯಬೇಕು ಎಂದರು.

ಸಿಸಿಸಿ ಐಸೊಲೇಷನ್ ಉತ್ತಮ: ಪ್ರತಿಷ್ಟಿತ ಬಡಾವಣೆಗಳಲ್ಲಿಯೇ
ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರತ್ಯೇಕ
ಕೊಠಡಿ ಇತರೆ ವ್ಯವಸ್ಥೆ ಇದೆ ಎಂದು ಮನೆಯಲ್ಲಿಯೇ
ಐಸೊಲೇಟ್ ಆಗುತ್ತಿದ್ದಾರೆ. ಆದರೆ ಸಮರ್ಪಕವಾಗಿ
ಐಸೊಲೇಷನ್ ನಿಯಮ ಪಾಲಿಸದೇ ಮನೆಯವರೆಲ್ಲ ಪಾಸಿಟಿವ್
ಆಗುತ್ತಿರುವುದು ಕಂಡು ಬಂದಿದೆ. ಆದ ಕಾರಣ ನಗರದ
ತರಳಬಾಳು ಶ್ರೀಗಳು ಎಲ್ಲ ರೀತಿಯ ವ್ಯವಸ್ಥೆ ಇರುವ
ತರಳಬಾಳು ಬಾಲಕಿಯರ ಹಾಸ್ಟೆಲ್‍ನ್ನು ಕೋವಿಡ್ ಆರೈಕೆ
ಕೇಂದ್ರವಾಗಿಸಲು ನೀಡಿದ್ದು ಇಲ್ಲಿ 90 ಜನರಿಗೆ ಅವಕಾಶವಿದೆ. ಇಲ್ಲಿ
ಐಸೋಲೇಟ್ ಆಗುವ ಮೂಲಕ ಕೋವಿಡ್ ಸರಪಳಿಯನ್ನು
ತುಂಡರಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.
ಆಕ್ಸಿಜನ್ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ:
ಪ್ರಸ್ತುತ ಜಿಲ್ಲೆಯಲ್ಲಿ ಸ್ವಲ್ಪ ಆಕ್ಸಿಜನ್ ಕೊರತೆ ಇರುವುದು ನಿಜ.
ಪ್ರಸ್ತುತ 14 ಕೆ ಎಲ್ ಆಕ್ಸಿಜನ್ ಸರಬರಾಜಾಗುತ್ತಿದ್ದು 23 ಕೆಎಲ್‍ಗೆ
ಒತ್ತಾಯ ಮಾಡಲಾಗುತ್ತಿದೆ. ಆಕ್ಸಿಜನ್ ಸಮಸ್ಯೆಯನ್ನು
ಪರಿಹರಿಸಲು ಕೇಂದ್ರದ ಸಚಿವರು ಹಾಗೂ
ಮುಖ್ಯಮಂತ್ರಿಗಳು, ಆರೋಗ್ಯ ಸಚಿವರೊಂದಿಗೆ
ಮಾತನಾಡಿದ್ದೇನೆ ಎಂದರು.
ನಗರದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ತಮ್ಮಲ್ಲಿ
ರೆಮಿಡಿಸಿವಿರ್ ಲಸಿಕೆ ಇಲ್ಲ. ಜಿಲ್ಲಾಧಿಕಾರಿಗಳ ಬಳಿ ಹೋಗಿ ಕೇಳಿದರೆ
ನೀಡುತ್ತಾರೆಂದು ಕಳುಹಿಸಿದ್ದಾರೆ. ಹಾಗೂ ಆಕ್ಸಿಜನ್ ಇಲ್ಲ. ನೀವೇ
ವ್ಯವಸ್ಥೆ ಮಾಡಿದರೆ ಚಿಕಿತ್ಸೆ ನೀಡುತ್ತೇವೆಂದು ರೋಗಿಗಳ
ಕಡೆಯವರಿಗೇ ವ್ಯವಸ್ಥೆ ಮಾಡಲು ತಿಳಿಸಿರುವುದು
ಗಮನಕ್ಕೆ ಬಂದಿದೆ. ಹೀಗೆ ರೋಗಿಗಳ ಬಳಿಯೇ ವ್ಯವಸ್ಥೆ
ಮಾಡಿಸುವುದಾದರೆ ಖಾಸಗಿ ಆಸ್ಪತ್ರೆಗಳ ಪಾತ್ರವೇನು?
ಇನ್ನು ಮುಂದೆ ಈ ರೀತಿ ಮಾಡುವುದು ನನ್ನ ಗಮನಕ್ಕೆ
ಬಂದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ
ಅವರು ಆ ರೀತಿಯ ಅವಶ್ಯಕತೆಗಳನ್ನು ಖುದ್ದಾಗಿ
ಜಿಲ್ಲಾಧಿಕಾರಿಗಳು ಅಥವಾ ಜನಪ್ರತಿನಿಧಿಗಳ ಬಳಿ ಕೇಳಿ
ಪರಿಹರಿಸಿಕೊಳ್ಳಬೇಕೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಖಾಸಗಿ ಆಸ್ಪತ್ರೆಯವರು ಈ
ರೀತಿ ರೋಗಿಗಳ ಕಡೆಯಿಂದಲೇ ಔಷಧ ಮತ್ತೊಂದು
ವ್ಯವಸ್ಥೆ ಮಾಡಿಕೊಡುವಂತೆ ಕೇಳಿದರೆ ಕೆಪಿಎಂಇ ಅಡಿಯಲ್ಲಿ
ನೋಟಿಸ್ ನೀಡಿ ಸೇವೆಯನ್ನು ನಿಲಂಬನೆಗೊಳಿಸುವ ಕ್ರಮ
ಜರುಗಿಸಲಾಗುವುದು. ಏನಾದರೂ ಕೊರತೆ ಇದ್ದರೆ ನನ್ನ ಬಳಿ
ಚರ್ಚೆ ಮಾಡಬೇಕು. ಅದು ಬಿಟ್ಟು ರೋಗಿಗಳ ಕಡೆಯವರಿಗೆ
ವ್ಯವಸ್ಥೆ ಮಾಡುವಂತೆ ತಿಳಿಸಬಾರದು ಎಂದು ತಾಕೀತು
ಮಾಡಿದರು.
ಇಎಸ್‍ಐ ಆಸ್ಪತ್ರೆಯಲ್ಲಿ ವ್ಯವಸ್ಥೆ : ಇಎಸ್‍ಐ ಆಸ್ಪತ್ರೆಯಲ್ಲಿ 50 ಆಕ್ಸಿಜನ್
ಬೆಡ್‍ಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಇಂದಿನಿಂದಲೇ
ರೋಗಿಗಳನ್ನು ಅಲ್ಲಿಗೆ ಸ್ಥಳಾಂತರಿಸಬಹುದಾಗಿದೆ ಎಂದರು.
ಹಾಗೂ ಸಿ ಜಿ ಆಸ್ಪತ್ರೆಯ ರೂಂ ಸಂಖ್ಯೆ 65 ಮತ್ತು 66 ರಲ್ಲಿ
ಸ್ಟೆಪ್‍ಡೌನ್ ವಾರ್ಡ್ ಮಾಡಿ ಬೆಡ್‍ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಮುಂದೆ
ಆಕ್ಸಿಜನ್ ಲಭ್ಯತೆ ಹೆಚ್ಚಾದಲ್ಲಿ ಬೆಡ್‍ಗಳ ಸಂಖ್ಯೆಯನ್ನು ಸಹ
ಹೆಚ್ಚಿಸಲಾಗುವುದು ಎಂದರು.
ತಾಲ್ಲೂಕುಗಳಲ್ಲಿ ಸಿಸಿಸಿ ಬಳಕೆ ಮಾಡಿಕೊಳ್ಳಿರಿ :
ತಾಲ್ಲೂಕುಗಳಲ್ಲಿನ ಕೋವಿಡ್ ಕೇರ್ ಸೆಂಟರ್‍ಗಳ

ಬಳಕೆಯನ್ನು ಜನರು ಮಾಡಿಕೊಳ್ಳಬೇಕು. ಹೋಂ
ಐಸೊಲೇಷನ್ ಸಮರ್ಪಕವಾಗಿ ಮಾಡಿಕೊಳ್ಳದಿದ್ದರೆ
ಮನೆಯವರೆಲ್ಲಾ ಪಾಸಿಟಿವ್ ಆಗುತ್ತಾರೆ. ಆದ ಕಾರಣ ಸಿಸಿಸಿ ಬಳಕೆ
ಮಾಡಿಕೊಳ್ಳಬೇಕು. ನ್ಯಾಮತಿ ತಾಲ್ಲೂಕಿನ ರಾಮೇಶ್ವರ
ಗ್ರಾಮದಲ್ಲಿ ಬಹಳಷ್ಟು ಜನರಿಗೆ ಕೋವಿಡ್ ಸೋಂಕು
ತಗುಲಿದ್ದು ಕಂಟೈನ್‍ಮೆಂಟ್ ಝೋನ್ ಮಾಡಲಗಿದೆ. ಆದ
ಕಾರಣ ಎಲ್ಲರೂ ಎಚ್ಚರಿಕೆಯಿಂದ ಇರಬೇಕು.
ಹಾಗೂ ಎಲ್ಲ ತಾಲ್ಲೂಕುಗಳಲ್ಲಿ 50 ಆಕ್ಸಿಜನ್ ಬೆಡ್‍ಗಳ ವ್ಯವಸ್ಥೆ
ಇದ್ದು, ಗಂಭೀರವಾದ ರೋಗಿಗಳನ್ನು ಮಾತ್ರ
ಜಿಲ್ಲಾಸ್ಪತ್ರೆಗೆ ಕಳುಹಿಸಬೇಕು ಎಂದರು.
ಜಿಲ್ಲಾಸ್ಪತ್ರೆಯಲ್ಲಿ 17 ಜನ ತಜ್ಞ ವೈದ್ಯರು ಮತ್ತು 30
ದಾದಿಯರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಅನಸ್ತೇಷಿಯಾ ಮತ್ತು ಪಲ್ಮನರಿ ವೈದ್ಯರ ಕೊರತೆ ಇದೆ. ಈ
ಹುದ್ದೆಗಳಿಗೂ ಅರ್ಜಿ ಕರೆದಿದ್ದು ಹುದ್ದೆ ಭರ್ತಿಯಾದಲ್ಲಿ ಸಿಬ್ಬಂದಿ
ಕೊರತೆಯಿಂದ ಚಾಲನೆಯಲ್ಲಿ ಇಲ್ಲದ ವೆಂಟಿಲೇಟರ್‍ಗಳನ್ನು
ಚಾಲನೆಗೊಳಿಸಲಾಗುವುದು.
ಕಡಿಮೆ ಪಾಸಿಟಿವಿಟಿ ದರ ಪಟ್ಟಿಯಲ್ಲಿ ದಾವಣಗೆರೆ : ಕೇಂದ್ರ
ಸರ್ಕಾರ ದೇಶದಲ್ಲಿ ಹೆಚ್ಚು ಪ್ರಕರಣ ಇರುವ 100
ಜಿಲ್ಲೆಗಳನ್ನು ಗುರುತಿಸಿದ್ದು ಅದರಲ್ಲಿ 17 ಜಿಲ್ಲೆ ನಮ್ಮ ರಾಜ್ಯ
ಸೇರಿದ್ದವಾಗಿವೆ. ಹಾಗೂ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳ
ಪಟ್ಟಿಯಲ್ಲಿ ದಾವಣಗೆರೆ ಇರುವುದು ಅಭಿನಂದನೀಯ.
ಹೀಗೆಯೇ ಜಿಲ್ಲಾಡಳಿತದೊಂದಿಗೆ ಎಲ್ಲರೂ ಸಹಕರಿಸುವ
ಮೂಲಕ ಕೋವಿಡ್ ಚೈನ್ ಬ್ರೇಕ್ ಮಾಡಬೇಕು ಎಂದರು.
ಸಭೆಯಲ್ಲಿ ಸುಕ್ಷೇಮ, ಸುಚೇತ, ಆರೈಕೆ, ಆಶ್ರಯ
ಸೇರಿದಂತೆ ಕೋವಿಡ್ ಚಿಕಿತ್ಸೆ ನೀಡುವ ಆಸ್ಪತ್ರೆಯ ವೈದ್ಯರು
ತಮ್ಮ ಆಸ್ಪತ್ರೆಗಳಲ್ಲಿ ಪ್ರಸ್ತುತ ಆಕ್ಸಿಜನ್ ಕೊರತೆ ಇದ್ದು,
ತಮಗೆ ಇಂತಿಷ್ಟು ಆಕ್ಸಿಜನ್ ನೀಡಲಾಗುವುದು ಎಂದು
ನಿಗದಿಗೊಳಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ
ಉಂಟಾದ ಆಕ್ಸಿಜನ್ ಕ್ರೈಸಿಸ್‍ನಿಂದ ಸ್ವಲ್ಪ ವ್ಯತ್ಯಯವಾಗಿದೆ. ಇನ್ನು
ಮೂರು ನಾಲ್ಕು ದಿನಗಳಲ್ಲಿ ಇದು ಸರಿ ಹೋಗಲಿದ್ದು ಮುಂದಿನ
ದಿನಗಳಲ್ಲಿ ಯಾವುದೇ ತೊಡಕಿಲ್ಲದೆ ನಿರಂತರ ಆಕ್ಸಿಜನ್
ಪೂರೈಕೆ ಮಾಡುವ ಭರವಸೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆಯ ಮಹಾಪೌರರಾದ ಎಸ್.ಟಿ
ವಿರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಡಿಸಿ ಪೂಜಾರ
ವೀರಮಲ್ಲಪ್ಪ, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಡಿಹೆಚ್‍ಒ ಡಾ.
ನಾಗರಾಜ್, ಡಿಎಸ್ ಡಾ.ಜಯಪ್ರಕಾಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.
ರಾಘವನ್, ಆರ್‍ಸಿಹೆಚ್‍ಒ ಡಾ.ಮೀನಾಕ್ಷಿ, ಡಾ.ಮುರಳೀಧರ ಹಾಗೂ
ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *