ಭದ್ರಾ ಜಲಾಶಯದಿಂದ ನೀರು ಸ್ಥಗಿತಗೊಳಿಸುವ
ನಿರ್ಧಾರವನ್ನು ಕಾಡಾ ಮುಂದೂಡಿ, ಮೇ.20 ರವರೆಗೆ ನೀರು
ಹರಿಸಲು ನಿರ್ಧರಿಸಿದೆ ಎಂದು ಭದ್ರಾ ಕಾಡಾ ಸಮಿತಿ ಅಧ್ಯಕ್ಷರಾದ
ಪವಿತ್ರರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾ ಎಡದಂಡೆ ಮತ್ತು ಬಲದಂಡೆ ನಾಲೆಗಳ
ಮೂಲಕ ಹರಿಸುತ್ತಿರುವ ನೀರನ್ನು ಜ.12 ರಿಂದ 120 ದಿನಗಳ
ಕಾಲ ಅಂದರೆ ಮೇ.12 ಕ್ಕೆ ನಿಲ್ಲಿಸಲು ಭದ್ರಾ ಅಚ್ಚುಕಟ್ಟು
ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) 2020 ರ ಡಿ.12 ರಂದು
ಹರಿಹರ ತಾಲ್ಲೂಕು ಮಲೆಬೆನ್ನೂರಿನ ಕರ್ನಾಟಕ ನೀರಾವರಿ
ನಿಗಮದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ
ನಿರ್ಧರಿಸಿತ್ತು. ಕೊರೊನ ಸಂಕಷ್ಟದ ಸಮಯದಲ್ಲಿ ಭದ್ರಾ
ಅಚ್ಚುಕಟ್ಟು ಭಾಗದ ರೈತರು ಒತ್ತಾಯಿಸಿದ ಪರಿಣಾಮ ಮೇ.20
ರ ಮಧ್ಯ ರಾತ್ರಿ ನಾಲೆಗಳಿಗೆ ಹರಿಸುತ್ತಿರುವ ನೀರನ್ನು
ನಿಲ್ಲಿಸುವಂತೆ ಅಧಿಸೂಚನೆ ಹೊರಡಿಸಲಾಗಿದೆ.
2021ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ
ತಾಲ್ಲೂಕಿನಲ್ಲಿ 4,295 ಹೆಕ್ಟರ್ ಹಾಗೂ ಭದ್ರಾವತಿ ತಾಲ್ಲೂಕಿನಲ್ಲಿ
5635 ಹೆಕ್ಟರ್ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 9,930 ಹೆಕ್ಟರ್ನಲ್ಲಿ
ಭತ್ತ ಬೆಳೆಯಲಾಗಿದೆ. ದಾವಣಗೆರೆ ಜಿಲ್ಲೆಯ ದಾವಣಗೆರೆ
ತಾಲ್ಲೂಕಿನಲ್ಲಿ 18,820 ಹೆಕ್ಟರ್, ಹರಿಹರ ತಾಲ್ಲೂಕಿನಲ್ಲಿ 18,325
ಹೆಕ್ಟರ್, ಚನ್ನಗಿರಿ ತಾಲ್ಲೂಕಿನಲ್ಲಿ 6,955 ಹೆಕ್ಟರ್, ಹೊನ್ನಾಳಿ
ತಾಲ್ಲೂಕಿನಲ್ಲಿ 5,100 ಹೆಕ್ಟರ್, ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ
1210 ಹೆಕ್ಟರ್ನಲ್ಲಿ ಭತ್ತ ಬೆಳೆಯಲಾಗಿದ್ದು ದಾವಣಗೆರೆ
ಜಿಲ್ಲೆಯಲ್ಲಿ ಒಟ್ಟು 50410 ಹೆಕ್ಟರ್ನಲ್ಲಿ ಭತ್ತ ಬೆಳೆಯಲಾಗಿದೆ.
ಇತರೆ ತಾಲ್ಲೂಕುಗಳಾದ ಹರಪನಹಳ್ಳಿ ಮತ್ತು ತರೀಕೆರೆ
ತಾಲ್ಲೂಕುಗಳಲ್ಲಿ ಕ್ರಮವಾಗಿ 2720, 1850 ಹೆಕ್ಟರ್ಗಳಲ್ಲಿ
ಬೇಸಿಗೆ ಹಂಗಾಮಿನಲ್ಲಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಭತ್ತ
ಬೆಳೆಯಲಾಗಿದೆ.
ಪ್ರತಿ ವರ್ಷವು ಅಚ್ಚುಕಟ್ಟು ವ್ಯಾಪ್ತಿಯ ರೈತರು ಒಂದಾದ
ನಾಲೆಗಳ ಮೂಲಕ ಹರಿಸುವ ನೀರನ್ನು ಪಡೆಯಲು ಹೋರಾಟ
ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಜೊತೆಗೆ ಕೊನೆಯ
ಭಾಗದ ರೈತರು ಕಳೆದ 20 ವರ್ಷಗಳಿಂದ ನೀರನ್ನು ಕಾಣದೆ
ಪರಿತಪಿಸುವಂತಾಗಿತ್ತು. ಆದರೆ ಈ ವರ್ಷ ಯಾವುದೇ ರೀತಿಯ
ಗದ್ದಲ ಗಲಾಟೆ ಹೋರಾಟ ಇಲ್ಲದೆ ಅಚ್ಚುಕಟ್ಟು ಭಾಗದಲ್ಲಿ
ನೀರು ಹರಿದಿರುವುದಲ್ಲದೆ, ಕೊನೆಯ ಭಾಗಕ್ಕೆ ಸರಾಗವಾಗಿ
ನೀರು ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಮಹಾತ್ಮ ಗಾಂಧಿ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು
ಪ್ರಪ್ರಥಮವಾಗಿ ಭದ್ರಾ ಕಾಡಾ ಪ್ರಾಧಿಕಾರವು ನಾಲೆಗಳಲ್ಲಿ
ತುಂಬಿಕೊಂಡಿದ್ದ ಹೂಳು ಹಾಗೂ ಜಂಗಲ್ ಸ್ವಚ್ಚಗೊಳಿಸಲು
ಬಳಸಿಕೊಂಡಿರುವುದು ಒಂದು ವಿಶೇಷ ದಾಖಲೆಯಾಗಿದೆ. ಈ
ಯೋಜನೆಯ ಮೂಲಕ ಶಿವಮೊಗ್ಗ ಮತ್ತು ದಾವಣಗೆರೆ
ಜಿಲ್ಲೆಯ ವ್ಯಾಪ್ತಿಯಲ್ಲಿ ಸುಮಾರು 150 ಕಿ.ಮೀ ಮುಖ್ಯ ಮತ್ತು
ಉಪ ನಾಲೆಗಳನ್ನು ಸ್ವಚ್ಚಗೊಳಿಸಿದೆ. ಸುಮಾರು 1,70,000
ಅಧಿಕ ಮಾನವ ದಿನಗಳನ್ನು ಬಳಸಿಕೊಳ್ಳಲಾಗಿದೆ. ಸುಮಾರು
ರೂ 7 ಕೋಟಿಗೂ ಅಧಿಕ ಅನುದಾನ ಉಪಯೋಗಿಸಿಕೊಂಡಿದೆ.
ಪ್ರತಿ ಬಾರಿಯು ನೀರಾವರಿ ಸಲಹಾ ಸಮಿತಿ ಸಭೆಯು
ಶಿವಮೊಗ್ಗದ ಕೇಂದ್ರ ಕಚೇರಿಯಲ್ಲಿ ನಡೆಸುವುದು
ವಾಡಿಕೆಯಾಗಿತ್ತು. ಆದರೆ ಭದ್ರಾ ಕಾಡಾ ಅಧ್ಯಕ್ಷರಾದ
ನಂತರ ಅಚ್ಚುಕಟ್ಟಿನ ಕೊನೆಯ ಭಾಗಕ್ಕೆ ಸೇರುವ
ಹರಿಹರ ತಾಲ್ಲೂಕು ಮಲೆಬೆನ್ನೂರಿನಲ್ಲಿ ಪ್ರವಾಸ ಕೈಗೊಂಡಾಗ
ರೈತರು ಈ ಬಾರಿಯ ಸಭೆಯನ್ನು ಇಲ್ಲಿಯೇ ನಡೆಸಲು
ಒತ್ತಾಯಿಸಿದಾಗ ಅದನ್ನು ಸಮ್ಮತಿಸಿ ಮಲೆಬೆನ್ನೂರಿನಲ್ಲಿ ಸಭೆ
ನಡೆಸಿದ್ದು, ವಲಯವಾರು ಡಿಸ್ಟ್ರಿಬ್ಯೂಟರ್ಗಳಲ್ಲಿ
ಎದುರಾಗುತ್ತಿದ್ದ ನೀರಿನ ಸಮಸ್ಯೆಗನ್ನು ನಮೂದಿಸಲು
ರೈತರಿಗಾಗಿ ಸಾಯವಾಣಿ ಪ್ರಾರಂಭ ಮಾಡಿದ್ದೇವೆ.
ದಾವಣಗೆರೆ ಭಾಗದಲ್ಲಿ ನೂರಾರು ರೈತರು ನೀರಿನ
ತೊಂದರೆಯ ಪರಿಣಾಮ ಪ್ರತಿ ಬಾರಿ ಜೋಳ
ಬೆಳೆಯುತ್ತಿದ್ದರು. ಆದರೆ ಅದೇ ರೈತರು ಈ ಬಾರಿ ನೀರು
ಸರಾಗವಾಗಿ ಸಿಕ್ಕ ಹಿನ್ನೆಲೆಯಲ್ಲಿ ಜೋಳ ಅಳಿಸಿ ಭತ್ತ ನಾಟಿ ಮಾಡಿ
ಆರ್ಥಿಕ ಸಬಲರಾಗುವತ್ತ ದಾಪುಗಾಲು ಹಾಕಿದ್ದಾರೆ ಜೊತೆಗೆ
ತಮ್ಮ ತಮ್ಮ ಜಮೀನುಗಳಿಗೆ ನೀರನ್ನು ಹಾಯಿಸಿಕೊಳ್ಳಲು
ರಾತ್ರಿ ನಿದ್ರೆ ಬಿಡುವ ಪ್ರಸಂಗ ತಪ್ಪಿರುವುದು ಒಂದು
ಸಂತಸದ ನಡೆಯಾಗಿದೆ. ಹೀಗೆ ಭದ್ರಾ ಕಾಡಾ ಪ್ರಾಧಿಕಾರ
ವ್ಯಾಪ್ತಿಯಲ್ಲಿ ಹಲವಾರು ನೂತನ ವಿದ್ಯಾಮಾನಗಳನ್ನು ನಿರ್ಮಾಣ
ಮಾಡುವ ಮೂಲಕ ಅಚ್ಚುಕಟ್ಟು ರೈತರು ಸಂತೃಪ್ತ
ಜೀವನ ನಡೆಸಲು ಅನುವು ಮಾಡಿಕೊಡಲಾಗಿದೆ.
ಸಂಕಷ್ಟದ ಸಂದರ್ಭದಲ್ಲಿ ಯಾವುದೇ
ಸಮಸ್ಯೆಯಾಗದಂತೆ ನಾಲಾ ನೀರು ಅಚ್ಚುಕಟ್ಟು ರೈತರಿಗೆ
ತಲುಪಿಸಲು ಶ್ರಮವಹಿಸಿದ ಎಲ್ಲಾ ಅಧಿಕಾರಿ ವೃಂದದವರಿಗೆ, ನೀರು
ಗಂಟಿಗಳಿಗೆ ಪ್ರಕಟಣೆಯ ಮೂಲಕ ಭದ್ರಾ ಅಚ್ಚುಕಟ್ಟು
ಪ್ರದಾಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ
ರಾಮಯ್ಯ.ಕೆ.ಬಿ ಕೃತಜ್ಞತೆ ಸಲ್ಲಿಸಿದ್ದಾರೆ.