ಕೋವಿಡ್ ಸೋಂಕಿನ 2ನೇ ಅಲೆಯನ್ನು ಪರಿಣಾಮಕಾರಿಯಾಗಿ
ನಿಯಂತ್ರಿಸಲು ಹಾಗೂ ಸೋಂಕು ಹರಡುವಿಕೆಯ
ಸರಪಳಿಯನ್ನು ತುಂಡರಿಸಲು ಜಿಲ್ಲೆಯಲ್ಲಿ ವಾರದ 04 ದಿನ ಸಂಪೂರ್ಣ
ಲಾಕ್‍ಡೌನ್ ಮತ್ತು 03 ದಿನ ಸಾಮಾನ್ಯ ಲಾಕ್‍ಡೌನ್ ವಿಧಿಸಲು ಕ್ರಮ
ಜರುಗಿಸುವಂತೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ. ಬಸವರಾಜ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ
ನೀಡಿದರು.
ಕೋವಿಡ್ -19 ನಿಯಂತ್ರಣದ ಕುರಿತು ಜಿಲ್ಲೆಯಲ್ಲಿ
ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ
ಮುಂಜಾಗ್ರತಾ ಕ್ರಮಗಳ ಬಗ್ಗೆ, ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಪರಿಶೀಲನಾ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆಯನ್ನು ಪರಿಣಾಮಕಾರಿಯಾಗಿ
ನಿಯಂತ್ರಿಸಲು ಇನ್ನಷ್ಟು ಬಿಗಿ ಕ್ರಮಗಳನ್ನು
ಕೈಗೊಳ್ಳುವುದು ಅನಿವಾರ್ಯವಾಗಿದೆ. ಸರ್ಕಾರದ ಕ್ರಮಗಳಿಗೆ
ಜನರು ಸಹಕಾರ ನೀಡುತ್ತಿಲ್ಲ. ಹೀಗಾದಲ್ಲಿ ಕೊರೋನಾ
ನಿಯಂತ್ರಿಸಲು ಹೇಗೆ ಸಾಧ್ಯ, ಪರಿಸ್ಥಿತಿ ಕೈಮೀರುವ ಮೊದಲೇ
ನಾವು ಎಚ್ಚರಿಕೆ ವಹಿಸಿ, ಕೋವಿಡ್ ಹರಡುವಿಕೆಯ ಸರಪಳಿಯನ್ನು
ತುಂಡರಿಸುವ ಸಲುವಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕಠಿಣ ಕ್ರಮ
ಜರುಗಿಸಲೇಬೇಕಿದೆ. ಹೀಗಾಗಿ ಜಿಲ್ಲೆಯಲ್ಲಿ ವಾರದಲ್ಲಿ 04 ದಿನ ಸಂಪೂರ್ಣ
ಲಾಕ್‍ಡೌನ್ ಹಾಗೂ 03 ದಿನ ಈಗಿರುವಂತೆ ಸಾಮಾನ್ಯ ಲಾಕ್‍ಡೌನ್
ಜಾರಿಗೊಳಿಸಬೇಕು. ಈಗಾಗಲೆ ಶಿವಮೊಗ್ಗ ಜಿಲ್ಲೆಯಲ್ಲಿ ಈ ರೀತಿ ಕ್ರಮ
ಕೈಗೊಂಡಿದ್ದು, ದಾವಣಗೆರೆ ಜಿಲ್ಲೆಯಲ್ಲಿಯೂ ಇದೇ ಮಾದರಿಯನ್ನು
ಅನುಸರಿಸುವುದು ಸೂಕ್ತ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್,
ಶಾಸಕರುಗಳಾದ ಮಾಡಾಳ್ ವಿರುಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ
ಅವರು ಸಚಿವರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು,
ಜಿಲ್ಲೆಯಲ್ಲಿ ಕೂಡಲೆ ವಾರದ 04 ದಿನ ಸಂಪೂರ್ಣ ಲಾಕ್‍ಡೌನ್ ಮತ್ತು 03
ದಿನ ಸಾಮಾನ್ಯ ಲಾಕ್‍ಡೌನ್ ವಿಧಿಸಲು ಅಗತ್ಯ ಕ್ರಮ ಕೈಗೊಂಡು,
ಯಾವ ವಾರಗಳಂದು ಯಾವ ರೀತಿಯ ಲಾಕ್‍ಡೌನ್ ಇರಬೇಕು
ಎಂಬುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸಿ, ಆದೇಶ ಹೊರಡಿಸಬೇಕು.
ಸಂಪೂರ್ಣ ಲಾಕ್‍ಡೌನ್ ಅವಧಿಯಲ್ಲಿ ಒಂದು ನರಪಿಳ್ಳೆಯೂ

ರಸ್ತೆಗಿಳಿಯದಂತೆ ಕಠಿಣ ಕ್ರಮವನ್ನು ಪೊಲೀಸ್ ಇಲಾಖೆ
ಕೈಗೊಳ್ಳಬೇಕು ಎಂದು ಸಚಿವರು ಸಭೆಯಲ್ಲಿಯೇ ಆದೇಶ
ನೀಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಪ್ರತಿಕ್ರಿಯಿಸಿ,
ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ
ನೀಡದೇ ಹೋದರೆ ಕೋವಿಡ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ.
ಲಾಕ್‍ಡೌನ್ ಸಂದರ್ಭದಲ್ಲಿ ಪೊಲೀಸರು ಕಠಿಣ ಕ್ರಮ ಜರುಗಿಸುವುದು
ಅನಿವಾರ್ಯವಾಗಿದೆ, ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ
ಕ್ರಮಗಳಿಗೆ ಇಲ್ಲಸಲ್ಲದ ಅಪಪ್ರಚಾರ ನೀಡುತ್ತಾರೆ.
ಮಾಧ್ಯಮಗಳೂ ಕೂಡ ಇದನ್ನು ಟೀಕಿಸುವುದು ಸರಿಯಲ್ಲ.
ಜನರ ಪ್ರಾಣ ರಕ್ಷಣೆ ಮುಖ್ಯವಾಗಿದ್ದು ಇದಕ್ಕೆ ಸಾರ್ವಜನಿಕರು,
ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದೆ
ಎಂದರು.
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ : ಲಾಕ್‍ಡೌನ್
ಕಾರಣದಿಂದ ಜಿಲ್ಲೆಯಲ್ಲಿ ಕೆಲ ಹಕ್ಕಿಪಿಕ್ಕಿ ಕುಟುಂಬದವರು ತೀವ್ರ
ಸಂಕಷ್ಟದಲ್ಲಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಖುದ್ದು ಮುಖ್ಯಮಂತ್ರಿಗಳೇ ಕರೆ ಮಾಡಿ, ಆ ಕುಟುಂಬಗಳಿಗೆ
ನೆರವು ನೀಡುವಂತೆ ಸೂಚಿಸಿದ್ದರು. ಪರಿಶೀಲಿಸಿದಾಗ, ಅಲೆಮಾರಿಯ 35
ಕುಟುಂಬದ 130 ಜನರು ಕಷ್ಟಕ್ಕೆ ಸಿಲುಕಿದ್ದು ಕಂಡುಬಂತು, ಹೀಗಾಗಿ
ತಕ್ಷಣವೇ ಅವರಿಗೆ ಆಹಾರದ ಕಿಟ್ ಪೂರೈಸಲಾಗಿದೆ. ಅಲ್ಲದೆ ಜಿಲ್ಲೆಯ
ವಿವಿಧ ತಾಲ್ಲೂಕುಗಳಲ್ಲಿ ಕಂಡುಬಂದ ಇಂತಹ 421 ಕುಟುಂಬಗಳಿಗೆ
ಈಗಾಗಲೆ ಆಹಾರದ ಕಿಟ್ ವಿತರಣೆ ಮಾಡಿದ್ದೇವೆ, ಅಗತ್ಯ ಬಿದ್ದಲ್ಲಿ
ಇನ್ನಷ್ಟು ಪೂರೈಸುವ ಭರವಸೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಹೇಳಿದರು. ಸಚಿವರು ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ
ಲಾಕ್‍ಡೌನ್ ಕಾರಣದಿಂದಾಗಿ ನಿಜಕ್ಕೂ ಸಂಕಷ್ಟಕ್ಕೆ ಒಳಗಾಗಿರುವ
ಬಡವರು, ನಿರ್ಗತಿಕರಿಗೆ ಜಿಲ್ಲಾಡಳಿತದ ವತಿಯಿಂದ ಆಹಾರ ಕಿಟ್ ಹಾಗೂ
ಪಡಿತರ ವಿತರಣೆಗೆ ತ್ವರಿತವಾಗಿ ಕ್ರಮ ಜರುಗಿಸಬೇಕು.
ಯಾವುದೇ ಬಡವರು ಊಟಕ್ಕಾಗಿ ಪರಿತಪಿಸುವಂತಾಗಬಾರದು ಎಂದು
ಸಚಿವರು ಸೂಚನೆ ನೀಡಿದರು.
ಚಿಗಟೇರಿ ಜಿಲ್ಲಾ ಆಸ್ಪತ್ರೆ ಇನ್ನೂ ಸಂಪೂರ್ಣ ಕೋವಿಡ್ ಆಸ್ಪತ್ರೆ :
ಕೋವಿಡ್ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಿದ್ದು,
ವಿವಿಧ ತಾಲ್ಲೂಕುಗಳಿಂದಲೂ ಕೋವಿಡ್ ಸೋಂಕಿತರು ಚಿಕಿತ್ಸೆಗಾಗಿ
ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಸೋಂಕಿತರಿಗೆ ಬೆಡ್ ಹಾಗೂ
ಚಿಕಿತ್ಸೆಗೆ ಇನ್ನಷ್ಟು ಅನುಕೂಲ ಮಾಡಿಕೊಡಬೇಕಿದೆ. ಅಲ್ಲದೆ
ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೋವಿಡ್ ಚಿಕಿತ್ಸೆಗೆ
ಸಂಪೂರ್ಣ ತೊಡಗಿಸಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ
ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್
ಆಸ್ಪತ್ರೆಯನ್ನಾಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು
ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ
ಸಚಿವರು, ಕೋವಿಡ್ ಸೋಂಕಿತರ ಸಂಖ್ಯೆ
ಹೆಚ್ಚಾಗುತ್ತಿರುವುದರಿಂದ, ಇದು ಅಗತ್ಯವಾಗಿದ್ದು, ಕೂಡಲೆ
ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್
ಆಸ್ಪತ್ರೆಯನ್ನಾಗಿಸಿ, ನಾನ್‍ಕೋವಿಡ್ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಯಲ್ಲಿ
ವ್ಯವಸ್ಥೆಗೊಳಿಸುವಂತೆ ಸೂಚನೆ ನೀಡಿದರು.
10 ಕೆಎಲ್ ಆಕ್ಸಿಜನ್ ಘಟಕ ಮಂಜೂರು : ಸಂಸದ ಜಿ.ಎಂ. ಸಿದ್ದೇಶ್ವರ್ ಅವರು
ಮಾತನಾಡಿ, ದೇಶದ 38 ಜಿಲ್ಲೆಗಳಿಗೆ ಕೇಂದ್ರ ಸರ್ಕಾರದಿಂದ 10 ಕೆ.ಎಲ್.

ಸಾಮಥ್ರ್ಯದ ವೈದ್ಯಕೀಯ ಬಳಕೆಯ ಆಕ್ಸಿಜನ್ ಘಟಕ ಸ್ಥಾಪನೆಗೆ
ಮಂಜೂರಾತಿ ನೀಡಿದ್ದು, ಈ ಪೈಕಿ ದಾವಣಗೆರೆ ಜಿಲ್ಲೆಗೂ ಮಂಜೂರು
ಮಾಡಲಾಗಿದೆ. 86 ಲಕ್ಷ ರೂ. ವೆಚ್ಚದಲ್ಲಿ ಈ ಘಟಕ ಸ್ಥಾಪನೆಗೆ
ಕೇಂದ್ರ ಸರ್ಕಾರ ಮಂಜೂರಾತಿ ನೀಡಿದ್ದು, ಈ ಕುರಿತು ಆಕ್ಸಿಜನ್ ಘಟಕ
ಪೂರೈಸುವ ಕಂಪನಿ ಅಧಿಕಾರಿಗಳನ್ನು ಈಗಾಗಲೆ ಸಂಪರ್ಕಿಸಿ ಮಾಹಿತಿ
ಪಡೆಯಲಾಗಿದೆ. ಇನ್ನು 30 ದಿನಗಳೊಳಗೆ ಈ ಆಕ್ಸಿಜನ್ ಘಟಕ
ಬಳಕೆಗೆ ಲಭ್ಯವಾಗುವಂತೆ ಮಾಡಿಕೊಡುವುದಾಗಿ ಭರವಸೆ
ನೀಡಿದ್ದಾರೆ. ಆದಷ್ಟು ಶೀಘ್ರ ಇದನ್ನು ಅಳವಡಿಸಲು ಸಂಬಂಧಪಟ್ಟ
ಅಧಿಕಾರಿಗಳು ಪ್ರಯತ್ನ ಕೈಗೊಳ್ಳಬೇಕು. ರಾಜ್ಯದ ಗಣಿಗಾರಿಕೆ
ಮತ್ತು ಭೂವಿಜ್ಞಾನ ಸಚಿವರು ಕೂಡ ಆಕ್ಸಿಜನ್ ಟ್ಯಾಂಕರ್ ಒಂದನ್ನು
ಜಿಲ್ಲೆಗೆ ಒಂದು ವಾರದೊಳಗಾಗಿ ನೀಡುವ ಭರವಸೆ ನೀಡಿದ್ದಾರೆ
ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲೆಯ ಪಾಲಿಗೆ ಇದು
ಒಳ್ಳೆಯ ಸಂಗತಿಯಾಗಿದ್ದು, ಅಧಿಕಾರಿಗಳು ಸಂಸದರ
ಮಾರ್ಗದರ್ಶನದಲ್ಲಿ ಆದಷ್ಟು ಶೀಘ್ರ ಹೊಸ ಆಕ್ಸಿಜನ್ ಘಟಕ
ಸ್ಥಾಪನೆಗೆ ಅಗತ್ಯ ಕ್ರಮ ವಹಿಸುವಂತೆ ನಿರ್ದೇಶಿಸಿದರು. ಕೆಎಸ್‍ಎಸ್‍ಡಿಎಲ್
ಅಧ್ಯಕ್ಷರು ಹಾಗೂ ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ
ಅವರು ಮಾತನಾಡಿ, ಕೆಎಸ್‍ಎಸ್‍ಡಿಎಲ್‍ನ ಸಿಎಸ್‍ಆರ್ ನಿಧಿ ವಿನಿಯೋಗಿಸಿ,
ಚನ್ನಗಿರಿಯಲ್ಲಿ ಆಕ್ಸಿಜನ್ ಘಟಕ ಮಾಡಲು ನಿರ್ಧರಿಸಿ ಕ್ರಮ
ಕೈಗೊಳ್ಳಲಾಗಿದೆ ಎಂದರು. ಸಚಿವರು ಪ್ರತಿಕ್ರಿಯಿಸಿ, ಇದಕ್ಕೆ
ಅನುಮತಿ ನೀಡುವುದೂ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು
ಸರ್ಕಾರ ಬದ್ಧವಾಗಿದೆ ಎಂದರು.
ಆಸ್ಪತ್ರೆಗಳ ಎದುರು ಬೆಡ್ ಸ್ಥಿತಿಗತಿ ಬೋರ್ಡ್‍ನಲ್ಲಿ ಪ್ರದರ್ಶಿಸಲಿ :
ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ
ಕಾಲೇಜುಗಳಲ್ಲಿ ಶೇ. 75 ರಷ್ಟು ಬೆಡ್‍ಗಳನ್ನು ಕೋವಿಡ್
ರೋಗಿಗಳ ಚಿಕಿತ್ಸೆಗಾಗಿ ಸರ್ಕಾರಕ್ಕೆ ಮೀಸಲಿಡುವಂತೆ ಆದೇಶ
ಹೊರಡಿಸಲಾಗಿದೆ. ಎಬಿಎಆರ್‍ಕೆ ಯೋಜನೆಯಡಿ ನೊಂದಾಯಿತ ಖಾಸಗಿ
ಆಸ್ಪತ್ರೆಗಳು ಸರ್ಕಾರಿ ವೈದ್ಯರು ಶಿಫಾರಸು ಮಾಡಿರುವ
ರೋಗಿಗಳಿಗೂ ಬೆಡ್ ನೀಡುತ್ತಿಲ್ಲ, ಮೀಸಲಿರುವ ಬೆಡ್‍ಗಳಲ್ಲಿ ಖಾಸಗಿ
ಆಸ್ಪತ್ರೆಯವರೇ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ,
ಅಲ್ಲದೆ ಹೆಚ್ಚಿನ ಶುಲ್ಕವನ್ನೂ ವಿಧಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳು
ಎಬಿಎಆರ್‍ಕೆ ಯೋಜನೆಯಡಿ ರೋಗಿಗಳನ್ನು ದಾಖಲಿಸಿ ಉಚಿತ ಚಿಕಿತ್ಸೆ
ನೀಡಬೇಕು, ಸಂಬಂಧಪಟ್ಟ ಶುಲ್ಕವನ್ನು ನಿಯಮಾನುಸಾರ
ಎಬಿಎಆರ್‍ಕೆ ಯೋಜನೆಯಡಿ ಪಡೆದುಕೊಳ್ಳಬೇಕು. ಆರೋಗ್ಯ
ಇಲಾಖೆ ಅಧಿಕಾರಿಗಳು ಇದನ್ನು ಪರಿಶೀಲಿಸುತ್ತಿಲ್ಲ ಏಕೆ?. ಹೀಗಾದಲ್ಲಿ
ಸರ್ಕಾರ ಆದೇಶ ಹೊರಡಿಸಿ ಏನು ಪ್ರಯೋಜನ ಎಂದು ಸಂಸದ ಜಿ.ಎಂ.
ಸಿದ್ದೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು
ಪ್ರತಿಕ್ರಿಯಿಸಿ, ಕೋವಿಡ್ ಸೋಂಕಿತರಿಗೆ ಬೆಡ್ ದೊರೆಯುತ್ತಿಲ್ಲ, ಚಿಕಿತ್ಸೆ
ಸಿಗುತ್ತಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.
ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಕ್ಕಾಗಿ ಮೀಡಲಿರುವ ಬೆಡ್‍ಗಳು,
ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲ ವ್ಯವಸ್ಥೆಯ ವಿವರವನ್ನು
ಬೋರ್ಡ್‍ನಲ್ಲಿ ಪ್ರದರ್ಶಿಸಬೇಕು ಎಂದು ಕಳೆದ ಬಾರಿ ಸಭೆ ನಡೆಸಿದ
ಸಂದರ್ಭದಲ್ಲಿಯೂ ಸೂಚನೆ ನೀಡಲಾಗಿತ್ತು. ಇದನ್ನು ಪಾಲಿಸಿಲ್ಲ
ಎಂದು ಅಸಮಾಧಾನ ವ್ಯಕ್ತಪಡಿಸಿ, ನಾಳೆಯಿಂದಲೇ ಜಿಲ್ಲೆಯ ಎಲ್ಲ
ಖಾಸಗಿ ಆಸ್ಪತ್ರೆಗಳ ಎದುರು ಬೆಡ್‍ಗಳ ಸ್ಥಿತಿಗತಿ ವಿವರವುಳ್ಳ
ಮಾಹಿತಿಯನ್ನು ಬೋರ್ಡ್‍ನಲ್ಲಿ ಪ್ರದರ್ಶಿಸಬೇಕು. ಇದನ್ನು ಡಿಹೆಚ್‍ಒ
ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ನಗರದಿಂದ ಗ್ರಾಮಗಳಿಗೆ ಸೋಂಕು ರವಾನೆ : ಜಿಲ್ಲಾ ಆರ್‍ಸಿಹೆಚ್
ಅಧಿಕಾರಿ ಡಾ. ರಾಘವನ್ ಅವರು ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ
ವಿವರ ನೀಡಿ, ಜಿಲ್ಲೆಯಲ್ಲಿ ಕಳೆದ ಏ. 30 ರಿಂದ ಮೇ. 06 ವರೆಗಿನ
ಅವಧಿಯಲ್ಲಿ 12979 ಟೆಸ್ಟ್‍ಗೆ 2742 ಸೋಂಕು ಪ್ರಕರಣಗಳು
ವರದಿಯಾಗಿದ್ದು, 1428 ಜನ ಗುಣಮುಖ ಹೊಂದಿ, 22 ಜನ
ಮೃತಪಟ್ಟಿದ್ದರು, ಈ ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 21.12
ರಷ್ಟು ಇತ್ತು. ದಾವಣಗೆರೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 1620
ಪ್ರಕರಣ ವರದಿಯಾಗಿವೆ. ಉಳಿದಂತೆ ಹರಿಹರ-368, ಜಗಳೂರು-137,
ಚನ್ನಗಿರಿ-249, ಹೊನ್ನಾಳಿ-253, ಇತರೆ ಜಿಲ್ಲೆಯ 115 ಪ್ರಕರಣ
ವರದಿಯಾಗಿತ್ತು.
ಮೇ. 07 ರಿಂದ 12 ವರೆಗಿನ ಅವಧಿಯಲ್ಲಿ 11301 ಟೆಸ್ಟ್‍ಗೆ 2085
ಸೋಂಕು ದೃಢಪಟ್ಟಿದ್ದು, 1757 ಜನ ಗುಣಮುಖರಾಗಿ, 15 ಜನ
ಮೃತಪಟ್ಟಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ 1187, ಹರಿಹರ-208,
ಜಗಳೂರು-104, ಚನ್ನಗಿರಿ-214, ಹೊನ್ನಾಳಿ-288 ಸೋಂಕು ಪ್ರಕರಣ
ವರದಿಯಾಗಿದೆ. ಈ ಅವಧಿಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ. 18.44 ಕ್ಕೆ
ಇಳಿಕೆಯಾಗಿದ್ದು, ಇದು ಜಿಲ್ಲೆಯ ಪಾಲಿಗೆ ಭರವಸೆಯ ಬೆಳಕಿನಂತೆ
ಗೋಚರಿಸಿದೆ. ಕೋವಿಡ್‍ನ ಎರಡನೆ ಅಲೆಯಲ್ಲಿ ಅಂದರೆ ಏಪ್ರಿಲ್ ನಿಂದ
ಈವರೆಗೆ 32-ಪುರುಷ, 12- ಮಹಿಳೆ ಸೇರಿದಂತೆ ಒಟ್ಟು 44 ಜನ
ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ
ತರಕಾರಿ, ಹಾಲು, ಹೂವು ಹಣ್ಣು ಮಾರಾಟ ಮಾಡಲು ಹಾಗೂ
ಆಸ್ಪತ್ರೆಗಳಿಗೆ ನಗರ, ಪಟ್ಟಣಗಳಿಗೆ ಬಂದು ಹೋಗುವವರಿಂದ,
ಗ್ರಾಮೀಣ ಪ್ರದೇಶಗಳಿಗೆ ಕೋವಿಡ್ ಸೋಂಕು ವ್ಯಾಪಿಸುತ್ತಿದೆ. ಅಲ್ಲದೆ
ಕೋವಿಡ್ ಹೆಚ್ಚು ಇರುವ ಬೆಂಗಳೂರು ನಗರದಿಂದಲೂ ಜಿಲ್ಲೆಯ
ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಗೆ ಸುಮಾರು 4 ಸಾವಿರ
ಜನರು ಹಿಂದಿರುಗಿರುವುದಾಗಿ ಅಂದಾಜಿಸಲಾಗಿದ್ದು, ಇವರಿಂದಲೂ ಕೋವಿಡ್
ಸೋಂಕು ಹರಡುತ್ತಿದೆ. ಹೀಗಾಗಿ ಹೆಚ್ಚಿನ ಸೋಂಕು
ವರದಿಯಾಗುವ ಗ್ರಾಮಗಳಲ್ಲಿ ಮನೆ ಮನೆ ಸರ್ವೆ ನಡೆಸಿ, ಪರೀಕ್ಷೆ
ನಡೆಸಲಾಗುತ್ತಿದೆ. ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಗ್ರಾಮದಲ್ಲಿ
ಮನೆ ಮನೆ ಸರ್ವೆ ನಡೆಸಿ ಪರೀಕ್ಷೆ ನಡೆಸಿದ್ದು 72 ಜನರಿಗೆ ಸೋಂಕು
ದೃಢಪಟ್ಟಿದೆ, ಇನ್ನೂ ಸುಮಾರು 10 ಜನರಿಗೆ ಪಾಸಿಟಿವ್ ಬರುವ ಸಾಧ್ಯತೆ
ಇದೆ. ಕೂಲಂಬಿ ಗ್ರಾಮದಲ್ಲಿಯೂ ಕೂಡ ಮನೆ ಮನೆ ಸರ್ವೆ ನಡೆಸಿ
ಪರೀಕ್ಷೆ ಮಾಡಲಾಗುತ್ತಿದೆ. ಕೋವಿಡ್‍ನ ಮೊದಲನೆ ಅಲೆಯ
ಸಂದರ್ಭದಲ್ಲಿ ಜನರು ತೀವ್ರ ಎಚ್ಚರಿಕೆ ವಹಿಸಿ, ಸರ್ಕಾರ
ಕೈಗೊಳ್ಳುವ ಕ್ರಮಗಳಿಗೆ ಸಹಕರಿಸುತ್ತಿದ್ದರು. ಆದರೆ
ಎರಡನೆ ಅಲೆಯ ಈ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ಲಾಕ್‍ಡೌನ್
ಕ್ರಮಗಳಿಗೆ ಜನರು ಸಹಕರಿಸುತ್ತಿಲ್ಲ. ಸೋಂಕು ಇದ್ದರೂ
ಕೋವಿಡ್ ಕೇರ್ ಸೆಂಟರ್‍ಗೆ ಬರುತ್ತಿಲ್ಲ, ಹೀಗಾಗಿ ಜೀವಕ್ಕೆ ಆಪತ್ತು
ತಂದುಕೊಳ್ಳುತ್ತಿದ್ದಾರೆ ಎಂದರು. ಸಚಿವರು ಪ್ರತಿಕ್ರಿಯಿಸಿ,
ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಿಸಬೇಕು,
ಅಲ್ಲದೆ ಹೊರಗಡೆ ಹೋಗದಂತೆ ಅಲ್ಲಿ ಪೊಲೀಸ್ ಬಂದೋಬಸ್ತ್
ಕೈಗೊಳ್ಳಬೇಕು. ಸೆಂಟರ್‍ನಲ್ಲಿ ಸೂಕ್ತ ರೀತಿಯಲ್ಲಿ ಊಟ, ಉಪಹಾರ,
ಅಗತ್ಯ ವೈದ್ಯಕೀಯ ಸೌಲಭ್ಯ ದೊರೆಯುವಂತೆ
ನೋಡಿಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿಗಳು ಮಾತನಾಡಿ,
ದಾವಣಗೆರೆಯಲ್ಲಿಯೇ 06 ಕೋವಿಡ್ ಕೇರ್ ಸೆಂಟರ್‍ಗಳನ್ನು
ಪ್ರಾರಂಭಿಸಿದ್ದು, ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

3ನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಿ : ಕೋವಿಡ್‍ನ ಮೂರನೆ
ಅಲೆ ಬರುವ ಸಾದ್ಯತೆಗಳಿದ್ದು, ಈ ಅವಧಿಯಲ್ಲಿ ಮಕ್ಕಳ ಮೇಲೆ
ತೀವ್ರ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಜ್ಞರು
ಎಚ್ಚರಿಕೆ ನೀಡಿದ್ದು, ಜಿಲ್ಲೆಯಲ್ಲಿ ಕೋವಿಡ್‍ನ ಮೂರನೆ ಅಲೆಯನ್ನು
ಪರಿಣಾಮಕಾರಿಯಾಗಿ ನಿಯಂತ್ರಿಸಲು ಈಗಿನಿಂದಲೇ ಎಲ್ಲ ಅಗತ್ಯ
ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ
ಮಕ್ಕಳ ತಜ್ಞ ವೈದ್ಯರನ್ನು ಗುರುತಿಸಬೇಕು, ಅಲ್ಲದೆ ಸಾಮಾನ್ಯ
ವೈದ್ಯರಿಗೂ ಮಕ್ಕಳ ತಜ್ಞ ವೈದ್ಯರಿಂದ ಅವಶ್ಯಕ ರೀತಿಯಲ್ಲಿ
ತರಬೇತಿಯನ್ನು ಈಗಲೇ ಕೊಡಿಸಲು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ಅಗತ್ಯ ಔಷಧಿ, ಬೆಡ್ ವ್ಯವಸ್ಥೆ, ಆಕ್ಸಿಜನ್, ವೆಂಟಿಲೇಟರ್
ಮುಂತಾದ ಯಾವುದೇ ಕೊರತೆ ಆಗದಂತೆ ವ್ಯವಸ್ಥೆ
ಮಾಡಿಕೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರು
ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ದಾವಣಗೆರೆ ಉತ್ತರ
ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಶಾಸಕ
ಪ್ರೊ. ಲಿಂಗಣ್ಣ, ಕೆಎಸ್‍ಎಸ್‍ಡಿಎಲ್ ಅಧ್ಯಕ್ಷ ಹಾಗೂ ಚನ್ನಗಿರಿ ಶಾಸಕ
ಮಾಡಾಳ್ ವಿರುಪಾಕ್ಷಪ್ಪ, ದಾವಣಗೆರೆ ಮಹಾನಗರಪಾಲಿಕೆ ಮಹಾಪೌರ
ಎಸ್.ಟಿ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಹನುಮಂತರಾಯ, ಡಿಹೆಚ್‍ಒ ಡಾ. ನಾಗರಾಜ್ ಸೇರಿದಂತೆ
ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *