ವಿಶ್ವ ಜೇನುಕೃಷಿ ದಿನಾಚರಣೆಯ ಆಚರಣೆಯ ಉದ್ದೇಶವೇಂದರೆ ಜೇನು ನೊಣಗಳ ಬಗ್ಗೆ ಹೆಚ್ಚು ಹೆಚ್ಚು ಅರಿವನ್ನು ಮೂಡಿಸುವುದು ಮತ್ತು ಜೇನು ನೊಣ ಹಾಗೂ ಇತರೆ ಪರಾಗಸ್ಪರ್ಶಿಗಳಿಗಿರುವ ತೊಂದರೆಗಳು ಹಾಗೂ ಸುಸ್ತಿರ ಕೃಷಿಗೆ ಪರಾಗಸ್ಪರ್ಶಿಗಳ ಪಾತ್ರವನ್ನು ಮನದಟ್ಟು ಮಾಡುವ ಉದ್ದೇಶದಿಂದ ಮೇ 20 ಕ್ಕೆ ಪ್ರಪಂಚದಾದ್ಯಂತ ಜೇನು ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.
ಹಾಗಾದರೆ ನಾವು ವಿಶ್ವ ಜೇನು ದಿನಾಚರಣೆಯನ್ನು ಮೇ. 20 ಕ್ಕೆ ಆಚರರಿಸಲು ಕಾರಣವೆನೇಂದರೆ ಅಂದು ಸ್ಲೋವೇನಿಯಾ ದೇಶದ ಆಧುನಿಕ ಜೇನುಕೃಷಿ ಪಿತಾಮಹರೆಂದು ಕರೆಯಲ್ಲಡುವ “ಆ್ಯಂಟೋನ್ ಜಾನಾ” ಅವರ ಜನ್ಮದಿನ ಅದ್ದರಿಂದ ಅವರ ಜನ್ಮದಿನದ ಸ್ಮರಣಾರ್ಥವಾಗಿ ಪ್ರಪಂಚದಾದ್ಯಂತ ವಿಶ್ವ ಜೇನು ದಿನಾಚರಣೆಯನ್ನು ಆಚರಿಸಲಾಗುತ್ತದೆ ಹಾಗೆಯೆ ಮತ್ತೊಂದು ವಿಶೇಷತೆಯೆಂದರೆ ಸಾಮಾನ್ಯವಾಗಿ ಎಪ್ರೀಲ್-ಮೇ ತಿಂಗಳುಗಳಲ್ಲಿ ಕೆಲವು ಜೇನು ಕೃಷಿಕರಿಗೆ ಈ ಸಮಯ ಜೇನು ತುಪ್ಪ ತೆಗೆಯುವ ತಿಂಗಳುಗಳಾಗಿರುತ್ತದೆ. ಆದ್ದರಿಂದ ಈ ತಿಂಗಳನ್ನು ಸಮೃದ್ದಿಯ ಸಂಕೇತವೆಂದು ತಿಳಿದುಕೊಳ್ಳಲಾಗುತ್ತದೆ.
ಜೇನು ನೊಣಗಳಿಗೂ ಒಂದು ವಿಶೇಷ ದಿನವನ್ನು ಘೋಶಿಸಿರುವುದಕ್ಕೆ ಕಾರಣ ಜೇನು ನೊಣಗಳು ಪ್ರಕೃತಿಯಲ್ಲಿರುವ ವಿಶೇಷವಾದ ಸೃಷ್ಠಿಗಳಲ್ಲಿ ಅವು ಒಂದು ಎಂದರೆ ತಪ್ಪಾಗಲಾರದು. ಜೇನು ಹುಳುಗಳು ಸಸ್ಯಗಳಲ್ಲಿನ ಮಕರಂದವನ್ನು ಹೀರಿ ಅದಕ್ಕೆ ಕಿಣ್ವಗಳನ್ನು ಸೇರಿಸಿ ಜೇನುತುಪ್ಪವನ್ನು ತಯಾರಿಸುತ್ತವೆ. ಈ ಜೇನುತುಪ್ಪಕ್ಕೆ ಅನಾದಿ ಕಾಲದಿಂದಲು ಆಯುರ್ವೇದ, ಪೂಜೆ, ಯಜ್ಞ ಯಾಗಾದಿಗಳಲ್ಲಿ ಪವಿತ್ರವಾದ ಸ್ಥಾನವಿದೆ. ಅಷ್ಟೇ ಅಲ್ಲದೇ ಇದಕ್ಕಿರುವ ವಿಶೇಷ ಗುಣಗಳು, ವಿಶೇಷತೆಗಳು ಹಾಗೂ ಇದಕ್ಕಿರುವ ಮೌಲ್ಯಕ್ಕೆ ಇದನ್ನು ‘ದ್ರವ ಬಂಗಾರ’ ವೆಂದೇ ಕರೆಯಲಾಗುತ್ತದೆ. ಸುಮಾರು 200 ವರ್ಷಗಳ ಹಿಂದೆಯೇ ಜೇನು ಹುಳುಗಳನ್ನು ಪಳಗಿಸುವ ಅಥವಾ ಸಾಕುವ ತಂತ್ರಗಾರಿಕೆಯನ್ನು ಮನುಷ್ಯ ಕಲಿತುಕೊಂಡಿದ್ದ, ಆಗಿನಿಂದಲು ಮನುಷ್ಯ ಜೇನುಹುಳುಗಳ ಸಾಕಾಣಿಕೆಯಲ್ಲಿ ಹಲವಾರು ಹೊಸ ಹೊಸ ಆವಿಷ್ಕ್ಕಾರಗಳನ್ನು ಮಾಡುತ್ತಾ ಬಂದಿದ್ದಾನೆ ಹಾಗೆಯೇ ನಮ್ಮ ದೇಶದಲ್ಲಿರುವ ವೈವಿದ್ಯತೆಯು ಅದಕ್ಕೆ ಪೂರಕವಾಗಿದೆ ಅಂದರೆ ತಪ್ಪಾಗಲಾರದು.
ಕೃಷಿ ಪದ್ಧತಿಯಲ್ಲಿ ಜೇನು ಸಾಕಾಣಿಕೆಯು ನಮ್ಮ ದೇಶದಲ್ಲಿ ಕೇವಲ ಆಹಾರ ಭದ್ರತೆ ಮಾತ್ರವಲ್ಲದೆ ಆರ್ಥಿಕ ಭದ್ರತೆಯನ್ನು ಸಹ ನಮ್ಮ ಗ್ರಾಮೀಣ ಭಾಗದ ಹಲವಾರು ಜನರಿಗೆ, ರೈತರಿಗೆ ಒದಗಿಸಿದೆ. ಕೃಷಿ ಭೂಮಿ ಇಲ್ಲದ ಕೂಲಿ ಕಾರ್ಮಿಕರು, ನಿರುದ್ಯೋಗಿಗಳು ಕೂಡಾ ತಮ್ಮ ಜೀವನಾಧಾರಕ್ಕೆ ಜೇನು ಕೃಷಿಯನ್ನು ಅವಲಂಬಿಸಬಹುದಾಗಿದೆ. ಹಾಗೆಯೆ ಸಮಗ್ರ ಕೃಷಿ ಪದ್ದತಿಯಲ್ಲಿ ಇದೊಂದು ಉಪ ಆದಾಯದ ಮೂಲವು ಆಗಿರುತ್ತದೆ. ಮುಖ್ಯವಾಗಿ ಜೇನು ಕೃಷಿಯಿಂದ ನಮಗೆ ಜೇನು ತುಪ್ಪ, ಮೇಣ, ಜೇನು ವಿಷ, ರಾಜಶಾಹಿ ರಸಗಳಂತ ಉಪ ಉತ್ಪನ್ನಗಳೂ ದೊರೆಯುತ್ತವೆ ಆದರೆ ಇವುಗಳಿಗಿಂತ ಬಹು ಮುಖ್ಯವಾದ ಲಾಭವೆಂದರೆ ಜೇನು ಹುಳುಗಳಿಂದಾಗುವ ಪರಾಗಸ್ಪರ್ಶ ಕ್ರಿಯೆ ಇದು ಬೆಳೆಗಳ ಅಧಿಕ ಇಳುವರಿಗೆ ಸಹಕಾರಿಯಾಗಿದೆ.
ಉದ್ಯೋಗ ಸೃಷ್ಠಿ, ಗ್ರಾಮೀಣಾಭಿವೃದ್ದಿ ಹಾಗೂ ಆಹಾರ ಭದ್ರತೆಯಲ್ಲಿ ಜೇನುಕೃಷಿ ಪಾತ್ರ : ಈಗಿನ ಕಾಲಮಾನದಲ್ಲಿ ನೀರುದ್ಯೋಗಿ ಯುವಕರುಗಳಿಗೆ ಕೃಷಿ ಕಾರ್ಯ ಮಾಡುವುದರಲ್ಲಿ ಉತ್ಸಾಹ ಇಲ್ಲದಿರುವುದು ಅತೀ ಶೋಚನೀಯವಾಗಿದೆ. ಅಂತಹ ನಿರುದ್ಯೋಗಿ ಯುವಕರುಗಳಿಗೆ ಜೇನುಕೃಷಿ ಒಂದು ಆಶಾದಾಯಕ ಅವಕಾಶವಾಗಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 4 ಲಕ್ಷ ಜನ ಭಾರತದಲ್ಲಿ ಜೇನುಕೃಷಿಕರಿದ್ದು ಸುಮಾರು 54 ಲಕ್ಷ ಜೇನು ಕುಟುಂಬಗಳನ್ನು ಹೊಂದಿದ್ದಾರೆ ಹಾಗೂ 90-95 ಸಾವಿರ ಟನ್ ಜೇನು ತುಪ್ಪವನ್ನು ಉತ್ಪಾದಿಸುತ್ತಿದ್ದಾರೆ. ಆದರೆ ಇಲ್ಲಿ ಮತ್ತೊಂದು ಆಶ್ಚರ್ಯಕರ ಸಂಗತಿಯೆಂದರೆ ಇಷ್ಟೆಲ್ಲಾ ಕುಟುಂಬಗಳ ನಿರ್ವಹಣೆ ಹಾಗೂ ಉತ್ಪಾದನೆ ನಮ್ಮ ದೇಶದ ಕೇವಲ ಶೇ. 10 ಸಸ್ಯವರ್ಗದಿಂದ ಮಾತ್ರ ಅಂದರೆ ನಾವು ಇನ್ನೂ ಶೇ. 90 ಪ್ರತಿಶತ ಸಸ್ಯವರ್ಗದಿಂದ ಎಷ್ಟು ಜೇನು ಕುಟುಂಬಗಳನ್ನು ನಿರ್ವಹಿಸಬಹುದು ಹಾಗೂ ಉತ್ಪಾದನೆಯನ್ನು ಮಾಡಬಹುದು ಎಂದು ಅಂದಾಜಿಸಬಹುದು. ಹಾಗೆ ಇದರಿಂದ ಇನ್ನೂ ಹೆಚ್ಚಿನ ಜೇನುಕೃಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವುದಕ್ಕೆ ವಿಫುಲ ಅವಕಾಶಗಳಿವೆ. ಆದರೂ ಸಹಿತ ಜೇನುಕೃಷಿ ಉದ್ಯಮಕ್ಕೆ ಬರುವವರ ಸಂಖ್ಯೆ ತುಂಬಾ ವಿರಳವಾಗಿರುವುದು ವಿಪರ್ಯಾಸ.


ಭಾರತ ದೇಶದಲ್ಲಿನ ಹೂ ಬಿಡುವ ಸಸ್ಯ ವರ್ಗದ ಸಂಪತ್ತು ಪ್ರಪಂಚದ ಸುಮಾರು ಶೇ 7 ರಷ್ಟಿದೆ ಅಂದರೆ ಸುಮಾರು 200 ಮಿಲಿಯನ್ ಜೇನು ಕುಟುಂಬಗಳನ್ನು ಸಾಕಬಹುದಾದಷ್ಟು ಸಸ್ಯ ಸಂಪತ್ತಿದೆ ಹಾಗೂ ಇದರಿಂದ ಸುಮಾರು 21.05 ಮಿಲಿಯನ್ ಜನರಿಗೆ ಉದ್ಯೋಗವಕಾಶ ದೊರೆಯಲಿದೆ. ಉತ್ಪಾದನೆಯಲ್ಲಿ ನೋಡಿದರೆ ಸುಮಾರು 10 ಮಿಲಿಯನ್ ಟನ್ ಗಳಷ್ಟು ತುಪ್ಪವನ್ನು ಹಾಗೂ 15,000 ಟನ್‍ಗಳಷ್ಟು ಮೇಣವನ್ನು ಉತ್ಪಾದಿಸಬಹುದಾಗಿದೆ. ಇಷ್ಟೇ ಅಲ್ಲದೆ ಅರಣ್ಯ ಪ್ರದೇಶದಿಂದ ಸುಮಾರು 1,20,000 ಟನ್ ತುಪ್ಪ ಹಾಗೂ 10,000 ಟನ್ ಜೇನು ಮೇಣವನ್ನು ಸಹ ಉತ್ಪಾದಿಸಬಹುದಾಗಿದೆ. ಅಷ್ಟೇ ಅಲ್ಲದೇ ಮೇಣದ ಹಾಳೆ, ಮೇಣದ ಬತ್ತಿ ಹಾಗೂ ಇತರೆ ಗೃಹ ವಸ್ತುಗಳ ತಯಾರಿಕೆಯಲ್ಲಿ ತೊಡಗುವ ಹಲವಾರು ಮಹಿಳೆ ಹಾಗೂ ಪುರುಷ ಕಾರ್ಮಿಕರಿಗೆ ಉದ್ಯೋಗ ಸೃಷ್ಠಿಯಾಗುತ್ತದೆ. ಇದರಿಂದ ಅದೆಷ್ಟೋ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆಯಿರುವ ರಾಜಶಾಹಿ ರಸ, ಪರಾಗ ಹಾಗೂ ಜೇನು ವಿಷಗಳಿಗಳನ್ನು ವೈಜ್ನಾನಿಕ ಕ್ರಮದಲ್ಲಿ ಸಂಗ್ರಹಿಸಿ ವಿದೇಶಗಳಿಗೆ ರಫ್ತು ಮಾಡಿದರೆ ಇದರಲ್ಲಿಯೂ ಸಾಕಷ್ಟು ಲಾಭವನ್ನು ಪಡೆಯಬಹುದಾಗಿದೆ.

ಅದೆ ರೀತಿಯಾಗಿ ಜೇನು ಕೃಷಿಯನ್ನು ಗ್ರಾಮೀಣ ಪ್ರದೇಶದಲ್ಲಿ ಜೀವನೋಪಾಯವಾಗಿ ಮಾಡಿಕೊಳ್ಳುವುದಕ್ಕೆ ಮತ್ತು ಗ್ರಾಮೀಣಾಭಿವೃದ್ದಿಯಲ್ಲಿ ಜೇನು ಕೃಷಿಯ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯ ಜೊತೆಗೆ ಜೇನುಕೃಷಿಯ ಉಪ ಉತ್ಪನ್ನಗಳ ಮಾರಾಟ ಮಾಡಿ ಆದಾಯವನ್ನು ಗಳಿಸಬಹುದಾಗಿದೆ ಜೊತೆಗೆ ಜೇನುಕೃಷಿಯಿಂದ ಕೃಷಿ ಉತ್ಪನ್ನವೂ ಹೆಚ್ಚುತ್ತದೆ ಆದರೆ ಇಷ್ಟೆಲ್ಲಾ ಮಾಡುವುದಕ್ಕೆ ನಮ್ಮಲ್ಲಿ ಜಾಗವಿಲ್ಲ ಅನ್ನುವ ಕೊರಗೂ ಬೇಡ ಯಾಕೆಂದರೆ ಯಾವುದೇ ಜಮೀನು ಇಲ್ಲದ ವ್ಯಕ್ತಿ/ಕೃಷಿಕನೂ ಕೂಡ ಜೇನುಕೃಷಿ ಮಾಡಿ ಸಾಕಷ್ಟು ಆದಾಯ ಗಳಿಸಬಹುದು ಜೊತೆಗೆ ಜೇನು ಕೃಷಿ ಮಾಡುವುದಕ್ಕೆ ವಯಸ್ಸಿನ ಅಥವಾ ಪುರುಷ ಅಥವಾ ಮಹಿಳೆಯೆಂಬ ಬೇದವಿಲ್ಲದೆ ಯಾರು ಬೇಕಾದರೂ ಮಾಡಬಹುದಾಗಿದೆ. ಲಕ್ಷಾಂತರ ರೈತರಿಗೆ, ಕೃಷಿ ಭೂಮಿ ವಂಚಿತ ಕಾರ್ಮಿಕರಿಗೆ, ನೀರುದ್ಯೋಗಿಗಳಿಗೆ ಹಾಗೂ ಬುಡಕಟ್ಟು ಜನರಿಗೆ ಉದ್ಯೋಗವಕಾಶವನ್ನು ನೀಡುತ್ತದೆ.
ನಮ್ಮ ಆಹಾರದಲ್ಲಿ ಪೌಷ್ಠಿಕಾಂಶಗಳ ಸಮತೋಲವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ನಮಗೆ ಪೌಷ್ಟಿಕಾಂಶಗಳನ್ನು ನೀಡುವ ಹಲವಾರು ಆಹಾರ ಸಸ್ಯಗಳ ಪರಾಗಸ್ಪರ್ಶಕ್ರಿಯೆ ನಡೆಯಲು ಜೇನು ನೊಣಗಳನ್ನು ಅವಲಂಬಿಸಿರುತ್ತವೆ, ಅಂದರೆ ಸುಮಾರು 35 % ಆಹಾರ ಬೆಳೆಗಳ ಪರಾಗಸ್ಪರ್ಶ ಜೇನು ನೊಣಗಳನ್ನು ಅವಲಂಬಿಸಿರುತ್ತವೆ. ಪರಾಗಸ್ಪರ್ಶಕ್ಕೆ ಜೇನು ನೊಣಗಳನ್ನು ಅವಲಂಬಿಸಿರುವ ಸಸ್ಯಗಳ ಬೆಲೆ ಇತರೆ ಸಸ್ಯಗಳ ಐದು ಪಟ್ಟಾಗಿರುತ್ತವೆ. ಹೀಗೆ ಜೇನುನೊಣ ಹಾಗೂ ಇತರೆ ಪರಾಗಸ್ಪರ್ಶಿಗಳು ಬೆಳೆಯುತ್ತಿರುವ ಪ್ರಪಂಚದ ಅಹಾರ ಭದ್ರತೆಯಲ್ಲಿ ಅತೀ ಪ್ರಮುಖ ಪಾತ್ರವಹಿಸುತ್ತವೆ.
ಜೇನು ತುಪ್ಪದಲ್ಲಿ ಸಾಕಷ್ಟು ಪ್ರಮಾಣದ ಲವಣಗಳು, ಕಾರ್ಬೊಹೈಡ್ರೆಟ್, ಶರ್ಕರ ಹಾಗೂ ಇತರ ಅಂಶಗಳು ಒಳಗೊಂಡಿರುತ್ತವೆ. ಜೇನು ತುಪ್ಪಕ್ಕೆ ಬೇಡದೆ ಇರುವ ಕೊಬ್ಬಿನಾಂಶವನ್ನು ಕರಗಿಸುವ ಶಕ್ತಿಯಿರುತ್ತದೆ ಅಷ್ಟೇ ಅಲ್ಲದೇ ಜೇನುತುಪ್ಪದಲ್ಲಿ ಬಿ 6, ಥಯಮಿನ್, ರೈಬೋಘ್ಲೇವಿನ್, ಪ್ಯಾಟೋಥೆನಿಕ್ ಆಮ್ಲ, ಅಮೈನೋ ಆಸಿಡ್ ಹಾಗೂ ಲವಣಗಳಾದ ಕ್ಯಾಲ್ಸಿಯಂ, ಜಿಂಕ್ ಅಂಶಗಳಿದ್ದು ಜೇನುತುಪ್ಪದಲ್ಲಿ ರಕ್ತದಿಂದ ಸಕ್ಕರೆಯ ಅಂಶವನ್ನು ಹೀರಿಕೊಳ್ಳುವ ಅಂಶವು ಚೆನ್ನಾಗಿರುತ್ತದೆಯೆಂದು ಎಂದು ತಿಳಿದುಬಂದಿದೆ.


ಭಾರತದಲ್ಲಿ ಜೇನುಕೃಷಿ ಮಾಡುವುದಕ್ಕಾಗಿ ಇರುವ ಸವಾಲುಗಳು: ಯಥೇಚ್ಛವಾದ ಕೀಟನಾಶಕಗಳ ಸಿಂಪರಣೆ ಜೇನು ನೊಣಗಳಿಗೆ ಮಾರಕವಾಗಿದೆ. ಜೇನುಕೃಷಿಯ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ಹಾಗೂ ನುರಿತ ವಿಜ್ಞಾನಿಗಳ ಕೊರತೆ ಹಾಗೂ ನುರಿತ ಕಾರ್ಮಿಕರ ಅಭಾವ. ಒಂದೇ ಸ್ಥಳದಲ್ಲಿ ಜೇನು ಕೃಷಿ ಮಾಡುವುದಕ್ಕೆ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶದಲ್ಲಿ ಹೂವಿನ ಅಭಾವ ಕಂಡುಬರುವಂತದ್ದು ಮತ್ತು ಸ್ಥಳಾಂತರ ಜೇನು ಕೃಷಿಯಲ್ಲಿ ಪೆಟ್ಟಿಗೆಗಳ ಸಾಗಾಣಿಕೆಗೆ ಹೆಚ್ಚಿನ ಖರ್ಚುವೆಚ್ಚವಾಗುವುದು. ಕಾಡುಗಳ ನಾಶ, ಕೃಷಿ ಭೂಮಿ ಕಡಿಮೆಯಾಗಿತ್ತಿರುವುದು, ಕ್ಷೀಣಿಸುತ್ತಿರುವ ಸಸ್ಯವರ್ಗ, ಇದರಿಂದ ಜೇನು ನೋಣಗಳಿಗೆ ಅತಿಯಾದ ಹೂವಿನ ಅಭಾವ. ಸ್ಥಳಾಂತರ ಕೃಷಿಯಲ್ಲಿ ಹೊಲಗಳಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟಾಗ ಕಳ್ಳರ ಹಾಗೂ ಕಾಡು ಪ್ರಾಣಿಗಳ ಉಪಟಳ. ಕೆಲವು ಜೇನುಕೃಷಿ ಸಲಕರಣೆಗಳು ದುಭಾರಿಯಾಗಿರುವುದರಿಂದ ಹೆಚ್ಚಿನ ಬಂಡವಾಳ ಹೂಡಿಕೆಗೆ ಹಿಂದೇಟು. ಜೇನುತುಪ್ಪ ಹಾಗೂ ಇತರೆ ಉಪ ಉತ್ಪನ್ನಗಳಿಗೆ ತನ್ನದೇ ಆದ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದು. ಜೇನು ಉತ್ಪನ್ನಗಳನ್ನು ವಿದೇಶಕ್ಕೆ ರಪ್ತು ಮಾಡಲು ಅಂತರಾಷ್ಟ್ರಿಯ ಮಟ್ಟದಲ್ಲಿ ರಫ್ತಿನ ಮಾನದಂಗಳ ಬಗ್ಗೆ ಜೇನುಕೃಷಿಕರಿಗೆ ಹೆಚ್ಚಿನ ಮಾಹಿತಿಯ ಕೊರತೆ. ಬೇರೆ ಕೃಷಿ ಉತ್ಪನ್ನಗಳ ಹಾಗೆ ಇಲ್ಲಿಯು ಮಧ್ಯವರ್ತಿಗಳ ಹಾವಳಿ.
ಜೇನುಕೃಷಿ ಪ್ರೋತ್ಸಾಹಿಸುವುದಕ್ಕೆ ಕೆಲವು ಸಲಹೆಗಳು:
ಕೃಷಿ ಹಾಗೂ ತೋಟಗಾರಿಕೆ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯಲ್ಲಿ ಜೇನು ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು.
ಅರಣ್ಯ ಇಲಾಖೆ ವತಿಯಿಂದ ಜೇನು ನೊಣಗಳಗೆ ಪೂರಕವಾಗಿರುವ ಹೆಚ್ಚು ಹೆಚ್ಚು ಗಿಡ-ಮರಗಳನ್ನು ಬೆಳೆಸುವುದು ಮತ್ತು ಮಧುವನ ಮಾಡುವುದಕ್ಕೆ ಸರ್ಕಾರದಿಂದ ಪ್ರೋತ್ಸಾಹಿಸುವುದು.
ಹೆಚ್ಚು ಹೆಚ್ಚು ಜೇನು ಕೃಷಿ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದು ಹಾಗೂ ಜೇನುಕೃಷಿಯ ಹೊಸ ಆವಿಷ್ಕಾರಗಳು ತಂತ್ರಜ್ಞಾನವನ್ನು ಜೇನು ಕೃಷಿಕರಿಗೆ ತಲುಪಿಸುವುದು.
ಜೇನುಕೃಷಿಕರ, ಮಾರಾಟಗಾರರ, ರಫ್ತುದಾರರ, ವಿಸ್ತರಣಾ ವಿಜ್ಞಾನಿಗಳ ಹಾಗೂ ಸರಕಾರದ ನಡುವೆ ಉತ್ತಮ ಭಾಂದವ್ಯ ವೃದ್ದಿಸುವುದು. ದೇಶದಲ್ಲಿರುವ ಜೇನುತುಪ್ಪ ಸೇವನೆ ಪ್ರಮಾಣ ಹೆಚ್ಚಿಸುವುದಕ್ಕೆ ಜೇನು ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಕೋಯ್ಲೋತ್ತರ ಜೇನು ಉತ್ಪನ್ನಗಳನ್ನು ತಯಾರಿಸುವುದು ಹಾಗೂ ಜನಪ್ರಿಯಗೊಳಿಸುವುದು.
ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯಗಳಲ್ಲಿ ಜೇನುಕೃಷಿಯನ್ನು ಕಡ್ಡಾಯವಾಗಿ ಸಂಶೋಧನೆಯ ಒಂದು ಭಾಗವಾಗಿ ಮಾಡುವುದು ಹಾಗೂ ಶೇ. 30 ಸ್ನಾತಕೊತ್ತರ ಸಂಶೋಧನಾ ವಿದ್ಯಾರ್ಥಿಗಳಿಗೆ ಜೇನುಕೃಷಿ ವಿಷಯವನ್ನು ಕಡ್ಡಾಯಗೊಳಿಸುವುದು. ಜೇನು ನೊಣಗಳ ಬಗ್ಗೆ ಅರಿವು ಮೋಡಿಸಲು ಹಾಗೂ ತಪ್ಪು ಕಲ್ಪನೆಯನ್ನು ದೂರ ಮಾಡಲು ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸುವುದು. ಸರಕಾರ ಜೇನು ತುಪ್ಪಕ್ಕೆ ಉತ್ತಮ ಬೆಲೆಯನ್ನು ನಿಗದಿಪಡಿಸಿ ಜೇನು ಕೃಷಿಕರ ಆರ್ಥಿಕ ಸ್ಥಿತಿ ಕಾಪಾಡುವುದು. ಕೃಷಿಕರು ಹಾಗೂ ಜೇನುಕೃಷಿಕರು ಸಹಕಾರದಿಂದಿರುವುದು ಹಾಗೂ ಕೃಷಿಕರು ತಮ್ಮ ಗದ್ದೆಗಳಲ್ಲಿ ಕೀಟನಾಶಕ ಸಿಂಪಡಿಸುವ ಸಂದರ್ಭದಲ್ಲಿ ಮುಂಚಿತವಾಗಿ ಜೇನು ಕೃಷಿಕರಿಗೆ ಮಾಹಿತಿಯನ್ನು ನೀಡುವುದು.
ಸರಕಾರ ಸಾವಯುವ ಕೃಷಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿ ಜೇನುಕೃಷಿಗೆ ಪೂರಕವಾಗಿರುವುದು. ಹಾಗೂ ಸಾರ್ವನಿಕರಲ್ಲಿ ಅರಿವನ್ನು ಮೂಡಿಸಿ, ಹೆಜ್ಜೇನುಗಳನ್ನು ಬೆಂಕಿ ಹಚ್ಚುವುದು ಅಥವಾ ರಾಸಾಯನಿಕ ಸಿಂಪಡಿಸಿ ಕೊಲ್ಲುವುದನ್ನು ತಡೆಯುವುದಕ್ಕೆ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು.
-ಡಾ. ವಿನಯ್‍ಕುಮಾರ್. ಎಂ.ಎಂ., ಸಹಾಯಕ ಪ್ರಾಧ್ಯಾಪಕ, ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣೆ ಕೇಂದ್ರ, ದೇವಿಹೊಸೂರು, ಹಾವೇರಿ, ಮಿಂಚಂಚೆ- viಟಿಚಿಥಿರಿಚಿu@gmಚಿiಟ.ಛಿom, ಮೊಬೈಲ್ 9164405294.

Leave a Reply

Your email address will not be published. Required fields are marked *